ದೊಡ್ಡಬಳ್ಳಾಪುರ: ಕನ್ನಡ ಪುಸ್ತಕ ಪ್ರಾಧಿಕಾರ ಹಮ್ಮಿಕೊಂಡಿರುವ ಮನೆಗೊಂದು ಗ್ರಂಥಾಲಯ ಅಭಿಯಾನವು ಸಮಾಜದಲ್ಲಿ ಓದುವ ಸಂಸ್ಕೃತಿಯನ್ನು ಬೆಳೆಸುವ ಮಹತ್ವದ ಹೆಜ್ಜೆಯಾಗಿದೆ ಎಂದು ನಿವೃತ್ತ ಅಧ್ಯಾಪಕ ಬಿ.ಎಲ್.ರಾಮಕೃಷ್ಣ ಹೇಳಿದರು

ದೊಡ್ಡಬಳ್ಳಾಪುರ: ಕನ್ನಡ ಪುಸ್ತಕ ಪ್ರಾಧಿಕಾರ ಹಮ್ಮಿಕೊಂಡಿರುವ ಮನೆಗೊಂದು ಗ್ರಂಥಾಲಯ ಅಭಿಯಾನವು ಸಮಾಜದಲ್ಲಿ ಓದುವ ಸಂಸ್ಕೃತಿಯನ್ನು ಬೆಳೆಸುವ ಮಹತ್ವದ ಹೆಜ್ಜೆಯಾಗಿದೆ ಎಂದು ನಿವೃತ್ತ ಅಧ್ಯಾಪಕ ಬಿ.ಎಲ್.ರಾಮಕೃಷ್ಣ ಹೇಳಿದರು.

ಕನ್ನಡ ಪುಸ್ತಕ ಪ್ರಾಧಿಕಾರ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದೊಂದಿಗೆ ಬೆಂ.ಗ್ರಾ.ಜಿಲ್ಲಾ ಮನೆಗೊಂದು ಗ್ರಂಥಾಲಯ ಜಾಗೃತ ಸಮಿತಿ ವತಿಯಿಂದ ತಮ್ಮ ನಿವಾಸದಲ್ಲಿ ನಡೆದ ಮನೆಗೊಂದು ಗ್ರಂಥಾಲಯ ಅನುಷ್ಠಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಒಂದು ಮನೆಯಲ್ಲಿರುವ ಗ್ರಂಥಾಲಯವು ಕೇವಲ ಪುಸ್ತಕಗಳ ಸಂಗ್ರಹವಾಗಿರುವ ಸ್ಥಳವಲ್ಲ; ಅದು ಜ್ಞಾನ, ಸಂಸ್ಕೃತಿ ಮತ್ತು ಉತ್ತಮ ಚಿಂತನೆಗಳನ್ನು ಬೆಳಗಿಸುವ ಜ್ಞಾನದ ದೀಪವಾಗಿದೆ. ಪಠ್ಯಪುಸ್ತಕಗಳು ವಿದ್ಯಾರ್ಥಿಗಳಿಗೆ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಸಹಾಯ ಮಾಡುತ್ತವೆ. ಆದರೆ ಸಾಹಿತ್ಯ ಕೃತಿಗಳು ಜೀವನವನ್ನು ಅರಿಯಲು, ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ಸಹಕಾರಿಯಾಗುತ್ತವೆ ಎಂದರು.

ಇಂದಿನ ಕಾಲದಲ್ಲಿ ಮೊಬೈಲ್ ಮತ್ತು ದೂರದರ್ಶನಗಳ ನಡುವೆ ಮಕ್ಕಳು ಹೆಚ್ಚು ಸಮಯ ಕಳೆಯುತ್ತಿರುವ ಹಿನ್ನೆಲೆಯಲ್ಲಿ ಮನೆಗಳಲ್ಲಿ ಪುಸ್ತಕಗಳ ಸಾನ್ನಿಧ್ಯ ಅಗತ್ಯವಾಗಿದೆ. ಪೋಷಕರು ಮಕ್ಕಳಲ್ಲಿ ಪುಸ್ತಕ ಓದುವ ಅಭ್ಯಾಸ ಬೆಳೆಸಲು ಪ್ರೋತ್ಸಾಹ ನೀಡಬೇಕು. ದಿನಕ್ಕೆ ಕೆಲವು ನಿಮಿಷಗಳಾದರೂ ಪುಸ್ತಕ ಓದುವ ಅಭ್ಯಾಸ ಬೆಳೆದರೆ ಅದು ಅವರ ಜ್ಞಾನವರ್ಧನೆಗೆ ಮತ್ತು ಭವಿಷ್ಯದ ಬೆಳವಣಿಗೆಗೆ ಸಹಾಯಕವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಉಪನ್ಯಾಸಕ ಗಿರೀಶ್ ಮಾತನಾಡಿ,ಕನ್ನಡ ಸಾಹಿತ್ಯವು ಅಪಾರ ಸಂಪತ್ತಾಗಿದೆ. ಸಾಹಿತ್ಯವನ್ನು ಮನೆಮನೆಗೂ ತಲುಪಿಸುವ ಉದ್ದೇಶದಿಂದ ಮನೆಗೊಂದು ಗ್ರಂಥಾಲಯ ಅಭಿಯಾನ ನಡೆಯುತ್ತಿದೆ. ಪ್ರತಿ ಮನೆಯಲ್ಲಿ ಒಂದು ಚಿಕ್ಕ ಗ್ರಂಥಾಲಯ ಸ್ಥಾಪಿಸುವ ಮೂಲಕ ಮಕ್ಕಳಲ್ಲಿ ಓದುವ ಸಂಸ್ಕೃತಿಯನ್ನು ಬೆಳೆಸಬೇಕು. ಪುಸ್ತಕಗಳನ್ನು ಉಡುಗೊರೆಯಾಗಿ ನೀಡುವ ಸಂಪ್ರದಾಯವನ್ನು ಉತ್ತೇಜಿಸುವುದು ಅಗತ್ಯವಾಗಿದೆ ಎಂದರು.

ಸಮಿತಿ ಜಿಲ್ಲಾ ಸದಸ್ಯೆ ಪ್ರಮೀಳಾ ಮಹಾದೇವ ಮಾತನಾಡಿ,ಇಂತಹ ಅರ್ಥಪೂರ್ಣ ಕಾರ್ಯಕ್ಕೆ ಮಾರ್ಗದರ್ಶನ ನೀಡಿದ ಪುಸ್ತಕ ಪ್ರಾಧಿಕಾರದ ಚಿಂತನೆ ಅನನ್ಯ ಎಂದರು.

ನಗರಸಭೆ ಸದಸ್ಯ ವಿ.ಎಸ್.ರವಿಕುಮಾರ್, ಮನೆಗೊಂದು ಗ್ರಂಥಾಲಯ ಜಾಗೃತ ಸಮಿತಿಯ ಜಿಲ್ಲಾ ಸದಸ್ಯ ರಬ್ಬನಹಳ್ಳಿ ಕೆಂಪಣ್ಣ ಮಾತನಾಡಿದರು.ನಗರಸಭೆ ಸದಸ್ಯ ಕಾಂತರಾಜ, ಸಮಿತಿ ಸಂಚಾಲಕ ಗಂಗರಾಜ ಶಿರವಾರ, ಸದಸ್ಯೆ ಗೌಹರ್ ಜಾನ್ ಸಿರಿ ಸಮೃದ್ದಿ ಟ್ರಸ್ಟ್ ಕಾರ್ಯದರ್ಶಿ ಮುನಿರತ್ನ, ಮಂಜುನಾಥ್, ಕಲಾವಿದ ರಾಮಕೃಷ್ಣ ಭಾಗವಹಿಸಿದ್ದರು.

16ಕೆಡಿಬಿಪಿ2- ದೊಡ್ಡಬಳ್ಳಾಪುರದ ನಿವೃತ್ತ ಅಧ್ಯಾಪಕ ಬಿ.ಎಲ್.ರಾಮಕೃಷ್ಣ ಅವರ ನಿವಾಸದಲ್ಲಿ ಮನೆಗೊಂದು ಗ್ರಂಥಾಲಯ ಜಾಗೃತಿ ಅಭಿಯಾನ ನಡೆಯಿತು.