ಸಾರಾಂಶ
ಪುಲ್ವಾಮಾ ದಾಳಿಯಲ್ಲಿ ನಮ್ಮ ದೇಶದ ಸೈನಿಕರನ್ನು ಬಲಿ ಪಡೆದವರಾರು ಎಂಬುದು ಇದುವರೆಗೆ ತನಿಖೆಯಾಗಿಲ್ಲ.
ಕನ್ನಡಪ್ರಭ ವಾರ್ತೆ ಮುಧೋಳ
ದೇಶದಲ್ಲಿ ಮೋದಿ ಮೋದಿ ಎಂದು ಬಡಬಡಿಸುವ ಕೆಲಸ ನಡೆದಿದ್ದು, ಆತಂಕದ ವಾತಾವರಣವಿದೆ. ದೇಶ ಕಂಡ ಅತ್ಯಂತ ದುರ್ಬಲ ಪ್ರಧಾನಿ ನರೇಂದ್ರ ಮೋದಿ. ದೇಶ ಕಾಯುವಲ್ಲಿ ಬಿಜೆಪಿ ವಿಫಲವಾಗಿದೆ. ದೇಶಭಕ್ತರೆಂದು ಹೇಳಿಕೊಳ್ಳಲು ಅವರಿಗೆ ಯಾವುದೇ ನೈತಿಕತೆ ಇಲ್ಲ ಅಬಕಾರಿ ಸಚಿವ ಆರ್.ಬಿ.ತಿಮ್ಮಾಪೂರ ತೀವ್ರ ವಾಗ್ದಾಳಿ ನಡೆಸಿದರು.ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪುಲ್ವಾಮಾ ದಾಳಿಯಲ್ಲಿ ನಮ್ಮ ದೇಶದ ಸೈನಿಕರನ್ನು ಬಲಿ ಪಡೆದವರಾರು ಎಂಬುದು ಇದುವರೆಗೆ ತನಿಖೆಯಾಗಿಲ್ಲ. ಚೀನಾ ಮತ್ತೆ ನಮ್ಮ ದೇಶದ ಗಡಿಯನ್ನು ಅತಿಕ್ರಮಿಸಿಕೊಂಡಿದೆ ಎಂದು ತಿಳಿದು ಬಂದಿದೆ. ಅದನ್ನು ದೇಶದ ಜನತೆಯ ಮುಂದೆ ಮುಚ್ಚಿಡಲಾಗಿದೆ. ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಉಳಿವಿಗಾಗಿ ಕಾರ್ಯನಿರ್ವಹಿಸುವ 4ನೇ ಅಂಗವಾದ ಪತ್ರಿಕಾರಂಗವನ್ನು ಗಣನೆಗೆ ತೆಗೆದುಕೊಳ್ಳದೇ ಸರ್ವಾಧಿಕಾರಿ ಆಡಳಿತ ನಡೆಸುತ್ತಿದೆ. ಪ್ರಜಾಪ್ರಭುತ್ವ ವ್ಯವಸ್ಥೆಗೆ ಧಕ್ಕೆ ತರುವ ಕಾರ್ಯ ನಡೆಸಲಾಗುತ್ತಿದೆ. ಜನರ ಸಮಸ್ಯೆ, ಬೇಡಿಕೆಗಳ ಬಗ್ಗೆ ಮಾಧ್ಯಮದವರು ಕೇಳುವ ಪ್ರಶ್ನೆಗಳಿಗೆ ಉತ್ತರಿಸದ ಅವರು, ಮಾಧ್ಯಮದವರನ್ನು ಹದ್ದು ಬಸ್ತಿನಲ್ಲಿಟ್ಟುಕೊಂಡು ದೇಶಭಾರ ಮಾಡಿದ್ದಾರೆ ಎಂದು ಆರೋಪಿಸಿದರು.
ನ್ಯಾಯಾಂಗ ಕ್ಷೇತ್ರದಲ್ಲಿ ಹಸ್ತಕ್ಷೇಪ ಮಾಡುವ ಮೂಲಕ ವಿಶ್ವದಲ್ಲಿ ದೇಶದ ಮಾನ ಹರಾಜು ಹಾಕಿದಂತಾಗಿದೆ. ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಉಳಿವಿಗಾಗಿ ದೇಶಕ್ಕೆ ಸ್ವಾತಂತ್ರ್ಯ ದೊರಕಿದ್ದು ಕಾಂಗ್ರೆಸ್ ಪಕ್ಷದಿಂದ, ಕಾಂಗ್ರೆಸ್ ಪಕ್ಷ ತ್ಯಾಗಿಗಳ ಪಕ್ಷವಾಗಿದ್ದು, ನಮ್ಮ ದೇಶದ ಶಾಂತಿ, ಐಕ್ಯತೆಯ ಸಲುವಾಗಿ ದಿ.ಇಂದಿರಾ ಗಾಂಧಿ ಹಾಗೂ ದಿ.ರಾಜೀವ ಗಾಂಧಿಯವರು ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದ್ದಾರೆ. ಈ ಬಾರಿ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆದಿದ್ದು, ಜನರು ಈಗ ಕಾಂಗ್ರೆಸ್ ಪರವಾಗಿ ತಮ್ಮ ಒಲವು ಹೊಂದಿದ್ದಾರೆ. ಆದ್ದರಿಂದ ರಾಜ್ಯದಲ್ಲಿ 20 ಕ್ಕೂ ಹೆಚ್ಚು ಲೋಕಸಭಾ ಸ್ಥಾನಗಳನ್ನು ಗೆಲ್ಲುವುದು ಖಚಿತ ಎಂದು ತಿಮ್ಮಾಪೂರ ವಿಶ್ವಾಸ ವ್ಯಕ್ತಪಡಿಸಿದರು.ಕೋಟ್
ದೇಶದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಅಕ್ಕಪಕ್ಕದ ದೇಶಗಳೊಂದಿಗೆ ಸೌಜನ್ಯವಿಲ್ಲ, ಈಗ ಮೋದಿಯವರ ಪರ ಯಾವುದೇ ಅಲೆಯಿಲ್ಲ. ಮೋದಿಯವರ ಹವಾ ಈಗ ದೇಶದ ಜನತೆಯ ಮುಂದೆ ಠುಸ್ಸಾಗಿದೆ. ಕೇವಲ ಭಾವನಾತ್ಮಕವಾಗಿ ಜನರ ಭಾವನೆಗಳ ಮೂಲಕ ಅವರು ಆಡಳಿತಕ್ಕೆ ಬಂದಿದ್ದು, ದೇಶಾದ್ಯಂತ ಬೆಲೆ ಏರಿಕೆಯಾಗುವಂತೆ ಮಾಡಿ ಜನಸಾಮಾನ್ಯರ ಬದುಕನ್ನು ಸಂಕಷ್ಟಕ್ಕೆ ದೂಡಿದ್ದಾರೆ.- ಆರ್.ಬಿ.ತಿಮ್ಮಾಪುರ, ಸಚಿವ