ಮಾಯಸಂದ್ರ ಕೃಷಿ ಪತ್ತಿಗೆ ನಿರ್ದೇಶಕರೇ ಕಂಟಕ

| Published : Sep 26 2024, 10:36 AM IST

ಸಾರಾಂಶ

ತುರುವೇಕೆರೆ: ತಾಲೂಕಿನ ಮಾಯಸಂದ್ರದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಸಾಕಷ್ಟು ಅವ್ಯವಹಾರಗಳು ಆಗಿದ್ದು, ಹಣ ದುರುಪಯೋಗ ಪಡಿಸಿಕೊಂಡಿರುವ ಸಿಬ್ಬಂದಿಗಳ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕೆಂದು ಸಂಘದ ಸಾಮಾನ್ಯ ಸದಸ್ಯರು ಆಗ್ರಹಿಸಿದ ಘಟನೆ ನಡೆಯಿತು.

ತುರುವೇಕೆರೆ: ತಾಲೂಕಿನ ಮಾಯಸಂದ್ರದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಸಾಕಷ್ಟು ಅವ್ಯವಹಾರಗಳು ಆಗಿದ್ದು, ಹಣ ದುರುಪಯೋಗ ಪಡಿಸಿಕೊಂಡಿರುವ ಸಿಬ್ಬಂದಿಗಳ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕೆಂದು ಸಂಘದ ಸಾಮಾನ್ಯ ಸದಸ್ಯರು ಆಗ್ರಹಿಸಿದ ಘಟನೆ ನಡೆಯಿತು.

ಮಾಯಸಂದ್ರದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆವರಣದಲ್ಲಿ ೨೦೨೩-೨೪ ನೇ ಸಾಲಿನ ಸಂಘದ ಸಕಲ ಸದಸ್ಯರ ವಾರ್ಷಿಕ ಮಹಾಸಭೆಯನ್ನು ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಸಂಘಕ್ಕೆ ಸದಸ್ಯರಿಂದ ಬರಬೇಕಿರುವ ಬಾಕಿ ಹಣದ ಬಗ್ಗೆ ಸಭೆಯಲ್ಲಿ ಪ್ರಸ್ತಾಪವಾಗುತ್ತಿದ್ದಂತೆ ಗದ್ದಲ ಪ್ರಾರಂಭವಾಯಿತು. ಗಿರಿಜಮ್ಮ ಎಂಬುವವರು ಪಡೆದಿದ್ದ ಸಾಲ ಮತ್ತು ಅದಕ್ಕೆ ಸಂಬಂಧಿಸಿದಂತೆ ಬಡ್ಡಿಯನ್ನು ತೀರುವಳಿ ಮಾಡಿದ್ದರೂ ಸಹ ಸಂಘದ ಸುಸ್ತಿದಾರರಲ್ಲಿ ತಮ್ಮ ಹೆಸರಿರುವುದು ವಾಗ್ವಾದಕ್ಕೆ ಕಾರಣವಾಯಿತು. ಸಂಘದಲ್ಲಿ ಲಕ್ಷಾಂತರ ರು. ಸಾಲ ಪಡೆದಿರುವವರು ಕಳೆದ ೨೦೧೮ ರಿಂದಲೂ ಕಟ್ಟಿಲ್ಲ. ಅದರಲ್ಲಿ ಕೆಲವು ನಿರ್ದೇಶಕರು ಸುಸ್ತಿದಾರರ ಪಟ್ಟಿಯಲ್ಲಿರುವುದುಚರ್ಚೆಗೆ ಗ್ರಾಸವಾಯಿತು. ಸದಸ್ಯರನ್ನು ಸಾಲ ಮರುಪಾವತಿಸಿ ಎಂದು ಆಗ್ರಹಿಸುವ ಸಂಘದ ಪದಾಧಿಕಾರಿಗಳು ನಿರ್ದೇಶಕರನ್ನೇಕೆ ಪ್ರಶ್ನಿಸುತ್ತಿಲ್ಲ ಎಂದು ಕಿಡಿಕಾರಿದರು. ಸುಮಾರು ಒಂದು ಕೋಟಿಯಷ್ಟು ಸಾಲ ನೀಡಲಾಗಿದೆ. ಅವರೆಲ್ಲರೂ ಸುಸ್ತಿದಾರರಾಗಿ ಸಂಘದ ಅಭಿವೃದ್ಧಿಗೆ ಕಂಟಕಪ್ರಾಯರಾಗಿದ್ದಾರೆ. ಅವರಿಂದ ಮೊದಲು ಹಣ ವಸೂಲು ಮಾಡಿ ಎಂದು ಸದಸ್ಯರು ಆಗ್ರಹಿಸಿದರು. ಸಂಘದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಯೇ ಲಕ್ಷಾಂತರ ರುಪಾಯಿ ದುರುಪಯೋಗ ಮಾಡಿಕೊಂಡಿದ್ದಾರೆ. ಇವರ ಅಕ್ರಮ ಗೊತ್ತಿದ್ದೂ ಸಹ ಮೌನವಾಗಿದ್ದೇಕೆ ಎಂದು ಪ್ರಶ್ನಿಸಿದರು. ಹಣ ದುರುಪಯೋಗ ಆಗುತ್ತಿದ್ದರೂ ಸಹ ವಾರ್ಷಿಕ ಲೆಕ್ಕಪರಿಶೋಧಕರು ಸಂಘದಲ್ಲಿ ಯಾವುದೇ ಅವ್ಯವಹಾರ ಆಗಿಲ್ಲ ಎಂದು ವರದಿ ನೀಡಿರುವುದು ಎಷ್ಟು ಸರಿ. ಲೆಕ್ಕಪರಿಶೋಧಕರೂ ಸಹ ಸಂಘದ ಆಡಳಿತ ಮಂಡಲಿಯಿಂದ ಭಕ್ಷೀಸು ಪಡೆದು ಸುಳ್ಳು ಲೆಕ್ಕವನ್ನು ಸಂಘಕ್ಕೆ ನೀಡಿದ್ದಾರೆ ಎಂದು ಸದಸ್ಯರು ಆರೋಪಿಸಿದರು.

ಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಎಂ.ವಿ.ಪಂಚಾಕ್ಷರಿ ವಹಿಸಿದ್ದರು. ಉಪಾಧ್ಯಕ್ಷೆ ಕೆ.ಆರ್.ಜಯಮ್ಮ, ನಿರ್ದೇಶಕರಾದ ಎಂ.ಪುಟ್ಟೇಗೌಡ, ಪಿ.ಎನ್.ಜವರೇಗೌಡ, ಕೆ.ಸಿ.ನಟರಾಜು, ಎಸ್.ಬಿ.ಶ್ಯಾಮಲಾ, ಸಿ.ಆರ್.ಗಿರಿಧರ್, ಎಂ.ಎಲ್.ಲೋಕೇಶ್, ಜೆ.ಬಿ.ನಂದೀಶ್, ಎಂ.ಎನ್.ಗಂಗಯ್ಯ, ಎಂ.ಟಿ.ಅಶೋಕ್ ಕುಮಾರ್, ವಾಸು ಉಪಸ್ಥಿತರಿದ್ದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಚ್.ಎಸ್.ಮಮತಾ ಸಂಘದ ವಾರ್ಷಿಕ ವರದಿಯನ್ನು ಸಭೆಗೆ ಮಂಡಿಸಿದರು.

ಬೀಗ ಹಾಕುವ ಎಚ್ಚರಿಕೆ

ಸಂಘದ ಸದಸ್ಯರು ಕೆಲವು ಗುರುತರವಾದ ಆರೋಪಗಳನ್ನು ಮಾಡುತ್ತಿದ್ದ ವೇಳೆ ಸಂಘದ ಅಧ್ಯಕ್ಷ ಪಂಚಾಕ್ಷರಿಯವರು ಮಾತನಾಡಿ ಕೆಲವು ಪ್ರಮಾದವಾಗಿದೆ ಎಂದು ಸಭೆಯಲ್ಲಿ ಒಪ್ಪಿಕೊಂಡರು. ಆಗ ಮಾತನಾಡಿದ ಸದಸ್ಯರು ಮುಂಬರುವ ದಿನಗಳಲ್ಲಿ ಸಂಘದ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ಮಾಡುವುದು ಅನಿವಾರ್ಯ ಆಗಲಿದೆ ಎಂದು ಸದಸ್ಯರು ಎಚ್ಚರಿಕೆ ನೀಡಿದರು.