ಅಧಿಕ ಆದಾಯದ ವಾಣಿಜ್ಯ ಕಟ್ಟಡ ಪುರಸಭೆ ವ್ಯಾಪ್ತಿಗೆ ಸೇರಿಸಲು ಡಾ. ಬಾಲಚಂದ್ರಗೌಡ್ರ ಪಾಟೀಲ ಸೂಚನೆ

| Published : Feb 20 2025, 12:46 AM IST

ಸಾರಾಂಶ

ಬ್ಯಾಡಗಿ ವಾಣಿಜ್ಯ ಪಟ್ಟಣ ಎಂಬುದರಲ್ಲಿ ಎರಡು ಮಾತಿಲ್ಲ 5 ಕಿಮೀ ವ್ಯಾಪ್ತಿಯ ರಿ.ಸ.ನಂ.ಗಳನ್ನು ಪುರಸಭೆ ವ್ಯಾಪ್ತಿಗೆ ಸೇರ್ಪಡೆ ಮಾಡಿಕೊಳ್ಳಬೇಕೆಂಬ ನಿಯಮವಿದೆ.

ಬ್ಯಾಡಗಿ: ಕುಡಿಯುವ ನೀರು, ವಿದ್ಯುತ್ ಸೇರಿದಂತೆ ಎಲ್ಲ ವ್ಯವಸ್ಥೆಗಳನ್ನು ಪುರಸಭೆಯಿಂದ ಪಡೆದುಕೊಳ್ಳುತ್ತಿದ್ದರೂ ಸುಮಾರು ಕೋಟಿಗೂ ಅಧಿಕ ಅದಾಯ ಬರುವಂತಹ ಕೋಲ್ಡ್ ಸ್ಟೋರೆಜ್, ಕಾರದ ಪುಡಿ ಫ್ಯಾಕ್ಟರಿ ಸೇರಿದಂತೆ ವಾಣಿಜ್ಯ ಕಟ್ಟಡಗಳ ತೆರಿಗೆ ಮಾತ್ರ ಪಕ್ಕದ ಗ್ರಾಮ ಪಂಚಾಯಿತಿಗಳಿಗೆ ಜಮೆಯಾಗುತ್ತಿದೆ. ಕೂಡಲೇ ಅಂತಹ ಸರ್ವೆ ನಂ.ಗಳ ಆಸ್ತಿಯನ್ನು ಪುರಸಭೆಗೆ ವರ್ಗಾಯಿಸಿಕೊಳ್ಳುವಂತೆ ಅಧ್ಯಕ್ಷ ಡಾ. ಬಾಲಚಂದ್ರಗೌಡ್ರ ಪಾಟೀಲ ಅವರು ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು.

ಪಟ್ಟಣದ ಪುರಸಭೆ ಸಭಾ ಭವನದಲ್ಲಿ ಬುಧವಾರ ಆಯೋಜಿಸಿದ್ದ ಇ- ಖಾತಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿ, ಬ್ಯಾಡಗಿ ವಾಣಿಜ್ಯ ಪಟ್ಟಣ ಎಂಬುದರಲ್ಲಿ ಎರಡು ಮಾತಿಲ್ಲ 5 ಕಿಮೀ ವ್ಯಾಪ್ತಿಯ ರಿ.ಸ.ನಂ.ಗಳನ್ನು ಪುರಸಭೆ ವ್ಯಾಪ್ತಿಗೆ ಸೇರ್ಪಡೆ ಮಾಡಿಕೊಳ್ಳಬೇಕೆಂಬ ನಿಯಮವಿದೆ. ಆದರೆ ಕೇವಲ 500 ಮೀ. ದೂರದಲ್ಲಿರುವ ರಿ.ಸ.ನಂ.ಗಳನ್ನು ಸೇರಿಸಿಕೊಳ್ಳುವಲ್ಲಿ ವಿಫಲವಾಗಿರುವುದು ನಾಚಿಕೆಗೇಡಿನ ಸಂಗತಿ. ಯಾವುದೇ ಸಬೂಬು ನೀಡದೇ ಎಲ್ಲ ವಾಣಿಜ್ಯ ಕಟ್ಟಡಗಳನ್ನು ಪುರಸಭೆ ವ್ಯಾಪ್ತಿಗೆ ಸೇರ್ಪಡೆ ಮಾಡಿಕೊಳ್ಳುವ ಮೂಲಕ ಪುರಸಭೆ ಆದಾಯ ಹೆಚ್ಚಿಸುವಂತೆ ಸೂಚಿಸಿದರು.

ಪುರಸಭೆ ವ್ಯಾಪ್ತಿಗೆ ಸೇರ್ಪಡೆ ಮಾಡಿಕೊಳ್ಳಿ: ಪುರಸಭೆ ಸದಸ್ಯ ಬಸವರಾಜ ಛತ್ರದ ಮಾತನಾಡಿ, ಅಧಿಕಾರಿಗಳ ಬೇಜವಾಬ್ದಾರಿ ವರ್ತನೆಯಿಂದ ಪುರಸಭೆ ಆದಾಯಕ್ಕೆ ಧಕ್ಕೆಯಾಗುತ್ತಿದೆ. ಕೆಲ ವರ್ತಕರು ಉದ್ಯಮಿಗಳು ಖುದ್ದಾಗಿ ಸೇರ್ಪಡೆ ಮಾಡಿಕೊಳ್ಳುವಂತೆ ಪುರಸಭೆಗೂ ಬಂದರೂ ಅವರಿಗೆ ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂಬ ಸಬೂಬು ಹೇಳುತ್ತಿದ್ದೀರಿ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ಮಾ. 31ರೊಳಗಾಗಿ ಪುರಸಭೆ ವ್ಯಾಪ್ತಿಗೆ ಹೊಂದಿಕೊಂಡ ಎಲ್ಲ ಕಟ್ಟಡ ಆಸ್ತಿಗಳನ್ನು ಪುರಸಭೆ ಇ- ಆಸ್ತಿಯಲ್ಲಿ ನೋಂದಣಿ ಮಾಡಿಕೊಳ್ಳುವಂತೆ ಕ್ರಮ ಕೈಗೊಳ್ಳಲು ಸೂಚಿಸಿದರು.

ನೀರಿನ ಕೊರತೆಯಾಗದಂತೆ ನೋಡಿಕೊಳ್ಳಿ: ಉಪಾಧ್ಯಕ್ಷ ಸುಭಾಸ್ ಮಾಳಗಿ ಮಾತನಾಡಿ, ಪುರಸಭೆ ವ್ಯಾಪ್ತಿಯ ಎಲ್ಲ ವಾರ್ಡ್‌ಗಳಿಗೆ ನೀರಿನ ತೊಂದರೆಯಾದಲ್ಲಿ ಸಿಬ್ಬಂದಿ ಹೊಣೆ. ಸಾರ್ವಜನಿಕರಿಂದ ದೂರು ಬಂದಲ್ಲಿ ಸಿಬ್ಬಂದಿ ಮೇಲೆ ಕ್ರಮ ಅನಿವಾರ್ಯ. ಇಂತಹ ಘಟನೆಗಳಿಗೆ ಸಾಕ್ಷಿಯಾಗದಂತೆ ಪುರಸಭೆ ಸಿಬ್ಬಂದಿಗೆ ಎಚ್ಚರಿಕೆ ನೀಡಿದ ಅವರು, ಬೇಸಿಗೆಯಲ್ಲಿ ನೀರಿನ ಬಳಕೆ ಹೆಚ್ಚಾಗಿದ್ದು, ಜನರಿಗೆ ಎಲ್ಲಿಯೂ ತೊಂದರೆಯಾಗದಂತೆ ಪುರಸಭೆ ಮುಂಜಾಗ್ರತ ಕ್ರಮ ಕೈಗೊಳ್ಳಬೇಕಿದೆ. ಇದಕ್ಕಾಗಿ ನಿರಂತರ ನೀರು ಪೂರೈಕೆಗೆ ಅದ್ಯತೆ ನೀಡಿದ್ದು, ಎಲ್ಲ ವಾರ್ಡ್‌ಗಳಲ್ಲಿ ನೀರು ಪೂರೈಕೆ ಭರದಿಂದ ಸಾಗಿದೆ. ಆದರೆ ಕೆಲವೆಡೆ ನೀರು ವ್ಯತ್ಯಯವಾಗುತ್ತಿದೆ ಎಂದು ಸದಸ್ಯರು ಹಾಗೂ ಸಾರ್ವಜನಿಕರು ದೂರುತ್ತಿದ್ದಾರೆ. ಕೂಡಲೇ ಅಂತಹ ವಾರ್ಡ್‌ಗಳಿಗೆ ತೆರಳಿ ನೀರು ಪೂರೈಕೆ ಸಿಬ್ಬಂದಿ ಕಾರ್ಯೋನ್ಮುಖರಾಗಬೇಕು. ನಿರ್ಲಕ್ಷಿಸಿದಲ್ಲಿ ಅಂತಹ ಸಿಬ್ಬಂದಿ ಮೇಲೆ ನಿರ್ದಾಕ್ಷಿಣ್ಯ ಕ್ರಮಕ್ಕೆ ಮುಖ್ಯಾಧಿಕಾರಿಗಳಿಗೆ ಸೂಚಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಬ್ಯಾನರ್‌ ಗದ್ದಲ: ಸಭೆಯಲ್ಲಿ ದ್ಯಾಮವ್ವದೇವಿ ಜಾತ್ರೆಯಲ್ಲಿ ಸಮಿತಿ ಪದಾಧಿಕಾರಿಗಳು, ಸಮಿತಿ ಹೊರತುಪಡಿಸಿ ಖಾಸಗಿಯಾಗಿ ಬ್ಯಾನರ್ ಅಳವಡಿಸಿದಂತೆ ಉತ್ಸವ ಸಮಿತಿ ಸದಸ್ಯರು ಮನವಿ ಪತ್ರ ಸಲ್ಲಿಸಿದರು. ಇದೇ ವೇಳೆ ಬಳಿಕ ಸಭೆಗೆ ಆಗಮಿಸಿದ ಸಮಾನ ಮನಸ್ಕರ ಸಮಿತಿ ಸದಸ್ಯರು ಈಗ ಅಳವಡಿಸಿರುವ ಅನಧಿಕೃತ ಬ್ಯಾನರ್‌ಗಳಿಗೆ ಶುಲ್ಕ ತುಂಬಿಸಿಕೊಳ್ಳಬೇಕು. ಪುರಸಭೆ ಪರಿಸರಕ್ಕೆ ಹಾನಿಯಾಗದಂತೆ ಎಚ್ಚರಿಕೆ ವಹಿಸಬೇಕು. ಬ್ಯಾನರ್ ವಿಷಯಕ್ಕೆ ಸಂಬಂಧಿಸಿದಂತೆ ಸಭೆಯ ನಿರ್ಣಯ ಪಾಲಿಸುವಂತೆ ಪತ್ರ ಮೂಲಕ ಮನವಿ ಮಾಡಿಕೊಂಡರು.

ಈ ವೇಳೆ ಪುರಸಭೆ ಸ್ಥಾಯಿ ಸಮಿತಿ ಚೇರ್‌ಮನ್‌ ಚನ್ನವೀರಪ್ಪ ಶೆಟ್ಟರ, ಮುಖ್ಯಾಧಿಕಾರಿ ವಿನಯಕುಮಾರ ಹೊಳೆಯಪ್ಪಗೋಳ, ಸದಸ್ಯರಾದ ರಾಮಣ್ಣ ಕೋಡಿಹಳ್ಳಿ, ಕಲಾವತಿ ಬಡಿಗೇರ, ಗಾಯತ್ರಿ ರಾಯ್ಕರ, ಮೆಹಬೂಬ್ ಅಗಸನಹಳ್ಳಿ, ವಿನಯಕುಮಾರ ಹಿರೇಮಠ, ಸರೋಜಾ ಉಳ್ಳಾಗಡ್ಡಿ, ಹನುಮಂತಪ್ಪ ಮ್ಯಾಗೇರಿ, ಮಹಮದ್ ರಫೀಕ ಮುದಗಲ್, ಫಕ್ಕೀರವ್ವ ಛಲವಾದಿ ಇತರರಿದ್ದರು.