ನಾಳೆ ನಂದಬಸವೇಶ್ವರ ಜಾತ್ರಾ ಮಹೋತ್ಸವ

| Published : Jan 06 2024, 02:00 AM IST

ಸಾರಾಂಶ

ಜ.6ರಂದು ರಾತ್ರಿ 10.30ಕ್ಕೆ ಸ್ಥಳೀಯ ಶ್ರೀ ನಂದಬಸವೇಶ್ವರ ನಾಟ್ಯ ಸಂಘದವರಿಂದ ರೈತನ ರಾಜ್ಯದಲ್ಲಿ ರೌಡಿಗಳ ದರ್ಬಾರ್‌ ನಾಟಕ ಪ್ರದರ್ಶನಗೊಳ್ಳಲಿದೆ.

ವಿಜಯಪುರ: ನಗರದ ಇಬ್ರಾಹಿಂಪುರದಲ್ಲಿ ಜ.6 ರಿಂದ ಮೂರು ದಿನಗಳವರೆಗೆ ಶ್ರೀ ನಂದಬಸವೇಶ್ವರ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ಜರುಗಲಿದೆ.

ಜಾತ್ರೆಯ ಅಂಗವಾಗಿ ಜ.6ರಂದು ರಾತ್ರಿ 10.30ಕ್ಕೆ ಸ್ಥಳೀಯ ಶ್ರೀ ನಂದಬಸವೇಶ್ವರ ನಾಟ್ಯ ಸಂಘದವರಿಂದ ರೈತನ ರಾಜ್ಯದಲ್ಲಿ ರೌಡಿಗಳ ದರ್ಬಾರ್‌ ನಾಟಕ ಪ್ರದರ್ಶನಗೊಳ್ಳಲಿದೆ.

ಜ.7ರಂದು ಬೆಳಗ್ಗೆ 6ಕ್ಕೆ ನಂದಬಸವೇಶ್ವರನಿಗೆ ಅಭಿಷೇಕ, ಪೂಜೆ, ಬಳಿಕ ನಂದಿಕೋಲ ಮೆರವಣಿಗೆ ನಡೆಯುವುದು. ಬೆಳಗ್ಗೆ 9ಕ್ಕೆ ಶ್ರೀ ನಂದಬಸವೇಶ್ವರ ಗುಡಿಯಿಂದ ನಂದಿಕೋಲ ಮೆರವಣಿಗೆ ಹೊರಟು ಗ್ರಾಮದ ಮನೆಗಳಿಗೆ ಭೇಟಿಕೊಟ್ಟು ಮರಳಿ ಮಧ್ಯಾಹ್ನ 1ಕ್ಕೆ ದೇವಸ್ಥಾನಕ್ಕೆ ಬಂದು ತಲುಪುವುದು. ನಂತರ ಮಹಾಪ್ರಸಾದ ನಡೆಯಲಿದೆ.

ಜ.8ರಂದು ಮಧ್ಯಾಹ್ನ 1ಕ್ಕೆ ನಂದಿಕೋಲ ಮೆರವಣಿಗೆ ಪ್ರಾರಂಭವಾಗಿ ಇಬ್ರಾಹಿಂಪುರ ಭಕ್ತರ ಮನೆಗಳಿಗೆ ಭೇಟಿ ಕೊಟ್ಟು ಸಂಜೆ 4.30ಕ್ಕೆ ಕನಕದಾಸ ಬಡಾವಣೆ, ಅಲ್ಲಾಪುರ ಓಣಿಯ ಮಾರ್ಗವಾಗಿ ಸಾಗಿ 6.30ಕ್ಕೆ ರೈಲ್ವೆ ಸ್ಟೇಷನ್ ಮುಂದಿರುವ ಕರ್ನಾಟಕ ಜಿನ್ನಿಂಗ್ ಫ್ಯಾಕ್ಟರಿ ಬಳಿ ಶ್ರೀ ನಂದಬಸವೇಶ್ವರ ಹಾಗೂ ಶ್ರೀ ಪವಾಡ ಬಸವೇಶ್ವರ ದೇವರು ಎದುರುಗೊಳ್ಳುವುದು. ಸವಳಿಯವರ ತೋಟದ ಬಾವಿಯಲ್ಲಿ ಶ್ರೀ ನಂದಬಸವೇಶ್ವರ ಹಾಗೂ ಶ್ರೀ ಪವಾಡಬಸವೇಶ್ವರ ಅಣ್ಣ-ತಮ್ಮರ ಗಂಗಾಭಿಷೇಕ ನಡೆಯುವುದು. ರಾತ್ರಿ 8ಕ್ಕೆ ಅಲ್ಲಾಪುರ ಅಗಸಿಯಿಂದ ಜುಮ್ಮಾಮಸೀದಿ ಮಾರ್ಗವಾಗಿ ಮೆರವಣಿಗೆ ಸಾಗಿ ಬರುವುದು. ಬಡಿಕಮಾನ್‌ ಹತ್ತಿರದ ಕಸಬಾ ಚಾವಡಿಯಲ್ಲಿ ಮಂಗಳಾರತಿ ಮತ್ತು ಕಾಕಡಾರತಿ ಮಾಡಿ ಶ್ರೀ ಪವಾಡಬಸವೇಶ್ವರರನ್ನು ಬೀಳ್ಕೊಟ್ಟು ಮರಳಿ ಕಮಾನಖಾನ್ ಬಜಾರ ಮಾರ್ಗವಾಗಿ ಭಕ್ತರ ಮನೆಗೆ ಭೇಟಿ ಕೊಡುತ್ತ ರಾತ್ರಿ 10ಕ್ಕೆ ಇಬ್ರಾಹಿಂಪುರ ದೇವಸ್ಥಾನಕ್ಕೆ ನಂದಿಕೋಲ ಬಂದು ಗದ್ದುಗೆಗೊಳ್ಳುವುದು.