ಅಕ್ರಮ ಮಾಂಸ ಸಾಗಾಟ : ಇಬ್ಬರ ಬಂಧನ

| Published : Jan 28 2024, 01:16 AM IST

ಸಾರಾಂಶ

ಮಹಾರಾಷ್ಟ್ರದ ಸಾಂಗ್ಲಿಯ ಕನ್ನಭಾಗದ ಮಹಮ್ಮದ ಗೌಸ ನಜೀರ ಶೇಖ (47), ಸಾಂಗ್ಲಿಯ ಸಾಂಗ್ಲಿವಾಡಿ ನಿವಾಸಿ ಕಲ್ಲಪ್ಪ ರೇವಪ್ಪಾ ಕೋಳಿ (45) ಬಂಧಿತ ಆರೋಪಿಗಳು.

ಬೆಳಗಾವಿ: ಅಕ್ರಮವಾಗಿ ದನದ ಮಾಂಸ ಸಾಗಿಸುತ್ತಿದ್ದ ಇಬ್ಬರನ್ನು ಬಂಧಿಸಿ, ಅವರಿಂದ ₹ 5.60 ಲಕ್ಷ ಮೌಲ್ಯದ 7 ಟನ್‌ ಮಾಂಸವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮಹಾರಾಷ್ಟ್ರದ ಸಾಂಗ್ಲಿಯ ಕನ್ನಭಾಗದ ಮಹಮ್ಮದ ಗೌಸ ನಜೀರ ಶೇಖ (47), ಸಾಂಗ್ಲಿಯ ಸಾಂಗ್ಲಿವಾಡಿ ನಿವಾಸಿ ಕಲ್ಲಪ್ಪ ರೇವಪ್ಪಾ ಕೋಳಿ (45) ಬಂಧಿತ ಆರೋಪಿಗಳು. ಗೂಡ್ಸ್‌ ವಾಹನದಲ್ಲಿ ಮಾಂಸವನ್ನು ಬೆಳಗಾವಿಯಿಂದ ಧಾರವಾಡ ಕಡೆಗೆ ಸಾಗಿಸಲಾಗುತ್ತಿತ್ತು. ಕೊಂಡಸಕೊಪ್ಪ ಕ್ರಾಸ್‌ ಹತ್ತಿರ ರಾಷ್ಟ್ರೀಯ ಹೆದ್ದಾರಿ ಬಳಿ ಹಿರೇಬಾಗೇವಾಡಿ ಠಾಣೆಯ ಪಿಎಸ್‌ಐ ಅವಿನಾಶ ಯರಗೊಪ್ಪ ಅನುಮಾನಗೊಂಡು ವಾಹನ ತಡೆದು ತಪಾಸಣೆ ನಡೆಸಿದ್ದಾರೆ. ಈ ವೇಳೆ ಚಾಲಕನ ಬಳಿ ಯಾವುದೇ ದಾಖಲೆ ಇಲ್ಲದಿರುವುದು ಕಂಡುಬಂದಿದ್ದು, ವಾಹನದಲ್ಲಿದ್ದ 7000 ಕೆಜಿ ಮಾಂಸ ವಶಪಡಿಸಿಕೊಂಡಿದ್ದಾರೆ. ಹಿರೇಬಾಗೇವಾಡಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಂದಕಕ್ಕೆ ಉರುಳಿದ ಟ್ರ್ಯಾಕ್ಟರ್‌

ಬೆಳಗಾವಿ: ಕಬ್ಬು ತುಂಬಿದ್ದ ಟ್ರ್ಯಾಕ್ಟರ್‌ ಉರುಳಿ ಬಿದ್ದ ಘಟನೆ ನಗರದ ಬಾಕ್ಸೈಟ್ ರಸ್ತೆಯಲ್ಲಿ ನಡೆದಿದೆ. ಹನುಮಾನ ವೃತ್ತದ ಬಳಿಯಿಂದ ಇಳಿಜಾರಿನಿಂದ ನೇರವಾಗಿ ಬಂದ ಟ್ರ್ಯಾಕ್ಟರ್‌ ಕಂದಕಕ್ಕೆ ಉರುಳಿದೆ. ಯಾವುದೇ ವಾಹನಗಳು ಇಲ್ಲದ್ದರಿಂದ ದೊಡ್ಡ ಅನಾಹುತ ತಪ್ಪಿದಂತಾಗಿದೆ. ಯಾವುದೇ ಪ್ರಾಣಾಪಾಯವಾಗಿಲ್ಲ. ಎಪಿಎಂಸಿ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.