ಉಡುಪಿ ಡಿಸಿ ವಿರುದ್ಧ ಕ್ರಮಕ್ಕೆ ಮುಂದಾದರೆ ಕ್ರಮ ಕೈಗೊಳ್ಳಲು ಮುಂದಾದರೆ ಬಿಜೆಪಿಯಿಂದ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಹಾಕುವುದಾಗಿ ಬಿಜೆಪಿ ಉಡುಪಿ ಜಿಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ಎಚ್ಚರಿಕೆ ನೀಡಿದ್ದಾರೆ.
ಉಡುಪಿ: ಪರ್ಯಾಯ ಮಹೋತ್ಸವದ ಶೋಭಾಯಾತ್ರೆಗೆ ಅಷ್ಟ ಮಠಗಳ ಯತಿಗಳ ಉಪಸ್ಥಿತಿಯಲ್ಲಿ ಭಗವಾಧ್ವಜ ಹಾರಿಸಿ ಚಾಲನೆ ನೀಡಿರುವ ಜಿಲ್ಲಾಧಿಕಾರಿ ಮೇಲೆ ಉಡುಪಿ ಕಾಂಗ್ರೆಸ್ ನೀಡಿದ ದೂರಿನಂತೆ ರಾಜ್ಯ ಸರ್ಕಾರ ಅವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲು ಮುಂದಾದರೆ ಬಿಜೆಪಿಯಿಂದ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಹಾಕುವುದಾಗಿ ಬಿಜೆಪಿ ಉಡುಪಿ ಜಿಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ಎಚ್ಚರಿಕೆ ನೀಡಿದ್ದಾರೆ.
ದಶಕಗಳಿಂದ ಜಿಲ್ಲಾ ಉಸ್ತುವಾರಿ ಸಚಿವರು ಅಥವಾ ರಾಜ್ಯ ಸರ್ಕಾರದ ಪ್ರತಿನಿಧಿಗಳು ಪರ್ಯಾಯೋತ್ಸವದ ಶೋಭಾಯಾತ್ರೆಗೆ ಚಾಲನೆ ನೀಡುವುದು ಸಂಪ್ರದಾಯ. ಆದರೆ ಅತಿಥಿಯಂತೆ ಉಡುಪಿಗೆ ಭೇಟಿ ನೀಡುವ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪರ್ಯಾಯ ಮಹೋತ್ಸವಕ್ಕೆ ಬಾರದೆ ಅಂತರ ಕಾಯ್ದುಕೊಂಡು ಉಡುಪಿ ಜಿಲ್ಲೆಯ ಸಮಸ್ತ ಜನತೆಗೆ ಅಪಮಾನ ಮಾಡಿದ್ದಾರೆ ಎಂದು ಆರೋಪಿಸಿದರು.ಸಚಿವರ ಅನುಪಸ್ಥಿತಿಯಲ್ಲಿ ಡಿಸಿ ಮೆರವಣಿಗೆಗೆ ಚಾಲನೆ ನೀಡಿದ್ದಾರೆ. ಈ ಸಂದರ್ಭ ಅವರು ಕೈಯಲ್ಲಿ ಭಗವಾಧ್ವಜ ಹಿಡಿದ ವಿಚಾರವನ್ನು ವಿವಾದವನ್ನಾಗಿಸಿರುವ ಕಾಂಗ್ರೆಸ್ ಮತೀಯ ಶಕ್ತಿಗಳನ್ನು ಖುಷಿ ಪಡಿಸಲು ಮುಂದಾಗಿರುವುದು ದುರಂತ. ಜಿಲ್ಲಾಧಿಕಾರಿ ಮಾನಸಿಕ ಸ್ಥೈರ್ಯ ಕುಗ್ಗಿಸುವ ಪ್ರಯತ್ನ ಮಾಡುತ್ತಿರುವುದು ಖಂಡನೀಯ ಎಂದವರು ಹೇಳಿದ್ದಾರೆ.ಕಾಂಗ್ರೆಸ್ ಪಕ್ಷಕ್ಕೆ ನೈತಿಕತೆ ಇದ್ದರೆ ಹಿಂದೂ ಧರ್ಮದ ಭಗವಾಧ್ವಜದ ಬಗ್ಗೆ ತಮ್ಮ ನಿಲುವನ್ನು ಸ್ಪಷ್ಟಪಡಿಸುವಂತೆ ಹಾಗೂ ದೂರು ನೀಡಿದ ಕಾಂಗ್ರೆಸ್ ಕಾನೂನು ಮತ್ತು ಮಾನವ ಹಕ್ಕುಗಳ ವಿಭಾಗದ ಪದಾಧಿಕಾರಿಗಳನ್ನು ತಕ್ಷಣ ಪಕ್ಷದಿಂದ ಉಚ್ಚಾಟಿಸುವಂತೆ ಕುತ್ಯಾರು ನವೀನ್ ಶೆಟ್ಟಿ ಆಗ್ರಹಿಸಿದ್ದಾರೆ