ಉಡುಪಿ: ಅರಣ್ಯ ಇಲಾಖೆ ಇರಿಸಿದ ಬೋನಿನಲ್ಲಿ ಚಿರತೆಯೊಂದು ಸೆರೆಯಾದ ಘಟನೆ ಭಾನುವಾರ ಬೆಳಗ್ಗಿನ ಜಾವ ಇಲ್ಲಿನ ಮಣಿಪುರ ಗ್ರಾಮದ ಕುಂತಲನಗರದ ದೇವಳಗುಜ್ಜಿ ಎಂಬಲ್ಲಿ ನಡೆದಿದೆ.

ದೇವಳಗುಜ್ಜಿ ಪರಿಸರದಲ್ಲಿ ಕಳೆದ ಎರಡು ವಾರಗಳ ಹಿಂದೆ ಚಿರತೆಯೊಂದು ಓಡಾಟ ನಡೆಸುತ್ತಿದೆ ಎಂಬ ಸ್ಥಳೀಯರ ದೂರಿನ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯವರು ಕಳೆದ ವಾರ ಚಿರತೆ ಸೆರೆಗಾಗಿ ಬೋನು ಇರಿಸಿದ್ದರು.

ಬೆಳಗ್ಗೆ ಆಹಾರ ಅರಸಿ ಬಂದ ಚಿರತೆ ಈ ಬೋನಿನಲ್ಲಿ ಕಟ್ಟಲಾಗಿದ್ದ ನಾಯಿಯನ್ನು ಹಿಡಿಯಲು ಹೋಗಿ ತಾನೇ ಬೋನಿನಲ್ಲಿ ಸೆರೆಯಾಗಿದೆ. ನಂತರ ಸ್ಥಳೀಯರ ಮಾಹಿತಿಯಂತೆ ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆಯವರು ಸ್ಥಳೀಯರ ಸಹಕಾರದೊಂದಿಗೆ ಕಾರ್ಯಾಚರಣೆ ನಡೆಸಿ ಚಿರತೆಯನ್ನು ಸ್ಥಳದಿಂದ ಸುರಕ್ಷಿತ ಪ್ರದೇಶಕ್ಕೆ ಸಾಗಿಸಿದ್ದಾರೆಸುಮಾರು 3 ವರ್ಷ ವಯಸ್ಸಿನ ಈ ಹೆಣ್ಣು ಚಿರತೆಯನ್ನು ಬಳಿಕ ವೈದ್ಯಾಧಿಕಾರಿಗಳು ತಪಾಸಣೆ ನಡೆಸಿದ್ದು, ನಂತರ ಅದನ್ನು ಅಭಯಾರಣ್ಯದಲ್ಲಿ ಬಿಡಲಾಗಿದೆ ಎಂದು ಅರಣ್ಯ ಇಲಾಖಾಧಿಕಾರಿಗಳು ತಿಳಿಸಿದ್ದಾರೆ.ಉಡುಪಿ ವಲಯ ಅರಣ್ಯಾಧಿಕಾರಿ ವಾರಿಜಾಕ್ಷಿ ಮಾರ್ಗದರ್ಶನದಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ ಉಪ ವಲಯ ಅರಣ್ಯಾಧಿಕಾರಿಗಳಾದ ಮುಹಮ್ಮದ್ ಜುನೈದ್ ಅಖ್ತರ್, ಶಿವಾನಂದ, ಗಸ್ತು ಅರಣ್ಯ ಪಾಲಕ ಶ್ರೀನಿವಾಸ ಜೋಗಿ, ಉಚ್ಚು ಟ್ರಸ್ಟ್ ನ ಸಂಯೋಜಕ ಅಕ್ಷಯ ಶೇಟ್ ಪಾಲ್ಗೊಂಡಿದ್ದರು.