ಸಾರಾಂಶ
ಮೈಸೂರು: ಈ ಬಾರಿಯ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಮೈಸೂರು ಜಿಲ್ಲೆ 17ನೇ ಸ್ಥಾನಕ್ಕೆ ಕುಸಿದಿದೆ.
ಮೈಸೂರು ಜಿಲ್ಲೆಯು ಶೇ. 83.13 ರಷ್ಟು ಫಲಿತಾಂಶ ಪಡೆದರೂ 17ನೇ ಸ್ಥಾನಕ್ಕೆ ಕುಸಿಯಲ್ಪಿಟ್ಟಿದೆ. ಕಳೆದ ಬಾರಿ ಶೇ. 79.89 ರಷ್ಟು ಫಲಿತಾಂಶ ಪಡೆದು 13ನೇ ಸ್ಥಾನ ಪಡೆದುಕೊಂಡಿದ್ದ ಮೈಸೂರು ಜಿಲ್ಲೆ ಈ ಬಾರಿಯ ಫಲಿತಾಂಶದಲ್ಲಿ ಸುಧಾರಿಸಿಕೊಂಡರೂ, 17ನೇ ಸ್ಥಾನಕ್ಕೆ ಕುಸಿದಿದೆ.
ಮೈಸೂರಿನ ವಿದ್ಯಾರ್ಥಿ ಊರ್ವಿಶ್ ಪ್ರಶಾಂತ್ ಮತ್ತು ಮೇಟಗಳ್ಳಿಯ ಆರ್.ವಿಪಿ.ಬಿ. ಕಾಲೇಜಿನ ಜಾಹ್ನವಿ ತಲಾ 597 ಅಂಕಗಳೊಂದಿಗೆ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದಿದ್ದಾರೆ. ಕುವೆಂಪುನಗರದ ಬಿಜಿಎಸ್ ಪಿಯು ಕಾಲೇಜಿನ ವಿದ್ಯಾರ್ಥಿ ಊರ್ವಿಶ್ ವಿಜ್ಞಾನ ವಿಭಾಗದಲ್ಲಿ 597 ಅಂಕ ಪಡೆದಿದ್ದಾರೆ.
ಊರ್ವಿಶ್ ಪ್ರಶಾಂತ್ ಕನ್ನಡ, ಇಂಗ್ಲಿಷ್, ಭೌತವಿಜ್ಞಾನದಲ್ಲಿ ತಲಾ 99, ರಸಾಯನ ವಿಜ್ಞಾನ, ಗಣಿತ ಹಾಗೂ ಜೀವವಿಜ್ಞಾನದಲ್ಲಿ 100 ಅಂಕ ಪಡೆದಿದ್ದಾರೆ. ಜಾಹ್ನವಿ ಸಂಸ್ಕೃತ, ಗಣಿತ, ಜೀವವಿಜ್ಞಾನ ಹಾಗೂ ರಸಾಯನ ವಿಜ್ಞಾನದಲ್ಲಿ 100 ಅಂಕ, ಇಂಗ್ಲಿಷ್ ನಲ್ಲಿ 99 ಮತ್ತು ಭೌತವಿಜ್ಞಾನದಲ್ಲಿ 98 ಅಂಕ ಗಳಿಸಿದ್ದಾರೆ.
ಮಹಾರಾಣಿ ಪಿಯು ಕಾಲೇಜಿನ ಶ್ರೇಯಾ ಗಣೇಶ್ ಅಯ್ಯರ್ 5ನೇ ಸ್ಥಾನ ಪಡೆದಿದ್ದಾರೆ. ಅಂತೆಯೇ ಸರ್ಕಾರಿ ಕಾಲೇಜುಗಳಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿನಿಯಾಗಿದ್ದಾರೆ. ಈಕೆ 594 ಅಂಕ ಗಳಿಸಿದ್ದಾರೆ.
ವಾಣಿಜ್ಯ ವಿಭಾಗದಲ್ಲಿ ಸದ್ವಿದ್ಯಾ ಪಿಯು ಕಾಲೇಜಿನ ಸ್ವಾತಿ ಎಸ್. ಭಟ್ 594 ಅಂಕಗಳೊಂದಿಗೆ ರಾಜ್ಯಕ್ಕೆ 4ನೇ ಸ್ಥಾನ ಪಡೆದಿದ್ದು, ವ್ಯವಹಾರಿಕ ಅಧ್ಯಯನ, ಅಕೌಂಟೆನ್ಸಿ, ಗಣಿತ ಹಾಗೂ ಸಂಸ್ಕೃತದಲ್ಲಿ 100, ಇಂಗ್ಲಿಷ್ ನಲ್ಲಿ 96, ಸಂಖ್ಯಾಶಾಸ್ತ್ರದಲ್ಲಿ 98 ಅಂಕ ಪಡೆದಿದ್ದಾರೆ.
ಉಪನ್ಯಾಸಕರು ಹಾಗೂ ಪೋಷಕರ ಪ್ರೋತ್ಸಾಹದಿಂದ ಉತ್ತಮ ಅಂಕ ಗಳಿಸಲು ಸಾಧ್ಯವಾಗಿದೆ. ಅಂದಿನ ಪಾಠವನ್ನು ಅಂದೇ ಅಭ್ಯಾಸ ಮಾಡಿದ್ದರಿಂದ ಹೆಚ್ಚು ಕಷ್ಟವಾಗಲಿಲ್ಲ. ಭಾರತೀಯ ತಾಂತ್ರಿಕ ಸಂಸ್ಥೆಯಲ್ಲಿ (ಐಐಟಿ) ಎಂಜಿನಿಯರಿಂಗ್ ಪೂರೈಸಿ, ಇಸ್ರೋ ಸೇರುವ ಕನಸಿದೆ.
- ಕೆ.ಎಚ್. ಊರ್ವಿಶ್ ಪ್ರಶಾಂತ್, ಜಿಲ್ಲೆಯ ಟಾಪರ್, ರಾಜ್ಯಕ್ಕೆ ದ್ವಿತೀಯ.
ಮೈಸೂರು ಜಿಲ್ಲೆ ಕಳೆದ ಬಾರಿಗಿಂತ ಉತ್ತಮ ಸಾಧನೆ ಮಾಡಿದೆ. ಶೇ. 79.89 ರಿಂದ ಶೇ. 83.13ಕ್ಕೆ ಏರಿಕೆಯಾಗಿದೆ. ರ್‍ಯಾಂಕಿಂಗ್ ನಲ್ಲಿ ಮಾತ್ರ 17ನೇ ಸ್ಥಾನ ಪಡೆದಿದೆ. ಮುಂದಿನ ಬಾರಿ 10ರೊಳಗೆ ಸ್ಥಾನ ಪಡೆಯಲು ಪ್ರಯತ್ನಿಸಲಾಗುವುದು.
- ಮರಿಸ್ವಾಮಿ, ಡಿಡಿಪಿಯು