ಸರ್ಕಾರದಿಂದ ಸಿಗುವ ಕ್ರೀಡಾಸೌಲಭ್ಯ ಬಳಸಿಕೊಳ್ಳಿ

| Published : Feb 11 2024, 01:47 AM IST

ಸರ್ಕಾರದಿಂದ ಸಿಗುವ ಕ್ರೀಡಾಸೌಲಭ್ಯ ಬಳಸಿಕೊಳ್ಳಿ
Share this Article
  • FB
  • TW
  • Linkdin
  • Email

ಸಾರಾಂಶ

ದ್ಯಾರ್ಥಿ ವೇತನ ಮತ್ತು ಬೆಂಗಳೂರಿನ ಯವನಿಕಾದಲ್ಲಿ ಸಿಗುವ ಸೌಲಭ್ಯಗಳನ್ನು ವಿವಿ ಕ್ರೀಡಾಪಟುಗಳು ಬಳಸಿಕೊಳ್ಳಬೇಕು ಮತ್ತು ಸರ್ಕಾರದಿಂದ ದೊರೆಯುವ ಸಕಲ ಕ್ರೀಡಾ ಸೌಲಭ್ಯಗಳನ್ನು ಪಡೆದುಕೊಂಡು ಕ್ರೀಡಾರಂಗದಲ್ಲಿ ಹೊಸ ಮೈಲುಗಲ್ಲು ಸ್ಥಾಪಿಸಬೇಕು.

ಕನ್ನಡಪ್ರಭ ವಾರ್ತೆ ವಿಜಯಪುರ

ಕ್ರೀಡಾಕ್ಷೇತ್ರದಲ್ಲಿ ಅನೇಕ ಉದ್ಯೋಗ ಅವಕಾಶಗಳಿವೆ. ಅವುಗಳನ್ನು ವಿದ್ಯಾರ್ಥಿನಿಯರು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಅಂತಾರಾಷ್ಟ್ರೀಯ ಓಲಂಪಿಯನ್ ಕ್ರೀಡಾಪಟು ಸಹನಾಕುಮಾರಿ ಹೇಳಿದರು.

ನಗರದ ಹೊರ ವಲಯದಲ್ಲಿರುವ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದಲ್ಲಿ ವಿಜಯಪುರ, ಕ್ರೀಡಾ ನಿರ್ದೇಶನಾಲಯ ಹಾಗೂ ದೈಹಿಕ ಶಿಕ್ಷಣ ಅಧ್ಯಯನ ಮತ್ತು ಕ್ರೀಡಾ ವಿಜ್ಞಾನ ವಿಭಾಗ ಆಶ್ರಯದಲ್ಲಿ ೧೭ನೇ ಅಂತರ ಮಹಿಳಾ ಮಹಾವಿದ್ಯಾಲಯಗಳ ಅಥ್ಲೆಟಿಕ್ ಕ್ರೀಡಾಕೂಟ ೨೦೨೩-೨೪ ರ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿ ವೇತನ ಮತ್ತು ಬೆಂಗಳೂರಿನ ಯವನಿಕಾದಲ್ಲಿ ಸಿಗುವ ಸೌಲಭ್ಯಗಳನ್ನು ವಿವಿ ಕ್ರೀಡಾಪಟುಗಳು ಬಳಸಿಕೊಳ್ಳಬೇಕು ಮತ್ತು ಸರ್ಕಾರದಿಂದ ದೊರೆಯುವ ಸಕಲ ಕ್ರೀಡಾ ಸೌಲಭ್ಯಗಳನ್ನು ಪಡೆದುಕೊಂಡು ಕ್ರೀಡಾರಂಗದಲ್ಲಿ ಹೊಸ ಮೈಲುಗಲ್ಲು ಸ್ಥಾಪಿಸಬೇಕು ಎಂದರು.

ಟ್ರ್ಯಾಕ್ ಶೂಟ್ ಮತ್ತು ಕೈಗಡಿಯಾರವನ್ನು ಕ್ರೀಡಾಪಟುಗಳು ಧರಿಸುವುದರಿಂದ ಸಮಯದ ಮಹತ್ವ ಮತ್ತು ಕ್ರೀಡೆಯ ಮಹತ್ವವನ್ನು ಅರಿಯಲು ಸಾಂಕೇತಿಕವಾಗಿ ಅವು ನೆರವಾಗುತ್ತವೆ ಎಂದು ಸಲಹೆ ನೀಡಿದರು.

ನನ್ನ ಈ ಸಾಧನೆಗೆ ಯೋಗ ಧ್ಯಾನವೇ ಕಾರಣ. ಪ್ರತಿಯೊಬ್ಬರು ಯೋಗ ಧ್ಯಾನ ಮಾಡುವ ಮೂಲಕ ಮನಶಾಂತಿ ಪಡೆಯುವುದರೊಂದಿಗೆ ಪ್ರತಿಯೊಂದು ಕ್ಷೇತ್ರದಲ್ಲಿ ಯಶಸ್ಸು ಪಡೆದುಕೊಳ್ಳಬೇಕು ಎಂದರು.

ಕೆನರಾ ಬ್ಯಾಂಕ್ ಪ್ರಾದೇಶಿಕ ಕಚೇರಿಯ ಸಹಾಯಕ ಮಹಾ ಪ್ರಬಂಧಕಿ ಕಿರಣ ಎನ್.ಎಸ್. ಮಾತನಾಡಿ, ಪ್ರತಿವರ್ಷವೂ ವಿವಿಯ ಕ್ರೀಡಾ ಕೂಟಕ್ಕೆ ಕೈಲಾದ ಸಹಾಯ ಸಹಕಾರ ನೀಡುತ್ತಾ ಬಂದಿದ್ದೇವೆ. ಹಾಗೆಯೇ ಈ ಬಾರಿಯು ಮಲ್ಟಿ ಜಿಮ್ ಗೆ ನಮ್ಮ ಬ್ಯಾಂಕಿನಿಂದ ೩ ಲಕ್ಷದವರೆಗೆ ಅನುದಾನ ನೀಡಲಾಗುವುದು ಎಂದು ಘೋಷಿಸಿದರು.

ಅಧ್ಯಕ್ಷತೆ ವಹಿಸಿದ್ದ ಕುಲಪತಿ ಪ್ರೊ.ಬಿ.ಕೆ.ತುಳಸಿಮಾಲ ಮಾತನಾಡಿ, ದೈಹಿಕ ಆರೋಗ್ಯ ಕಾಪಾಡಿಕೊಳ್ಳಲು ಕ್ರೀಡೆ ಮಹಿಳೆಯರಿಗೆ ಹೆಚ್ಚು ನೆರವಾಗುವುದು ಹಾಗೂ ಸಾಮಾಜಿಕವಾಗಿ ವ್ಯಕ್ತಿತ್ವ ರೂಪಿಸಿಕೊಳ್ಳುವ ದೃಷ್ಟಿಯಿಂದಲೂ ಕ್ರೀಡೆಯಲ್ಲಿ ಭಾಗವಹಿಸುವುದು ಮುಖ್ಯವಾಗಿದೆ. ಮಹಿಳೆಯರು ಕ್ರೀಡೆಯಲ್ಲಿ ಪಾಲ್ಗೊಳ್ಳುವುದು ಅತಿ ಅವಶ್ಯವಾಗಿದೆ. ಇದೊಂದು ಸಾಂಘಿಕ ಜೀವನದ ಮಹತ್ವ ಅರಿಯಲು ನೆರವಾಗುವುದು. ಸಂವೇದನೆ, ಔದಾರ್ಯ ಎಲ್ಲ ಗುಣಗಳನ್ನು ಈ ತರದ ಕ್ಯಾಂಪ್‌ಗಳಲ್ಲಿ ಕಲಿಯಲು ಸಾಧ್ಯ. ಕ್ರೀಡೆಯಲ್ಲಿ ದೇಶ ಬಹಳಷ್ಟು ಉತ್ತಮವಾದ ಸಾಧನೆ ಮಾಡಿದೆ. ಮಹಿಳಾ ವಿವಿ ಕ್ರೀಡೆಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದೆ. ವಿದ್ಯಾರ್ಥಿಗಳಿಗೆ ವ್ಯಕ್ತಿತ್ವ ವಿಕಸನ ರೂಪಿಸುತ್ತಿದೆ. ಇದರಿಂದ ಬಹಳಷ್ಟು ಉದ್ಯೋಗ ಅವಕಾಶಗಳು ವಿದ್ಯಾರ್ಥಿನಿಯರಿಗೆ ದೊರೆಯುತ್ತಿವೆ ಎಂದರು.

ಕೆಎಎಸ್ (ಆಯ್ಕೆ ಶ್ರೇಣಿ), ಶಂಕರಗೌಡ ಸೋಮನಾಳ, ಪ್ರೊ.ಎಚ್.ಎಂ.ಚಂದ್ರಶೇಖರ, ಪ್ರೊ.ರಾಜಕುಮಾರ ಮಾಲಿಪಾಟೀಲ, ಡಾ.ವಿಶ್ವನಾಥ ನಡಕಟ್ಟಿ ಸೇರಿದಂತೆ ಮುಂತಾದವರು ಇದ್ದರು. ಕ್ರೀಡಾ ನಿರ್ದೇಶಕರಾದ ಪ್ರೊ.ಹೂವಣ್ಣ ಸಕ್ಪಾಲ್ ಸ್ವಾಗತಿಸಿದರು. ಡಾ.ಅಶ್ವಿನಿ ಕೆ.ಎನ್.ಪರಿಚಯಿಸಿದರು. ಡಾ.ಜ್ಯೋತಿ ಉಪಾಧ್ಯಾಯ ವಂದಿಸಿದರು. ಡಾ.ಹಣಮಂತ ಪೂಜಾರಿ ನಿರೂಪಿಸಿದರು.

ಇದೇ ಸಂದರ್ಭದಲ್ಲಿ ಅಖಿಲ ಭಾರತ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾದ ಮಹಿಳಾ ವಿವಿಯ ಕ್ರೀಡಾಪಟು ಸಂಜನಾ ರಾಠೋಡ ಮತ್ತು ತರಬೇತುದಾರ ಅರುಣ ರಾಠೋಡ ಅವರನ್ನು ಸನ್ಮಾನಿಸಿ ₹೧೦ ಸಾವಿರ ನಗದು ಬಹುಮಾನ ನೀಡಿ ಗೌರವಿಸಲಾಯಿತು.