ಸಾರಾಂಶ
ಅಕ್ಕ ವೀಣಾ ಕಾಶಪ್ಪನವರ ನನ್ನ ಜೊತೆ ಪ್ರಚಾರಕ್ಕೆ ಬರುತ್ತಾರೆ. ನನ್ನ ಗೆಲುವಿಗೆ ಸಾಥ್ ನೀಡಲಿದ್ದಾರೆ ಎಂದು ಸಂಯುಕ್ತಾ ಪಾಟೀಲ ವಿಶ್ವಾಸ ವ್ಯಕ್ತಪಡಿಸಿದರು
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಬಾಗಲಕೋಟೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತಾ ಪಾಟೀಲ ಪರ ಟಿಕೆಟ್ ವಂಚಿತೆ ವೀಣಾ ಕಾಶಪ್ಪನವರ ನಗರದಲ್ಲಿ ಪ್ರಚಾರ ನಡೆಸಿದರು. ನಗರದ ಡಾ.ಬಾಬಾಸಾಹೇಬ ಅಂಬೇಡ್ಕರ ಪ್ರತಿಮೆ ಮುಂದೆ ಸಂಯುಕ್ತಾ ಪಾಟೀಲ ಹಾಗೂ ವೀಣಾ ಕಾಶಪ್ಪನವರ ಅಂಬೇಡ್ಕರ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು.ಬಳಿಕ, ಪ್ರತಿಮೆ ಮುಂದೆ ಇಬ್ಬರೂ ಕೈ ಮೇಲೆತ್ತುವ ಮೂಲಕ ಒಗ್ಗಟ್ಟು ಪ್ರದರ್ಶಿಸಿದರು. ವೀಣಾ ಪ್ರಚಾರಕ್ಕೆ ಅಣಿಯಾದದ್ದು ಕಾಂಗ್ರೆಸ್ಸಿಗರಲ್ಲಿ ನಿರಾಳಭಾವ ಮೂಡುವಂತೆ ಮಾಡಿದೆ. ಅಲ್ಲದೇ, ಅಕ್ಕ ವೀಣಾ ಕಾಶಪ್ಪನವರ ನನ್ನ ಜೊತೆ ಪ್ರಚಾರಕ್ಕೆ ಬರುತ್ತಾರೆ. ನನ್ನ ಗೆಲುವಿಗೆ ಸಾಥ್ ನೀಡಲಿದ್ದಾರೆ ಎಂದು ಸಂಯುಕ್ತಾ ಪಾಟೀಲ ವಿಶ್ವಾಸ ವ್ಯಕ್ತಪಡಿಸಿದರು. ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಕೈ ತಪ್ಪುತ್ತಿದ್ದಂತೆ ಕುಪಿತಗೊಂಡಿದ್ದ ವೀಣಾ ಕಾಶಪ್ಪನವರ ಚುನಾವಣಾ ರಾಜಕೀಯ ಚಟುವಟಿಕೆಗಳಿಂದ ದೂರ ಉಳಿದಿದ್ದರು. ಅವರ ಕೋಪ ಶಮನಗೊಳಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ಮುಖಂಡರು ನಿರಂತರ ಪ್ರಯತ್ನ ನಡೆಸಿದ್ದರು. ಏತನ್ಮಧ್ಯೆ ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತಾ ಪಾಟೀಲ ಅವರ ತಂದೆ ಸಚಿವ ಶಿವಾನಂದ ಪಾಟೀಲ ಅವರು ಜಾಣ ನಡೆಯ ಮೂಲಕ ಕಾಶಪ್ಪನವರ ಕೋಪ ಶಮನಗೊಳಿಸಿ ಇಂದು ಅವರನ್ನು ಪ್ರಚಾರಕ್ಕೆ ಅಣಿಗೊಳಿಸಿದ್ದಾರೆ.ನಗರದಲ್ಲಿ ನಡೆದ ಕಾಂಗ್ರೆಸ್ ರ್‍ಯಾಲಿಯ ವೇಳೆ ಬಾಗಲಕೋಟೆ ನಗರದಲ್ಲಿರುವ ಡಾ.ಬಾಬಾಸಾಹೇಬ ಅಂಬೇಡ್ಕರ ಪ್ರತಿಮೆ ಮುಂದೆ ಸಂಯುಕ್ತಾ ಪಾಟೀಲ ಅವರ ಜೊತೆ ಪ್ರಚಾರವನ್ನು ನಡೆಸಿದರು. ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರ ಪ್ರತಿಮೆಗೆ ಹಾರ ಹಾಕುವ ಮೂಲಕ ಪರಸ್ಪರ ಒಟ್ಟಾಗಿ ಕಾಣಿಸಿಕೊಂಡು ಅಕ್ಕ-ತಂಗಿ ಎನ್ನುವ ಸಂದೇಶ ನೀಡುವ ಮೂಲಕ ಒಗ್ಗಟ್ಟನ್ನು ಪ್ರದರ್ಶನ ಮಾಡಿದರು.