ವೀಣಾ ಸಭೆಯಲ್ಲಿ ಮೊಳಗಿದ ಬಂಡಾಯ ಧ್ವನಿ!

| Published : Mar 23 2024, 01:15 AM IST

ಸಾರಾಂಶ

ನಿಮ್ಮ ಮಗಳಾಗಿ ಜಿಲ್ಲೆಯ ಜನರ ಧ್ವನಿಯಾಗಬೇಕು ಎಂಬ ಆಸೆ ನನ್ನದು. ಆದರೆ, ದುಡಿದವರನ್ನು ಬಿಟ್ಟು, ಹೊರ ಜಿಲ್ಲೆಯವರಿಗೆ ಪಕ್ಷ ಮಣೆ ಹಾಕಿದೆ.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಬಾಗಲಕೋಟೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಟಿಕೆಟ್‌ ಕೈತಪ್ಪಿದ ಹಿನ್ನೆಲೆಯಲ್ಲಿ ಶುಕ್ರವಾರ ವೀಣಾ ಕಾಶಪ್ಪನವರ ಅವರ ಬೆಂಬಲಿಗರು ಕರೆದಿದ್ದ ಬೆಂಬಲಿಗರ, ಹಿತೈಷಿಗಳ ಸಭೆಯಲ್ಲಿ ಎರಡು ದಿನ ಕಾದು ನೋಡುವ ನಿರ್ಧಾರ ಮಾಡಲಾಗಿದೆ. ಅಭ್ಯರ್ಥಿ ಬದಲಿಸಲೇಬೇಕು ಎಂದು ಪರೋಕ್ಷವಾಗಿ ಹೈಕಮಾಂಡ್‌ಗೆ ಈ ಸಭೆಯ ಮೂಲಕ ಸಂದೇಶ ರವಾನಿಸಲಾಗಿದೆ. ಒಂದು ವೇಳೆ ಅಭ್ಯರ್ಥಿ ಬದಲಾಗದಿದ್ದರೆ ಬೆಂಬಲಿಗರ ನಿರ್ಧಾರದಂತೆ ಮುಂದಿನ ನಡೆ ಅನುಸರಿಸುತ್ತೇವೆ ಎಂದು ಹೇಳುವ ಮೂಲಕ ಬಂಡಾಯ ಅಭ್ಯರ್ಥಿಯಾಗಿ ವೀಣಾ ಕಾಶಪ್ಪನವರ ಸ್ಪರ್ಧೆ ಮಾಡುತ್ತಾರಾ ಎಂಬ ಪ್ರಶ್ನೆ ಕೂಡ ಈಗ ಉದ್ಭವವಾಗಿದೆ. ಬೇರೆಯವರಿಗೆ ಮಣೆ ಹಾಕಿದ್ದು ಎಷ್ಟು ಸರಿ?: ನಿಮ್ಮ ಮಗಳಾಗಿ ಜಿಲ್ಲೆಯ ಜನರ ಧ್ವನಿಯಾಗಬೇಕು ಎಂಬ ಆಸೆ ನನ್ನದು. ಆದರೆ, ದುಡಿದವರನ್ನು ಬಿಟ್ಟು, ಹೊರ ಜಿಲ್ಲೆಯವರಿಗೆ ಪಕ್ಷ ಮಣೆ ಹಾಕಿದೆ. ಇದು ಎಷ್ಟು ಸರಿ ಎಂದು ಕಾಂಗ್ರೆಸ್ ಟಿಕೆಟ್ ವಂಚಿತೆ ವೀಣಾ ಕಾಶಪ್ಪನವರ ಕಣ್ಣೀರು ಹಾಕುತ್ತಲೇ ವರಿಷ್ಠರನ್ನು ಪ್ರಶ್ನೆ ಮಾಡಿದರು.

ಬಾಗಲಕೋಟೆ ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಕೈತಪ್ಪಿದ ಹಿನ್ನೆಲೆಯಲ್ಲಿ ವೀಣಾ ಅಭಿಮಾನಿ ಬಳಗದಿಂದ ಶುಕ್ರವಾರ ನಗರದಲ್ಲಿ ಹಮ್ಮಿಕೊಂಡಿದ್ದ ಅಭಿಮಾನಿಗಳು, ಹಿತೈಷಿಗಳ ಸಭೆಯಲ್ಲಿ ಮಾತನಾಡಿದರು. ಜಿಪಂ ಅಧ್ಯಕ್ಷೆ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಪಕ್ಷ ಸೂಚಿಸಿ, 2019ರ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಆದೇಶ ಮಾಡಿತ್ತು. ಅವರ ಮಾತಿನಂತೆ ಅಂದು ನಡೆದುಕೊಂಡಿದ್ದೆ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದ ಏಕೈಕ ಮಹಿಳಾ ಅಭ್ಯರ್ಥಿ ನಾನಾಗಿದ್ದೆ. ಅಂದಿನಿಂದ ಇಲ್ಲಿಯವರೆಗೆ ಬಂದ ಎಲ್ಲ ಅವಕಾಶಗಳನ್ನು ಜಿಲ್ಲೆಯ ಜನರಿಗಾಗಿ ಬಿಟ್ಟು, ಲೋಕಸಭೆಯಲ್ಲಿ ಸ್ಪರ್ಧೆಗೆ ತಯಾರು ಮಾಡಿದೆ. ಆದರೆ, ಈಗ ಪಕ್ಷ ಬೇರೆ ಜಿಲ್ಲೆಯವರಿಗೆ ಟಿಕೆಟ್ ನೀಡಿದೆ. ಏಕೆ ಜಿಲ್ಲೆಯಲ್ಲಿ ಚುನಾವಣೆ ಎದುರಿಸುವ ಸಮರ್ಥ ನಾಯಕರು ರಾಜ್ಯ ನಾಯಕರಿಗೆ ಕಾಣಲಿಲ್ಲವೇ ಎಂದು ಖಾರವಾಗಿ ಪ್ರಶ್ನಿಸಿದರು.

ಕಳೆದ ವರ್ಷ ನಡೆದ ವಿಧಾನಸಭೆ ಚುನಾವಣೆಯಲ್ಲಿ ಅನೇಕ ಕ್ಷೇತ್ರಗಳಲ್ಲಿ ಸ್ಪರ್ಧೆಗೆ ನನಗೆ ಅವಕಾಶ ಬಂದಿದ್ದವು. ಆದರೆ, ನಾನು ಜಿಲ್ಲೆ ಬಿಟ್ಟು ತೆರಳದೇ, ಪಕ್ಷ ಸೂಚಿಸಿದಲ್ಲಿ ಅಭ್ಯರ್ಥಿಗಳ ಪರ ನಾನು ಹಾಗೂ ನನ್ನ ಪತಿ ವಿಜಯಾನಂದ ಕಾಶಪ್ಪನವರ ಪ್ರಚಾರ ಮಾಡಿದ್ದೇವೆ. ಜಿಲ್ಲೆಯ ಎಲ್ಲ ವಿಧಾನಸಭಾ ಕ್ಷೇತ್ರದಲ್ಲೂ ಮಹಿಳೆಯರೊಂದಿಗೆ ಪಕ್ಷದ ಅಭ್ಯರ್ಥಿ ಗೆಲ್ಲಿಸಲು ಪ್ರಚಾರ ಮಾಡಿದ್ದೇನೆ. ಈ ಎಲ್ಲವನ್ನು ಶಾಸಕರು ಮರೆತಿರಬಹುದು. ನಾನಿಲ್ಲದಿದ್ದರೆ ಜಿಲ್ಲೆಯ ಜನರ ಧ್ವನಿ ಇಲ್ಲದಂತಾಗುತ್ತದೆ. ಅವರು ಅನಾಥರಾಗುತ್ತಾರೆ. ಜಿಲ್ಲೆಯ ಜನರ ತೀರ್ಮಾನ ಪಾಲಿಸುತ್ತೇವೆ ಎಂದರು.

ಎರಡು ದಿನಗಳಲ್ಲಿ ನಮ್ಮ ನಡೆ ತಿಳಿಸ್ತೇವೆ:

ಶಾಸಕ ವಿಜಯಾನಂದ ಕಾಶಪ್ಪನವರ ಮಾತನಾಡಿ, ನಾವು ಹುಟ್ಟಿದ್ದು, ಬೆಳೆದಿದ್ದು ಕಾಂಗ್ರೆಸ್‌ನಲ್ಲಿ. ಕೊನೆಗೊಂದು ದಿನ ಸಾಯುವುದು ಕಾಂಗ್ರೆಸ್‌ನಲ್ಲೇ. 50 ವರ್ಷಗಳಿಂದ ಪಕ್ಷ ಸಂಘಟನೆ ಮಾಡಿದ ಕುಟುಂಬದ ಸೊಸೆ ವೀಣಾ ಕಾಶಪ್ಪನವರ ಅವರಿಗೆ ಬಿಟ್ಟು, ಬೇರೆಯವರಿಗೆ ಟಿಕೆಟ್ ನೀಡಿರುವುದು ನಮಗೆ ನೋವು ತಂದಿದೆ. ಎರಡು ದಿನಗಳಲ್ಲಿ ನಮ್ಮ ನಡೆಯನ್ನು ತಿಳಿಸುತ್ತೇವೆ ಎಂದರು.

2018 ಹಾಗೂ 2023 ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಪಕ್ಷದ ಪ್ರಚಾರ ಮಾಡಲು ವೀಣಾ ಹಾಗೂ ವಿಜಯಾನಂದ ಬೇಕಿದ್ದರು. 2019ರ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಮೋದಿ ಅಲೆ ಎದುರು ಜಿಲ್ಲೆಯ ನಾಯಕರು ಸ್ಪರ್ಧೆಗೆ ಮುಂದಾಗಲಿಲ್ಲ. ಯಾವ ಅಲೆಗೂ ಹೆದರದ ಕಾಶಪ್ಪನವರ ಕುಟುಂಬ, ಪಕ್ಷದ ಆಜ್ಞೆಯಂತೆ ಚುನಾವಣೆ ಎದುರಿಸಿತು. ನಂತರ ಸತತ 5 ವರ್ಷ ನನ್ನ ಮಡದಿ ವೀಣಾ ಕ್ಷೇತ್ರದ ತುಂಬ ಸಂಚರಿಸಿ ಪಕ್ಷ ಸಂಘಟಿಸಿದ್ದಾರೆ. ಇದರ ಜತೆಗೆ ಜಿಲ್ಲೆಯ ಅನೇಕ ಅರ್ಜಿ ಹಾಕಿದ ಅಪೇಕ್ಷಿತರನ್ನು ಬಿಟ್ಟು, ವಿಜಯಪುರ ಜಿಲ್ಲೆಯ ಮಹಿಳೆಗೆ ಅವಕಾಶ ನೀಡಿರುವುದು ಸರಿಯಲ್ಲ ಎಂದು ತಮ್ಮ ಅಸಮಾಧಾನ ಹೊರಹಾಕಿದರು.

ಸದ್ಯ ಅಭ್ಯರ್ಥಿಯಾಗಿರುವವರು ವೀಣಾ ವಿದ್ಯಾರ್ಹತೆ ಬಗ್ಗೆ ಮಾತನಾಡುತ್ತಿದ್ದಾರೆ. ನನ್ನ ಹೆಂಡತಿ ವಿದ್ಯಾವಂತೆ. ಅದಕ್ಕಿಂತ ಹೆಚ್ಚಾಗಿ ಹೃದಯವಂತೆ. ಅಖಂಡ ವಿಜಯಪುರ ಜಿಲ್ಲೆಯ ಉಸ್ತುವಾರಿ ಸಚಿವರಾಗಿದ್ದವರು ನಮ್ಮ ತಂದೆ ಎಸ್.ಆರ್.ಕಾಶಪ್ಪನವರ. ಆವಾಗ ನೀವು ಯಾವ ಪಕ್ಷದಲ್ಲಿದ್ರಿ. ಕಟ್ಟಾ ಕಾಂಗ್ರೆಸ್ಸಿಗನಾದ ನನ್ನಲ್ಲಿ ತಾಕತ್ ಬಗ್ಗೆ ಮಾತನಾಡುವ ಅರ್ಹತೆ ನಿಮ್ಮಲಿಲ್ಲ. ನಿಮ್ಮ ಕುಟುಂಬದವರು ಯಾವ ಪಕ್ಷದಲ್ಲಿದ್ದಾರೆ ಎಂದು ಎಲ್ಲರಿಗೂ ಗೊತ್ತಿದೆ. ತುಮಾರಾ ಧಮಕಿ ಬಾಗಲಕೋಟ್ ಮೇ ನಹಿ ಚಲೇಗಾ (ನಿಮ್ಮ ಧಮ್ಕಿ ಬಾಗಲಕೋಟೆಯಲ್ಲಿ ನಡೆಯುವುದಿಲ್ಲ). ವೈಯಕ್ತಿಕ ವಿಚಾರಕ್ಕೆ ಬಂದರೆ ಸುಮ್ಮನಿರುವ ಮಗನೇ ನಾನಲ್ಲ ಎಂದು ಸಚಿವ ಶಿವಾನಂದ ಪಾಟೀಲ ಹೆಸರು ಹೇಳದೇ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.

ರೊಕ್ಕಾ ಕೊಟ್ಟು ರಾಜಕೀಯ ಮಾಡುವುದು, ಟಿಕೆಟ್ ತರುವುದನ್ನು ನಾವು ಎಂದೂ ಮಾಡಲ್ಲ. ಕಾಶಪ್ಪನವರ ಕುಟುಂಬಕ್ಕೆ ಮತದಾರರ ನಿರ್ಣಯವೇ ಅಂತಿಮ. ನೇರವಾಗಿ ಮಾತನಾಡುವುದು ನನ್ನ ತಪ್ಪಾ? ನಾನಿರುವುದೇ ಹೀಗೆ. ಏನು ಮಾಡುತ್ತೀರಿ? ನನ್ನನ್ನು ಹುಟ್ಟಿಸಿದ್ದು, ನನ್ನ ಅಪ್ಪ. ಇವರ್‍ಯಾವ ಲೆಕ್ಕ ಎಂದು ಕಿಡಿಕಾರಿದ ಅವರು, ಎಲ್ಲರೂ ಧೈರ್ಯದಿಂದಿರಿ. ಮತ್ತೆ ಬರ್ತಿವಿ ಎಂದರು.

ಕಾಂಗ್ರೆಸ್ ಕಿಸಾನ್ ಘಟಕದ ಜಿಲ್ಲಾಧ್ಯಕ್ಷ ಗಿರೀಶ ಅಂಕಲಗಿ, ಮುಖಂಡ ಅಶೋಕ ಲಾಗಲೋಟೆ, ಹಣಮಂತ ರಾಯಕುಂಪಿ, ಶಾರದಾ ಹಿರೇಗೌಡರ, ಬಲರಾಮ ನಾಯಕ, ವಿಠ್ಠಲ ತುಂಬರಮಟ್ಟಿ, ಬಸವರಾಜ ಧರ್ಮಂತಿ ಸೇರಿದಂತೆ ಅನೇಕರಿದ್ದರು.

-----------

ಬಾಕ್ಸ್....

ನಮ್ಮ ಜಿಲ್ಲೆಯ ಸ್ವಾಭಿಮಾನ ಮಾರಿಕೊಂಡಿದ್ದಾರೆ

ನನಗೆ ಟಿಕೆಟ್ ತಪ್ಪಿದ್ದಕ್ಕಿಂತ ಬಾಗಲಕೋಟೆ ಜಿಲ್ಲೆಯ ಜನರ ಸೇವೆ ಅವಕಾಶ ಕಸಿದುಕೊಂಡ್ರು ಎನ್ನುವ ಬೇಸರವಿದೆ. ನಾನು ಎಂಎಲ್ಎ ಸೇರಿದಂತೆ ಯಾವುದನ್ನು ಕೇಳಿರಲಿಲ್ಲ. ಜಿಲ್ಲೆಯ ಜನರ ಋಣ ತೀರಿಸಲು ಅವಕಾಶ ಕೊಡಿ ಅಂತ ಕೇಳಿದ್ದೆ. ಇದನ್ನು ನಮ್ಮ ಪಕ್ಷದವರು ತಿರಸ್ಕಾರ ಮಾಡಿದ್ದಕ್ಕೆ ಬಹಳ ನೋವು ಆಗುತ್ತಿದೆ ಎಂದು ಕಾಂಗ್ರೆಸ್ ಟಿಕೆಟ್ ವಂಚಿತ ವೀಣಾ ಕಾಶಪ್ಪನವರ ಕಣ್ಣೀರು ಹಾಕಿದರು.ಶುಕ್ರವಾರ ನಗರದ ಚರಂತಿಮಠ ಕಲ್ಯಾಣ ಮಂಟಪದಲ್ಲಿ ನಡೆದ ಸಭೆಗೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಲ್ಲಿ ಯಾರೂ ಸಮರ್ಥಿರಿಲ್ಲ ಅಂತ ಬೇರೆ ಜಿಲ್ಲೆಯವರಿಗೆ ಕೊಟ್ಟರೋ ಗೊತ್ತಿಲ್ಲ. ನಮ್ಮ ಜಿಲ್ಲೆಯ ಹೆಣ್ಣು ಮಕ್ಕಳ ಸ್ವಾಭಿಮಾನಕ್ಕೆ ಧಕ್ಕೆ ಬಂದಿದೆ. . ನಮ್ಮ ಜಿಲ್ಲೆಯ ಸ್ವಾಭಿಮಾನ ಮಾರಿಕೊಂಡಿದ್ದಾರೆ. ಇಡೀ ಬಾಗಲಕೋಟೆ ಜಿಲ್ಲೆಯ ಜನ ನೊಂದುಕೊಳ್ಳುವ ಹಾಗೆ ಪಕ್ಷದವರು ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪಕ್ಷದ ಟಿಕೆಟ್ ವಿಷಯ ಬಂದಾಗ ರಾಜ್ಯದವರು ಜಿಲ್ಲೆಯ ಮೇಲೆ, ಜಿಲ್ಲೆಯವರು ರಾಜ್ಯದ ಮೇಲೆ ಜವಾಬ್ದಾರಿ ಹಾಕುತ್ತಾರೆ. ಜಿಲ್ಲೆಯ ಕಾರ್ಯಕರ್ತರ ಮುಂದೆ ಈ ವಿಷಯ ಇಡುತ್ತೇವೆ. ನಮ್ಮ ಬೆಂಬಲಿಗರು, ಹಿತೈಷಿಗಳು ತೆಗೆದುಕೊಳ್ಳುವ ನಿರ್ಧಾರಕ್ಕೆ ನಾವು ಬದ್ಧ. ಸ್ವಾಭಿಮಾನಕ್ಕೆ ಧಕ್ಕೆ ಬಂದಿದೆ. ಜಿಲ್ಲೆಯಲ್ಲಿ ಅಸಮರ್ಥರು ಇದ್ದಾರಂತ ಸಂದೇಶ ರವಾನಿಸಿದಂತಾಗಿದೆ. ಆದರೆ, ನಾವ್ಯಾರೂ ಅಸಮರ್ಥರಿಲ್ಲ ಎಂದು ಅಸಮಾಧಾನ ಹೊರಹಾಕಿದರು.

------------ಬಾಕ್ಸ್‌...2..ಪಕ್ಷೇತರರಾಗಿ ಸ್ಪರ್ಧಿಸುವಂತೆ ಸಭೆಯಲ್ಲಿ ಒತ್ತಾಯಕೈ ಟಿಕೆಟ್‌ವಂಚಿತ ವೀಣಾ ಕಾಶಪ್ಪನವರ ಮಾತನಾಡುವಾಗ, ನನ್ನ ಜಿಲ್ಲೆಯ ಜನ ಏನು ತೀರ್ಮಾನ ತೆಗೆದುಕೊಳ್ಳುತ್ತಾರೆ, ಅದಕ್ಕೆ ನಾನು ಬದ್ಧಳಾಗಿದ್ದೇನೆ ಎಂದು ಹೇಳುತ್ತಲೇ, ಸಭೆಯಲ್ಲಿ ನೆರೆದಿದ್ದ ಅವರ ಬೆಂಬಲಿಗರು, ಕಾರ್ಯಕರ್ತರು, ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಎಂದು ಕೂಗಾಡಿದರು. ಜತೆಗೆ ಬಂಡಾಯ... ಬಂಡಾಯ... ಎಂದು ಅಭಿಮಾನಿಗಳು ಒತ್ತಾಯಿಸಿದರು. ನಂತರ ಇಡೀ ಸಭೆಯಲ್ಲಿ ನೆರೆದ ಜನತೆ ಎದ್ದು ಮುಂಭಾಗಕ್ಕೆ ಬಂದು, ಬಂಡಾಯ ಅಭ್ಯರ್ಥಿ ಆಗಿ ಸ್ಪರ್ಧಿಸಿ ಎಂದು ವೀಣಾ ಕಾಶಪ್ಪನವರಿಗೆ ಆಗ್ರಹಿಸಿದರು. ಬೆಂಬಲಿಗರ ಪ್ರೀತಿ, ಅಭಿಮಾನಕ್ಕೆ ವೇದಿಕೆ ಇಳಿದು ಬಂದು ಕೈಮುಗಿದ ವೀಣಾ ಕಾಶಪ್ಪನವರ ನಂತರ ವೇದಿಕೆಯಲ್ಲಿದ್ದ ಕುರ್ಚಿ ಮೇಲೆ ಕುಳಿತರು. ಅಲ್ಲಿಯೂ ಅವರು ಕಣ್ಣೀರು ಹಾಕಿದರು. ಇದೆ ವೇಳೆ ಸಭೆಯ ಆರಂಭಕ್ಕೂ ಮುನ್ನ ವೀಣಾ ಕಾಶಪ್ಪನವರ ಕಣ್ಣೀರು ಹಾಕುತ್ತಲೇ ಸಭೆಗೆ ಬಂದರು. ಈ ವೇಳೆ ವೀಣಾಗೆ ಕೈ ಮುಗಿದು ಮಹಿಳಾ ಬೆಂಬಲಿಗರು ಆತ್ಮಸ್ಥೈರ್ಯ ತುಂಬಿದರು.