ಸಾರಾಂಶ
ಇಂದಿನ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಪ್ರಮುಖ ವಿಷಯಗಳಲ್ಲಿ ಕೌಶಲ್ಯ ನೀಡುವ ಉದ್ದೇಶದಿಂದ ವಿಟಿಯು ಅಸ್ಪೈರ್ ನಾಲೆಡ್ಜ್ ಮತ್ತು ಸ್ಕಿಲ್ ಇಂಡಿಯಾ ಪ್ರಾ.ಲಿ ಸಂಸ್ಥೆ ಜೊತೆ ಒಡಂಬಡಿಕೆ ಮಾಡಿಕೊಂಡಿದೆ.
ಕನ್ನಡಪ್ರಭ ವಾರ್ತೆ ಬೆಳಗಾವಿ
ರಾಜ್ಯದ ಇಂಜಿನಿಯರಿಂಗ್ ವಿದ್ಯಾರ್ಥಿಗಳ ಸರ್ವಾಂಗೀಣ ಹಾಗೂ ಕೌಶಲ್ಯಭರಿತ ಪದವೀಧರರನ್ನಾಗಿ ಮಾಡುವ ಉದ್ದೇಶದಿಂದ ವಿಟಿಯು ಹಲವಾರು ಯೋಜನೆಗಳನ್ನು ಅನುಷ್ಠಾನ ಮಾಡಿದೆ ಎಂದು ವಿಟಿಯು ಕುಲಪತಿ ಪ್ರೊ.ವಿದ್ಯಾಶಂಕರ.ಎಸ್ ಹೇಳಿದರು.ವಿಟಿಯು- ಅಸ್ಪೈರ್ ನಾಲೆಡ್ಜ್ ಮತ್ತು ಸ್ಕಿಲ್ ಇಂಡಿಯಾ ಸಂಸ್ಥೆ ನಡುವೆ ಒಡಂಬಡಿಕೆ ನಂತರ ಮಾತನಾಡಿದ ಅವರು, ಜಾಗತಿಕವಾಗಿ ಕ್ಷೀಪ್ರಗತಿಯಲ್ಲಿ ಬದಲಾಗುತ್ತಿರುವ ಔದ್ಯೋಗಿಕ ಕ್ಷೇತ್ರದ ಅವಶ್ಯಕತೆಗೆ ತಕ್ಕಂತೆ ಜ್ಞಾನ ಹಾಗೂ ಕೌಶಲ್ಯಗಳ ಅವಶ್ಯಕತೆಯೂ ಇದೆ ಎಂದು ತಿಳಿಸಿದರು.
ಇಂದಿನ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಪ್ರಮುಖ ವಿಷಯಗಳಲ್ಲಿ ಕೌಶಲ್ಯ ನೀಡುವ ಉದ್ದೇಶದಿಂದ ವಿಟಿಯು ಅಸ್ಪೈರ್ ನಾಲೆಡ್ಜ್ ಮತ್ತು ಸ್ಕಿಲ್ ಇಂಡಿಯಾ ಪ್ರಾ.ಲಿ ಸಂಸ್ಥೆ ಜೊತೆ ಒಡಂಬಡಿಕೆ ಮಾಡಿಕೊಂಡಿದೆ. ಈ ಒಡಂಬಡಿಕೆ ಪ್ರಕಾರ ಅಸ್ಪೈರ್ ನಾಲೆಡ್ಜ್ ಮತ್ತು ಸ್ಕಿಲ್ ಇಂಡಿಯಾ ಪ್ರಾ. ಲಿ.ಸಂಸ್ಥೆ ಕೇಂದ್ರ ಸರ್ಕಾರದ ಸ್ಕಿಲ್ ಇಂಡಿಯಾ ಕಾರ್ಯಕ್ರಮದ ಅಡಿಯಲ್ಲಿ ನ್ಯಾಷನಲ್ ಸ್ಕಿಲ್ ಡೆವಲಪ್ಮೆಂಟ್ ಕಾರ್ಪೋರೇಶನ್ ಆಶ್ರಯದಲ್ಲಿ ವಿದ್ಯಾರ್ಥಿಗಳಿಗೆ ತಾಂತ್ರಿಕ ವಿಷಯಗಳ ಕುರಿತು ಉಚಿತ ಕೌಶಲ್ಯಭಿವೃದ್ಧಿ ತರಬೇತಿ ಕೋರ್ಸ್‌ಗಳನ್ನು ಹಮ್ಮಿಕೊಳ್ಳಲಿದ್ದಾರೆ ಎಂದು ತಿಳಿಸಿದರು.ಈ ಯೋಜನೆಗಳ ಅಡಿಯಲ್ಲಿ ವಿದ್ಯಾರ್ಥಿಗಳಿಗೆ ಕ್ಯಾಂಪಸ್‌ನಲ್ಲೇ ಅನೇಕ ಔದ್ಯೋಗಿಕ ಮತ್ತು ತಾಂತ್ರಿಕ ಶಿಕ್ಷಣವನ್ನು ಒಂದೆ ವೇದಿಕೆಯಲ್ಲಿ ತಂದು ಇಂಟರ್ನಿಶಿಪ್ ಮತ್ತು ತರಬೇತಿ ಮೂಲಕ ಇಂದಿನ ಔದ್ಯೋಗಿಕ ವಲಯಕ್ಕೆ ಅವಶ್ಯಕತೆ ಇರುವ ಕೌಶಲಗಳನ್ನು ನೀಡಲಾಗುತ್ತಿದೆ. ಅದಕ್ಕಾಗಿ ಸಿಎನ್‌ಸಿ ವರ್ಕಶಾಪ್ ಸ್ಥಾಪಿಸಲಾಗಿದೆ ಮತ್ತು ಇದೆ ತರಹ ಕೌಶಲ್ಯ ನೀಡುವ ಪ್ರಯೋಗಾಲಯಗಳನ್ನು ನಿರ್ಮಿಸಲಾಗುತ್ತಿದೆ. ಅದೇ ರೀತಿ ಕೊಪ್ಪಳ ಮತ್ತು ದಾಂಡೇಲಿಯಲ್ಲಿರುವ ಕೌಶಲ್ಯ ಕೇಂದ್ರಗಳಲ್ಲಿ ತರಬೇತಿ ಕಾರ್ಯಕ್ರಮಗಳು ನಡೆಯುತ್ತಿವೆ ಎಂದು ತಿಳಿಸಿದರು.ವಿಟಿಯು ಕುಲಪತಿ ಪ್ರೊ.ವಿದ್ಯಾಶಂಕರ್.ಎಸ್ ಅಧ್ಯಕ್ಷತೆಯಲ್ಲಿ ವಿಟಿಯು ಕುಲಸಚಿವ ಪ್ರೊ.ಬಿ.ಈ.ರಂಗಸ್ವಾಮಿ ಹಾಗೂ ಅಸ್ಪೈರ್ ನಾಲೆಡ್ಜ್ ಮತ್ತು ಸ್ಕಿಲ್ ಇಂಡಿಯಾ ಸಂಸ್ಥೆಯ ಚೇರಮನ್ ಮತ್ತು ಎಂಡಿ ಡಾ.ಸಂಜಯ್ ಗಾಂಧಿ ಅವರು ಒಪ್ಪಂದಕ್ಕೆ ಸಹಿ ಹಾಕಿದರು. ಈ ಸಂದರ್ಭದಲ್ಲಿ ಕೌಶಲ್ಯ ಮಾರ್ಗದರ್ಶಕ ಸುಬೋಧ ಪಾಟೀಲ, ಬ್ರಿಸಾ ಟೆಕ್ನಾಲಜೀಸ್‌ನ ಉಪಾಧ್ಯಕ್ಷ ಜಾರ್ಜ್ ವರ್ಗೀಸ್, ಗಣಕ ವಿಜ್ಞಾನ ವಿಭಾಗದ ಅಧ್ಯಕ್ಷ ಪ್ರೊ.ಎಸ್.ಎಲ್.ದೇಶಪಾಂಡೆ ಹಾಗೂ ವಿಟಿಯು ವಿಶೇಷಾಧಿಕಾರಿ ಪ್ರೊ.ಎಸ್.ಕೆ.ಅಂಬೇಕರ್ ಹಾಜರಿದ್ದರು.ಕೋಟ್...ವಿಟಿಯು ಹಲವು ಔದ್ಯೋಗಿಕ ರಂಗದ ಸಂಸ್ಥೆಗಳೊಂದಿಗೆ ಒಡಂಬಡಿಕೆ ಮಾಡಿಕೊಂಡು ಇಂಟರ್ನಿಶಿಪ್ ನೀಡಲಾಗುತ್ತಿದೆ. ಅದೇ ನಿಟ್ಟಿನಲ್ಲಿ ಈ ಒಂದು ಒಪ್ಪಂದವು ಕೌಶಲ್ಯ ತರಬೇತಿ ಯೋಜನೆಯಲ್ಲಿ ಪ್ರಮುಖ ಪಾತ್ರ ವಹಿಸಲಿದೆ.ಪ್ರೊ.ವಿದ್ಯಾಶಂಕರ.ಎಸ್, ವಿಟಿಯು ಕುಲಪತಿ.