ಕನ್ನಡಪ್ರಭ ವಾರ್ತೆ ಹಾಸನ

ಮಲೆನಾಡು ತಾಂತ್ರಿಕ ಶಿಕ್ಷಣ ಸಮಿತಿಯಲ್ಲಿ ವೈಯಕ್ತಿಕವಾಗಿ ಲಾಭ ಗಳಿಸಲು ಅವಕಾಶ ಕೊಡದ್ದಕ್ಕೆ ಗುರುದೇವ್ ಅವರ ಪುತ್ರ ಅರ್ಜುನ್ ಗುರುದೇವ್ ಮತ್ತು ಗುರಪ್ಪ, ಮಲೆನಾಡು ತಾಂತ್ರಿಕ ಶಿಕ್ಷಣ ಸಮಿತಿ(ಎಂಸಿಇ) ಆಡಳಿತಕ್ಕೆ ಅಡ್ಡಿಪಡಿಸುತ್ತಿದ್ದಾರೆ ಎಂದು ಎಂಸಿಇ ಶಿಕ್ಷಣ ಸಂಸ್ಥೆ ಅಧ್ಯಕ್ಷ ಆರ್.ಟಿ. ದೇವೇಗೌಡ ಹಾಗೂ ಕಾರ್ಯದರ್ಶಿ ಜಗದೀಶ್ ಚೌಡವಳ್ಳಿ ಆರೋಪಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಬುಧವಾರ ಮಾತನಾಡಿ, ಕಾಲೇಜು ಕ್ಯಾಂಪಸ್‌ಅನ್ನು ‘ಸ್ಮಾರ್ಟ್ ಕ್ಯಾಂಪಸ್’ ಆಗಿ ಅಭಿವೃದ್ಧಿಪಡಿಸುವ ಕುರಿತಾಗಿ ನಡೆದ ಸಭೆಯಲ್ಲಿ ಅರ್ಜುನ್‌ ಗುರುದೇವ್‌ ಸಂಬಂಧಿಕರ ಮೂಲಕವಾಗಿ 39 ಲಕ್ಷ ರು.ಗಳ ಕೊಟೇಷನ್ ಸಲ್ಲಿಸಿದ್ದರು. ಆದರೆ ಶಿಕ್ಷಣ ಸಂಸ್ಥೆ ಎಂಬ ಹಿನ್ನೆಲೆ ಬಿಎಸ್‌ಆರ್ ಕಂಪನಿಯವರು ಉಚಿತವಾಗಿ ಕಾರ್ಯ ನಿರ್ವಹಿಸಲು ಮುಂದಾದ ಕಾರಣ ಸಂಸ್ಥೆಗೆ ಲಕ್ಷಾಂತರ ರು. ಉಳಿತಾಯವಾಯಿತು. ಈ ಬೆಳವಣಿಗೆಯಿಂದ ಕೆಲವರಿಗೆ ಅಸಮಾಧಾನ ಉಂಟಾಯಿತು. ಮಲೆನಾಡು ಕಾಲೇಜು ಹಾಸ್ಟೆಲ್‌ನ ವಿವಿಧ ಕಾಮಗಾರಿಗಳಿಗೆ 3.9 ಕೋಟಿ ರು.ಗಳ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆದರೆ ಸ್ಪರ್ಧಾತ್ಮಕ ಕೊಟೇಷನ್ ಕರೆದಾಗ ಕೇವಲ 1.4 ಕೋಟಿ ರು.ಗೆ ಕಾಮಗಾರಿ ಕೈಗೊಳ್ಳುವ ಒಪ್ಪಂದ ಸಿಕ್ಕಿತು. ಇದರಿಂದ ಸುಮಾರು 2.5 ಕೋಟಿ ರು. ಉಳಿತಾಯವಾಗಿದೆ ಎಂದು ದೇವೇಗೌಡರು ಹೇಳಿದರು.

ಶುಲ್ಕ ಸಾಫ್ಟ್‌ವೇರ್‌ನಲ್ಲೇ ಲೋಪ:

ಕಾಲೇಜಿನ ಶುಲ್ಕ ಸಂಗ್ರಹಣೆ ಸಾಫ್ಟ್‌ವೇರ್‌ನಲ್ಲಿ ಭಾರೀ ಲೋಪವಿದ್ದು ಕೋಟ್ಯಾಂತರ ರು. ನಷ್ಟವಾಗುತ್ತಿತ್ತು. ಹೊಸ ಸಾಫ್ಟ್‌ವೇರ್ ಅಭಿವೃದ್ಧಿಗೆ 36 ಲಕ್ಷ ರು.ಗಳ ಕೊಟೇಷನ್ ಸಲ್ಲಿಸಲಾಗಿತ್ತು. ಆದರೆ ಸಂಸ್ಥೆಯ ಎಫ್‌ಡಿ ಠೇವಣಿಗಳಿರುವ ಕೆನರಾ ಬ್ಯಾಂಕ್ ಅಧಿಕಾರಿಗಳ ನೆರವಿನಿಂದ ಉಚಿತವಾಗಿ ತಂತ್ರಾಂಶ ಸಿದ್ಧಗೊಂಡು, ದೋಷ ಸರಿಪಡಿಸಲಾಯಿತು. ಇದರಿಂದ ಮತ್ತೊಮ್ಮೆ ಸಂಸ್ಥೆಗೆ ದೊಡ್ಡ ಮಟ್ಟದ ಹಣ ಉಳಿಯಿತು. ಆಡಳಿತ ವಹಿಸಿಕೊಂಡಾಗ ಸಂಬಳ ನೀಡಲು ಸಹ ಹಣವಿಲ್ಲದ ಪರಿಸ್ಥಿತಿ ಇತ್ತು. ಹಾಸ್ಟೆಲ್ ಖಾತೆಯಿಂದ ೧ ಕೋಟಿ ರು. ಸಾಲ ಪಡೆಯಬೇಕಾಯಿತು. ಆದರೆ ಕಠಿಣ ಆರ್ಥಿಕ ಶಿಸ್ತು ಅನುಸರಿಸಿದ ಪರಿಣಾಮ, ಕೇವಲ ಒಂದು ವರ್ಷದಲ್ಲಿ ಎಫ್‌ಡಿ, ಎಸ್‌ಬಿ ಹಾಗೂ ಕರೆಂಟ್ ಖಾತೆಗಳಲ್ಲಿ ಒಟ್ಟು 87.25 ಕೋಟಿ ರು. ಠೇವಣಿ ಇಡಲಾಗಿದೆ. ಸೊಸೈಟಿ ಖಾತೆಯಲ್ಲಿ ಕಾರ್ಪಸ್ ಫಂಡ್, ಸದಸ್ಯತ್ವ ಶುಲ್ಕ ಮತ್ತು ಕಟ್ಟಡ ಬಾಡಿಗೆ ಮೂಲಕವೇ 4.9 ಕೋಟಿ ರು. ಸಂಗ್ರಹವಾಗಿದೆ ಎಂದು ಮಾಹಿತಿ ನೀಡಿದರು. ಹಿಂದಿನ 68 ವರ್ಷದ ಆಡಳಿತದಲ್ಲಿ 52.10 ಕೋಟಿ ರು. ಇದ್ದರೆ, ನಾವು ಅದನ್ನು ಒಂದೇ ವರ್ಷದಲ್ಲಿ 87.25 ಕೋಟಿ ರು.ಗೆ ಹೆಚ್ಚಿಸಿದ್ದೇವೆ ಎಂದು ಹೇಳಿದರು.


೨೦೨೪-೨೫ರಲ್ಲಿ ಹಿಂದಿನ ಆಡಳಿತ ಒಂದು ದಿನದ ಕಾಲೇಜು ದಿನಾಚರಣೆಗೆ ೪.೨೧ ಲಕ್ಷ ರು. ಖರ್ಚು ಮಾಡಿದ್ದರೆ, ನಾವು ಮೂರು ದಿನಗಳ ಕಾರ್ಯಕ್ರಮವನ್ನು ೩.೭೪ ಲಕ್ಷ ರು.ಗೆ ನಡೆಸಿದ್ದೇವೆ. ಆಡಿಟೋರಿಯಂ ದುರಸ್ತಿ ಹಿನ್ನೆಲೆಯಲ್ಲಿ ಓಪನ್ ಸ್ಟೇಜ್ ಮತ್ತು ಜರ್ಮನ್ ಟೆಂಟ್‌ಗೆ ೧೮.೨೯ ಲಕ್ಷ ರು. ವೆಚ್ಚವಾಗಿದೆ. ಗ್ರಾಜ್ಯೂಯೇಷನ್ ಡೇ ವಿಷಯದಲ್ಲಿ ೩೧.೬೯ ಲಕ್ಷ ರು. ವೆಚ್ಚ ಮಾಡಿದ್ದರೆ, ನಾವು ೧೬.೬೩ ಲಕ್ಷ ರು.ಗೆ ಅದೇ ಕಾರ್ಯಕ್ರಮ ನಡೆಸಿದ್ದೇವೆ ಎಂದು ವಿವರಿಸಿದರು.

ಹಾಸನದ ಹೃದಯಭಾಗದಲ್ಲಿರುವ ವಿದ್ಯಾಭವನ ಕಟ್ಟಡವನ್ನು ೪೦ ವರ್ಷದ ಲೀಜ್ ಅವಧಿ ಮುಗಿದು ೯ ವರ್ಷಗಳಾದರೂ ಮರಳಿ ಪಡೆಯಲು ಸಾಧ್ಯವಾಗಿರಲಿಲ್ಲ. ನಾವು ೧ ಕೋಟಿ ರು. ಗುಡ್‌ವಿಲ್ ನೀಡಿ ಕಟ್ಟಡವನ್ನು ಸಂಸ್ಥೆಗೆ ಮರಳಿ ಪಡೆದು, ಸಮಾನ ಬಾಡಿಗೆ ನಿಗದಿ ಮಾಡಿ ತಿಂಗಳಿಗೆ ೬.೮ ಲಕ್ಷ ರು. ಆದಾಯವಾಗುವಂತೆ ಮಾಡಿದ್ದೇವೆ. ಕಟ್ಟಡದ ಅಂದಾಜು ಮೌಲ್ಯ ೮೦-೯೦ ಕೋಟಿ ರು. ಎಂದು ತಿಳಿಸಿದರು.

೮ ವರ್ಷಗಳಿಂದ ೩ ಕೋಟಿ ರು. ನಷ್ಟದಲ್ಲಿದ್ದ ಮಲೆನಾಡು ಹಿಪ್ಪೋ ಕ್ಯಾಂಪಸ್ ಈಗ ವರ್ಷಕ್ಕೆ ೫೦ ಲಕ್ಷ ರು. ಲಾಭಕ್ಕೆ ತಿರುಗಿದೆ. ಎವಿಕೆ ಪಿಯು ಕಾಲೇಜಿನ ೨೬ ಲಕ್ಷ ರು. ಬಾಕಿ ಫೀಸ್ ವಿಚಾರ ಪರಿಶೀಲನೆಯಲ್ಲಿದ್ದು, ಅವಶ್ಯಕ ಕ್ರಮ ಕೈಗೊಳ್ಳಲಾಗುವುದು. ಎವಿಕೆ ಡಿಗ್ರಿ ಕಾಲೇಜು ಹಾಗೂ ಹೆಚ್‌ಆರ್‌ಐಹೆಚ್‌ಇ ಹೊರತುಪಡಿಸಿ ಉಳಿದ ಸಂಸ್ಥೆಗಳು ಲಾಭದಲ್ಲಿವೆ ಎಂದು ತಿಳಿಸಿದರು.

ಭೂವನಹಳ್ಳಿ ಶ್ರೀನಿವಾಸ್, ಜಿ.ಆರ್. ಶ್ರೀನಿವಾಸ್ ಹಾಗೂ ಜಿ.ಟಿ. ಕುಮಾರ್ ಸಂಸ್ಥೆಯಲ್ಲಿ ಅಕ್ರಮಕ್ಕೆ ಮುಂದಾದ ವಿವರಗಳನ್ನು ಮುಂದಿನ ಪತ್ರಿಕಾಗೋಷ್ಠಿಯಲ್ಲಿ ದಾಖಲೆ ಸಮೇತ ಬಹಿರಂಗಪಡಿಸುವುದಾಗಿ ಎಚ್ಚರಿಸಿದರು.

----------

ಬಾಕ್ಸ್:

ನೇಮಕಾತಿ ಅಕ್ರಮ ಆರೋಪ ತಳ್ಳಿ ಹಾಕಿದ ಆಡಳಿತ

ಮಲೆನಾಡು ಎಂಜಿನಿಯರಿಂಗ್ ಕಾಲೇಜಿನಲ್ಲಿ ೭೫-೮೦ ಉಪನ್ಯಾಸಕರ ಅಕ್ರಮ ನೇಮಕ ನಡೆದಿದೆ ಎಂಬ ಆರೋಪ ಸುಳ್ಳು. ಕೇವಲ ೩೨ ಮಂದಿಯನ್ನು ಮಾತ್ರ ನೇಮಕ ಮಾಡಲಾಗಿದೆ. ಅದರಲ್ಲಿ ೧೨ ಮಂದಿ ನೇಮಕಾತಿ ಪ್ರಕ್ರಿಯೆ ಹಿಂದೆಯೇ ಆರಂಭವಾಗಿತ್ತು. ಸಿಎಸ್ ವಿಭಾಗದಲ್ಲಿ ೧೮೦ ಇನ್‌ಟೇಕ್ ಹೆಚ್ಚಳ ಹಾಗೂ ೩ ಹೊಸ ಕೋರ್ಸ್ ಆರಂಭವಾದ ಹಿನ್ನೆಲೆಯಲ್ಲಿ ಯುಜಿಸಿ ಮಾನದಂಡದಂತೆ ನೇಮಕ ಮಾಡಲಾಗಿದೆ. ಯಾವುದೇ ಅಕ್ರಮ ನಡೆದಿಲ್ಲ ಎಂದು ಸ್ಪಷ್ಟಪಡಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಲೆನಾಡು ಶಿಕ್ಷಣ ಸಂಸ್ಥೆಯ ಹಿರಿಯ ಉಪಾಧ್ಯಕ್ಷ ಜಿ.ಎಲ್. ಮುದ್ದೇಗೌಡ, ಖಜಾಂಚಿ ಪಾರ್ಶ್ವನಾಥ್, ಎವಿಕೆ ಕಾಲೇಜು ಉಪಾಧ್ಯಕ್ಷ ನಾಗರಾಜ್ ಜೈನ್ ಸೇರಿದಂತೆ ಇತರರು ಉಪಸ್ಥಿತರಿದ್ದರು.