ಸಾರಾಂಶ
ಕನ್ನಡಪ್ರಭ ವಾರ್ತೆ ಘಟಪ್ರಭ
ಇಂದು ರಾಜಕೀಯದಲ್ಲಿ ಮಹಿಳೆಯರಿಗೆ ಮೀಸಲಾತಿ ಬಂದಿದೆ. ಆದರೆ, ಅಲ್ಲೂ ಕುಟುಂಬ ರಾಜಕಾರಣ ನಡೆಯುತ್ತಿರುವುದರಿಂದ ಮಹಿಳೆಯರಿಗೆ ಮನ್ನಣೆ ಇಲ್ಲದಂತಾಗಿದೆ. ಅಂಥ ಸಂದರ್ಭದಲ್ಲಿ ಸಾಮಾನ್ಯ ಮಹಿಳೆಯರಿಗೆಲ್ಲಿ ಅವಕಾಶ ಸಿಗುತ್ತದೆ. ಹಾಗಾಗಿ ಇಂದು ಮೀಸಲಾತಿಯನ್ನೇ ಮರು ಚಿಂತನೆಗೆ ಒಳಪಡಿಸಬೇಕಾದ ಅಗತ್ಯವಿದೆ ಎಂದು ಲೇಖಕಿ, ಹಂಪಿ ವಿವಿಯ ವಿಶ್ರಾಂತ ಕುಲಪತಿ ಡಾ. ಮಲ್ಲಕಾ ಘಂಟಿ ಅಭಿಪ್ರಾಯಪಟ್ಟರು.ಅವರು ಈಚೆಗೆ ಘಟಪ್ರಭಾದ ಎನ್. ಎಸ್. ಹರ್ಡೀಕರ್ ಸೇವಾದಳದಲ್ಲಿ ಕರ್ನಾಟಕ ಲೇಖಿಕಿಯರ ಸಂಘ ಮತ್ತು ಕರ್ನಾಟಕ ಲೇಖಿಕಿಯರ ಸಂಘ ಬೆಳಗಾವಿ ಜಿಲ್ಲಾ ಶಾಖೆ ಹಾಗೂ ಮಾನವ ಬಂಧುತ್ವ ವೇದಿಕೆ ಸಹಯೋಗದಲ್ಲಿ ನಡೆದ ಸಮುದ್ರದ ತಡಿಯಲೊಂದು ಮನೆಯ ಮಾಡಿ ಎಂಬ ಮಹಿಳೆಯರ ಏಕವ್ಯಕ್ತಿ ನಾಟಕ ರಚನಾ ಶಿಬಿರದ ಉದ್ಘಾಟನೆ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡಿದರು.
ನಾವು ಎಲ್ಲಿವರಿಗೆ ಪುರಷರು ಹೇಳಿದ ಮಾತುಗಳನ್ನೇ ಕೇಳುತ್ತ ಬರುವುದು, ನಾವು ನಮ್ಮದೇ ಮಾತುಗಳನ್ನು ಆಡುವುದು ಯಾವಾಗ? ನಮ್ಮದೇ ಧ್ವನಿ ಬರುವುದು ಯಾವಾಗ? ಹಾಗಾಗಿ ಮಹಿಳೆಯರ ತರ್ಕಬದ್ಧವಾಗಿ ಮಹಿಳೆಯರಿದ್ದೆಡೆ ಸಂಕಟಗಳನ್ನು ಒಳಗೊಂಡಂತಹ ನಾಟಕಗಳನ್ನು ರಚಿಸುವಂತಾಗಬೇಕು. ಬುದ್ಧ, ಅಂಬೇಡ್ಕರ್ ಅವರನ್ನು ಅರಾಧಿಸುತ್ತೇವೆ. ಅವರನ್ನು ಭೂಮಿಗೆ ತಂದವರು ಮಹಿಳೆಯರು. ನಾವು ಎಂದಿಗೆ ಆ ಸ್ಥಾನಕ್ಕೆ ಬರುವುದು? ಎಂದು ಪ್ರಶ್ನಿಸಿದರು.ಶಿಬಿರವನ್ನು ಶ್ರೀಕೃಷ್ಣ ಪಾರಿಜಾತದ ಒಂದು ತುಣುಕನ್ನು ಹೇಳುವುದರ ಮೂಲಕ ವಿಭಿನ್ನವಾಗಿ ಉದ್ಘಾಟಿಸಿದ ಕಲಾವಿದ ವಿಶ್ವೇಶ್ವರಿ ಹಿರೇಮಠ ಅವರು, ಏಕವ್ಯಕ್ತಿ ನಾಟಕ, ಅನುವಾದಗಳ ಮೂಲಕವೇ ಕನ್ನಡದಲ್ಲಿ ನಾಟಕ ರಚನೆ ಆರಂಭವಾಯಿತು. ಈಗ ನಾಟಕಗಳು 3 ತಾಸಿನಿಂದ ಒಂದೂವರೆ ತಾಸಿಗೆ ಇಳಿದಿದೆ. ಅಂದರೆ ಕಾಲಕಾಲಕ್ಕೆ ನಾಟಕದ ಅವಧಿ ಮತ್ತು ವಿಧಾನಗಳಲ್ಲಿ ಸಾಕಷ್ಟು ಪ್ರಯೋಗಗಳಾಗಿವೆ. ಈ ಶಿಬಿರದ ಮೂಲಕ ಒಳ್ಳೆಯ ನಾಟಕಗಳು ಹೊರಬರಲಿ ಎಂದು ಆಶಿಸಿದರು.
ಶಿಬಿರದ ನಿರ್ದೇಶಕ ನಟರಾಜ ಹೊನ್ನವಳ್ಳಿ ಮಾತನಾಡಿ, ಕಲೆ ಎಂದರೆ ಸುತ್ತಿಗೆಯಂತೆ. ಅದು ವಸ್ತುವೊಂದನ್ನು ರೂಪಿಸುವ ಪ್ರಯತ್ನ ಮಾಡುತ್ತದೆ. ಕನ್ನಡಿ ಕೇವಲ ಕಾಣಿಸುತ್ತದೆ ರೂಪಿಸುವುದಿಲ್ಲ. ನಾಟಕ ರಚನೆಗೆ ಮೊದಲು ನಾಟಕ ಓದುವುದು ಹೇಗೆ ಮತ್ತು ನೋಡುವುದು ಹೇಗೆ ಎಂದು ತಿಳಿಯಬೇಕು. ಸಾಹಿತ್ಯ ರಂಗಭೂಮಿಯ ಒಂದಂಶ ಮಾತ್ರ ನಟ - ನಟಿಯರು ವಸ್ತು. ಪ್ರಸ್ತುತ ರಾಜಕೀಯ, ಸಾಮಾಜಿಕ ಪರಿಸ್ಥಿತಿ, ನಿರ್ವಹಣೆ ಎಲ್ಲವೂ ಮುಖ್ಯ ನಾಟಕಕ್ಕೆ ತತ್ವ ತಂತ್ರ ಎರಡೂ ಮುಖ್ಯ ಎಂದು ಹೇಳಿದರು.ಕರ್ನಾಟಕ ಲೇಖಿಕಿಯರ ಸಂಘದ ಅಧ್ಯಕ್ಷೆ ಡಾ.ಎಚ್.ಎಲ್.ಪುಷ್ಪಾ ಮಾತನಾಡಿ, ಇಡೀ ಭಾರತದಲ್ಲಿಯೇ ಲೇಖಕಿಯರಿಗಾಗಿಯೇ ಇರುವ ಏಕೈಕ ಸಂಘ ಕರ್ನಾಟಕ ಲೇಖಕಿಯರ ಸಂಘ ಮಾತ್ರ. ಸಾಹಿತ್ಯದೊಂದಿಗೆ ಕಲೆ ಮತ್ತು ಸಂಸ್ಕೃತಿ ಎಲ್ಲವನ್ನೂ ಈ ಸಂಘ ಒಳಗೊಂಡಿದೆ ಎಂದರು.
ಮಾನವ ಬಂಧುತ್ವ ವೇದಿಕೆ ಪ್ರಾಧ್ಯಾಪಕ ಪ್ರದೀಪ್ ಮಾಲ್ಗುಡಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಕರ್ನಾಟಕ ಲೇಖಿಕಿಯರ ಸಂಘದ ಬೆಳಗಾವಿ ಶಾಖೆಯ ಅಧ್ಯಕ್ಷರಾದ ಗಂಗಾಸ್ವಾಮಿ ಸ್ವಾಗತಿಸಿದರು. ನಂತರ ವಿವಿಧ ಗೋಷ್ಠಿಗಳು ನಡೆದವು. ಡಾ.ರಾಮಕೃಷ್ಣ ಮರಾಠೆ, ಸುಧಾ ಆಡುಕಳ, ಡಾ. ಡಿ.ಎಸ್. ಚೌಗಲೆ ಮಾತನಾಡಿದರು. ಜ್ಯೋತಿ ಬದಾಮಿ ವಂದಿಸಿದರು. ಕರ್ನಾಟಕ ಲೇಖಿಕಿಯರ ಸಂಘದ ಕಾರ್ಯದರ್ಶಿ ಭಾರತಿ ಹೆಗಡೆ ಕಾರ್ಯಕ್ರಮ ನಿರೂಪಿಸಿದರು.;Resize=(128,128))
;Resize=(128,128))
;Resize=(128,128))
;Resize=(128,128))