ಕನ್ನಡಪ್ರಭ ವಾರ್ತೆ ಹಾಸನ

ಮಹಿಳೆಯರು ಇಂದು ಸಮಾಜದ ಎಲ್ಲಾ ಕ್ಷೇತ್ರಗಳಲ್ಲಿಯೂ ತಮ್ಮ ಸಾಮರ್ಥ್ಯವನ್ನು ತೋರಿಸಿ ಮಹತ್ವದ ಸಾಧನೆ ಮಾಡುತ್ತಿದ್ದಾರೆ ಎಂದು ಕ್ರೇಜಿ ಯೋಗ ಕೇಂದ್ರದ ಯೋಗ ಶಿಕ್ಷಕರಾದ ಕಿರಣ್ ಹೇಳಿದರು. ನಗರದ ವಿನಾಯಕನಗರದಲ್ಲಿರುವ ಕ್ರೇಜಿ ಯೋಗ ಪಾರ್ಕ್‌ನಲ್ಲಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಹೋಳಿ ಹಬ್ಬದ ಸಂಭ್ರಮ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಮಹಿಳೆಯರು ಕುಟುಂಬದ ನಿರ್ವಹಣೆ ಜೊತೆಗೆ ವೃತ್ತಿ ಜೀವನದಲ್ಲಿಯೂ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಹಿಂದಿನ ಕಾಲದಿಗಿಂತ ಈಗ ಮಹಿಳೆಯರು ಶಿಕ್ಷಣ, ಉದ್ಯೋಗ, ಆಡಳಿತ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದು ಸಮಾಜದ ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆಯನ್ನು ನೀಡುತ್ತಿದ್ದಾರೆ ಎಂದು ಅವರು ಹೇಳಿದರು.ತಾಯಿ, ಹೆಂಡತಿ, ಮಗಳು, ಸೊಸೆ ಎಂಬಂತೆ ಕುಟುಂಬದ ವಿವಿಧ ಹಂತಗಳಲ್ಲಿ ಮಹಿಳೆಯರು ಮಹತ್ತರ ಜವಾಬ್ದಾರಿಗಳನ್ನು ನಿರ್ವಹಿಸುತ್ತಿದ್ದಾರೆ. ಇದಕ್ಕೆ ಜೊತೆಗೆ ಅಧಿಕಾರಿಗಳಾಗಿ, ನೌಕರರಾಗಿ ಹಾಗೂ ವಿವಿಧ ಸಾಮಾಜಿಕ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸಿ ತಮ್ಮ ಸಾಮರ್ಥ್ಯವನ್ನು ತೋರಿಸುತ್ತಿದ್ದಾರೆ. ಮಹಿಳೆಯರ ಸಾಧನೆ ಮತ್ತು ಅವರ ಕೊಡುಗೆಗಳನ್ನು ಗೌರವಿಸುವುದಕ್ಕಾಗಿ ಅಂತರರಾಷ್ಟ್ರೀಯ ಮಹಿಳಾ ದಿನವನ್ನು ವಿಶೇಷವಾಗಿ ಆಚರಿಸಲಾಗುತ್ತಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಸುಮಾರು ನೂರಕ್ಕೂ ಹೆಚ್ಚು ಮಹಿಳಾ ಯೋಗಪಟುಗಳು ಹಾಗೂ ಪುರುಷ ಯೋಗಪಟುಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಮಹಿಳಾ ದಿನಾಚರಣೆಯ ಅಂಗವಾಗಿ ಯೋಗಾಭ್ಯಾಸ ನಡೆಸಿ, ನಂತರ ಹೋಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು. ಭಾಗವಹಿಸಿದವರು ಪರಸ್ಪರ ಬಣ್ಣ ಹಚ್ಚಿಕೊಂಡು ಹಬ್ಬದ ಸಂತಸ ಹಂಚಿಕೊಂಡರು.ಕಾರ್ಯಕ್ರಮದ ಕೊನೆಯಲ್ಲಿ ಎಲ್ಲ ಭಾಗವಹಿಸಿದವರಿಗೆ ಹಣ್ಣುಗಳ ಫಲಹಾರ ಹಾಗೂ ಸಿಹಿ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಕ್ರೇಜಿ ಯೋಗ ಕೇಂದ್ರದ ಸದಸ್ಯರು, ಯೋಗಾಭ್ಯಾಸಿಗಳು ಹಾಗೂ ಸ್ಥಳೀಯರು ಭಾಗವಹಿಸಿದ್ದರು.