ಚೈತನ್ಯ ಮಹಿಳಾ ಸಂಘದ ಕಾರ್ಯ ಮಾದರಿ

| Published : Mar 23 2024, 01:03 AM IST

ಸಾರಾಂಶ

ಹೆಣ್ಣು ಭ್ರೂಣ ಹತ್ಯೆ ತಡೆ ಬಗ್ಗೆ ಹಾಗೂ ಬಾಲ್ಯ ವಿವಾಹ ನಿಷೇಧ ಕಾಯ್ದೆಯ ಕುರಿತು ತಿಳಿ ಹೇಳಿದರು.

ಕನ್ನಡ ಪ್ರಭ ವಾರ್ತೆ ಮುಧೋಳ

ಮುಧೋಳದ ಚೈತನ್ಯ ಮಹಿಳಾ ಸಂಘವು 24 ವರ್ಷದಲ್ಲಿ ಮಾಡಿರುವ ಸಾಧನೆ ಎಲ್ಲರೂ ಮೆಚ್ಚುವಂತಹದ್ದು ಎಂದು ತಾ.ಪಂ ಕಾರ್ಯನಿರ್ವಹಣಾಧಿಕಾರಿ ವೀರನಗೌಡ ಏಗನಗೌಡರ ಹೇಳಿದರು.

ಸ್ಥಳೀಯ ಡಾ.ಬಿ.ಆರ್‌. ಅಂಬೇಡ್ಕರ ಭವನದಲ್ಲಿ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಚೈತನ್ಯ ಮಹಿಳಾ ಸಂಘದ 24ನೇ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಮಾತನಾಡಿದ ಅವರು, ಜಿಲ್ಲಾ ಪಂಚಾಯತಿ ವತಿಯಿಂದ ಅನುಷ್ಠಾನಗೊಳ್ಳುತ್ತಿರುವ ಸಂಜೀವಿನಿ ಎನ್.ಆರ್‌.ಎಲ್.ಎಂ ಯೋಜನೆಯ ಕುರಿತು ಮಹಿಳೆಯರಿಗೆ ಮಾಹಿತಿ ನೀಡಿದರು. ಚಿಮ್ಮಡ ಗ್ರಾಮದ ಮಹಿಳಾ ಸ್ವ ಸಹಾಯ ಸಂಘದ ಸದಸ್ಯರಿಗೆ ₹2 ಲಕ್ಷದ ಚೆಕ್ ವಿತರಿಸಿದರು.

ತಾಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶ ಮಲಘಾಣ ಮಾತನಾಡಿ, ಹೆಣ್ಣು ಭ್ರೂಣ ಹತ್ಯೆ ತಡೆ ಬಗ್ಗೆ ಹಾಗೂ ಬಾಲ್ಯ ವಿವಾಹ ನಿಷೇಧ ಕಾಯ್ದೆಯ ಕುರಿತು ತಿಳಿ ಹೇಳಿದರು.

ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಮೋಹನ ಕೋರಡ್ಡಿ ಮಾತನಾಡಿ, ಸಮಾಜ ಕಲ್ಯಾಣ ಇಲಾಖೆಯಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಮತ್ತು ಮಹಿಳೆಯರಿಗೆ ಸಿಗುವ ಸೇವಾ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು.

ಮುಧೋಳ ನಗರ ಸಭೆ ಸಮುದಾಯ ಸಂಘಟಣಾ ಅಧಿಕಾರಿ ಪೂರ್ಣಾನಂದ ನೀಲಕಂಠಮಠ ಮಾತನಾಡಿ, ಮಹಿಳಾ ದಿನಾಚರಣೆಯ ಮಹತ್ವದ ಕುರಿತು ತಿಳಿಸಿಕೊಟ್ಟರು.

ಚೈತನ್ಯ ಮಹಿಳಾ ಸಂಘದ ಸಲಹಾ ಸಮಿತಿಯ ಸದಸ್ಯ ಎಚ್.ಆರ್‌. ಮರ್ಧಿ ಮಾತನಾಡಿ, ಸಂಘದ 24 ವರ್ಷಗಳ ಸಾಧನೆ ಮತ್ತು ಸಂಸ್ಥೆಯ ಅಡಿಯಲ್ಲಿ ನಡೆಯುತ್ತಿರುವ ಯೋಜನೆಗಳ ಕುರಿತು ಮಾಹಿತಿ ನೀಡಿದರು.

ಮಲ್ಲಣಗೌಡ ಸುಭೇದಾರ ಮಾತನಾಡಿ, ಎಚ್ಐವಿ ಮತ್ತು ಏಡ್ಸ್ ಸಮುದಾಯ ಉಚಿತ ಆರೋಗ್ಯ ತಪಾಸಣಾ ಶಿಬಿರದ ಕುರಿತು ಮಾತನಾಡಿದರು.

ಮುಧೋಳ ತಾಲೂಕು ಸಾರ್ವಜನಿಕ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ಅಶೋಕ ಎ. ಸೂರ್ಯವಂಶಿ, ಪತ್ರಕರ್ತ ವಿಶ್ವನಾಥ ಮುನವಳ್ಳಿ ವೇದಿಕೆ ಮೇಲಿದ್ದರು.

ಚೈತನ್ಯ ಮಹಿಳಾ ಸಂಘದ ಅಧ್ಯಕ್ಷೆ ಮಧು ನಡುವಿನಮನಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಧಮನಿತ ಮಹಿಳೆಯರ ಮೇಲೆ ಆಗುತ್ತಿರುವ ದೌರ್ಜನ್ಯ ಪ್ರಕರಣಗಳು ಹಾಗೂ ಸಮುದಾಯದ ಮಹಿಳೆಯರು ಮಕ್ಕಳು ಶಿಕ್ಷಣ, ಬಾಲ್ಯ ವಿವಾಹ, ದೇವದಾಸಿ ಪದ್ಧತಿ ನಿರ್ಮೂಲನೆ ಹಾಗೂ ಮಹಿಳೆಯರ ಆರೋಗ್ಯದ ಕುರಿತು ಮಾಹಿತಿ ನೀಡಿದರು.

ಸಂಸ್ಥೆಯ ಕಾರ್ಯದರ್ಶಿ ರೇಣುಕಾ ಗಾಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರದೀಪ ಘಾಟಗೆ ನಿರೂಪಿಸಿದರು, ಪ್ರದೀಪ ಗೋಟೂರ ಸ್ವಾಗತಿಸಿದರು. ಸುನೀಲ ಚೌರಿ ವಂದಿಸಿದರು, 500 ಕ್ಕೂ ಹೆಚ್ಚು ಮಹಿಳೆಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.