ಸಾರಾಂಶ
ಕನ್ನಡಪ್ರಭ ವಾರ್ತೆ ಮೂಡುಬಿದಿರೆ
ಮಾಜಿ ಮುಖ್ಯಮಂತ್ರಿ ಡಾ.ಎಂ. ವೀರಪ್ಪ ಮೊಯ್ಲಿ ಅವರ ‘ವಿಶ್ವ ಸಂಸ್ಕೃತಿಯ ಮಹಾಯಾನ- ಸಂಪುಟ 2’ ಗದ್ಯ ಮಹಾಕಾವ್ಯ ಭಾರತದ ಅದ್ಭುತ ನಾಗರಿಕತೆಯ ಅನಾವರಣ ಮಾತ್ರವಲ್ಲ ಚರಿತ್ರೆಯ ಅನಾವರಣವೂ ಆಗಿದೆ. ಈ ಮಹಾಕಾವ್ಯ ಗದ್ಯಸಾಹಿತ್ಯದ ಹೊಸ ಸ್ವರೂಪ ಎಂದು ಮೈಸೂರು ವಿ.ವಿ.ಯ ವಿಶ್ರಾಂತ ಪ್ರಾಧ್ಯಾಪಕ, ವಿಮರ್ಶಕ ಪ್ರೊ. ಸಿ.ನಾಗಣ್ಣ ಹೇಳಿದ್ದಾರೆ.ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಮತ್ತು ಸ್ವಪ್ನ ಬುಕ್ ಹೌಸ್ ಬೆಂಗಳೂರು ವತಿಯಿಂದ ಮೂಡುಬಿದಿರೆ ವಿದ್ಯಾಗಿರಿಯ ಡಾ.ವಿ.ಎಸ್. ಆಚಾರ್ಯ ಸಭಾಭವನದಲ್ಲಿ ಭಾನುವಾರ ಮಾಜಿ ಮುಖ್ಯಮಂತ್ರಿ, ಸಾಹಿತಿ ಡಾ.ಎಂ. ವೀರಪ್ಪ ಮೊಯ್ಲಿ ಅವರ ‘ವಿಶ್ವ ಸಂಸ್ಕೃತಿಯ ಮಹಾಯಾನ- ಸಂಪುಟ 2’ ಗದ್ಯ ಮಹಾಕಾವ್ಯ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ಬಹಿರಂಗದಲ್ಲಿ ಜನಕಲ್ಯಾಣದ ಮನೋಭಾವದ ಮೊಯ್ಲಿಯವರು ಅಂತರಂಗದ ಚಿಂತನೆಗಳಿಗೂ ಅಕ್ಷರದ ರೂಪ ನೀಡಿ ಸಾಹಿತ್ಯ ರಂಗಕ್ಕೆ ಸಮೃದ್ಧತೆ ಒದಗಿಸಿದ್ದಾರೆ ಎಂದು ಬಣ್ಣಿಸಿದರು.ಕೃತಿಕಾರ ಡಾ.ಎಂ. ವೀರಪ್ಪ ಮೊಯ್ಲಿ ಮಾತನಾಡಿ, ಉನ್ನತ ಶಿಕ್ಷಣದಲ್ಲಿ ಪ್ರಶ್ನಿಸುವ ಪರಿಣತಿ, ಸಂವಾದವೇ ನಿಜವಾದ ಜ್ಞಾನಮಾರ್ಗ ಎಂದರು. ಮುಂದಿನ ಎರಡು ವರ್ಷಗಳಲ್ಲಿ ಈ ಕೃತಿಯ ಉಳಿದ ಮೂರೂ ಸಂಪುಟಗಳು ಬಿಡುಗಡೆಯಾಗಲಿವೆ ಎಂದರು.
ಆಶಯ ನುಡಿಗಳನ್ನಾಡಿದ ವಿಶ್ರಾಂತ ಕುಲಪತಿ ಡಾ. ಬಿ.ಎ. ವಿವೇಕ ರೈ ಮಾತನಾಡಿ, ಇಂದು ಸಂವಾದಗಳಿಗಿಂತ ವಿವಾದಕ್ಕೆ ಆದ್ಯತೆ, ಜ್ಞಾನದ ಕುರಿತ ಅವಜ್ಞೆ ಹೆಚ್ಚಿದೆ. ಅಧ್ಯಯನಶೀಲತೆ ಕಡಿಮೆಯಾಗುತ್ತಿದೆ. ಅನುಭವಗಳಿಂದ ಉದಯಿಸುವ ಚಿಂತನೆ ಶ್ರೇಷ್ಠತೆಯ ವ್ಯಸನವಿಲ್ಲದೇ ಎಲ್ಲರ ಧ್ವನಿಯನ್ನೂ ಗೌರವಿಸುವಂತಹದ್ದಾಗಬೇಕು ಎಂದರು.ಮೂಡುಬಿದಿರೆ ಶ್ರೀ ಜೈನ ಮಠದ ಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ ಆಶೀರ್ವಚನ ನೀಡಿ, ಮೊಯ್ಲಿ ಅವರು ರಾಜಕಾರಣವನ್ನು ಬದಿಗೆ ಸರಿಸಿ ಸಾಹಿತಿಯಾಗಿ ದಾರ್ಶನಿಕರಾಗಿ ಇನ್ನಷ್ಟು ಕೊಡುಗೆ ನೀಡಬೇಕಾಗಿದೆ ಎಂದರು.
ಮೈಸೂರಿನ ಸಾಹಿತಿ, ಸಂಶೋಧಕ, ಡಾ. ಕಬ್ಬಿನಾಲೆ ವಸಂತ ಭಾರದ್ವಾಜ ಮಾತನಾಡಿ, ಏನಿದೆ ಎನ್ನುವುದು ನಾಗರಿಕತೆಯಾದರೆ, ಏನಾಗಿದ್ದೇವೆ ಎನ್ನುವುದು ಸಂಸ್ಕೃತಿ. ಸಾಹಿತ್ಯ ವಿಶ್ವ ಹೃದಯ ಬೆಸೆಯುವ ತಾಕತ್ತು ಹೊಂದಿದೆ ಎಂದರು.ಅಧ್ಯಕ್ಷತೆ ವಹಿಸಿ ಮಾತನಾಡಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ, ಮೊಯ್ಲಿ ಬರೀ ರಾಜಕಾರಣಿ ಎನ್ನುವುದಕ್ಕಿಂತ ಮುಖ್ಯವಾಗಿ ವಿಚಾರವಂತ, ಸಂಸ್ಕೃತಿ ಪ್ರಿಯ ರಾಜಕಾರಣಿ ಎಂದು ಮೆಚ್ಚುಗೆ ಸೂಚಿಸಿದರು.
ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಸ್ವಾಗತಿಸಿದರು. ಮೂಡುಬಿದಿರೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರೊ.ವೇಣುಗೋಪಾಲ ಶೆಟ್ಟಿ ನಿರೂಪಿಸಿದರು.ಸ್ವಪ್ನ ಬುಕ್ ಹೌಸ್ ವ್ಯವಸ್ಥಾಪಕ ನಿರ್ದೇಶಕ ನಿತಿನ್ ಶಾ, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಬೆಂಗಳೂರಿನ ಕೆ.ಎಂ. ನಾಗರಾಜ್ ಇದ್ದರು.
ಸಮ್ಮಾನ, ಗೌರವ: ತನ್ನ ಮಹತ್ವದ ಕೃತಿ ಸಂಪುಟ ಹುಟ್ಟೂರಿನಲ್ಲೇ ಲೋಕಾರ್ಪಣೆಯಾಗುತ್ತಿರುವ ಸಂಭ್ರಮದ ಹಿನ್ನೆಲೆಯಲ್ಲಿ ತಮ್ಮ ಬದುಕಿನಲ್ಲಿ ಗಮನ ಸೆಳೆದ ಗುರು ಶತಾಯುಷಿ ಸೀತಾರಾಮ ಶೆಟ್ಟಿ ಅವರನ್ನು ನೆನಪಿಸಿಕೊಂಡ ವೀರಪ್ಪ ಮೊಯ್ಲಿ, ಸಹಪಾಠಿ ಕೃಷ್ಣಮೂರ್ತಿ ಭಟ್, ಅವಿನಾಶ್, ವಿಮಲ್ ಕುಮಾರ್, ಪೌಲ್ ವರ್ಗೀಸ್, ಮುಂಬೈ ದೇವಾಡಿಗರ ಸಂಘದ ಅಧ್ಯಕ್ಷ ಧರ್ಮಪಾಲ ದೇವಾಡಿಗ, ಕೆ.ಎಂ. ನಾಗರಾಜ್ ಅವರನ್ನು ಗೌರವಿಸಿದರು.........................
ಆಳ್ವಾಸ್ ಹೊಸ ಕಟ್ಟಡಕ್ಕೆ ಮೊಯ್ಲಿ ಹೆಸರುಮೂಡುಬಿದಿರೆಯ ಜನತೆಗೆ ವೀರಪ್ಪ ಮೊಯಿಲಿ ಅವರ ಋಣವಿದೆ. ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಸಮೂಹದಲ್ಲಿ ಆರಂಭಿಸಲಾಗಿರುವ ಆಳ್ವಾಸ್ ಕಾನೂನು ಕಾಲೇಜಿನ ಹೊಸ ಕಟ್ಟಡಕ್ಕೆ ಡಾ. ಎಂ. ವೀರಪ್ಪ ಮೊಯ್ಲಿ ಅವರ ಹೆಸರು ಇಡಲಾಗುವುದು. ಮುಂದೆ ವೀರಪ್ಪ ಮೊಯ್ಲಿ ಅವರ 90ನೇ ಜನ್ಮದಿನವನ್ನು ಅದ್ದೂರಿಯಾಗಿ ಹುಟ್ಟೂರು ಮೂಡುಬಿದಿರೆಯಲ್ಲಿ ಹಮ್ಮಿಕೊಳ್ಳುವ ಆಸೆ ನಮ್ಮದು ಎಂದು ಡಾ. ಮೋಹನ ಆಳ್ವ ಸೇರಿದವರ ಕರತಾಡನದ ನಡುವೆ ಘೋಷಿಸಿದರು.