ಎತ್ತಿನಹೊಳೆ ಕುಡಿಯುವ ನೀರು ಸೆಪ್ಟಂಬರ್ ಅಂತ್ಯಕ್ಕೆ ತುಮಕೂರು ತಲುಪಲಿದೆ. ಎತ್ತಿನಹೊಳೆ ಅಚ್ಚುಕಟ್ಟು ಪ್ರದೇಶದಿಂದ ತಾಲೂಕಿನ ಹೆಬ್ಬನಹಳ್ಳಿವರಗೆ ಒಟ್ಟು ೧೨೬ ಕಿ.ಮೀ. ಪೈಪ್‌ಲೈನ್ ಮೂಲಕ ನೀರು ಹರಿದು ನಂತರ ತೆರೆದ ಕಾಲುವೆ ಮೂಲಕ ನೀರು ಹೊರಹೋಗಲಿದೆ. ಆದರೆ ಪೈಪ್‌ಲೈನ್ ಪದೇ ಪದೇ ತೆರೆದುಕೊಳ್ಳುವುದು ಎಂಜಿನಿಯರ್‌ಗಳಿಗೆ ಸಮಸ್ಯೆ ಸೃಷ್ಟಿಸಿದೆ. ಬಟರ್‌ಪ್ಲೇ ವಾಲ್ಟ್ ಮೂಲಕ ದುರಸ್ತಿ ನಡೆಸಲು ಯೋಜನೆ ರೂಪಿಸಲಾಗಿದೆ. ಈ ತಂತ್ರಜ್ಞಾನದಿಂದ ನೀರು ಹೆಚ್ಚಿನ ಪ್ರಮಾಣದಲ್ಲಿ ವ್ಯರ್ಥವಾಗುವುದು ಹಾಗೂ ಅನವಶ್ಯಕವಾಗಿ ಹಣ ಹಾಗೂ ಶ್ರಮ ವ್ಯರ್ಥವಾಗುವುದು ತಪ್ಪಲಿದೆ ಎನ್ನಲಾಗುತ್ತಿದೆ.

ಕನ್ನಡಪ್ರಭ ವಾರ್ತೆ ಸಕಲೇಶಪುರ

ಎತ್ತಿನಹೊಳೆ ಕುಡಿಯುವ ನೀರು ಸೆಪ್ಟಂಬರ್ ಅಂತ್ಯಕ್ಕೆ ತುಮಕೂರು ತಲುಪಲಿದೆ.ಹೌದು ೨೦೧೪ರಲ್ಲಿ ಹಾಸನ, ಚಿಕ್ಕಮಗಳೂರು, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ರಾಮನಗರ, ಟಿ.ಜಿ ಹಳ್ಳಿ ಜಲಾಶಯ, ಹೆಸರುಘಟ್ಟ ಜಲಾಶಯ,ದೇವನಹಳ್ಳಿ ಕೈಗಾರಿಕ ಪ್ರದೇಶಕ್ಕೆ ಕುಡಿಯುವ ನೀರು ಒದಗಿಸುವ ಉದ್ದೇಶದಿಂದ ಈ ಯೋಜನೆ ಆರಂಭಗೊಂಡಿತು. ೧೦ ವರ್ಷಗಳ ಬಳಿಕ ಅಂದರೆ ೨೦೨೪ರಲ್ಲಿ ಉದ್ಘಾಟನೆಗೊಂಡರೂ ಅರಸೀಕೆರೆ ಹಾಗೂ ತುಮಕೂರು ಸಮೀಪ ತಲಾ ಮೂರು ಕಿ.ಮೀ. ಕಾಮಗಾರಿ ವಿವಿಧ ಕಾರಣಗಳಿಂದ ಸಂಪೂರ್ಣಗೊಳ್ಳದ ಕಾರಣ ಎತ್ತಿನಹೊಳೆಯಿಂದ ಮೇಲೆತ್ತುವ ನೀರನ್ನು ಕಾಗೆ ಹಳ್ಳದ ಮೂಲಕ ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ವಾಣಿವಿಲಾಸ ಸಾಗರಕ್ಕೆ ಹರಿಸಲಾಗುತಿತ್ತು. ಸದ್ಯ ಜಲಸಂಪನ್ಮೂಲ ಸಚಿವರಾಗಿದ್ದ ಡಿ.ಕೆ ಶಿವಕುಮಾರ್ ಅವರ ಪ್ರಯತ್ನದ ಫಲವಾಗಿ ಅರಣ್ಯ ಸಮಸ್ಯೆಗೆ ತಾರ್ಕಿಕ ಅಂತ್ಯ ಕಾಣಿಸುವ ಮೂಲಕ ಅರಸೀಕೆರೆ ತಾಲೂಕಿನ ಐದಳ್ಳ ಕಾವಲಿನ ೨.೫ ಕಿ.ಮೀ. ಕಾಮಗಾರಿ ಬಹುತೇಕ ಮುಕ್ತಾಯಗೊಂಡಿದ್ದರೆ, ಬಾಕಿ ಇರುವ ಐದುನೂರು ಮೀಟರ್‌ನಲ್ಲಿ ರೈತರು ಅನಧಿಕೃತವಾಗಿ ಸಾಗುವಳಿ ಮಾಡುತ್ತಿರುವ ಜಮೀನಿನ ಪರಿಹಾರದ ವಿಚಾರ ಸದ್ಯ ಸರ್ಕಾರದ ಮುಂದಿದ್ದು ಸಮಸ್ಯೆಗೆ ಪರಿಹಾರ ದೊರಕಿದ ಕೇವಲ ಒಂದು ತಿಂಗಳಿನಲ್ಲಿ ಕಾಮಗಾರಿ ಮುಕ್ತಾಯಗೊಳ್ಳಲಿದ್ದು, ಜುಲೈ ತಿಂಗಳ ಅಂತ್ಯಕ್ಕೆ ಪರಿಹಾರ ದೊರೆಯಲಿದೆ ಎಂಬ ಆಶಾಭಾವನೆ ಅಧಿಕಾರಿಗಳಲ್ಲಿದೆ ಇನ್ನೂ ತುಮಕೂರು ಜಿಲ್ಲೆಯಲ್ಲಿ ಬಾಕಿ ಇದ್ದ ಮೂರು ಕಿ.ಮೀ. ಕಾಮಗಾರಿ ಬಹುತೇಕ ಮುಕ್ತಾಯಗೊಂಡಿದ್ದು, ನೀರು ಹರಿಯಲು ಕಾಲುವೆ ಸಜ್ಜಾಗಿದೆ.ಸದ್ಯ ವಾಣಿವಿಲಾಸ ಸಾಗರದ ಬದಲಾಗಿ ಯೋಜನೆಯ ಉದ್ದೇಶಿತ ಪ್ರದೇಶಗಳಿಗೆ ನೀರು ಹರಿಸುವುದಾದರೆ ಇನ್ನೂ ಹೆಚ್ಚಿನ ಪ್ರಮಾಣದ ನೀರನ್ನು ಹರಿಸ ಬಹುದಾಗಿದ್ದು ಕಾಲುವೆಯ ನೀರು ಹರಿಯುವ ಸಾಮರ್ಥ್ಯ ಪ್ರತಿ ಸೆಂಕೆಡ್‌ಗೆ ಮೂರು ಸಾವಿರ ಕ್ಯುಸೆಕ್‌ ಆಗಿದ್ದು ಕಳೆದ ಮೂರು ವರ್ಷಗಳಲ್ಲಿ ನಾಲ್ಕರಿಂದ ಐದು ಬಾರಿ ಮಾತ್ರ ಇಷ್ಟು ಪ್ರಮಾಣದ ನೀರು ಹರಿಸಲಾಗಿದೆ. ಉತ್ತಮ ಮಳೆಯಾದರೆ ೧೫೦೦ ರಿಂದ ೨೦೦೦ ಕ್ಯುಸೆಕ್‌ ನೀರು ಹರಿಯುವುದು ಸಾಮಾನ್ಯವಾಗಲಿದೆ ಎಂಬುದು ನಿಗಮದ ಅಧಿಕಾರಿಗಳ ಮಾತು.ಸಮಸ್ಯೆ:

ತಾಲೂಕಿನ ಎತ್ತಿನಹೊಳೆ ಅಚ್ಚುಕಟ್ಟು ಪ್ರದೇಶದಿಂದ ತಾಲೂಕಿನ ಹೆಬ್ಬನಹಳ್ಳಿವರಗೆ ಒಟ್ಟು ೧೨೬ ಕಿ.ಮೀ. ಪೈಪ್‌ಲೈನ್ ಮೂಲಕ ನೀರು ಹರಿದು ನಂತರ ತೆರೆದ ಕಾಲುವೆ ಮೂಲಕ ನೀರು ಹೊರಹೋಗಲಿದೆ. ಆದರೆ ಪೈಪ್‌ಲೈನ್ ಪದೇ ಪದೇ ತೆರೆದುಕೊಳ್ಳುವುದು ಎಂಜಿನಿಯರ್‌ಗಳಿಗೆ ಸಮಸ್ಯೆ ಸೃಷ್ಟಿಸಿದೆ. ೨೦೨೪ರಲ್ಲಿ ಪ್ರಾಯೋಗಿಕ ನೀರು ಹರಿವಿಕೆ ಚಾಲನೆ ನೀಡಿದ ವೇಳೆ ತಾಲೂಕಿನ ಹಾರ್ಲೇ ಕೂಡಿಗೆ, ದೇಖ್ಲಾ, ಕಾಡುಮನೆ ಹಾಗೂ ಹೆಬ್ಬಸಾಲೆ ಗ್ರಾಮಗಳ ಸಮೀಪ ಪೈಪ್‌ಲೈನ್ ಮ್ಯಾನ್ ಹೋಲು ಹಾಗೂ ಕೀ ಹೋಲುಗಳು ತೆರೆದುಕೊಂಡು ಭಾರಿ ಸಮಸ್ಯೆ ಸೃಷ್ಟಿಸಿದ್ದರಿಂದ ಸಮೀಪದ ಭತ್ತದ ಗದ್ದೆ ಹಾಗೂ ಕಾಫಿ ತೋಟಗಳಿಗೆ ನೀರು ನುಗ್ಗಿ ಬಾರಿ ನಷ್ಟ ಸಂಭವಿಸಿತ್ತು. ಇದರಿಂದ ಎಚ್ಚೆತ್ತಿದ್ದ ಅಧಿಕಾರಿಗಳು ಸಂಪೂರ್ಣ ಪೈಪ್‌ಲೈನ್ ಪರಿಶೀಲನೆ ನಡೆಸುವ ಮೂಲಕ ಮ್ಯಾನ್ ಹೋಲ್‌ ಹಾಗೂ ಕೀ ಹೋಲ್‌ಗಳನ್ನು ಭದ್ರಪಡಿಸಿದ್ದಾರೆ. ಪರಿಶೀಲನೆ ನಂತರ ಇದುವರೆಗೆ ಮ್ಯಾನ್‌ಹೋಲ್‌ ಹಾಗೂ ಕೀ ಹೋಲುಗಳು ತೆರೆದುಕೊಂಡು ಉದಾಹರಣೆ ಕಂಡುಬಂದಿಲ್ಲ. ಆದರೆ, ೨೦೨೫ರ ಜುಲೈ ತಿಂಗಳಿನಲ್ಲಿ ಬೈಕೆರೆ ಗ್ರಾಮ ಸಮೀಪ ಪೈಪ್‌ಗಳ ಜಾಯಿಂಟ್ ವಿಫಲವಾಗಿ ನೀರು ಸೋರಿಕೆಯಾಗಿ ಅಪಾರ ಪ್ರಮಾಣದ ನೀರು ವ್ಯರ್ಥವಾಗಿತ್ತು. ಇದಾದ ನಂತರ ೨೦೨೬ ಜುಲೈ ೧೦ರಂದು ತಾಲೂಕಿನ ಹಲುಸುಲಿಗೆ ಗ್ರಾಮ ಸಮೀಪ ಮತ್ತೆ ಪೈಪ್‌ಗಳ ಮದ್ಯದ ಜಾಯಿಂಟ್ ವಿಫಲವಾಗಿ ಮತ್ತೆ ನೀರು ಹೊರಹರಿದಿದೆ. ಇದರಿಂದ ಎಚ್ಚೆತ್ತಿರುವ ಎತ್ತಿನಹೊಳೆ ಕುಡಿಯುವ ನೀರಿನ ಯೋಜನೆಯ ಅಧಿಕಾರಿಗಳ ತಂಡ ಸಂಪೂರ್ಣ ಯೋಜನೆಯ ೧೨೬ ಕಿ. ಮೀ. ಉದ್ದದ ಪೈಪ್ ಲೈನ್ ಪರೀಕ್ಷಿಸಿ ಬಟರ್ ಪ್ಲೇ ವಾಲ್ಟ್ ಆಳವಡಿಸಲು ಚಿಂತನೆ ನಡೆಸಿದ್ದು ಇದಕ್ಕಾಗಿ ಸುಮಾರು ೮ ಕೋಟಿ ರು. ಅನುದಾನ ಬೇಕಾಗುತ್ತದೆ ಎನ್ನಲಾಗುತ್ತಿದೆ.ಆಲ್ಟ್ರಸ್ಕೋಪಿಕ್ ಟೆಸ್ಟ್:

ಸದ್ಯ ಎತ್ತಿನಹೊಳೆಯ ಎಂಟು ಚೆಕ್ ಡ್ಯಾಮ್‌ಗಳಲ್ಲಿ ಎರಡು ಸಾವಿರದಿಂದ ೧೬ ಸಾವಿರ ಎಚ್.ಪಿ ಸಾಮರ್ಥ್ಯದ ೨೦ಕ್ಕೂ ಅಧಿಕ ಮೋಟರ್‌ಗಳಿದ್ದು ಪ್ರತಿ ಮೋಟರ್‌ನಿಂದ ಕನಿಷ್ಠ ೧೦೦ ಕ್ಯುಸೆಕ್‌ನಿಂದ ಒಂದು ಸಾವಿರ ಕ್ಯುಸೆಕ್‌ ನೀರು ಮೇಲೆತ್ತುವ ಸಾಮರ್ಥ್ಯ ಹೊಂದಿವೆ ಏಕಕಾಲಕ್ಕೆ ನಾಲ್ಕಾರು ಮೋಟರುಗಳು ಕಾರ್ಯನಿರ್ವಯಿಸಿದರೆ ಕನಿಷ್ಠ ೧೫೦೦ ಕ್ಯುಸೆಕ್‌ ನೀರು ಪೈಪ್‌ಗಳ ಮೂಲಕ ಹರಿಯಲಿದೆ. ಇಷ್ಟೊಂದು ನೀರು ಹರಿಯುವ ವೇಳೆ ಪೈಪ್‌ಗಳಲ್ಲಿ ಸೋರಿಕೆ ಕಂಡು ಬಂದರೆ ಪತ್ತೆ ಮಾಡಲು ಅತ್ಯಾಧುನಿಕ ಆಲ್ಟ್ರಸ್ಕೋಪಿಕ್ ಟೆಸ್ಟ್ ಆಳವಡಿಸಲಾಗುತ್ತಿದ್ದು. ನೀರು ಸೋರಿಕೆ ಪತ್ತೆಯಾದ ತಕ್ಷಣ ಬಟರ್‌ಪ್ಲೇ ವಾಲ್ಟ್ ಮೂಲಕ ದುರಸ್ತಿ ನಡೆಸಲು ಯೋಜನೆ ರೂಪಿಸಲಾಗಿದೆ. ಈ ತಂತ್ರಜ್ಞಾನದಿಂದ ನೀರು ಹೆಚ್ಚಿನ ಪ್ರಮಾಣದಲ್ಲಿ ವ್ಯರ್ಥವಾಗುವುದು ಹಾಗೂ ಅನವಶ್ಯಕವಾಗಿ ಹಣ ಹಾಗೂ ಶ್ರಮ ವ್ಯರ್ಥವಾಗುವುದು ತಪ್ಪಲಿದೆ ಎನ್ನಲಾಗುತ್ತಿದೆ.