‘ನಿಮ್ಮ ಹೃದಯ ರಕ್ಷಣೆ ನಿಮ್ಮ ಕೈಯಲ್ಲಿದೆ’

| Published : Sep 29 2024, 01:34 AM IST

ಸಾರಾಂಶ

ಹೃದ್ರೋಗ ಸಮಸ್ಯೆಗಳು ಹೆಚ್ಚುತ್ತಿವೆ. ಹೃದಯದ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಹರಿಸುವುದು ಬಹಳ ಮುಖ್ಯವಾಗಿದೆ. ಆದರೆ ಜಗತ್ತಿನಾದ್ಯಂತ ಹಲವರಿಗೆ ಹೃದಯದ ಕಾಳಜಿ ಮಹತ್ವದ ಅರಿವಿಲ್ಲ. ಹೃದ್ರೋಗಗಳ ಬಗ್ಗೆ ಜನರಲ್ಲಿ ಮಾಹಿತಿ ಕೊರತೆ ಇದೆ

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಜೀವನ ಶೈಲಿಯನ್ನು ಆರೋಗ್ಯವಂತ ಶೈಲಿಯನ್ನಾಗಿ ಮಾಡಿಕೊಂಡರೆ ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳುವುದಕ್ಕೆ ಅನುಕೂಲವಾಗುತ್ತದೆ ಎಂದು ಜಿಲ್ಲಾ ಆರೋಗ್ಯ ಅಧಿಕಾರಿ ಡಾ ಎಸ್ ಮಹೇಶ್ ಕುಮಾರ್ ತಿಳಿಸಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾ ಇಲಾಖೆ ವತಿಯಿಂದ ವಿಶ್ವ ಹೃದಯ ದಿನ, ವಿಶ್ವ ಹಿರಿಯನಾಗರಿಕರ ದಿನ, ಯುವ ದಿನ ಮತ್ತು ರೇಬೀಸ್ ದಿನಾಚರಣೆ ಅಂಗವಾಗಿ ಶನಿವಾರ ನಗರದ ಜೂನಿಯರ್ ಕಾಲೇಜ್ ಆವರಣದಲ್ಲಿ ಸೈಕಲ್ ಮತ್ತು ಬೈಕ್ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಆರೋಗ್ಯ ರಕ್ಷಣೆಗೆ ಒತ್ತು ನೀಡಿ

ಇತ್ತೀಚಿನ ದಿನಗಳಲ್ಲಿ ಹೃದ್ರೋಗ ಸಮಸ್ಯೆಗಳು ಹೆಚ್ಚುತ್ತಿವೆ. ಸಣ್ಣ ಮಕ್ಕಳು, ಯುವಕರು ಹೃದಯಾಘಾತಕ್ಕೆ ಬಲಿಯಾಗುತ್ತಿದ್ದಾರೆ. ಸೂಚನೆಯೇ ಕೊಡದೆ ಸಾವು ಸಂಭವಿಸುತ್ತಿದೆ. ಈ ಕಾರಣಕ್ಕೆ ಹೃದಯದ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಹರಿಸುವುದು ಬಹಳ ಮುಖ್ಯವಾಗಿದೆ. ಆದರೆ ಜಗತ್ತಿನಾದ್ಯಂತ ಹಲವರಿಗೆ ಹೃದಯದ ಕಾಳಜಿ ಮಹತ್ವದ ಅರಿವಿಲ್ಲ. ಹೃದ್ರೋಗಗಳ ಬಗ್ಗೆ ಜನರಲ್ಲಿ ಮಾಹಿತಿ ಕೊರತೆ ಇದೆ ಎಂದರು. ಮಧ್ಯಪಾನ, ತಂಬಾಕು ಸೇವನೆ, ಅನಾರೋಗ್ಯಕರ ಆಹಾರ ಹಾಗೂ ಜಡಜೀವನಶೈಲಿಯಂತಹ ಅಪಾಯಕಾರಿ ಅಂಶಗಳನ್ನು ನಿಯಂತ್ರಿಸುವ ಮೂಲಕ, ಹೃದ್ರೋಗ ಮತ್ತು ಪಾರ್ಶ್ವವಾಯುಗಳಿಂದ ಕನಿಷ್ಠ ಶೇ 80ರಷ್ಟು ಅಕಾಲಿಕ ಮರಣಗಳನ್ನು ತಪ್ಪಿಸಬಹುದು. 2024ರ ವರ್ಲ್ಡ್ ಹಾರ್ಟ್ ಡೇ ಥೀಮ್ ‘ನಿಮ್ಮ ಹೃದಯಕ್ಕೆ ನೀವು ಜವಾಬ್ದಾರರು‘ ಎಂಬರ್ಥದಲ್ಲಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ನಗರ ಸಭಾ ಅಧ್ಯಕ್ಷ ಎ.ಗಜೇಂದ್ರ, ಉಪಾಧ್ಯಕ್ಷ ಜೆ.ನಾಗರಾಜ್,ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಜಿ.ಹರೀಶ್, ವೈದ್ಯರುಗಳಾದ ಡಾ.ಕೃಷ್ಣ ಪ್ರಸಾದ್,ಡಾ.ಕೆ.ಆರ್.ಅನಂತು, ಡಾ.ಸಂತೋಷಬಾಬು, ಡಾ.ಡಿ.ಟಿ.ಉಮಾ, ಡಾ.ಚಂದ್ರ ಶೇಖರ್ ರೆಡ್ಡಿ, ರವಿ ಗೌಡ, ಮೋನಿಷಾ, ಮತ್ತಿತರರು ಇದ್ದರು.