ಇಂತಹ ಕಾರಿಡಾರ್ ಯೋಜನೆಗಳ ಸ್ಥಾಪನೆಗೆ ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ. ಆದರೆ ದೂರದೃಷ್ಟಿಯಿಂದ ತುಂಬ ಅನುಕೂಲವಾಗಲಿದೆ.

ಹೊಸಪೇಟೆ: ಜಿಲ್ಲೆಯಲ್ಲಿ ಇಂಡಸ್ಟ್ರಿಯಲ್ ಕಾರಿಡಾರ್ ಸ್ಥಾಪನೆಗೆ ಯೋಜನೆ ರೂಪಿಸಲಾಗಿದ್ದು, ಅದಕ್ಕಾಗಿ ಈಗಾಗಲೇ ಮರಿಯಮ್ಮನಹಳ್ಳಿ ವ್ಯಾಪ್ತಿಯಲ್ಲಿ 1 ಸಾವಿರ ಎಕರೆ ಸ್ಥಳ ಗುರುತಿಸಲಾಗಿದೆ. ಇದರಿಂದ ಸ್ಥಳೀಯವಾಗಿ ಸಾಕಷ್ಟು ಉದ್ಯೋಗಾವಕಾಶಗಳು ಸೃಷ್ಟಿಯಾಗಲಿದ್ದು, ನಿರುದ್ಯೋಗಿ ಯುವಕ ಯುವತಿಯರಿಗೆ ಅನುಕೂಲವಾಗಲಿದೆ ಎಂದು ಶಾಸಕ ಎಚ್.ಆರ್. ಗವಿಯಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು.ನಗರದ ವಿಜಯನಗರ ಕಾಲೇಜ್‌ ಆವರಣದಲ್ಲಿ ಸಂಜೀವಿನಿ ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ದೀನ್ ದಯಾಳ್ ಉಪಾದ್ಯಾಯ ಗ್ರಾಮೀಣ ಕೌಶಲ್ಯ ಯೋಜನೆ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಹಾಗೂ ವಿಜಯನಗರ ಕಾಲೇಜು ರೈಟ್ ವೇ ಸಲ್ಯೂಶನ್ಸ್ ವತಿಯಿಂದ ಶನಿವಾರ ನಡೆದ ಮೆಗಾ ಉದ್ಯೋಗ ಮೇಳ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಇಂತಹ ಕಾರಿಡಾರ್ ಯೋಜನೆಗಳ ಸ್ಥಾಪನೆಗೆ ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ. ಆದರೆ ದೂರದೃಷ್ಟಿಯಿಂದ ತುಂಬ ಅನುಕೂಲವಾಗಲಿದೆ. ಪ್ರತಿಷ್ಠಿತ ಕಂಪನಿಯೊಂದು ಜಿಲ್ಲೆಯಲ್ಲಿ ಉದ್ಯಮ ಸ್ಥಾಪಿಸಲು ಉತ್ಸುಕತೆ ತೋರುತ್ತಿದೆ. ಈ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳಲಾವುದು ಎಂದರು.

ಕಳೆದ ಬಾರಿ ಆಯೋಜಿಸಲಾಗಿದ್ದ ಉದ್ಯೋಗ ಮೇಳದಲ್ಲಿ 3000 ಅಭ್ಯರ್ಥಿಗಳು ನೋಂದಣಿಯಾಗಿದ್ದು, ಅದರಲ್ಲಿ 700 ಜನರಿಗೆ ಉದ್ಯೋಗ ಅವಕಾಶ ದೊರೆತಿದೆ. ಅದರಂತೆ ಈ ಬಾರಿಯೂ ಮೆಗಾ ಉದ್ಯೋಗ ಮೇಳದಲ್ಲಿ 7500 ಅಭ್ಯರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ. ಈ ಪೈಕಿ ಕನಿಷ್ಠ 2000 ನಿರುದ್ಯೋಗಿ ಯುವಕರಿಗೆ ಉದ್ಯೋಗ ಅವಕಾಶ ದೊರಕುವ ನಿರೀಕ್ಷೆಯಿದೆ ಎಂದರು.

ಜಿಲ್ಲೆಯೂ ಹಲವು ಬೃಹತ್ ಕಾರ್ಖಾನೆ ಹೊಂದಿದೆ. ಜಿಲ್ಲೆಯು ಪ್ರವಾಸೋದ್ಯಮ ತಾಣವಾಗಿದ್ದು, ಮುಂದಿನ ದಿನಗಳಲ್ಲಿ ಬೃಹತ್ತಾಗಿ ಬೆಳೆಯುವ ಸಂಭವ ಹೆಚ್ಚಿದೆ. ಹಾಗೆಯೇ ಜಿಲ್ಲೆಯಲ್ಲಿ ವಸತಿ ಗೃಹಗಳ ಕೊರತೆ ಇದೆ. ಜಿಲ್ಲೆಯಲ್ಲಿ ವಿವಿಧೆಡೆ 150 ರಿಂದ 200 ಎಕರೆ ಸರ್ಕಾರಿ ಸ್ಥಳ ಗುರುತಿಸಿ ಸುಸಜ್ಜಿತವಾದ ಗೆಸ್ಟ್‌ಹೌಸ್‌ ನಿರ್ಮಿಸಿ ಪ್ರವಾಸೋದ್ಯಮ ಇಲಾಖೆಗೆ ಹಸ್ತಾಂತರಿಸಲು ಯೋಜನೆ ರೂಪಿಸಲಾಗಿದೆ ಎಂದರು.

ವಿಜಯನಗರ ಮತ್ತು ಬಳ್ಳಾರಿ ಸೇರಿ ಸಣ್ಣ, ಮಧ್ಯಮ ಮತ್ತು ಬೃಹತ್ 64 ಸ್ಟೀಲ್ ಕೈಗಾರಿಕೆಗಳನ್ನು ಒಳಗೊಂಡಿದೆ. ಇದರಿಂದ ಸ್ಥಳೀಯವಾಗಿ ಸುಮಾರು 1 ಲಕ್ಷ ಹಾಗೂ ಜಿಂದಾಲ್ ಕೈಗಾರಿಕಾ ಪ್ರದೇಶದಲ್ಲಿ 35 ರಿಂದ 40 ಸಾವಿರ ಉದ್ಯೋಗಗಳು ಸೃಷ್ಠಿಯಾಗಿದೆ. ಹೀಗೆ ಕಿರ್ಲೋಸ್ಕರ್, ಕಲ್ಯಾಣಿ ಕೈಗಾರಿಕೆಗಳು ಸೇರಿ 50 ಸಾವಿರ ಉದ್ಯೋಗ ಸೃಷ್ಠಿಯಾಗಲಿವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಮಾತನಾಡಿ, ಉದ್ಯೋಗ ಮೇಳದಲ್ಲಿ ಸುಮಾರು 7500 ಅಭ್ಯರ್ಥಿಗಳು ನೋಂದಣಿ ಮಾಡಿಕೊಂಡಿದ್ದು, 75ಕ್ಕೂ ಹೆಚ್ಚು ಕಂಪನಿಗಳು ಮೇಳದಲ್ಲಿ ಭಾಗಿಯಾಗಿವೆ. ಉದ್ಯೋಗಾಕಾಂಕ್ಷಿಗಳು, ವಿದ್ಯಾರ್ಥಿಗಳು ಮೇಳದ ಸದುಪಯೋಗ ಪಡೆದುಕೊಳ್ಳಬೇಕು. ಅಭ್ಯರ್ಥಿಗಳು ಯಾವುದೇ ಕಂಪನಿಯಲ್ಲಿ ಉದ್ಯೋಗ ದೊರೆತರೂ ಶ್ರದ್ಧೆ, ಬದ್ಧತೆ ಮತ್ತು ಆಸಕ್ತಿಯಿಂದ ತಮ್ಮ ಜವಾಬ್ದಾರಿ ನಿಭಾಯಿಸಿದಲ್ಲಿ ಯಶಸ್ಸು ಕಂಡಿತಾ ಸಿಗಲಿದೆ ಎಂದರು.

ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಎಚ್.ಎನ್.ಎಫ್. ಇಮಾಮ್ ನಿಯಾಜಿ, ನಗರಸಭೆ ಅಧ್ಯಕ್ಷ ಎನ್. ರೂಪೇಶಕುಮಾರ್, ವಿಜಯನಗರ ಕಾಲೇಜು ಪ್ರಾಂಶುಪಾಲ ಮಹಾಂತೇಶ್ ಆರಾಧ್ಯಮಠ, ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಅಶ್ವಿನ್ ಕೊತ್ತಂಬರಿ, ವಿವಿಧ ಕಂಪನಿಗಳ ಮುಖ್ಯಸ್ಥರು, ಸಂಘ ಸಂಸ್ಥೆಗಳ ಪದಾಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.ಜಿಪಂ ಸಿಇಒ ನೋಂಗ್ಜಾಯ್ ಮಹ್ಮದ್ ಅಲಿ ಅಕ್ರಂ ಷಾ ಸ್ವಾಗತಿಸಿದರು.