ಗದಗ ಜಿಲ್ಲೆಯಲ್ಲಿ ಮುಂಗಾರು ಅಬ್ಬರಕ್ಕೆ 1.32 ಲಕ್ಷ ಹೆಕ್ಟೇ‌ರ್ ಬೆಳೆಹಾನಿ!

| Published : Oct 13 2025, 02:02 AM IST

ಗದಗ ಜಿಲ್ಲೆಯಲ್ಲಿ ಮುಂಗಾರು ಅಬ್ಬರಕ್ಕೆ 1.32 ಲಕ್ಷ ಹೆಕ್ಟೇ‌ರ್ ಬೆಳೆಹಾನಿ!
Share this Article
  • FB
  • TW
  • Linkdin
  • Email

ಸಾರಾಂಶ

ಮುಂಗಾರು ಪೂರ್ವದಿಂದಲೇ (ಬೇಸಿಗೆ ಮಳೆ) ಅತಿ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗಿದೆ. ಅದರಲ್ಲಿಯೂ ಜಿಲ್ಲೆಯ ಮುಂಗಾರಿನ ಪ್ರಮುಖ ವಾಣಿಜ್ಯ ಬೆಳೆಯಾದ ಹೆಸರು ಮತ್ತು ಈರುಳ್ಳಿ ಬಿತ್ತನೆ ಪೂರ್ವದಲ್ಲಿಯೇ ವ್ಯಾಪಕ ಮಳೆಯಾದ ಹಿನ್ನೆಲೆ ಸಾಕಷ್ಟು ಪ್ರಮಾಣದಲ್ಲಿ ಬಿತ್ತನೆ ಮಾಡಿದ್ದರು. ಈ ಎರಡೂ ಬೆಳೆಗಳನ್ನು ಬೆಳೆದ ರೈತರು ಸಂಪೂರ್ಣ ತೊಂದರೆ ಅನುಭವಿಸುತ್ತಿದ್ದಾರೆ.

ಶಿವಕುಮಾರ ಕುಷ್ಟಗಿ

ಗದಗ: ಜಿಲ್ಲಾದ್ಯಂತ ಪ್ರಸಕ್ತ ಸಾಲಿನ ಮುಂಗಾರು ಅಬ್ಬರಿಸಿದ್ದು, ಮಳೆಯ ಅಬ್ಬರಕ್ಕೆ ಜಿಲ್ಲೆಯ ರೈತರ ಬದುಕು ಜರ್ಜರಿತವಾಗಿದೆ. ಕೃಷಿ ಮತ್ತು ತೋಟಗಾರಿಕೆ ಸೇರಿದಂತೆ ಜಿಲ್ಲಾಡಳಿತ ಈಚೆಗೆ ನಡೆಸಿದ ಸಮೀಕ್ಷೆಯಲ್ಲಿ ಜಿಲ್ಲೆಯ 7 ತಾಲೂಕುಗಳ ವ್ಯಾಪ್ತಿಯಲ್ಲಿ 1.32 ಲಕ್ಷ ಹೆಕ್ಟೇರ್‌ಗೂ ಅಧಿಕ ಪ್ರದೇಶದ ಬೆಳೆಗಳು ಸಂಪೂರ್ಣ ಹಾನಿಯಾಗಿವೆ.

ಮುಂಗಾರು ಪೂರ್ವದಿಂದಲೇ (ಬೇಸಿಗೆ ಮಳೆ) ಅತಿ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗಿದೆ. ಅದರಲ್ಲಿಯೂ ಜಿಲ್ಲೆಯ ಮುಂಗಾರಿನ ಪ್ರಮುಖ ವಾಣಿಜ್ಯ ಬೆಳೆಯಾದ ಹೆಸರು ಮತ್ತು ಈರುಳ್ಳಿ ಬಿತ್ತನೆ ಪೂರ್ವದಲ್ಲಿಯೇ ವ್ಯಾಪಕ ಮಳೆಯಾದ ಹಿನ್ನೆಲೆ ಸಾಕಷ್ಟು ಪ್ರಮಾಣದಲ್ಲಿ ಬಿತ್ತನೆ ಮಾಡಿದ್ದರು. ಈ ಎರಡೂ ಬೆಳೆಗಳನ್ನು ಬೆಳೆದ ರೈತರು ಸಂಪೂರ್ಣ ತೊಂದರೆ ಅನುಭವಿಸುತ್ತಿದ್ದಾರೆ.

₹1.32 ಲಕ್ಷ ಹೆಕ್ಟೇರ್‌ ಹಾನಿ: ಜಿಲ್ಲೆಯ ರೋಣ, ಗಜೇಂದ್ರಗಡ, ಮುಂಡರಗಿ, ಶಿರಹಟ್ಟಿ, ಲಕ್ಷ್ಮೇಶ್ವರ, ಗದಗ, ಶಿರಹಟ್ಟಿ ತಾಲೂಕು ವ್ಯಾಪ್ತಿಯಲ್ಲಿ ವಾಡಿಕೆಗಿಂತ ಶೇ. 150ಕ್ಕೂ ಪ್ರಮಾಣದಲ್ಲಿ ಮಳೆಯಾಗಿದೆ. ಇದರಿಂದಾಗಿ ಜಿಲ್ಲಾದ್ಯಂತ ಒಟ್ಟು 1,32,534 ಹೆಕ್ಟೇರ್ ಪ್ರದೇಶದಲ್ಲಿನ ಬೆಳೆಗಳು ಸಂಪೂರ್ಣವಾಗಿ ನಾಶಗೊಂಡಿದ್ದು, ರೈತರ ಆರ್ಥಿಕ ಹೊರೆಯನ್ನು ಮತ್ತಷ್ಟು ಹೆಚ್ಚಿಸಿವೆ.

₹68.20 ಕೋಟಿಗೆ ಪ್ರಸ್ತಾವ: ಜಿಲ್ಲೆಯ ಒಟ್ಟು 1,41,549 ರೈತರು ಈ ತೀವ್ರ ತೆರನಾದ ಬೆಳೆಹಾನಿ ಅನುಭವಿಸಿದ್ದು, ಬೆಳೆಹಾನಿ ಪರಿಹಾರವಾಗಿ ₹68.14 ಕೋಟಿ ಬಿಡುಗಡೆ ಮಾಡುವಂತೆ ಜಿಲ್ಲಾಡಳಿತವು ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಆಯುಕ್ತರಿಗೆ ಇತ್ತೀಚೆಗಷ್ಟೇ ಸಲ್ಲಿಸಿದ ಪ್ರಸ್ತಾವನೆಯಲ್ಲಿ ಕೋರಿದೆ. ಕೇವಲ ಮುಂಗಾರು ಒಂದರಲ್ಲಿಯೇ ಇಷ್ಟೊಂದು ಹಾನಿ ಸಂಭವಿಸಿರುವುದು ಇದೇ ಮೊದಲ ಬಾರಿಗೆ ಎನ್ನಲಾಗುತ್ತಿದೆ.

ಪರಿಹಾರ ಮೊತ್ತ: ಕೇಂದ್ರ ಸರ್ಕಾರದ ಮಾರ್ಗಸೂಚಿ ಅನ್ವಯ ಮಳೆಯಾಶ್ರಿತ ಕೃಷಿ ಅಥವಾ ತೋಟಗಾರಿಕೆ ಬೆಳೆಗೆ ಪ್ರತಿ ಹೆಕ್ಟೇರ್‌ ₹8500 ಹಾಗೂ ನೀರಾವರಿ ಬೆಳೆಗೆ ಪ್ರತಿ ಹೆಕ್ಟೇರ್‌ಗೆ ₹1800 ನಿಗದಿಗೊಳಿಸಿದ್ದು, ಇದರಿಂದಾಗಿ ಅಪಾರ ಹಾನಿ ಅನುಭವಿಸಿರುವ ರೈತರಿಗೆ ಮತ್ತೆ ಅಲ್ಪ ಪ್ರಮಾಣದ ಪರಿಹಾರ ಸಿಗುವ ಸಾಧ್ಯತೆ ಇದೆ.

ಬೆಳೆ ನಷ್ಟ ವಿವರ

ಜಿಲ್ಲಾಡಳಿತದಿಂದ ಸಲ್ಲಿಕೆಯಾಗಿರುವ ಪ್ರಸ್ತಾವನೆಯಲ್ಲಿ 1.21 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿನ ಕೃಷಿ ಬೆಳೆಗಳು, 11,222 ಹೆಕ್ಟೇರ್ ಪ್ರದೇಶದ ತೋಟಗಾರಿಕೆ ಬೆಳೆಗಳು ಸಂಪೂರ್ಣವಾಗಿ ಹಾನಿಗೀಡಾಗಿದೆ. ಅದರಲ್ಲಿಯೂ ಮುಖ್ಯವಾಗಿ ರೈತರ ಆದಾಯದ ಮೂಲ, ಮುಂಗಾರಿನ ಪ್ರಮುಖ ವಾಣಿಜ್ಯ ಬೆಳೆಯಾದ ಹೆಸರು ಅತಿ ಹೆಚ್ಚು 96,043 ಹೆಕ್ಟೇರ್ ಪ್ರದೇಶದಲ್ಲಿ ಹಾಳಾಗಿದೆ. 20,912 ಹೆಕ್ಟೇರ್ ಮೆಕ್ಕೆಜೋಳ, 4,378 ಹೆಕ್ಟೇರ್‌ ಶೇಂಗಾ, 24.10 ಹೆಕ್ಟೇರ್ ಹತ್ತಿ ಬೆಳೆ ಹಾಳಾಗಿದೆ. ತೋಟಗಾರಿಕೆ ಬೆಳಗಳ ಪೈಕಿ 6,531 ಹೆಕ್ಟೇರ್ ಮಣಸಿನಕಾಯಿ, 4,447 ಹೆಕ್ಟೇರ್‌ ಈರುಳ್ಳಿ, 159 ಹೆಕ್ಟೇರ್ ಸೇವಂತಿ ಹೂವು, 71.72 ಹೆಕ್ಟೇರ್‌ನಲ್ಲಿ ಬೆಳೆದ ಹಣ್ಣು ಮತ್ತು ತರಕಾರಿ ಬೆಳೆಗಳು ಹಾನಿಗೀಡಾಗಿವೆ.

ಹೆಚ್ಚು ಮಳೆಯಾದರೆ ಹಾನಿ

ಜಿಲ್ಲೆಯಲ್ಲಿ 2.5 ಲಕ್ಷ ಹೆಕ್ಟೇರ್ ಅಧಿಕ ಕೃಷಿ ಯೋಗ್ಯ ಭೂಮಿ ಇದ್ದು, ಅದರಲ್ಲಿಯೂ ಅತಿ ಹೆಚ್ಚು ಭೂಮಿ ಕಪ್ಪು ಮಣ್ಣಿನಿಂದ ಕೂಡಿದೆ. ಈ ಭೂಮಿಗೆ ಕಡಿಮೆ ಮಳೆಯಾದರೆ ಸಾಕು, ಉತ್ತಮ ಬೆಳೆ ಬರುತ್ತವೆ. ಅತಿ ಹೆಚ್ಚು ಮಳೆಯಾದರೆ ರೈತರಿಗೆ ಹೆಚ್ಚಿನ ಹಾನಿ ಸಂಭವಿಸುತ್ತದೆ. ಅದರಲ್ಲಿಯೂ ಪ್ರಸಕ್ತ ಸಾಲಿನಲ್ಲಿ ಹೆಸರು ಬಿತ್ತನೆ ಮಾಡಿ ಅದನ್ನು ಹರಗಿ, ನಂತರ ಈರುಳ್ಳಿ ಬಿತ್ತನೆ ಮಾಡಿರುವ ಸಾವಿರಾರು ರೈತರೀಗ ಈರುಳ್ಳಿ ಬೆಳೆಯು ಕೊಳೆಯುತ್ತಿದ್ದು, ಹೆಚ್ಚಿನ ನಷ್ಟ ಅನುಭವಿಸುತ್ತಿದ್ದಾರೆ.

ಸಮಾಧಾನ: ಮುಂಗಾರು ಹಂಗಾಮಿನಲ್ಲಿ ಸುರಿದ ಭಾರೀ ಮಳೆಗೆ ಅನೇಕ ಬೆಳೆಗಳು ಜಲಾವೃತವಾಗಿ ಸಾಕಷ್ಟು ಹಾನಿ ಸಂಭವಿಸಿದೆ. ಕೃಷಿ ಇಲಾಖೆ ಸಮೀಕ್ಷೆ ಕೈಗೊಂಡು ವರದಿ ಸಲ್ಲಿಸಿರುವುದು ಸಮಾಧಾನ ತಂದಿದೆ. ಸರ್ಕಾರ ಕೂಡಲೇ ಪರಿಹಾರದ ಮೊತ್ತವನ್ನು ಬಿಡುಗಡೆ ಮಾಡಬೇಕು ಎಂದು ಸವಡಿ ಗ್ರಾಮದ ರೈತ ರಾಮನಗೌಡ ಅರಹುಣಸಿ ತಿಳಿಸಿದರು.

ವರದಿ ಸಲ್ಲಿಕೆ: ಜಿಲ್ಲೆಯಲ್ಲಿ ಮುಂಗಾರು ಮಳೆಯಿಂದ ಆಗಿರುವ ಹಾನಿಯ ಬಗ್ಗೆ ಕೃಷಿ ಮತ್ತು ತೋಟಗಾರಿಕೆ ಇಲಾಖೆ ಜಂಟಿಯಾಗಿ ಸಮೀಕ್ಷೆ ನಡೆಸಿ, ಬೆಳೆಹಾನಿ ಪ್ರದೇಶ ಮತ್ತು ಹಾನಿಯ ಅಂದಾಜು ವರದಿ ಸಿದ್ಧ ಮಾಡಿ ಜಿಲ್ಲಾಡಳಿತದ ಮೂಲಕ ವಿಪತ್ತು ನಿರ್ವಹಣೆ ಪ್ರಾಧಿಕಾರಕ್ಕೆ ಸಲ್ಲಿಸಲಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕರಾದ ತಾರಾಮಣಿ ಜೆ.ಎಚ್. ತಿಳಿಸಿದರು.