ಆನ್‌ಲೈನ್‌ನಲ್ಲಿ 1.33 ಕೋಟಿ ರು. ವಂಚನೆ: ಇಬ್ಬರ ಬಂಧನ, 13.95 ಲಕ್ಷ ರು. ವಶ

| Published : Aug 26 2024, 01:33 AM IST

ಸಾರಾಂಶ

ಬಂಧಿತರನ್ನು ಗುಜರಾತ್ ರಾಜ್ಯದ ಸೂರತ್ ನಿವಾಸಿ ನವಾದಿಯಾ ಮುಖೇಶ್ ಭಾಯಿ ಗಣೇಶ್‌ ಭಾಯಿ (44) ಮತ್ತು ರಾಜ್‌ಕೋಟ್ ನಿವಾಸಿ ಧರಮ್‌ಜೀತ್ ಕಮಲೇಶ್ ಚೌಹಾನ್ (28) ಎಂದು ಗುರುತಿಸಲಾಗಿದೆ.

ಕನ್ನಡಪ್ರಭ ವಾರ್ತೆ ಉಡುಪಿ

ಆನ್‌ಲೈನ್ ಟ್ರೇಡಿಂಗ್ ಮೂಲಕ ವಂಚನೆ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಉಡುಪಿ ಜಿಲ್ಲಾ ಸೆನ್ ಠಾಣಾ ಪೊಲೀಸರು ಬಂಧಿಸಿ 13.95 ಲಕ್ಷ ರು. ನಗದನ್ನು ವಶಪಡಿಸಿಕೊಂಡಿದ್ದಾರೆ.

ಬಂಧಿತರನ್ನು ಗುಜರಾತ್ ರಾಜ್ಯದ ಸೂರತ್ ನಿವಾಸಿ ನವಾದಿಯಾ ಮುಖೇಶ್ ಭಾಯಿ ಗಣೇಶ್‌ ಭಾಯಿ (44) ಮತ್ತು ರಾಜ್‌ಕೋಟ್ ನಿವಾಸಿ ಧರಮ್‌ಜೀತ್ ಕಮಲೇಶ್ ಚೌಹಾನ್ (28) ಎಂದು ಗುರುತಿಸಲಾಗಿದೆ.ಅರುಣ್ ಕುಮಾರ್ ಗೋವಿಂದ ಕರ್ನವರ್ ಎಂಬವರಿಗೆ ಜುಲೈ 29ರಂದು ಅಪರಿಚಿತರು, ತಾವು ಕಸ್ಟಮ್ಸ್‌ನಿಂದ ಕರೆ ಮಾಡುತ್ತಿರುವುದಾಗಿ ತಿಳಿಸಿ, ನಿಮಗೆ ಬಂದಿರುವ ಕೊರಿಯರ್‌ನಲ್ಲಿ 200 ಗ್ರಾಂ ಎಂಡಿಎಂಎ ಮಾದಕದ್ರವ್ಯ ಇದೆ ಎಂದು ಹೇಳಿದ್ದರು. ನಂತರ ಮೇಲಾಧಿಕಾರಿಯವರಿಗೆ ಹಾಟ್ಲೈನ್‌ನಲ್ಲಿ ಸಂಪರ್ಕ ಕಲ್ಪಿಸಿ ಆತ, ನಿಮ್ಮ ಆಧಾರ್ ಕಾರ್ಡ್, ವಿವಿಧ ಬ್ಯಾಂಕ್ ಖಾತೆಗಳಿಗೆ ಲಿಂಕ್ ಆಗಿದ್ದು, ಅದರಿಂದ ಭಯೋತ್ಪಾದಕರು ಸಿಮ್ ಖರೀದಿಸಲು ಬಳಸಿರುವುದಾಗಿ ಮತ್ತು ದೂರುದಾರರನ್ನು ವರ್ಚುವಲ್ ಆರೆಸ್ಟ್ ಮಾಡುವುದಾಗಿ, ಆ.9ರ ತನಕ ಅವರ ಮನೆಯ ರೂಮಿನಲ್ಲಿಯೇ ಇರುವಂತೆ, ಬೇರೆ ಯಾರೊಂದಿಗೂ ಸಂಪರ್ಕಿಸದಂತೆ ಸೂಚಿಸಿರುತ್ತಾರೆ.

ನಂತರ ಆರೋಪಿಗಳು ಹೆದರಿದ ದೂರುದಾರರಿಂದ ಪ್ರಕರಣವನ್ನು ಸರಿಪಡಿಸುವುದಾಗಿ ಹೇಳಿ ಆ.6ರಿಂದ 9ರ ತನಕ ಹಂತಹಂತವಾಗಿ 1,33,81,000 ರು.ಗಳನ್ನು ತಮ್ಮ ಖಾತೆಗೆ ವರ್ಗಾಯಿಸಿಕೊಂಡಿದ್ದಾರೆ.ಈ ಬಗ್ಗೆ ಅರುಣ್ ಕುಮಾರ್ ನೀಡಿದ ದೂರಿನಂತೆ ಉಡುಪಿ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತಕ್ಷಣ ಕಾರ್ಯಾಚರಣೆಗೆ ಇಳಿದ ಸೆನ್ ಪೊಲೀಸ್ ಠಾಣಾ ನಿರೀಕ್ಷಕ ರಾಮಚಂದ್ರ ನಾಯಕ್ ಅವರ ನೇತೃತ್ವದ ವಿಶೇಷ ತಂಡ ಆರೋಪಿಗಳನ್ನು ಗುಜರಾತ್‌ನಲ್ಲಿ ದಸ್ತಗಿರಿ ಮಾಡಿ ಅವರಿಂದ 5 ಮೊಬೈಲ್ ಫೋನ್‌ಗಳನ್ನು ಹಾಗೂ ಆರೋಪಿಗಳಿಂದ 13,95,000 ರು. ನಗದನ್ನು ಸ್ವಾಧೀನ ಪಡಿಸಿಕೊಂಡಿದ್ದಾರೆ.