ಖಾಸಗಿ ವಿವಿ ಮಾಲೀಕನ ಹೆಸರಿನಲ್ಲಿ 1.40 ಕೋಟಿ ರು. ಸುಲಿಗೆ ಮಾಡಿದ್ದ ‘ಬಾಸ್‌ ಸ್ಕ್ಯಾಮ್’ ಪ್ರಕರಣದ ನಾಲ್ವರು ವಂಚಕರನ್ನು ದಕ್ಷಿಣ ವಿಭಾಗದ ಸೈಬರ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಖಾಸಗಿ ವಿವಿ ಮಾಲೀಕನ ಹೆಸರಿನಲ್ಲಿ 1.40 ಕೋಟಿ ರು. ಸುಲಿಗೆ ಮಾಡಿದ್ದ ‘ಬಾಸ್‌ ಸ್ಕ್ಯಾಮ್’ ಪ್ರಕರಣದ ನಾಲ್ವರು ವಂಚಕರನ್ನು ದಕ್ಷಿಣ ವಿಭಾಗದ ಸೈಬರ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕೆ.ಆರ್‌.ಪುರದ ಅಣ್ಣಯ್ಯ, ಆಂಧ್ರದ ಅನಂತಪುರ ಮೂಲದ ಬುಸ್ಸಳ್ಳಿ ರವಿಕುಮಾರ್ ರೆಡ್ಡಿ, ಕಲುಬರಗಿ ಅಫಜಲಪುರದ ಅಂಬರಾಯ ಹಾಗೂ ತೆಲಂಗಾಣದ ಹೈದರಾಬಾದ್‌ನ ಸೈಯದ್ ವಜಿಹುದ್ದೀನ್ ಖಾದ್ರಿ ಬಂಧಿತರಾಗಿದ್ದು, ಈ ಕೃತ್ಯದ ಪ್ರಮುಖ ಆರೋಪಿ ಸನ್ನಿ ಅಲಿಯಾಸ್ ಡೇವಿಡ್ ಪತ್ತೆಗೆ ಕಾರ್ಯಾಚರಣೆ ನಡೆದಿದೆ. ಆರೋಪಿಗಳಿಂದ 8.50 ಲಕ್ಷ ರು. ಹಾಗೂ 4 ಮೊಬೈಲ್‌ಳನ್ನು ಜಪ್ತಿ ಮಾಡಲಾಗಿದೆ.

ಇತ್ತೀಚಿಗೆ ಡೀಮ್ಸ್-ಟು-ಬಿ ವಿವಿ ಅಧ್ಯಕ್ಷ ಡಾ.ಚೆನ್‌ರಾಜ್ ರಾಯಚಂದ್ ಅವರ ಭಾವಚಿತ್ರ ಮತ್ತು +91 8070049652 ಸಂಖ್ಯೆಯನ್ನು ಬಳಸಿ ನಕಲಿ ವಾಟ್ಸಸ್ ಆ್ಯಪ್‌ನಲ್ಲಿ ಪ್ರೊಫೈಲ್ ಸೃಷ್ಟಿಸಿ ಆರೋಪಿಗಳು ಹಣ ಸುಲಿಗೆ ಮಾಡಿದ್ದರು. ಈ ಬಗ್ಗೆ ದಕ್ಷಿಣ ವಿಭಾಗದ ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಯಿತು. ಬಳಿಕ ಸೈಬರ್ ಕಮಾಂಡರ್ ಹಾಗೂ ಡಿಜಿಪಿ ಪ್ರಣಣ್ ಮೊಹಂತಿ ಮಾರ್ಗದರ್ಶನದಲ್ಲಿ ಎಸಿಪಿ ನವೀನ್ ಕುಮಾರ್ ಹಾಗೂ ಇನ್ಸ್‌ಪೆಕ್ಟರ್ ಸಿದ್ದಪ್ಪ ಸಾರಥ್ಯದ ತಂಡವು, ತಾಂತ್ರಿಕ ಮಾಹಿತಿ ಆಧರಿಸಿ ನಾಲ್ವರು ಮೋಸಗಾರರನ್ನು ಬಂಧಿಸಿದ್ದಾರೆ.

ಹೇಗೆ ವಂಚನೆ?

ಡಾ.ಚೆನ್‌ರಾಜ್ ರಾಯಚಂದ್ ಅವರ ಭಾವಚಿತ್ರ ಹಾಗೂ ಮೊಬೈಲ್ ಸಂಖ್ಯೆಯನ್ನು ಅಕ್ರಮವಾಗಿ ಬಳಸಿ ವಾಟ್ಸಪ್‌ನಲ್ಲಿ ಖಾತೆ ತೆರೆದಿದ್ದರು. ಸೆ.8 ರಂದು ಅಧ್ಯಕ್ಷರ ಸೋಗಿನಲ್ಲಿ ಆ ವಿವಿಯ ಲೆಕ್ಕ ಅಧಿಕಾರಿ ವಿನಯ್‌ ಭೂಷಣ್ ಅವರಿಗೆ ವಿವಿಯ ಬ್ಯಾಂಕ್ ಖಾತೆಯಲ್ಲಿರುವ ಬಾಕಿ ಹಣ ಬಗ್ಗೆ ವಿಚಾರಿಸಿದ್ದರು. ಇದಾದ ಬಳಿಕ ಅದೇ ದಿನ ಬೆಳಗ್ಗೆ 11.34 ಗಂಟೆಗೆ ಮತ್ತೆ ಲೆಕ್ಕ ಅಧಿಕಾರಿಗೆ 1.40 ಕೋಟಿ ರು. ಹಣವನ್ನು ವರ್ಗಾಯಿಸುವಂತೆ ವಾಟ್ಸಪ್ ಮೂಲಕ ಸೂಚಿಸಿದ್ದ. ಈ ಸಂದೇಶ ನಂಬಿದ ವಿನಯ್‌, ತಮ್ಮ ಅಧ್ಯಕ್ಷರ ಹೆಸರಿನಲ್ಲಿ ಸೂಚಿಸಿದ್ದ ಬ್ಯಾಂಕ್‌ ಖಾತೆಗೆ ಹಣ ವರ್ಗಾಯಿಸಿದ್ದರು. ತರುವಾಯ ಈ ಹಣದ ಬಗ್ಗೆ ವಿವಿ ಅಧ್ಯಕ್ಷರಿಗೆ ವಿನಯ್ ಕರೆ ಮಾಡಿದಾಗ ವಂಚನೆ ಕೃತ್ಯ ಬೆಳಕಿಗೆ ಬಂದಿದೆ.

ವಿವಿಯ ಅಧಿಕಾರಿ ವಿನಯ್ ಅವರಿಗೆ ಜಿಪ್ ಫೈಲ್ ವೊಂದನ್ನು ಆರೋಪಿಗಳು ಕಳುಹಿಸಿದ್ದರು ಎಂದು ತನಿಖೆಯಿಂದ ತಿಳಿದು ಬಂದಿದೆ. ವಿವಿ ಸಿಬ್ಬಂದಿಯ ಗಮನಕ್ಕೆ ಬಾರದಂತೆ ಸಂಸ್ಥೆಯ ದತ್ತಾಂಶವನ್ನು ಡೌನ್ಲೋಡ್ ಮಾಡಿಕೊಂಡು, 15 ರಿಂದ 20 ದಿನಗಳ ಕಾಲ ಹಣಕಾಸು ವಹಿವಾಟುಗಳ ಮೇಲೆ ನಿಗಾ ಇಟ್ಟಿದ್ದರು. ನಂತರ ಅಧ್ಯಕ್ಷರ ಸೋಗಿನಲ್ಲಿ ಲೆಕ್ಕ ಅಧಿಕಾರಿಗೆ ಚಾಟ್ ಮಾಡಿ, ತಮ್ಮ ನಿಯಂತ್ರಣದಲ್ಲಿದ್ದ ಖಾತೆಗಳಿಗೆ ಹಣ ವರ್ಗಾಯಿಸಿಕೊಂಡರು. ನಕಲಿ ಖಾತೆಗಳ ಮೂಲಕ ಹಣ ವರ್ಗ:

ಈ ವಂಚನೆ ಜಾಲದ ಕಿಂಗ್‌ಪಿನ್ ಸನ್ನಿ ಡೇವಿಡ್ ಆಗಿದ್ದು, ಆತನೇ ವಿವಿ ಅಧ್ಯಕ್ಷರ ಹೆಸರಿನಲ್ಲಿ ವಾಟ್ಸಪ್ ಚಾಟಿಂಗ್ ಮಾಡಿ ಹಣ ದೋಚಿದ್ದಾನೆ. ಇನ್‌ಸ್ಟಾಗ್ರಾಂ ಮೂಲಕ ಅಣ್ಣಯ್ಯ, ಖಾದ್ರಿ, ಅಂಬರಾಯ ಹಾಗೂ ಸೈಯದ್ ನನ್ನು ವಂಚನೆ ಜಾಲಕ್ಕೆ ಸನ್ನಿ ಸೆಳೆದಿದ್ದಾನೆ. ಅಂತೆಯೇ ಸನ್ನಿ ಸೂಚನೆ ಮೇರೆಗೆ ತಮ್ಮ ಸ್ನೇಹಿತರು ಹಾಗೂ ಪರಿಚಿತರ ಹೆಸರಿನಲ್ಲಿ ಬ್ಯಾಂಕ್ ಖಾತೆಗಳನ್ನು ಅಣ್ಣಯ್ಯ ತೆರೆಸಿದ್ದ. ಬಳಿಕ ಆ ಖಾತೆಗಳ ಚೆಕ್ ಬುಕ್ ಹಾಗೂ ಎಟಿಎಂ ಕಾರ್ಡ್‌ಗಳನ್ನು ಸಂಗ್ರಹಿಸಿ ಸನ್ನಿಗೆ ಆತ ರವಾನಿಸಿದ್ದ. ಆ ಎಟಿಎಂ ಕಾರ್ಡ್‌ಗಳನ್ನು ಬಳಸಿ ಹೈದ್ರಾಬಾದ್‌ನಲ್ಲಿ ಇನ್ನುಳಿದ ಮೂವರು ಹಣ ಡ್ರಾ ಮಾಡಿದ್ದರು.

ಈ ವಂಚನೆ ಜಾಲದಲ್ಲಿ ವಿವಿಧ ರಾಜ್ಯಗಳಲ್ಲಿ 22 ವಂಚನೆ ಕೃತ್ಯಗಳು ಪತ್ತೆಯಾಗಿದ್ದು, ಆ ಕೃತ್ಯಗಳಿಗೆ 60 ಹೆಚ್ಚು ನಕಲಿ ಬ್ಯಾಂಕ್ ಖಾತೆಗಳನ್ನು ಬಳಸಿರುವುದು ತನಿಖೆಯಲ್ಲಿ ಪತ್ತೆಯಾಗಿದೆ.