ಸಾರಾಂಶ
ತಾಯಿಮಗು ಆಸ್ಪತ್ರೆ ಹೈಟೆಕ್ ಮಾಡಲು ಅಗತ್ಯ ಅನುದಾನ ನೀಡಿ ಎಲ್ಲ ಸೌಲಭ್ಯ ಕಲ್ಪಿಸಲಾಗುತ್ತಿದೆ ಎಂದು ಶಾಸಕ ಹಾಗೂ ಅರಣ್ಯ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ಹೇಳಿದರು.
ಕನ್ನಡಪ್ರಭ ವಾರ್ತೆ ಸಾಗರ
ತಾಯಿಮಗು ಆಸ್ಪತ್ರೆ ಹೈಟೆಕ್ ಮಾಡಲು ಅಗತ್ಯ ಅನುದಾನ ನೀಡಿ ಎಲ್ಲ ಸೌಲಭ್ಯ ಕಲ್ಪಿಸಲಾಗುತ್ತಿದೆ ಎಂದು ಶಾಸಕ ಹಾಗೂ ಅರಣ್ಯ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ಹೇಳಿದರು.ಪಟ್ಟಣದ ತಾಯಿಮಗು ಆಸ್ಪತ್ರೆಯಲ್ಲಿ ಬುಧವಾರ 18 ಲಕ್ಷ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಲಾದ ಲೇಬರ್ ವಾರ್ಡ್ ಮತ್ತು ಶಸ್ತ್ರಚಿಕಿತ್ಸಾ ಕೊಠಡಿಯನ್ನು ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ಆಸ್ಪತ್ರೆ ಅಭಿವೃದ್ಧಿಗಾಗಿ 1.45 ಕೋಟಿ ಅನುದಾನ ಬಿಡುಗಡೆಯಾಗಿದ್ದು, ಇದರಲ್ಲಿ ಆಸ್ಪತ್ರೆಗೆ ಸುಣ್ಣಬಣ್ಣ, ಸಣ್ಣಪುಟ್ಟ ರಿಪೇರಿ, ಶೌಚಾಲಯ, ಉದ್ಯಾನವನ ನಿರ್ಮಿಸಲು ಯೋಜನೆ ರೂಪಿಸಲಾಗಿದೆ ಎಂದರು. ಉಪವಿಭಾಗೀಯ ಆಸ್ಪತ್ರೆ ಮತ್ತು ತಾಯಿಮಗು ಆಸ್ಪತ್ರೆ ಎರಡೂ ಏಕಕಾಲದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. ಗುಣಮಟ್ಟದ ಆರೋಗ್ಯಸೇವೆ ಸಿಗುತ್ತದೆಂದು ಎರಡೂ ಆಸ್ಪತ್ರೆಗಳಿಗೆ ನಮ್ಮ ತಾಲೂಕು ಅಲ್ಲದೆ ಅಕ್ಕಪಕ್ಕದ ತಾಲೂಕಿನಿಂದ ರೋಗಿಗಳು ಬರುತ್ತಾರೆ. ಅವರ ನಿರೀಕ್ಷೆಗೆ ತಕ್ಕಂತೆ ವೈದ್ಯಸಿಬ್ಬಂದಿಗಳು ಉತ್ತಮ ಆರೋಗ್ಯ ಸೇವೆ ನೀಡುತ್ತಿದ್ದಾರೆ ಎಂದು ಹೇಳಿದರು.ಶಿಕ್ಷಣ ಮತ್ತು ಆರೋಗ್ಯಕ್ಕೆ ಹೆಚ್ಚಿನ ಒತ್ತು ನೀಡಲಾಗಿದ್ದು, ರಿಪ್ಪನಪೇಟೆಯಲ್ಲಿ ನರ್ಸ್ ಕೊರತೆ ಮನಗಂಡು ಗೌರವಧನವನ್ನು ವೈಯಕ್ತಿಕವಾಗಿ ನೀಡಿ ಓರ್ವ ನರ್ಸ್ ನೇಮಕ ಮಾಡಲಾಗಿದೆ. ಸಾರ್ವಜನಿಕರು ವೈದ್ಯಸಿಬ್ಬಂದಿಗಳ ಜತೆ ಸೌಜನ್ಯದಿಂದ ನಡೆದುಕೊಳ್ಳಬೇಕು. ಸಣ್ಣಪುಟ್ಟ ಸಮಸ್ಯೆಗಳಿದ್ದಾಗ ನನ್ನ ಅಥವಾ ಆರೋಗ್ಯರಕ್ಷಾ ಸಮಿತಿ ಗಮನಕ್ಕೆ ತನ್ನಿ ಎಂದು ತಿಳಿಸಿದರು.ವೈದ್ಯರು ತಪ್ಪು ಮಾಡಿದರೆ ಅವರನ್ನು ಅಮಾನತ್ತುಗೊಳಿಸುವುದು, ಬೇರೆ ಕಡೆ ವರ್ಗಾವಣೆ ಮಾಡಲು ಅವಕಾಶ ಇರುತ್ತದೆ. ಆಸ್ಪತ್ರೆ ಎದುರು ಜಾತಿಧರ್ಮವನ್ನು ಮುಂದಿಟ್ಟುಕೊಂಡು ಪ್ರತಿಭಟನೆ ನಡೆಸುವುದು, ಗೊಂದಲ ಸೃಷ್ಟಿ ಮಾಡುವುದು ಸರಿಯಲ್ಲ. ವೈದ್ಯರು ಬೇರೆ ಕಡೆ ಹೋದರೆ ಬೇರೆ ವೈದ್ಯರನ್ನು ಕರೆತರುವುದು ಕಷ್ಟವಾಗುತ್ತದೆ. ಇದನ್ನು ಸಾರ್ವಜನಿಕರು ಅರ್ಥ ಮಾಡಿಕೊಳ್ಳಬೇಕು. ಉತ್ತಮ ಆರೋಗ್ಯ ಸೇವೆ ಪಡೆಯಿರಿ. ಅದೇ ರೀತಿ ವೈದ್ಯರನ್ನು ಗೌರವದಿಂದ ನೋಡಿ ಎಂದು ಸಲಹೆ ನೀಡಿದರು. ಸಿವಿಲ್ ಸರ್ಜಜ್ ಡಾ. ಕೆ. ಪರಪ್ಪ, ಡಾ. ಬಿ.ಜಿ. ಸಂಗಮ್, ಪೌರಾಯುಕ್ತ ಎಚ್.ಕೆ. ನಾಗಪ್ಪ, ಪರಿಸರ ಅಭಿಯಂತರ ಮದನ್, ನಗರಸಭೆ ಸದಸ್ಯರಾದ ಗಣಪತಿ ಮಂಡಗಳಲೆ, ಮಧುಮಾಲತಿ, ಲಲಿತಮ್ಮ, ಎಲ್. ಚಂದ್ರಪ್ಪ, ಸೈಯದ್ ಜಾಕೀರ್, ಪ್ರಮುಖರಾದ ಟಿ.ಪಿ. ರಮೇಶ್, ಅಶೋಕ ಬೇಳೂರು, ಸುರೇಶಬಾಬು, ಕೆ. ಸಿದ್ದಪ್ಪ, ಡಿ. ದಿನೇಶ್, ಈಳಿ ಶ್ರೀಧರ್, ಕಲಸೆ ಚಂದ್ರಪ್ಪ, ಮನೋಜ್ ಕುಗ್ವೆ ಇನ್ನಿತರರು ಹಾಜರಿದ್ದರು.