ಕೊಡಗಿನಲ್ಲಿ ಕಳೆದ ಐದು ವರ್ಷದಲ್ಲಿ 1,462 ಮಂದಿ ಆತ್ಮಹತ್ಯೆ!

| Published : Oct 31 2025, 03:00 AM IST

ಸಾರಾಂಶ

ಪುಟ್ಟ ಜಿಲ್ಲೆ ಕೊಡಗಿನಲ್ಲಿ ಆತ್ಮಹತ್ಯೆಯಿಂದ ಮೃತಪಡುವವರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಹೆಚ್ಚಾಗುತ್ತಿದೆ.

ವಿಘ್ನೇಶ್ ಎಂ. ಭೂತನಕಾಡು

ಕನ್ನಡಪ್ರಭ ವಾರ್ತೆ ಮಡಿಕೇರಿ

ಪುಟ್ಟ ಜಿಲ್ಲೆ ಕೊಡಗಿನಲ್ಲೂ ಕೂಡ ಆತ್ಮಹತ್ಯೆಯಿಂದ ಮೃತಪಡುವವರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಹೆಚ್ಚಾಗುತ್ತಿದೆ. ಕಳೆದ ಐದು ವರ್ಷಗಳಲ್ಲಿ ಕೊಡಗು ಜಿಲ್ಲೆಯಲ್ಲಿ ಒಟ್ಟು 1,462 ಮಂದಿ ಆತ್ಮಹತ್ಯೆ ಪ್ರಕರಣಗಳು ಕಂಡುಬಂದಿದೆ. ಕೌಟುಂಬಿಕ ಸಮಸ್ಯೆಗಳು ಮತ್ತು ಮಾದಕ ವ್ಯಸನದಲ್ಲಿ ಬಹುತೇಕ ಆತ್ಮಹತ್ಯೆ ಪ್ರಕರಣಗಳು ನಡೆದಿವೆ.

ಜಿಲ್ಲೆಯಲ್ಲಿ 2020 ರಿಂದ 2024 ರವರೆಗೆ ಐದು ವರ್ಷಗಳ ಅವಧಿಯಲ್ಲಿ ಆತ್ಮಹತ್ಯೆಯ ಪ್ರಮಾಣವು ನಿರಂತರವಾಗಿ ಏರುತ್ತಿರುವ ಆತಂಕಕಾರಿ ಮಟ್ಟದಲ್ಲೇ ಉಳಿದಿದೆ. 1,107 ಪುರುಷರು ಮತ್ತು 355 ಮಹಿಳೆಯರು ಇದ್ದಾರೆ. ಹೆಚ್ಚಾಗಿ 30 ರಿಂದ 45 ವರ್ಷದವರೇ ಆತ್ಮಹತ್ಯೆಗೆ ಬಲಿಯಾಗಿದ್ದಾರೆ.

ಕಳೆದ ಐದು ವರ್ಷಗಳ ರಾಷ್ಟ್ರೀಯ ಅಪರಾಧ ಬ್ಯೂರೋ ದಾಖಲೆಗಳ ಆಧರಿಸಿ ಮೈಸೂರು ವಿಶ್ವವಿದ್ಯಾಲಯದ ಸಾಮಾಜಿಕ ಒಳಗೊಳ್ಳುವಿಕೆ ಕೇಂದ್ರದ ಸಹ ಪ್ರಾಧ್ಯಾಪಕ ಡಾ. ಡಿ.ಸಿ. ನಂಜುಂಡ ಮತ್ತು ಮೈಸೂರಿನ ಮಹಾರಾಜ ಕಾಲೇಜಿನ ಮನಶಾಸ್ತ್ರ ಪ್ರಾಧ್ಯಾಪಕ ಡಾ. ಲ್ಯಾನ್ಸಿ ಡಿ "ಸೋಜಾ ಅವರ ನೇತೃತ್ವದ ತಂಡ ಇತ್ತೀಚಿಗೆ ನಡೆಸಿದ ಜಂಟಿ ಅಧ್ಯಯನದಿಂದ ಈ ಕಳವಳಕಾರಿ ಚಿತ್ರಣ ಕಂಡು ಬಂದಿದೆ. 2020 ವರ್ಷದಲ್ಲಿ ಒಟ್ಟು 273 ಆತ್ಮಹತ್ಯೆಗಳ ಪ್ರಕರಣಗಳು ಕೊಡಗಿನಲ್ಲಿ ದಾಖಲಾಗಿದ್ದು, ಅದರಲ್ಲಿ 202 ಪುರುಷರು ಮತ್ತು 71 ಮಹಿಳೆಯರು ಸೇರಿದ್ದಾರೆ. ಕೌಟುಂಬಿಕ ಸಮಸ್ಯೆಯಿಂದ 88, ಅನಾರೋಗ್ಯ ಕಾರಣದಿಂದ 73 ಮಾದಕವಸ್ತು ದುರ್ಬಳಕೆಯಿಂದ 62 ಮಂದಿ ಮತ್ತು ವಿವಾಹ ಸಂಬಂಧಿತ ಕಾರಣದಿಂದ 10 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 2021ವರ್ಷದಲ್ಲಿ ಆತ್ಮಹತ್ಯೆಗಳ ಸಂಖ್ಯೆ 283 ಕ್ಕೆ ಏರಿಕೆಯಾಗಿದ್ದು ಇವರಲ್ಲಿ 221, ಪುರುಷರು ಮತ್ತು 62 ಮಹಿಳೆಯರು ಇದ್ದಾರೆ. ಈ ವರ್ಷದಲ್ಲಿ ಅನಾರೋಗ್ಯಕ್ಕೆ ಸಂಬಂಧಿಸಿದ 103 ಆತ್ಮಹತ್ಯೆಗಳು ನಡೆದಿದ್ದು ಇದು ಭಾರೀ ಪ್ರಮಾಣದ ಏರಿಕೆ ಎನ್ನಬಹುದು. ಅಲ್ಲದೆ ಕುಟುಂಬ ಸಮಸ್ಯೆಗಳಿಂದ 14 ಮಂದಿ ಮಾದಕವಸ್ತು ದುರ್ಬಳಕೆಯಿಂದ 77 ಆತ್ಮಹತ್ಯೆ ಪ್ರಕರಣಗಳು ವರದಿಯಾಗಿವೆ ಎನ್ನುತ್ತಾರೆ ಪ್ರೊ. ಲ್ಯಾನ್ಸಿ ಡಿ "ಸೋಜಾ.2022 ವರ್ಷದಲ್ಲಿ ಕೊಡಗು ಜಿಲ್ಲೆಯು 331 ಆತ್ಮಹತ್ಯೆಗಳೊಂದಿಗೆ ಐದು ವರ್ಷದ ಅವಧಿಯಲ್ಲೇ ಅತಿ ಹೆಚ್ಚು ಪ್ರಕರಣಗಳು ದಾಖಲಾಗಿದೆ. ಇವರಲ್ಲಿ 244, ಪುರುಷರು ಮತ್ತು 87 ಮಹಿಳೆಯರು ಇದ್ದಾರೆ. ಅನಾರೋಗ್ಯದಿಂದ 95 ಮಂದಿ, ಮಾದಕವಸ್ತುಗಳ ದುರ್ಬಳಕೆಯಿಂದ 60 ಮಂದಿ, ಕುಟುಂಬ ಸಮಸ್ಯೆಗಳ ಕಾರಣದಿಂದ 71 ಮಂದಿ, ವೈವಾಹಿಕ ಸಮಸ್ಯೆಗಳಿಂದ 26 ಮಂದಿ, ಆಸ್ತಿ ವಿವಾದದಿಂದ 10 ಮಂದಿ ಮತ್ತು ಇತರೆ ಕಾರಣಗಳಿದ 31 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 2023 ವರ್ಷದಲ್ಲಿ ಕೊಡಗಿನಲ್ಲಿ ಒಟ್ಟು 292 ಆತ್ಮಹತ್ಯೆಗಳು ವರದಿಯಾಗಿದ್ದು ಇವರಲ್ಲಿ ಪುರುಷರು 229, ಮಹಿಳೆಯರು 63 ಸೇರಿದ್ದಾರೆ. ಕುಟುಂಬ ಸಮಸ್ಯೆಗಳ ಕಾರಣದಿಂದ 171 ಮಂದಿ, ಅನಾರೋಗ್ಯದಿಂದ 111 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬ್ಯಾಂಕ್ ಸಾಲ ಸಂಬಂಧಿತ 18 ಮಂದಿ ಆತ್ಮಹತ್ಯೆ ಮಾಡಿಕೊಂಡಿರುವುದು ಕೂಡ ಬೆಳಕಿಗೆ ಬಂದಿದೆ. 2024 ವರ್ಷದಲ್ಲಿ ಕೊಡಗಿನಲ್ಲಿ ಒಟ್ಟು 283 ಆತ್ಮಹತ್ಯೆಗಳು ಆಗಿದ್ದು, ಇವರಲ್ಲಿ 211 ಪುರುಷರು ಮತ್ತು 72 ಮಹಿಳೆಯರು ಸೇರಿದ್ದಾರೆ. ಕುಟುಂಬ ಸಮಸ್ಯೆಗಳಿಂದ 134 ಮಂದಿ ಮತ್ತು ಅನಾರೋಗ್ಯ ಕಾರಣದಿಂದ 71 ಮಂದಿ, ಮಾದಕವಸ್ತು ಬಳಕೆಯಿಂದ 54 ಮಂದಿ ಮತ್ತು ಇತರೆ ಕಾರಣಗಳಿಂದ 18 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೌಟುಂಬಿಕ ಸಮಸ್ಯೆ ಗಳಿಂದ ಮಾನಸಿಕ ವ್ಯಥೆ ಹೆಚ್ಚಾಗುತ್ತಿದ್ದು ಇದು ಹೆಚ್ಚಿನವರಲ್ಲಿ ಮಾರಕವಾಗಿರುವ ಸ್ಥಿತಿಯನ್ನು ತೋರಿಸುತ್ತವೆ. ದೀರ್ಘಕಾಲದ ಮಾನಸಿಕ ಒತ್ತಡ ಆತ್ಮಹತ್ಯೆಯಲ್ಲಿ ಅಂತ್ಯವಾಗುತ್ತಿದೆ. ಕುಟುಂಬದ ಒತ್ತಡ, ಆರೋಗ್ಯ ಸಮಸ್ಯೆಗಳು, ಆಸ್ತಿ ಕಲಹ ಹಾಗೂ ಆರ್ಥಿಕ ಸಮಸ್ಯೆಗಳು ಪರಸ್ಪರ ಸೇರಿಕೊಂಡು ಬದುಕಿನ ಮೇಲೆ ದುಷ್ಪರಿಣಾಮ ಬೀರುತ್ತಿವೆ. ಮುಖ್ಯವಾಗಿ ಕೊಡಗಿನಲ್ಲಿ ಮಾದಕ ವಸ್ತುಗಳ ಬಳಕೆ ಹೆಚ್ಚಾಗುತ್ತಿರುವುದು ಆತಂಕಕಾರಿ ಎನ್ನುತ್ತಾರೆ ಡಾ. ಡಿ.ಸಿ. ನಂಜುಂಡ.ಕಳೆದ ಐದು ವರ್ಷಗಳಲ್ಲಿ ಕೊಡಗು ಜಿಲ್ಲೆಯಲ್ಲಿ ಕೌಟುಂಬಿಕ ಸಮಸ್ಯೆಗಳು ಮತ್ತು ಮಾದಕ ವ್ಯಸನವು ಆತ್ಮಹತ್ಯೆಗಳ ಪ್ರಮುಖ ಕಾರಣಗಳಾಗಿವೆ. ಯುವ ಜನರಲ್ಲಿ ಡ್ರಗ್ಸ್ ಬಳಕೆಯ ಏರಿಕೆ ಕಂಡುಬಂದಿದೆ. ಜಿಲ್ಲೆಯಲ್ಲಿ ಮಾನಸಿಕ ಆರೋಗ್ಯ ತಜ್ಞರ ಕೊರತೆ ತೀವ್ರವಾಗಿದ್ದು, ಇದರಿಂದ ಪರಿಸ್ಥಿತಿ ಮತ್ತಷ್ಟು ಗಂಭೀರವಾಗಿದೆ. ಆದ್ದರಿಂದ ಆರೋಗ್ಯ ಕೇಂದ್ರಗಳು ಮತ್ತು ಸ್ವಯಂಸೇವಾ ಸಂಸ್ಥೆಗಳು ಜಾಗೃತಿ ಹಾಗೂ ಸಮಾಲೋಚನಾ ಕಾರ್ಯಕ್ರಮಗಳನ್ನು ಬಲಪಡಿಸಬೇಕು. ಶಾಲಾ ಹಾಗೂ ಕಾಲೇಜು ಮಟ್ಟದಲ್ಲಿ ಮಾದಕ ವ್ಯಸನ ಮತ್ತು ಮಾನಸಿಕ ಆರೋಗ್ಯ ಜಾಗೃತಿ ಅಗತ್ಯವಾಗಿದೆ. -ಡಾ. ಡಿ.ಸಿ. ನಂಜುಂಡ, ಸಹ ಪ್ರಾಧ್ಯಾಪಕ ಮೈಸೂರು ವಿಶ್ವವಿದ್ಯಾಲಯದ ಸಾಮಾಜಿಕ ಒಳಗೊಳ್ಳುವಿಕೆ ಕೇಂದ್ರ