ತುಂಗಭದ್ರಾ ಜಲಾಶಯದಿಂದ ನದಿಗೆ 1,47 ಲಕ್ಷ ಕ್ಯುಸೆಕ್‌ ನೀರು

| Published : Jul 29 2024, 12:54 AM IST

ತುಂಗಭದ್ರಾ ಜಲಾಶಯದಿಂದ ನದಿಗೆ 1,47 ಲಕ್ಷ ಕ್ಯುಸೆಕ್‌ ನೀರು
Share this Article
  • FB
  • TW
  • Linkdin
  • Email

ಸಾರಾಂಶ

ಭಾನುವಾರ ತುಂಗಭದ್ರಾ ಜಲಾಶಯದ ಎಲ್ಲ 33 ಗೇಟುಗಳಿಂದ ನದಿಗೆ 1,47 ಲಕ್ಷ ಕ್ಯುಸೆಕ್‌ ನೀರು ಹರಿಸಲಾಗಿದೆ.

ಮುಂದುವರಿದ ಪ್ರವಾಹ ಪರಿಸ್ಥಿತಿ । ಸತತ 2ನೇ ದಿನವೂ ಜಲಾಶಯದ ಎಲ್ಲ ಗೇಟುಗಳಿಂದ ನೀರು ಬಿಡುಗಡೆ

ಕನ್ನಡಪ್ರಭ ವಾರ್ತೆ ಮುನಿರಾಬಾದ್

ಭಾನುವಾರ ತುಂಗಭದ್ರಾ ಜಲಾಶಯದ ಎಲ್ಲ 33 ಗೇಟುಗಳಿಂದ ನದಿಗೆ 1,47 ಲಕ್ಷ ಕ್ಯುಸೆಕ್‌ ನೀರು ಹರಿಸಲಾಗಿದೆ. ಜಲಾಶಯದ 33 ಗೇಟುಗಳ ಪೈಕಿ 23 ಗೇಟುಗಳನ್ನು 4 ಅಡಿ ಎತ್ತರಕ್ಕೆ ಹಾಗೂ 10 ಗೇಟುಗಳನ್ನು 1 ಅಡಿ ಎತ್ತರಕ್ಕೆ ಎತ್ತಿ ನದಿಗೆ ನೀರನ್ನು ಹರಿಸಲಾಗುತ್ತಿದೆ. ಸತತ 2ನೇ ದಿನವೂ ಜಲಾಶಯದ ಎಲ್ಲ ಗೇಟುಗಳಿಂದ ನೀರನ್ನು ಹರಿಸಲಾಗುತ್ತಿದೆ.

ಜಲಾಶಯಕ್ಕೆ ಹೆಚ್ಚಾಗಲಿರುವ ಒಳಹರಿವು:

ಜಲಾಶಯದ ಒಳಹರಿವು 1,40 ಲಕ್ಷ ಕ್ಯುಸೆಕ್‌ಗಳಿದ್ದು, ಭಾನುವಾರ ರಾತ್ರಿಯ ವೇಳೆಗೆ ಹಾಗೂ ಸೋಮವಾರ ತುಂಗಭದ್ರಾ ಜಲಾಶಯಕ್ಕೆ ಇನ್ನೂ ಅಧಿಕ ಪ್ರಮಾಣದಲ್ಲಿ ಪ್ರಮಾಣ ನೀರಿನ ಒಳಹರಿವು ಬರಲಿದೆ ಎಂದು ಹೈದ್ರಾಬಾದನಲ್ಲಿರುವ ಕೇಂದ್ರ ಜಲ ಆಯೋಗವು ಎಚ್ಚರಿಕೆ ನೀಡಿದೆ.

ಸತತ 2ನೇ ದಿನವೂ ಸ್ಮಾರಕಗಳ ಮುಳುಗಡೆ:

ಪ್ರವಾಹದ ಪರಿಸ್ಥಿತಿ ಮುಂದುವರಿದ ಹಿನ್ನೆಲೆ ಸತತ 2ನೇ ದಿನವು ಹುಲಿಗೆಮ್ಮ ದೇವಸ್ಥಾನದ ಸ್ನಾನಘಟ್ಟವು ಜಲಾವೃತಗೊಂಡಿತ್ತು. ಶಿವಪುರ ಗ್ರಾಮದ ಮಾರ್ಕೆಂಡೇಶ್ವರ ದೇವಸ್ಥಾನವು ಜಲಾವೃತಗೊಂಡಿದೆ. ಈ ಸ್ಥಿತಿ ಇನ್ನೂ 3-4 ದಿನ ಮುಂದುವರಿಯುವ ಸಾಧ್ಯತೆ ಇದೆ.

ಮುನಿರಾಬಾದಿಗೆ ಲಗ್ಗೆ ಇಟ್ಟ 50 ಸಾವಿರ ಪ್ರವಾಸಿಗರು:

ಭಾನುವಾರ ಬೆಳಗ್ಗೆಯಿಂದ ತುಂಬಿದ ತುಂಗಭದ್ರಾ ಜಲಾಶಯವನ್ನು ನೋಡಿ ಆನಂದಿಸಲು ಮುನಿರಾಬಾದಿಗೆ 50 ಸಾವಿರಕ್ಕೂ ಅಧಿಕ ಜನ ಪ್ರವಾಸಿಗರು ಆಗಮಿಸಿದ್ದಾರೆ. ಕಿಲೋಮೀಟರ್‌ಗಟ್ಟಲೇ ರಸ್ತೆಯುದ್ದಕ್ಕೂ ಕಾರು ಹಾಗೂ ದ್ವಿಚಕ್ರವಾಹನಗಳನ್ನು ನಿಲ್ಲಿಸಿರುವ ದೃಶ್ಯ ಕಂಡು ಬಂತು. ಸುಮಾರು 3000 ಕಾರು ಹಾಗೂ 5000 ದ್ವಿಚಕ್ರ ವಾಹನಗಳಲ್ಲಿ ಪ್ರವಾಸಿಗರು ಕೊಪ್ಪಳ, ವಿಜಯನಗರ, ಬಳ್ಳಾರಿ, ಗದಗ ಜಿಲ್ಲೆಗಳಿಂದ ಜಲಾಶಯ ವೀಕ್ಷಿಸಲು ಮುನಿರಾಬಾದಿಗೆ ಆಗಮಿಸಿದ್ದರು.

ಮುಕ್ತ ಪ್ರವಾಸಿಗರ ವಲಯ:

ತುಂಗಭದ್ರಾ ಜಲಾಶಯವನ್ನು ಪ್ರವಾಸಿಗರು ಎರಡು ಕಡೆಯಿಂದ ವೀಕ್ಷಿಸಬಹುದು. ಒಂದು ಜಲಾಶಯದ ಬಲಭಾಗ ಹಾಗೂ ಇನ್ನೊಂದು ಮುನಿರಾಬಾದನಲ್ಲಿರುವ ಜಲಾಶಯದ ಎಡಭಾಗ, ಮುನಿರಾಬಾದ ಭಾಗದಲ್ಲಿ ಜಲಾಶಯ ವೀಕ್ಷಣೆ ಮಾಡಲು ಬಂದ ಪ್ರವಾಸಿಗರಿಗೆ ಯಾವುದೇ ಪ್ರವೇಶ ಶುಲ್ಕ ಇರುವುದಿಲ್ಲ. ಪ್ರವೇಶ ಉಚಿತ. ವಾಹನದ ನಿಲುಗಡೆ ಸಹ ಉಚಿತ.

ಜಲಾಶಯದ ಬಲಭಾಗವು ತುಂಗಭದ್ರಾ ಮಂಡಳಿಯ ಅಧೀನದಲ್ಲಿದ್ದು ಅಲ್ಲಿ ಪ್ರವೇಶ ಶುಲ್ಕ, ವಾಹನ ಶುಲ್ಕ ಇದೆ, ಮೀನು ಸಂಗ್ರಾಲಯ ವೀಕ್ಷಣೆಗೆ, ನೃತ್ಯ ಕಾರಂಜಿ ವೀಕ್ಷಣೆಗೆ, ಬೋಟಿಂಗ್ ಮಾಡಲು ಪ್ರತ್ಯೇಕ ಶುಲ್ಕ ವಿಧಿಸಲಾಗುತ್ತಿದೆ. ಇದರಿಂದ ತುಂಗಭದ್ರಾ ಮಂಡಳಿಗೆ ವರ್ಷಕ್ಕೆ ₹2 ಕೋಟಿಗಿಂತ ಅಧಿಕ ಅದಾಯ ಬರುತ್ತಿದೆ. ಆದರೆ ಮುನಿರಾಬಾದಿನಲ್ಲಿ ನೀರಾವರಿ ಇಲಾಖೆಯ ಸುಪರ್ದಿಯಲ್ಲಿರುವ ಜಲಾಶಯಕ್ಕೆ ಒಂದು ರುಪಾಯಿ ಕೂಡಾ ಆದಾಯ ಬರುವುದಿಲ್ಲ. ವಿಪರ್ಯಾಸವೆಂದರೆ ಟಿಬಿ ಡ್ಯಾಂಕ್ಕಿಂತ ಮುನಿರಾಬಾದ್‌ನಲ್ಲಿ ಜಲಾಶಯದ ದೃಶ್ಯವನ್ನು ಚೆನ್ನಾಗಿ ವೀಕ್ಷಿಸಬಹುದು. ನೀರಾವರಿ ಇಲಾಖೆಯ ಅಧಿಕಾರಿಗಳು ಜಲಾಶಯ ವೀಕ್ಷಣೆ ಮಾಡುವ ಪ್ರವಾಸಿಗರಿಂದ ಶುಲ್ಕ ವಸೂಲು ಮಾಡಿದರೆ ನೀರಾವರಿ ಇಲಾಖೆಗೆ ಕೋಟ್ಯಂತರ ರುಪಾಯಿ ಆದಾಯ ಬರುತ್ತದೆ.