ಸಾರಾಂಶ
- ಬಿಜೆಪಿ ಸದಸ್ಯತ್ವ ಅಭಿಯಾನ ಅಂಗವಾಗಿ ಜಿಲ್ಲಾಮಟ್ಟದ ಕಾರ್ಯಾಗಾರ ಉದ್ಘಾಟಿಸಿ ನಂದೀಶ ರೆಡ್ಡಿ ಹೇಳಿಕೆ - - -
ಕನ್ನಡಪ್ರಭ ವಾರ್ತೆ, ದಾವಣಗೆರೆ ರಾಜ್ಯದಲ್ಲಿ ಕನಿಷ್ಠ 1.5 ಕೋಟಿ ಸದಸ್ಯತ್ವ ನೋಂದಣಿ ಗುರಿಯೊಂದಿಗೆ ಮಂಡಲ, ತಾಲೂಕು, ಜಿಲ್ಲಾ ಮಟ್ಟದಲ್ಲಿ ಬಿಜೆಪಿ ಸದಸ್ಯತ್ವ ಅಭಿಯಾನ ಕೈಗೊಳ್ಳಲಾಗಿದೆ. ನಮ್ಮೆಲ್ಲಾ ಮುಖಂಡರು, ಪದಾಧಿಕಾರಿಗಳು, ಕಾರ್ಯಕರ್ತರು ಅಭಿಯಾನ ಯಶಸ್ವಿಗೊಳಿಸಬೇಕು ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ, ಸದಸ್ಯತ್ವ ಅಭಿಯಾನ ಸಂಚಾಲಕ ನಂದೀಶ ರೆಡ್ಡಿ ಹೇಳಿದರು.ನಗರದ ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ಮಂಗಳವಾರ ಬಿಜೆಪಿ ಸದಸ್ಯತ್ವ ಅಭಿಯಾನದ ಜಿಲ್ಲಾಮಟ್ಟದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯಮಟ್ಟದಲ್ಲೂ ಆರಂಭವಾದ ಸದಸ್ಯತ್ವ ಅಭಿಯಾನವನ್ನು 2024ರಿಂದ 2030ರವರೆಗೆ ನಿರಂತರ ನಡೆಸಲಾಗುತ್ತಿದೆ ಎಂದರು.
ವಿಶ್ವದ ಏಕೈಕ ಪಕ್ಷ:ಬಿಜೆಪಿ ಸದಸ್ಯತ್ವ ಅಭಿಯಾನವನ್ನು 2011ರಿಂದ 2013ರವರೆಗೆ ಚರ್ಚಿಸಿ, 2014ರಲ್ಲಿ ಮೊದಲ ಸಲ ಸದಸ್ಯತ್ವ ಅಭಿಯಾನ ಕೈಗೊಳ್ಳಲಾಯಿತು. ರಾಜ್ಯದಲ್ಲಿ 74.88 ಲಕ್ಷ ಜನರ ಸದಸ್ಯತ್ವ ಮಾಡಿಸಿದ್ದು, 2019ರಲ್ಲಿ 1.1 ಕೋಟಿ ಜನರಿಗೆ ಸದಸ್ಯತ್ವ ಮಾಡಲಾಗಿದೆ. 11 ಕೋಟಿ ಸದಸ್ಯರನ್ನು ಹೊಂದಿರುವ ವಿಶ್ವದ ಏಕೈಕ, ಅತಿ ದೊಡ್ಡ ಪಕ್ಷವೆಂದರೆ ಅದು ಬಿಜೆಪಿ ಎಂದರು.
ಸದ್ಯತ್ವ ಅಭಿಯಾನದ ಭಾಗವಾಗಿ ಆ.28, 29 ಮತ್ತು 30ರಂದು ದಾವಣಗೆರೆ ಜಿಲ್ಲೆಯ 7 ವಿಧಾನಸಭಾ ಕ್ಷೇತ್ರಗಳ ಮಂಡಲವಾರು ಸಭೆ, ಅಭಿಯಾನ ನಡೆಸಲಿದ್ದೇವೆ. ಆ.31ರಂದು ರಾಜ್ಯದ 58,800 ಬೂತ್‌ಗಳಲ್ಲಿ ಸಭೆ, ಅಭಿಯಾನ ನಡೆಯಲಿದೆ. ಈ ಸಲ ಅಭಿಯಾನದಲ್ಲಿ 1.5 ಕೋಟಿ ಸದಸ್ಯತ್ವದ ಗುರಿ ಹೊಂದಿದ್ದೇವೆ. ಈ ಗುರಿ ಸಾಧಿಸುವ ಸಂಪೂರ್ಣ ವಿಶ್ವಾಸವಿದೆ ಎಂದು ಹೇಳಿದರು.ಪಕ್ಷದ ಜಿಲ್ಲಾಧ್ಯಕ್ಷ ಎನ್.ರಾಜಶೇಖರ ನಾಗಪ್ಪ ಅಧ್ಯಕ್ಷತೆ ವಹಿಸಿದ್ದರು. ಉಪ ಮೇಯರ್ ಯಶೋಧಾ ಯೋಗೇಶ, ವಿಪಕ್ಷ ನಾಯಕ ಕೆ.ಪ್ರಸನ್ನಕುಮಾರ, ಮಾಜಿ ಮೇಯರ್ ಬಿ.ಜಿ.ಅಜಯಕುಮಾರ, ಮಾಡಾಳ್ ಮಲ್ಲಿಕಾರ್ಜುನ, ಲೋಕಿಕೆರೆ ನಾಗರಾಜ, ಬಿ.ಎಂ. ಸತೀಶ ಕೊಳೇನಹಳ್ಳಿ, ಐರಣಿ ಕುಮಾರ್, ಧನಂಜಯ ಕಡ್ಲೇಬಾಳು. ಕೊಟ್ರೇಶ, ಕಿಶೋರಕುಮಾರ ಇತರರು ಇದ್ದರು.
- - -ಬಾಕ್ಸ್ * ವಿಶ್ವದ ಅತಿ ದೊಡ್ಡ ಪಕ್ಷ ಬಿಜೆಪಿಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಮಾತನಾಡಿ, 11 ಕೋಟಿ ಸದಸ್ಯರನ್ನು ಹೊಂದಿರುವ ವಿಶ್ವದ ಅತಿ ದೊಡ್ಡ ರಾಜಕೀಯ ಪಕ್ಷವಾಗಿ ಬಿಜೆಪಿ ಗುರುತಿಸಿಕೊಂಡಿದೆ. ಅಟಲ್ ಬಿಹಾರಿ ವಾಜಪೇಯಿ, ಲಾಲಕೃಷ್ಣ ಆಡ್ವಾಣಿ, ಸುಷ್ಮಾ ಸ್ವರಾಜ್, ಮುರಳಿ ಮನೋಹರ ಜೋಷಿ ಸೇರಿದಂತೆ ಅನೇಕ ಮಹಾನ್ ನಾಯಕರು ಕಟ್ಟಿ ಬೆಳೆಸಿದಂತಹ ಪಕ್ಷದ ಕಾರ್ಯಕರ್ತರು ನಾವಾಗಿರುವುದಕ್ಕೆ ಹೆಮ್ಮೆ ಇದೆ ಎಂದರು. ಬಿಜೆಪಿಗೆ ಕಾರ್ಯಕರ್ತರೇ ಆಸ್ತಿಯಾಗಿದ್ದು, ವ್ಯಕ್ತಿಗಿಂತಲೂ ಪಕ್ಷವೇ ನಮಗೆ ಮುಖ್ಯ. 2014ರ ಲೋಕಸಭೆ ಚುನಾವಣೆಯಲ್ಲಿ ನರೇಂದ್ರ ಮೋದಿ ಪ್ರಧಾನಮಂತ್ರಿ ಅಭ್ಯರ್ಥಿಯಾದ ನಂತರ ಇಡೀ ಪಕ್ಷಕ್ಕೆ ಹೊಸ ಬೂಸ್ಟ್ ಸಿಕ್ಕಂತಾಗಿ ಅಭಿವೃದ್ಧಿ ಹೊಂದಿತು. ಈಗ ವಿಶ್ವ ಮೆಚ್ಚಿದ ಮಹಾನ್ ನಾಯಕರಾಗಿ ನರೇಂದ್ರ ಮೋದಿ ಹೊರಹೊಮ್ಮಿದ್ದಾರೆ. ಅಮಿತ್ ಶಾ ರಾಷ್ಟ್ರೀಯ ಅಧ್ಯಕ್ಷರಾದ ನಂತರ 11 ಕೋಟಿ ಜನ ಸದಸ್ಯತ್ವ ಪಡೆದಿದ್ದು ಸಣ್ಣ ಸಂಗತಿಯಲ್ಲ ಎಂದು ತಿಳಿಸಿದರು.
- - -ಟಾಪ್ ಕೋಟ್ ಮುಂಬರುವ ದಿನಗಳಲ್ಲಿ ಬಿಜೆಪಿ ರಾಜ್ಯದಲ್ಲೂ ಮತ್ತೆ ಅಧಿಕಾರಕ್ಕೆ ಬರಲಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಸದಸ್ಯತ್ವ ಅಭಿಯಾನ ಮುಖ್ಯವಾಗಿದೆ. ಎಲ್ಲ ಬೂತ್‌ಗಳಲ್ಲಿ ಸದಸ್ಯತ್ವ ಅಭಿಯಾನವನ್ನು ಅತ್ಯಂತ ಯಶಸ್ವಿಗೊಳಿಸಬೇಕು. ಕಾಂಗ್ರೆಸ್ ಸರ್ಕಾರದ ಬ್ರಹ್ಮಾಂಡ ಭ್ರಷ್ಟಾಚಾರದ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು
- ಎಂ.ಪಿ.ರೇಣುಕಾಚಾರ್ಯ, ಮಾಜಿ ಸಚಿವ- - -
-27ಕೆಡಿವಿಜಿ3:ದಾವಣಗೆರೆಯಲ್ಲಿ ಮಂಗಳವಾರ ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ಮಂಗಳವಾರ ಬಿಜೆಪಿ ಸದಸ್ಯತ್ವ ಅಭಿಯಾನದ ಜಿಲ್ಲಾಮಟ್ಟದ ಕಾರ್ಯಾಗಾರದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ನಂದೀಶ ರೆಡ್ಡಿ, ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ, ಜಿಲ್ಲಾಧ್ಯಕ್ಷ ಎನ್.ರಾಜಶೇಖರ ನಾಗಪ್ಪ ಅವರಿಗೆ ಸನ್ಮಾನಿಸಲಾಯಿತು. -27ಕೆಡಿವಿಜಿ4: ರಾಜ್ಯ ಪ್ರಧಾನ ಕಾರ್ಯದರ್ಶಿ, ಸದಸ್ಯತ್ವ ಅಭಿಯಾನ ಸಂಚಾಲಕ ನಂದೀಶ ರೆಡ್ಡಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.