ಜಿಮ್ , ನೆಲಹಾಸು ಸಾಮಗ್ರಿ ಖರೀದಿಯಲ್ಲಿ 1.5 ಕೋಟಿ ರು. ಅವ್ಯವಹಾರ

| Published : Jul 13 2024, 01:40 AM IST

ಜಿಮ್ , ನೆಲಹಾಸು ಸಾಮಗ್ರಿ ಖರೀದಿಯಲ್ಲಿ 1.5 ಕೋಟಿ ರು. ಅವ್ಯವಹಾರ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರಗತಿ ಪರಿಶೀಲನಾ ಸಭೆಗೆ ಅಧಿಕಾರಿಗಳು ಗೈರಾಗುವ ಮೂಲಕ ತಾತ್ಸಾರ ಮಾಡಿದ್ದಾರೆ. ಕೈಗಾರಿಕಾ ವಿಸ್ತರಣಾಧಿಕಾರಿ, ಉಪ ಖಜನಾಧಿಕಾರಿ, ವಲಯ ಅರಣ್ಯಾಧಿಕಾರಿ, ಹಾಗೂ ಯೋಜನೆ ಇಲಾಖೆ ಸೇರಿ ಆರು ಇಲಾಖೆ ಅಧಿಕಾರಿಗಳು ಗೈರಾಗಿದ್ದರು. ಇವರ ವಿರುದ್ಧ ಶಾಸಕರು ಕಿಡಿಕಾರಿದರು.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಪಟ್ಟಣದ ತಾಲೂಕು ಸ್ಟೇಡಿಯಂನ ಒಳಾಂಗಣ ಕ್ರೀಡಾಂಗಣಕ್ಕೆ ಜಿಮ್ ಹಾಗೂ ನೆಲಹಾಸು ಹಾಕಲು ಸಾಮಾಗ್ರಿಗಳ ಖರೀದಿಯಲ್ಲಿ ನಿರ್ಮಿತಿ ಕೇಂದ್ರದ ಅಧಿಕಾರಿಗಳು ಸುಮಾರು 1.5 ಕೋಟಿ ರು. ಅವ್ಯವಹಾರ ನಡೆಸಿದ್ದು, ಸೂಕ್ತ ತನಿಖೆ ನಡೆಸುವಂತೆ ಶಾಸಕ ಎಚ್.ಟಿ.ಮಂಜು ನಿರ್ದೇಶನ ನೀಡಿದರು.

ಪಟ್ಟಣದ ಹೊರವಲಯದ ರೇಷ್ಮೆ ಫಾರಂ ಸಭಾಂಗಣದಲ್ಲಿ ನಡೆದ ತಾಲೂಕು ಮಟ್ಟದ ತ್ರೈಮಾಸಿಕ ಸಭೆಯಲ್ಲಿ ಮಾತನಾಡಿ, ಖರೀದಿ ಸಾಮಾಗ್ರಿಗಳ ದರ ಮಾರುಕಟ್ಟೆ ದರಕ್ಕಿಂತ ಮೂರು ಪಟ್ಟು ಹೆಚ್ಚಿನ ದರ ಇರುವುದರಿಂದ ಸಾಮಾಗ್ರಿ ಖರೀದಿ ಮಾಡದಂತೆ ಕ್ರೀಡಾಂಗಣ ಇಲಾಖೆ ರಾಜ್ಯ ನಿರ್ದೇಶಕರು ಆಕ್ಷೇಪಿಸಿದ್ದರು.

ಆದರೆ, ನಿರ್ಮಿತಿ ಅಧಿಕಾರಿಗಳು ಅಕ್ರಮವಾಗಿ ಮಾರುಕಟ್ಟೆ ದರಕ್ಕಿಂತ ಮೂರು ಪಟ್ಪು ಹೆಚ್ಚಿನ ದರದಲ್ಲಿ ಅಕ್ರಮವಾಗಿ ಖರೀದಿಸಿ 1.5 ಕೋಟಿ ರು. ಅವ್ಯವಹಾರ ಆಗಿದೆ. ಇದರ ತನಿಖೆ ನಡೆಸಿ ತಪ್ಪಿತಸ್ಥ ನಿರ್ಮಿತಿ ಕೇಂದ್ರದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸುವಂತೆ ಸೂಚಿಸಿದರು.

ಪ್ರಗತಿ ಪರಿಶೀಲನಾ ಸಭೆಗೆ ಅಧಿಕಾರಿಗಳು ಗೈರಾಗುವ ಮೂಲಕ ತಾತ್ಸಾರ ಮಾಡಿದ್ದಾರೆ. ಕೈಗಾರಿಕಾ ವಿಸ್ತರಣಾಧಿಕಾರಿ, ಉಪ ಖಜನಾಧಿಕಾರಿ, ವಲಯ ಅರಣ್ಯಾಧಿಕಾರಿ, ಹಾಗೂ ಯೋಜನೆ ಇಲಾಖೆ ಸೇರಿ ಆರು ಇಲಾಖೆ ಅಧಿಕಾರಿಗಳು ಗೈರಾಗಿದ್ದರು. ಇವರ ವಿರುದ್ಧ ಶಾಸಕರು ಕಿಡಿಕಾರಿದರು.

ಅಬಕಾರಿ ನಿರೀಕ್ಷಕಿ ಭವ್ಯ, ಗ್ರಾಮಾಂತರ ಪೊಲೀಸ್ ಠಾಣೆ ನಿರೀಕ್ಷಕ ಆನಂದಗೌಡ ಸಭೆಗೆ ಬರದೇ ಗೈರಾಗಿದ್ದರಿಂದ ಶಾಸಕರು ಸಂಬಂಧಪಟ್ಟ ಹಿರಿಯ ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡಿ ಅಸಮಾಧಾನ ವ್ಯಕ್ತಪಡಿಸಿದರು. ಗ್ರಾಮಾಂತರ ಪೊಲೀಸ್ ಠಾಣೆ ಎಸ್‌ಐ ಸುಬ್ಬಯ್ಯ ವಿರುದ್ಧ ಶಿಸ್ತು ಕ್ರಮಕ್ಕೆ ಒತ್ತಾಯಿಸಿದರು.

ಎಸ್‌ ಐ ಸುಬ್ಬಯ್ಯ ಅವರ ಅಸಭ್ಯ ವರ್ತನೆ, ಕರ್ತವ್ಯ ನಿರ್ಲಕ್ಷ್ಯದ ಬಗ್ಗೆ ಸಾರ್ವಜನಿಕರು ದೂರು ನೀಡಿದ್ದಾರೆ. ಅಂತವರಿಂದ ಇಲಾಖೆಗೆ ಕೆಟ್ಟ ಹೆಸರು ಬರಲಿದೆ. ಅವರ ವಿರುದ್ಧ ಕ್ರಮಕ್ಕೂ ಡಿವೈಎಸ್ಪಿ ಡಾ.ಸುಮಿತ್ ಅವರಿಗೆ ಹೇಳಿದರು.

ಈಚಲುಗುಡ್ಡ ವಿದ್ಯುತ್ ಉಪ ವಿತರಣೆ ಕೇಂದ್ರ ನಿರ್ಮಾಣದ ಕಾಮಗಾರಿ ಮಾಡದೆ ವಿಳಂಬ ಮಾಡಿರುವ ಗುತ್ತಿಗೆದಾರರ ಗುತ್ತಿಗೆ ರದ್ದು ಮಾಡಿ ಮರು ಟೆಂಡರ್ ಕರೆಯುವಂತೆ ಕೆಪಿಟಿಸಿಎಲ್ ಅಧಿಕಾರಿಗಳಿಗೆ ತಿಳಿಸಿದ ಶಾಸಕರು, ತಾಲೂಕಿನ ಬೀರುವಳ್ಳಿ, ಮಡವಿನಕೋಡಿ ಗ್ರಾಮದಲ್ಲಿ ನಿರ್ಮಿಸುತ್ತಿರುವ ವಿದ್ಯುತ್ ಉಪ- ವಿತರಣೆ ಕೇಂದ್ರವನ್ನು ಉದ್ಘಾಟಿಸುವಂತೆ ಸೂಚಿಸಿದರು.

ನಾನು ಶಾಸಕನಾದ ಮೇಲೆ ಎಂಟು ಜನ ವಿದ್ಯುತ್ ತಂತಿ ಅವಘಡದಿಂದ ಸಾವನ್ನಪ್ಪಿದ್ದಾರೆ. ತಾಲೂಕಿನಲ್ಲಿ ವಿದ್ಯುತ್ ಜಾಲ ಬಲಗೊಳಿಸಬೇಕು. ಸ್ಲಂ ಬೋರ್ಡ್‌ನಲ್ಲಿ ಮನೆಗಳ ನಿರ್ಮಾಣದ ಪ್ರಗತಿ ಕುಂಠಿತಕ್ಕೆ ಬೇಸರ ವ್ಯಕ್ತಪಡಿಸಿ ಮೂರು ವರ್ಷದಿಂದ 500 ಮನೆಗಳಲ್ಲಿ 15 ಮನೆಗಳನ್ನೂ ನಿರ್ಮಿಸಿಲ್ಲ. ಕೂಡಲೇ ಮನೆಗಳ ನಿರ್ಮಾಣಕ್ಕೆ ಕ್ರಮವಹಿಸಬೇಕು ಎಂದು ಹೇಳಿದರು.

ರೈತರ ಜಮೀನಿನ ತತ್ಕಾಲ್ ಪೋಡಿ ಅರ್ಜಿ ಸಲ್ಲಿಸಿದರೂ ಹದ್ದುಬಸ್ತ್ ಏಕೆ ಮಾಡಿಕೊಡುವುದಿಲ್ಲ ಎಂದು ಎಡಿಎಲ್ ಆರ್. ಸಿದ್ಧಯ್ಯ ಅವರನ್ನು ಪ್ರಶ್ನಿಸಿದರು. ತತ್ಕಾಲ್ ಅರ್ಜಿ ಜತೆಯಲ್ಲೇ ರೈತರ ಜಮೀನಿಗೆ ಕಲ್ಲು ಹಾಕಿ ಹದ್ದುಬಸ್ತ್ ಮಾಡಿಕೊಡಬೇಕು. ರೈತರು ಹದ್ದುಬಸ್ತ್‌ಗೆ ಮತ್ತೊಮ್ಮೆ ಅರ್ಜಿ ಹಾಕಬಾರದು ಎಂದರು.

ರೈತರು ಎರಡು ಬಾರಿ ಅಲೆದಾಡುವುದನ್ನು ತಪ್ಪಿಸಬೇಕು. ಸರ್ವೇ, ಕಂದಾಯ ಹಳೆ ದಾಖಲೆಗಳು ಲಭ್ಯವಿಲ್ಲದಿದ್ದರೆ ಮರು ಸೃಷ್ಟಿ ಮಾಡಿ ರೈತರಿಗೆ ನೀಡಬೇಕು. ಸರ್ಕಾರಿ ಜಾಗ ದುರಸ್ಥಿ ಕಾರ್ಯ ಪ್ರಾರಂಭವಾಗಬೇಕು. ತಾಲೂಕು ಸರ್ವೆಯರ್‌ಗೆ ಅಧಿಕ ಒತ್ತಡವಿರುವುದರಿಂದ ಬೇಡಿಕೆ ಅನುಸಾರ ಹೆಚ್ಚುವರಿ ಹುದ್ದೆ ಸೃಷ್ಟಿಸಿ ಸರ್ಕಾರಿ ಜಮೀನಿನ ಅಳತೆ ಕಾರ್ಯ ಬೇಗ ಮಾಡುವಂತೆ ತಿಳಿಸಿದರು.1.60 ಲಕ್ಷ ರು. ತನಕ ರೈತರಿಗೆ ಯಾವುದೇ ಗ್ಯಾರಂಟಿ ಇಲ್ಲದೆ ಸಾಲ ನೀಡಬಹುದು. ಮುದ್ರಾ ಯೋಜನೆಯಲ್ಲಿ 10 ಲಕ್ಷ ರು. ತನಕ ಗ್ಯಾರಂಟಿ ಇಲ್ಲದೆ ಸಾಲ ನೀಡುವಂತೆ, ತಾಲೂಕಿನಲ್ಲಿ ಈರುಳ್ಳಿ ಶೆಡ್ ನಿರ್ಮಾಣಕ್ಕೆ ತೋಟಗಾರಿಕೆ ಇಲಾಖೆಗೆ ಸೂಚಿಸಿದರು. ರೇಷ್ಮೆ ಬಿತ್ತನೆ ಗೂಡು ಬೆಳೆಯುವ ರೈತರಿಗೆ 350 ರು. ಕೆಜಿಗೆ ಪ್ರೋತ್ಸಾಹ ಧನ ಬಗ್ಗೆ ರೈತರಿಗೆ ಮಾಹಿತಿ ನೀಡುವಂತೆ ಹೇಳಿದರು.

ತಾಲೂಕಿನಲ್ಲಿ ಹತ್ತು ಡೆಂಘೀ ಪ್ರಕರಣಗಳಿವೆ. ನಿಯಂತ್ರಣಕ್ಕೆ ಕ್ರಮ ವಹಿಸಬೇಕು. ಜ್ವರ ನಿಯಂತ್ರಣಕ್ಕೆ ಔಷಧಗಳ ಕೊರತೆಯಾಗಬಾರದು. ರೋಗಿಗಳಿಗೆ ಹೆಚ್ಚುವರಿ ಬೆಡ್‌ಗಳ ವ್ಯವಸ್ಥೆ ಕಲ್ಪಿಸುವಂತೆ ತಾಲೂಕು ಆರೋಗ್ಯಾಧಿಕಾರಿ ಡಾ. ಅಜಿತ್‌ಗೆ ಸೂಚಿಸಿದರು.

ಪಾಂಡವಪುರ ಎಸಿ ನಂದೀಶ್, ತಾಪಂ ಆಡಳಿತಾಧಿಕಾರಿ ರಾಜಮೂರ್ತಿ, ತಹಸೀಲ್ದಾರ್ ನಿಸರ್ಗ ಪ್ರಿಯಾ, ತಾಪಂ ಇಒ ಸತೀಶ್, ಸೆಸ್ಕ್ ಇಇ ವಿನುತಾ, ಬಿಇಒ ಸೀತರಾಮ್ ಸೇರಿ ತಾಲೂಕು ಮಟ್ಟದ ಅಧಿಕಾರಿಗಳಿದ್ದರು.