ಸಾರಾಂಶ
ಕನ್ನಡಪ್ರಭ ವಾರ್ತೆ ಕಲಬುರಗಿ
ಈಶಾನ್ಯ ಕರ್ನಾಟಕ ಪದವೀಧರ ಕ್ಷೇತ್ರಕ್ಕೆ ಇದೇ ಜೂ.3 ರಂದು ಮತದಾನ ನಡೆಯಲಿದ್ದು, ಕ್ಷೇತ್ರದಾದ್ಯಂತ 99,121 ಪುರುಷರು, 57,483 ಮಹಿಳೆಯರು, ಇತರೆ 19 ಸೇರಿ ಒಟ್ಟು 1,56,623 ಜನ ಮತದಾರರು ಮತದಾನಕ್ಕೆ ಅರ್ಹತೆ ಪಡೆದಿದ್ದಾರೆ ಎಂದು ಕ್ಷೇತ್ರದ ಚುನಾವಣಾಧಿಕಾರಿಯಾಗಿರುವ ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತ ಕೃಷ್ಣ ಭಾಜಪೇಯಿ ತಿಳಿಸಿದ್ದಾರೆ.ಕಲಬುರ್ಗಿ ವಿಭಾಗದ ಕಲಬುರಗಿ, ಯಾದಗಿರಿ, ಬೀದರ, ರಾಯಚೂರು, ಕೊಪ್ಪಳ, ಬಳ್ಳಾರಿ ಮತ್ತು ವಿಜಯನಗರ ಜಿಲ್ಲಾ ವ್ಯಾಪ್ತಿ ಹೊಂದಿರುವ ಈ ಕ್ಷೇತ್ರದಲ್ಲಿ 160 ಮುಖ್ಯ ಮತ್ತು 35 ಹೆಚ್ಚುವರಿ ಸೇರಿ ಒಟ್ಟು 195 ಮತಗಟ್ಟೆಗಳಿದ್ದು, ಅಂತಿಮ ಸ್ಫರ್ಧಾ ಕಣದಲ್ಲಿ 19 ಅಭ್ಯರ್ಥಿಗಳು ಉಳಿದುಕೊಂಡಿದ್ದಾರೆ. ಮತದಾರರ ಪಟ್ಟಿಯನ್ನು ಆಯಾ ಡಿ.ಸಿ. ಕಚೇರಿ ವೆಬ್‍ಸೈಟ್‍ನಲ್ಲಿಯೂ ಪ್ರಕಟಿಸಿದ್ದು, ಮತದಾರರನ್ನು ಇದನ್ನು ವೀಕ್ಷಿಸಬಹದಾಗಿದೆ.
ಸಾಮಾನ್ಯವಾಗಿ ವಿಧಾನಸಭೆ, ಲೋಕಸಭೆ ಚುನಾವಣೆಗಳು ಇ.ವಿ.ಎಂ. ಮತಯಂತ್ರಗಳ ಮೂಲಕ ಮತ ಚಲಾಯಿಸಲಾಗುತ್ತಿದೆ. ಇಲ್ಲಿ ಪೋಸ್ಟಲ್ ಬ್ಯಾಲೆಟ್ ಮೂಲಕ ಪ್ರಾಶಸ್ತ್ಯದ ಮತ ನೀಡಲು ಅವಕಾಶವಿದ್ದು, ಸಾಮಾನ್ಯ ಚುನಾವಣೆಗ್ಗಿಂತ ಇದು ಭಿನ್ನವಾಗಿದೆ. ಮತದಾನ ಕೇಂದ್ರದಲ್ಲಿ ಚುನಾವಣಾ ಆಯೋಗವು ನೀಡುವ ನೇರಳೆ ಬಣ್ಣದ ಸ್ಕೆಚ್ ಪೆನ್ನಿನಿಂದ ಮಾತ್ರ ಆದ್ಯತಾ ಮತ ನಮೂದಿಸಬೇಕು.ಆದ್ಯತಾ ಸಂಖ್ಯೆ ನಮೂದಿಸುವಾಗ ಒಂದೇ ಭಾಷೆ ಬಳಸಬೇಕು. ಸ್ಕೆಚ್ ಪೆನ್ ಹೊರತುಪಡಿಸಿ ಇತರೆ ಪೆನ್ ಬಳಸಿ ಮತ ಚಲಾಯಿಸಿದಲ್ಲಿ ಅಂತಹ ಮತಗಳು ಅಸಿಂಧುಗೊಳ್ಳಲಿದೆ. ಇನ್ನು ಈ ಚುನಾವಣೆಯಲ್ಲಿ ನೋಟಾ (ಓಔಖಿಂ) ಅನ್ವಯಿಸದ ಕಾರಣ ಮತಪತ್ರದಲ್ಲಿ ಇದನ್ನು ಮುದ್ರಿಸಿರುವುದಿಲ್ಲ ಎಂದಿರುವ ಅವರು, ಬ್ಯಾಲೆಟ್ ಪೇಪರ್‍ನಲ್ಲಿ ಆದ್ಯತೆ ಸೂಚಿಸಲು ಸರಿಯಾದ ರೀತಿಯ ವಿಧಾನ, ಮತ ಸಿಂಧು-ಅಸಿಂಧುಗೊಳ್ಳುವ ಕಾರಣಗಳನ್ನು ಉದಾಹರಣೆಯೊಂದಿಗೆ www.rcgulbarga.gov.in ನಲ್ಲಿ ಪ್ರಕಟಿಸಿದೆ. ಇದನ್ನು ಮತದಾರರು ವೀಕ್ಷಿಸಬಹುದು ಎಂದು ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.
ಈಶಾನ್ಯ ಕರ್ನಾಟಕ ಪದವೀಧರರ ಕ್ಷೇತ್ರದ 7 ಜಿಲ್ಲೆಗಳ ವ್ಯಾಪ್ತಿಯಲ್ಲಿ ಪ್ರಜಾ ಪ್ರತಿನಿಧಿ ಕಾಯ್ದೆ-1951 ಸೆಕ್ಷನ್ 135(ಸಿ) ಪ್ರಕಾರ ಜೂನ್ 1ರ ಸಂಜೆ 4 ರಿಂದ ಜೂನ್ 3ರ ಮಧ್ಯರಾತ್ರಿ 12 ಗಂಟೆವರೆಗೆ ಶುಷ್ಕ ದಿನ (ಡ್ರೈ ಡೇ) ಎಂದು ಘೋಷಿಸಲಾಗಿರುತ್ತದೆ. ಮತದಾನ ದಿನದಂದು ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ ಮತಗಟ್ಟೆಯಿಂದ 100 ಮೀಟರ್ ವ್ಯಾಪ್ತಿಯಲ್ಲಿ ಅಪರಾಧ ದಂಡ ಪ್ರಕ್ರಿಯಾ ಸಂಹಿತೆ-1973ರ ಕಲಂ 144 ರನ್ವಯ ನಿಷೇಧಾಜ್ಞೆ ಸಹ ಜಾರಿಯಲ್ಲಿರುತ್ತದೆ ಎಂದು ಅವರು ತಿಳಿಸಿದ್ದಾರೆ.ಬನ್ನಿ, ಮತ ಚಲಾಯಿಸಿ: ಜೂನ್ 3 ರಂದು ಬೆಳಿಗ್ಗೆ 8 ಗಂಟೆಯಿಂದ ಮಧ್ಯಾಹ್ನ 4 ಗಂಟೆಯವರೆಗೆ ಮತದಾನ ಸಮಯ ನಿಗದಿ ಮಾಡಲಾಗಿದ್ದು, ಮತದಾರರು ಮತಗಟ್ಟೆಗಳಿಗೆ ಆಗಮಿಸಿ ತಮ್ಮ ಅಮೂಲ್ಯ ಮತವನ್ನು ಚಲಾಯಿಸಬೇಕೆಂದು ಕೃಷ್ಣ ಭಾಜಪೇಯಿ ಅವರು ಮನವಿ ಮಾಡಿದ್ದಾರೆ.
ಸಹಾಯವಾಣಿ ಸ್ಥಾಪನೆ: ಕ್ಷೇತ್ರದ 7 ಜಿಲ್ಲೆಗಳಲ್ಲಿ ಮತದಾರರಿಗೆ ಮತಗಟ್ಟೆ ವಿಳಾಸ, ಕ್ರಮ ಸಂಖ್ಯೆ, ಭಾಗ ಸಂಖ್ಯೆ ಮಾಹಿತಿ ಪಡೆಯಲು ಜಿಲ್ಲಾ ಕೇಂದ್ರಗಳಲ್ಲಿ ಟೋಲ್ ಫ್ರೀ ಸಂ.1950 ರಂತೆ ಸಹಾಯವಾಣಿ ಸ್ಥಾಪಿಸಲಾಗಿದೆ. ಇನ್ನು ತಾಲೂಕಾ ಹಂತದಲ್ಲಿ ಪ್ರತ್ಯೇಕ ಸಹಾಯವಾಣಿ ಸಂಖ್ಯೆ ಸಹ ನೀಡಲಾಗಿದೆ. ಇದರ ಜೊತೆಗೆ ಕಲಬುರಗಿ ಪ್ರಾದೇಶಿಕ ಆಯುಕ್ತರ ಕಚೇರಿಯಲ್ಲಿ 08472-224461/ 224462/ 224463/ 224464 ಸಹಾಯವಾಣಿ ಸ್ಥಾಪಿಸಿದ್ದು, ಕಚೇರಿ ಅವಧಿಯಲ್ಲಿ ಕರೆ ಮಾಡಿ ಮಾಹಿತಿ ಪಡೆಯಬಹುದಾಗಿದೆ.ಮತದಾರ ಚೀಟಿ ವಿತರಣೆ: ಪದವೀಧರ ಮತಕ್ಷೇತ್ರದ ಮತದಾರರ ಮಾಹಿತಿಗಾಗಿ ಎಲ್ಲಾ ಮತದಾರರಿಗೆ ಮತದಾರ ಚೀಟಿಯನ್ನು ವಿತರಿಸಲಾಗುತ್ತಿದೆ. ಇದರಲ್ಲಿ ಮತಗಟ್ಟೆ ವಿವರ, ಭಾಗ ಸಂಖ್ಯೆ ಹಾಗೂ ಕ್ರಮ ಸಂಖ್ಯೆ ಇದೆ. ಮತದಾರ ಚೀಟಿಯಲ್ಲಿ ನೀಡಲಾಗುವ ಕ್ಯೂಆರ್ ಕೋಡ್‍ನ್ನು ಗೂಗಲ್ ಮ್ಯಾಪ್‍ನಲ್ಲಿ ಸ್ಕಾನ್ ಮಾಡಿ ಮತಗಟ್ಟೆ ನಿಖರ ಸ್ಥಳ ತಿಳಿಯಬಹುದಾಗಿದೆ. ಇದಲ್ಲದೆ ಪ್ರತಿ ಮತದಾರರಿಗೆ ಎಸ್.ಎಂ.ಎಸ್. ಸಹ ಕಳುಹಿಸಲಾಗುತ್ತಿದೆ. ಅಲ್ಲದೇ ಕಲಬುರ್ಗಿ ಪ್ರಾದೇಶಿಕ ಆಯುಕ್ತರ ಕಚೇರಿಯ ಫೇಸಬುಕ್ ಪುಟ @RCKalaburagi ಮತ್ತು ಎಕ್ಸ್(ಟ್ವಿಟರ್) ಖಾತೆ @RCKalaburagi ನಲ್ಲಿಯೂ ಮಾಹಿತಿ ಲಭ್ಯವಿದೆ.
ಬಹಿರಂಗ ಪ್ರಚಾರ ಅಂತ್ಯ: ಪ್ರಜಾ ಪ್ರತಿನಿಧಿ ಕಾಯ್ದೆ 1951ರ ಸೆಕ್ಷನ್-126 ರಂತೆ ಚುನಾವಣೆ ಮತದಾನ ಅಂತ್ಯಗೊಳ್ಳುವ 48 ಗಂಟೆಗಳ ಪೂರ್ವದಲ್ಲಿ ಅಂದರೆ ಜೂನ್ 1ರ ಸಂಜೆ 4 ಗಂಟೆಗೆ ರಾಜಕೀಯ ಪಕ್ಷಗಳ ಮತ್ತು ಅಭ್ಯರ್ಥಿಗಳ ಬಹಿರಂಗ ಪ್ರಚಾರ ಅಂತ್ಯವಾಗಲಿದೆ. ಕೊನೆ 48 ಗಂಟೆ ಅವಧಿಯಲ್ಲಿ ಬಹಿರಂಗ ಪ್ರಚಾರ ನಿಷೇಧಿಸಿದೆ ಎಂದು ಚುನಾವಣಾಧಿಕಾರಿ ಕೃಷ್ಣ ಭಾಜಪೇಯಿ ತಿಳಿಸಿದ್ದಾರೆ.ಬಲಗೈ ತೋರು ಬೆರಳಿಗೆ ಶಾಹಿ: ಈಶಾನ್ಯ ಕರ್ನಾಟಕ ಪದವೀಧರರ ಕ್ಷೇತ್ರ ಚುನಾವಣೆಯಲ್ಲಿ ಮತ ಚಲಾಯಿಸುವ ಮತದಾರರಿಗೆ ಅಳಿಸಲಾಗದ ಶಾಹಿಯನ್ನು (Iಟಿಜeಟibಟe iಟಿಞ) ನ್ನು ಬಲಗೈ ತೋರು ಬೆರಳಿಗೆ ಹಚ್ಚಲಾಗುತ್ತದೆ.