ಸಾರಾಂಶ
ಹುಬ್ಬಳ್ಳಿ: ಧಾರವಾಡದ ಕಲಾಭವನದ ದುರಸ್ತಿ ಕಾಮಗಾರಿಯನ್ನು ಶೀಘ್ರವೇ ಮುಗಿಸಬೇಕು. ಬಾಡಿಗೆ ದರವನ್ನು ಶೇ. 50ರಷ್ಟು ಕಡಿಮೆಗೊಳಿಸಿ ಸಾರ್ವಜನಿಕರಿಗೆ ಮುಕ್ತಗೊಳಿಸಲು ಮಹಾನಗರ ಪಾಲಿಕೆ ನಿರ್ಣಯ ಕೈಗೊಂಡಿದೆ.
ಇಲ್ಲಿನ ಪಾಲಿಕೆಯಲ್ಲಿ ನಡೆದ ಸಾಮಾನ್ಯಸಭೆಯಲ್ಲಿ ಪಕ್ಷಾತೀತವಾಗಿ ಸುದೀರ್ಘವಾಗಿ ಚರ್ಚೆ ನಡೆಯಿತು. ಕಾಂಗ್ರೆಸ್ ಸದಸ್ಯೆ ಕವಿತಾ ಕಬ್ಬೇರ ಈ ಬಗ್ಗೆ ಪ್ರಸ್ತಾಪಿಸಿ, ಸಾಂಸ್ಕೃತಿಕ, ಸಾಹಿತಿಕ, ಕಲೆಗಳ ಪ್ರೋತ್ಸಾಹಿಸುವುದಕ್ಕೆ ಬಳಕೆಯಾಗಬೇಕಾದ ಕಲಾಭವನ ಇದೀಗ ಅನಾಥವಾಗಿದೆ. ಕಳೆದ 15 ವರ್ಷಗಳಿಂದ ಅನಾಥ ಸ್ಥಿತಿಗೆ ತಲುಪಿದೆ. ಇದಕ್ಕೆ ಪರಿಹಾರವೇ ಇಲ್ಲವೇ? ಸದ್ಯ ಕಸ ಸಂಗ್ರಹಿಸುವ ಟಿಪ್ಪರ್ ನಿಲ್ಲಿಸುವ ನಿಲ್ದಾಣವಾಗಿ ಮಾರ್ಪಟ್ಟಿದೆ ಎಂದು ಕಿಡಿಕಾರಿದರು. ವಿವಿಧ ಪ್ರದರ್ಶನಗಳು ಆರಾರು ತಿಂಗಳು ನಡೆಯುತ್ತಲೇ ಇರುತ್ತದೆ ಎಂದರು.
ಇದಕ್ಕೆ ಪಕ್ಷಾತೀತವಾಗಿ ಈರೇಶ ಅಂಚಟಗೇರಿ, ಚಂದ್ರಶೇಖರ ಮನಗುಂಡಿ ಸೇರಿದಂತೆ ಹಲವರು ಧ್ವನಿಗೂಡಿಸಿದರು. ತಿಪ್ಪಣ್ಣ ಮಜ್ಜಗಿ, ಶಿವು ಹಿರೇಮಠ ಮಾತನಾಡಿ, ಈ ಹಿಂದೆ ₹ 5 ಕೋಟಿ ವೆಚ್ಚದಲ್ಲಿ ಕಾಮಗಾರಿ ಕೈಗೊಳ್ಳಲಾಗಿತ್ತು. ಅದು ಏನಾಯಿತು ಎಂದು ಪ್ರಶ್ನಿಸಿದರು. ಅದಕ್ಕೆ ಅಧಿಕಾರಿ ನಿರ್ಮಿತಿ ಕೇಂದ್ರ ಆ ಕಾಮಗಾರಿ ಕೈಗೊಂಡಿತ್ತು. ಆದರೆ ಇದೀಗ ಹಾಳಾಗಿದೆ. ಮತ್ತೆ ₹ 1.60 ಕೋಟಿ ಮೊತ್ತದ ಟೆಂಡರ್ ಕರೆಯಲಾಗಿದೆ. ಕೆಲವೊಂದಿಷ್ಟು ಕೆಲಸಗಳನ್ನು ಪರಿಷ್ಕೃತಗೊಳಿಸಲಾಗಿದೆ ಎಂದರು. ಶೀಘ್ರದಲ್ಲೇ ವರ್ಕ್ ಆರ್ಡರ್ ಕೊಟ್ಟು ಕೆಲಸ ಶುರು ಮಾಡಿಸಲಾಗುವುದು ಎಂದು ಅಧಿಕಾರಿ ತಿಳಿಸಿದರು.ಆಗ ಮೇಯರ್ ರಾಮಣ್ಣ ಬಡಿಗೇರ, ಆದಷ್ಟು ಬೇಗನೆ ಕಾಮಗಾರಿ ಕೈಗೊಳ್ಳುವ ಜತೆಗೆ ಈಗಿರುವ ಬಾಡಿಗೆ ದರವನ್ನು ಶೇ. 50ರಷ್ಟು ಕಡಿಮೆಗೊಳಿಸಿ ಸಾರ್ವಜನಿಕರಿಗೆ ಮುಕ್ತಗೊಳಿಸಲಾಗುವುದು. ದೀಪಾವಳಿ ಹಾಗೂ ಗಣೇಶ ಚತುರ್ಥಿ ವೇಳೆ ಪಟಾಕಿ ಮಾರಾಟಕ್ಕೆ ಮಾತ್ರ ಅವಕಾಶ ನೀಡಬೇಕು. ಉಳಿದಂತೆ ಯಾವ ಪ್ರದರ್ಶನಕ್ಕೂ ಬಾಡಿಗೆ ನೀಡಬಾರದು ಎಂದು ಆದೇಶಿಸಿದರು.
ಹೆರಿಗೆ ಆಸ್ಪತ್ರೆ;
ಧಾರವಾಡದಲ್ಲಿನ ಹೆರಿಗೆ ಆಸ್ಪತ್ರೆಗೆ ನೂತನ ಕಟ್ಟಡ ನಿರ್ಮಾಣಕ್ಕೆ ಪಾಲಿಕೆ ಅಸ್ತು ಎಂದಿದೆ. ಈಗಿರುವ ಆಸ್ಪತ್ರೆ 5 ದಶಕಗಳಿಗಿಂತ ಹಳೆಯ ಕಟ್ಟಡವಾಗಿದೆ. ಹೀಗಾಗಿ ಈ ಕಟ್ಟಡವನ್ನು ನೂತನವಾಗಿ ನಿರ್ಮಿಸಲಾಗುವುದು ಎಂದು ಮೇಯರ್ ಆದೇಶಿಸಿದರು. ಇದಕ್ಕೆ ವಿರೋಧ ಪಕ್ಷದ ಸದಸ್ಯರು, ಆರೋಗ್ಯ ಸ್ಥಾಯಿ ಸಮಿತಿಯೊಳಗೆ ಚರ್ಚೆಯಾಗದೇ ನೇರವಾಗಿ ಸಾಮಾನ್ಯಸಭೆಯಲ್ಲೇ ತಂದಿರುವುದಕ್ಕೆ ಆಕ್ಷೇಪಿಸಿದರು. ಅದಕ್ಕೆ ಬಡಿಗೇರ, ಕಟ್ಟಡ ಪರಿಸ್ಥಿತಿ ಆ ರೀತಿ ಇರುವುದರಿಂದ ಏಕಾಏಕಿಯಾಗಿ ಸಾಮಾನ್ಯಸಭೆಯಲ್ಲಿ ತರಲಾಗಿದೆ ಅಷ್ಟೇ ಎಂದು ಸ್ಪಷ್ಟನೆ ನೀಡಿದರು.
ಬಿಡಾಡಿ ದನ:
ಮಹಾನಗರದಲ್ಲಿ ಹೆಚ್ಚಾಗಿರುವ ಬಿಡಾಡಿ ದನಗಳ ಹಾವಳಿಯಿಂದ ಆಗುತ್ತಿರುವ ಅನಾಹುತ ಮತ್ತು ಅದನ್ನು ತಪ್ಪಿಸಲು ಗೋಶಾಲೆ ತೆರೆಯಬೇಕೆಂಬ ವಿರೋಧ ಪಕ್ಷದ ನಾಯಕ ರಾಜಶೇಖರ ಕಮತಿ ಒತ್ತಾಯಕ್ಕೆ ಮುಂದಿನ ವಾರದಲ್ಲಿ ಪೊಲೀಸ್ ಕಮಿಷನರ್, ಹಿರಿಯ ಪಾಲಿಕೆ ಸದಸ್ಯರು. ಪಾಲಿಕೆ ಆಯುಕ್ತರ ನೇತೃತ್ವದಲ್ಲಿ ಸಭೆ ನಡೆಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಮೇಯರ್ ಹೇಳಿದರು.
ಇದಕ್ಕೂ ಪೂರ್ವದಲ್ಲಿ ಮಹಾನಗರದ ಜನರ ಧ್ವನಿಯಾಗಿ ಕೆಲಸ ಮಾಡುವ ಪಾಲಿಕೆ ಸದಸ್ಯರ ಆರೋಗ್ಯದ ಕಾಳಜಿವಹಿಸುವುದು ಪಾಲಿಕೆ ಜವಾಬ್ದಾರಿ. ಈ ಹಿನ್ನೆಲೆಯಲ್ಲಿ ಸದಸ್ಯರ ಗ್ರೂಪ್ ವಿಮೆ ಮಾಡಲು ಕ್ರಮ ವಹಿಸಬೇಕೆಂದು ಆದೇಶಿಸಿದರು.
ಈ ವೇಳೆ ಪಾಲಿಕೆ ಸದಸ್ಯರ ಆರೋಗ್ಯಕ್ಕೆ ಸಂಬಂಧಪಟ್ಟಂತೆ ಆಸ್ಪತ್ರೆಯ ವೆಚ್ಚವನ್ನು ಏಕೆ ಭರಿಸುತ್ತಿಲ್ಲ. ಇದರಿಂದ ಸದಸ್ಯರಿಗೆ ತೊಂದರೆಯಾಗುತ್ತಿದೆ ಎಂದು ಕೊರವಿ ಪ್ರಶ್ನಿಸಿದರು. ಅದಕ್ಕೆ ಶಿವಮೊಗ್ಗ ಪಾಲಿಕೆಯಲ್ಲಿ ಇದೇ ರೀತಿ ಆದಾಗ ಅಡಿಟ್‌ನಲ್ಲಿ ಸಮಸ್ಯೆಯಾಗಿತ್ತು. ಹೀಗಾಗಿ ಭರಿಸುತ್ತಿಲ್ಲ ಎಂದು ಅಧಿಕಾರಿ ವರ್ಗ ಸ್ಪಷ್ಟನೆ ನೀಡಿತ್ತು. ಅಲ್ಲಿ ಸಮಸ್ಯೆಯಾಗಿದೆ ಎಂದರೆ ಇಲ್ಲಿ ಕೊಡದೇ ಇರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು. ಬಳಿಕ ಮೇಯರ್ ಗ್ರೂಪ್ ಇನ್ಸುರೆನ್ಸ್ ಮಾಡಲು ಆದೇಶಿಸಿದರು.
ಸ್ಮಶಾನಗಳ ಅಭಿವೃದ್ಧಿ ದೃಷ್ಟಿಯಿಂದ ಪಾಲಿಕೆ ಆಯುಕ್ತರು ಮತ್ತು ಅಧಿಕಾರಿಗಳು ಖುದ್ದು ಪರಿಶೀಲನೆ ನಡೆಸಿ ಅಗತ್ಯ ಸೌಕರ್ಯ ಒದಗಿಸುವ ಜತೆಗೆ ಅವುಗಳ ಅಭಿವೃದ್ಧಿಗೆ ಕ್ರಮವಹಿಸಬೇಕು ಎಂದು ರೂಲಿಂಗ್ ಮಾಡಿದರು.
ಬೇಕಾದವರಿಗೆ ಮಾತ್ರ ಅನುದಾನ!
ಪಾಲಿಕೆ ಆಯುಕ್ತರು ತಮಗೆ ಬೇಕಾದವರಿಗೆ ಮಾತ್ರ ಹಿಂದಿನ ಮೇಯರ್ ನೀಡಿದ ಅನುದಾನ ಮತ್ತು ಪಾಲಿಕೆ ಸದಸ್ಯರ ಸಾಮಾನ್ಯ ನಿಧಿ ನೀಡುತ್ತಿದ್ದಾರೆಂಬ ಗಂಭೀರ ಆರೋಪವನ್ನು ಸದಸ್ಯರು ಮಾಡಿದರು. ತಮಗೆ ಬೇಕಾದವರು ಸರಿಯಿದ್ದ ರಸ್ತೆ ಸುಧಾರಣೆಗೆ ಹಣ ಕೇಳಿದರೂ ಆಯುಕ್ತರು ಅನುದಾನ ನೀಡಿದ್ದಾರೆಂದು ಆರೀಫ್ ಭದ್ರಾಪುರ ಹೇಳಿದರು. ಇದಕ್ಕೆ ಸದಸ್ಯ ಶಂಕರ ಶೇಳಕೆ ಸೇರಿ ಹಲವು ಸದಸ್ಯರು ಧ್ವನಿಗೂಡಿಸಿದರು. ಈ ವೇಳೆ ಇದು ಚರ್ಚೆಗೂ ಕಾರಣವಾಯಿತು. ಈ ಹಿನ್ನೆಲೆಯಲ್ಲಿ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ ಈ ಬಗ್ಗೆ ದೂರು ನೀಡಬಹುದು ಎಂದರು. ಇನ್ನು ಇದರ ಸರಳೀಕರಣಕ್ಕೆ ಸೂಕ್ತ ಕ್ರಮವಹಿಸಬೇಕೆಂದು ಈರೇಶ ಅಂಚಟಗೇರಿ ಆಗ್ರಹಿಸಿದರು. ಈ ಮಧ್ಯೆ ಪ್ರವೇಶಿಸಿದ ಮೇಯರ್, ಈ ಹಿಂದಿನ ಮೇಯರ್‌ಗಳು ಸದಸ್ಯರಿಗೆ ನೀಡಿದ ಅನುದಾನವನ್ನು ರದ್ದುಗೊಳಿಸದೇ, ಸಾಮಾನ್ಯ ನಿಧಿ ಬಿಡುಗಡೆಗೆ ಕ್ರಮವಹಿಸಬೇಕೆಂದು ಆದೇಶಿಸಿದರು.