ಮೂರ್ತಿಗಳ ಸ್ಥಾಪನೆಗೆ ಅಗತ್ಯವಾದ ಮೂಲಸೌಕರ್ಯ, ಸಂಚಾರ ವ್ಯವಸ್ಥೆ ಹಾಗೂ ಸಾರ್ವಜನಿಕರಿಗೆ ಅನುಕೂಲತೆಗಳನ್ನು ಗಮನದಲ್ಲಿಟ್ಟುಕೊಂಡು ಸ್ಥಳ ಆಯ್ಕೆ
ಕುಕನೂರು: 2025-26ನೇ ಸಾಲಿನ ಮುಖ್ಯಮಂತ್ರಿಗಳ ಮೂಲಸೌಕರ್ಯ ಅಭಿವೃದ್ಧಿ ಯೋಜನೆಯಡಿ ಯಲಬುರ್ಗಾ ವಿಧಾನಸಭಾ ಕ್ಷೇತ್ರದಲ್ಲಿ ವಿವಿಧ ಮಹನೀಯರ ಮೂರ್ತಿ ಸ್ಥಾಪನೆ ಕಾಮಗಾರಿಗಳಿಗೆ ಒಟ್ಟು ₹1.60 ಕೋಟಿ ಆಡಳಿತಾತ್ಮಕ ಮಂಜೂರಾತಿ ನೀಡಲಾಗಿದ್ದು, ಕಾಮಗಾರಿಗಳ ಅನುಷ್ಠಾನ ಆಗುತ್ತಿದೆ ಎಂದು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಮಾಹಿತಿ ನೀಡಿದರು.
ಪಟ್ಟಣದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ, ಜಗಜ್ಯೋತಿ ಬಸವೇಶ್ವರ ಹಾಗೂ ಡಾ. ಬಿ.ಆರ್.ಅಂಬೇಡ್ಕರ್ ಮೂರ್ತಿ ಪ್ರತಿಷ್ಠಾಪನೆಗಾಗಿ ಶನಿವಾರ ವಿವಿಧ ಪ್ರಮುಖ ಸ್ಥಳಗಳನ್ನು ವೀಕ್ಷಿಸಿದರು.ಶಾಸಕ ಬಸವರಾಜ ರಾಯರಡ್ಡಿ ನೇತೃತ್ವದಲ್ಲಿ ನಡೆದ ಪರಿಶೀಲನೆಯಲ್ಲಿ ಪಟ್ಟಣದ ವಿವಿಧ ವೃತ್ತಗಳು ಮತ್ತು ಪ್ರಮುಖ ಸ್ಥಳಗಳನ್ನು ಗುರುತಿಸಿ ಸೂಕ್ತ ಜಾಗಗಳ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಲಾಯಿತು.
ಇದೇ ವೇಳೆ, ಪಟ್ಟಣದ ರೈಲ್ವೆ ನಿಲ್ದಾಣ ಹಾಗೂ ಬಸ್ ನಿಲ್ದಾಣಗಳಲ್ಲಿ ನಡೆಯುತ್ತಿರುವ ಸಮಸ್ಯೆಗಳ ಕುರಿತು ಸ್ಥಳೀಯರೊಂದಿಗೆ ಚರ್ಚಿಸಿ, ವ್ಯವಸ್ಥೆಯನ್ನು ವೀಕ್ಷಣೆ ಮಾಡಿ ಸಾರ್ವಜನಿಕರಿಗೆ ಉತ್ತಮ ಸೌಲಭ್ಯ ಒದಗಿಸುವ ದಿಸೆಯಲ್ಲಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಶಾಸಕರು ತಿಳಿಸಿದರು.ಮೂರ್ತಿಗಳ ಸ್ಥಾಪನೆಗೆ ಅಗತ್ಯವಾದ ಮೂಲಸೌಕರ್ಯ, ಸಂಚಾರ ವ್ಯವಸ್ಥೆ ಹಾಗೂ ಸಾರ್ವಜನಿಕರಿಗೆ ಅನುಕೂಲತೆಗಳನ್ನು ಗಮನದಲ್ಲಿಟ್ಟುಕೊಂಡು ಸ್ಥಳ ಆಯ್ಕೆ ಮಾಡಬೇಕೆಂದು ಶಾಸಕ ರಾಯರಡ್ಡಿ ಸೂಚಿಸಿದರು.
ಕಾಮಗಾರಿಯನ್ನು ಶೀಘ್ರ ಆರಂಭಿಸಿ ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಕುಕನೂರು ಪಟ್ಟಣದಲ್ಲಿ ಡಾ. ಬಿ.ಆರ್. ಅಂಬೇಡ್ಕರ್, ಜಗಜ್ಯೋತಿ ಬಸವೇಶ್ವರ ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಮೂರ್ತಿ ಸ್ಥಾಪನೆಗೆ ತಲಾ ₹40 ಲಕ್ಷ ಹಾಗೂ ಯಲಬುರ್ಗಾ ಪಟ್ಟಣದಲ್ಲಿ ಜಗಜ್ಯೋತಿ ಬಸವೇಶ್ವರರ ಮೂರ್ತಿ ಸ್ಥಾಪನೆಗೆ ₹40 ಲಕ್ಷ ಮಂಜೂರಾಗಿದ್ದು, ಒಟ್ಟು ₹1.60 ಕೋಟಿ ಅನುದಾನವನ್ನು ಸರ್ಕಾರ ಒದಗಿಸಿದೆ. ಸರ್ಕಾರದ ಆದೇಶದಂತೆ, ಆಡಳಿತಾತ್ಮಕ ಅನುಮೋದನೆ ದೊರೆತು ಟೆಂಡರ್ ಪ್ರಕ್ರಿಯೆ ಸಹ ಮುಗಿದಿದೆ ಎಂದರು.ತಾಲೂಕು ಗ್ಯಾರಂಟಿ ಯೋಜನೆ ಸಮಿತಿ ಅಧ್ಯಕ್ಷ ಸಂಗಮೇಶ್ ಗುತ್ತಿ, ಕಾಂಗ್ರೆಸ್ ಮುಖಂಡರಾದ ಸತ್ಯನಾರಾಯಣಪ್ಪ ಹರಪ್ಪನಹಳ್ಳಿ, ಯಂಕಣ್ಣ ಯರಾಶಿ, ಹಣಮಂತಪ್ಪ ಚಂಡೂರ್, ಸಿದ್ದಯ್ಯ ಕಳ್ಳಿಮಠ, ರಹಿಮಾನಸಾಬ ಮುಕಪ್ಪನವರ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು. ತಾಲೂಕು ಪಂಚಾಯತಿ ಇಒ ಸಂತೋಷ್ ಪಾಟೀಲ ಬಿರಾದರ್, ತಹಶೀಲ್ದಾರ್ ಬಸವರಾಜ್ ಬೆಣ್ಣೆಶಿರೂರ, ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ನಾಗೇಶ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳಾದ ಅನಿಲ್ ಪಾಟೀಲ್ ಮಳಿಮಠ, ಅನಿಲ್ ಜೋಶಿ ಮತ್ತು ಪಟ್ಟಣ ಪಂಚಾಯತ್ ಸದಸ್ಯರಿದ್ದರು.
ಕುಷ್ಟಗಿಯಿಂದ ಬೆಂಗಳೂರಿಗೆ ರೈಲು ಓಡಾಟಕ್ಕೆ ಸೂಚನೆ:ಗದಗ ವಾಡಿ ರೈಲ್ವೇ ಯೋಜನೆಯಲ್ಲಿ ಕುಷ್ಟಗಿಯಿಂದ ಹುಬ್ಬಳ್ಳಿಯವರೆಗೆ ಸದ್ಯಕ್ಕೆ ರೈಲು ಓಡಾಟ ಜರುಗುತ್ತಿದ್ದು, ಕುಷ್ಟಗಿಯಿಂದ ಬೆಂಗಳೂರಿಗೂ ಸಹ ಓಡಾಟಕ್ಕೆ ಪ್ರಸ್ತಾವನೆ ಮಾಡುತ್ತೇನೆ. ರೈಲ್ವೇ ನಿಲ್ದಾಣದಲ್ಲಿ ಮೂಲ ಭೂತ ಸೌಲಭ್ಯ ಕಲ್ಪಿಸಲು ಸೂಚಿಸುತ್ತೇನೆ ಎಂದು ರಾಯರಡ್ಡಿ ಅವರು ರೈಲ್ವೇ ನಿಲ್ದಾಣ ಭೇಟಿ ವೇಳೆ ಹೇಳಿದರು.