ಗಾಯಾಳು ಚಿಕಿತ್ಸೆಗೆ 1.60 ಲಕ್ಷ ಸಂಗ್ರಹಿಸಿ ನೀಡಿದ ಸಾರ್ವಜನಿಕರು

| Published : Feb 15 2024, 01:31 AM IST

ಸಾರಾಂಶ

ಹಣವನ್ನು ಗಾಯಾಳು ಶ್ರೀಧರ ಅವರ ಕುಟುಂಬಕ್ಕೆ ನೀಡಿ ಮಾನವೀಯತೆ ಮೆರೆದಿರುವುದು ಎಲ್ಲರ ಮೆಚ್ಚುಗೆಗೆ ಕಾರಣವಾಗಿದೆ.

ಕೂಡ್ಲಿಗಿ: ತಾಲೂಕಿನ ಕಾನಹೊಸಹಳ್ಳಿಯ ಯುವಕರೊಬ್ಬರು ಫೆ. ೧೦ರಂದು ಅಪರಿಚಿತ ವಾಹನ ಡಿಕ್ಕಿಯಿಂದ ತಲೆಗೆ ತೀವ್ರವಾಗಿ ಗಾಯಗೊಂಡು ದಾವಣಗೆರೆ ಆಸ್ಪತ್ರೆಗೆ ದಾಖಲಿಸಿದ್ದು, ಶಸ್ತ್ರಚಿಕಿತ್ಸೆಗೆ ಹಣವಿಲ್ಲದ ಬಡ ಕುಟುಂಬ ಪರಿತಪಿಸುವುದನ್ನು ಕಂಡ ಹೃದಯಗಳು ಬುಧವಾರ ಒಂದೇ ದಿನ ₹೧.೬ ಲಕ್ಷ ಸಂಗ್ರಹಿಸುವ ಮೂಲಕ ಮಿಡಿದಿವೆ.

ಕಾನಹೊಸಹಳ್ಳಿ ದಲಿತ ಕಾಲನಿಯ ನಿವಾಸಿ ಪೂಜಾರಿ ರಮೇಶ್ ಅವರ ಪುತ್ರ ಶ್ರೀಧರ(25) ಅವರು ಚಿಕ್ಕಕುಂಬಳಗುಂಟೆ ಗ್ರಾಮಕ್ಕೆ ಬೈಕ್‌ನಲ್ಲಿ ಹೋಗಿ ವಾಪಸ್ ಬರುವಾಗ ಸೊನ್ನಮರಡಿ ವೀರಭದ್ರೇಶ್ವರ ದೇವಸ್ಥಾನ ಕ್ರಾಸ್ ಬಳಿಯ ದಾಸರೋಬನಹಳ್ಳಿ ರಸ್ತೆಯಲ್ಲಿ ಬಿದ್ದಿದ್ದು, ತಲೆಗೆ ತೀವ್ರ ಗಾಯವಾಗಿ ರಕ್ತಸ್ರಾವವಾಗಿದೆ. ತಕ್ಷಣವೇ ದಾವಣಗೆರೆ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದ್ದಾರೆ. ಶಸ್ತ್ರಚಿಕಿತ್ಸೆ ಅನಿವಾರ್ಯವಾಗಿದ್ದು, ₹೩ ಲಕ್ಷ ಖರ್ಚಾಗಲಿದೆ ಎಂದು ವೈದ್ಯರು ತಿಳಿಸಿದ್ದರಿಂದ ಕಡುಬಡತನ ಇರುವ ಪೂಜಾರಿ ರಮೇಶ್ ಅವರ ಕುಟುಂಬಕ್ಕೆ ದಿಕ್ಕು ತೋಚದಂತಾಗಿದೆ. ಈ ವಿಷಯ ತಿಳಿಯುತ್ತಿದ್ದಂತೆ ಕಾನಹೊಸಹಳ್ಳಿಯ ಜೈ ಭೀಮ್ ಯುವಕರ ಸಂಘದ ಪದಾಧಿಕಾರಿಗಳು, ಎಸ್ಸಿ ಕಾಲನಿಯ ಕೀರ್ತನಾ, ನೀಲಾಂಬರಿ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಮಹಿಳಾ ಸ್ವಸಹಾಯ ಸಂಘದ ಪದಾಧಿಕಾರಿಗಳು ತಮ್ಮ ಕೈಲಾದಷ್ಟು ಹಣ ಸಹಾಯ ಮಾಡಿದ್ದರಿಂದ ₹೧,೦೬,೮೦೦ ಸಂಗ್ರಹವಾಗಿದೆ. ಈ ಹಣವನ್ನು ಗಾಯಾಳು ಶ್ರೀಧರ ಅವರ ಕುಟುಂಬಕ್ಕೆ ನೀಡಿ ಮಾನವೀಯತೆ ಮೆರೆದಿರುವುದು ಎಲ್ಲರ ಮೆಚ್ಚುಗೆಗೆ ಕಾರಣವಾಗಿದೆ. ಈ ಸಂದರ್ಭದಲ್ಲಿ ಜೈ ಭೀಮ್ ಯುವಕ ಸಂಘದ ಪದಾಧಿಕಾರಿಗಳಾದ ಎನ್. ತಿಪ್ಪೇಶ, ಎನ್.ಎಂ. ರಾಘವೇಂದ್ರ, ಗ್ರಾಪಂ ಬಿಲ್ ಕಲೆಕ್ಟರ್ ಪಿ. ಶಶಿಕುಮಾರ್, ಎಸ್.ಎಂ. ಮಂಜುನಾಥ, ಎನ್. ನಾಗರಾಜ, ಡಿ. ರಮೇಶ್, ಎಂ. ಚೌಡಪ್ಪ ಸೇರಿ ಮಹಿಳಾ ಸ್ವ ಸಹಾಯ ಸಂಘದ ಪದಾಧಿಕಾರಿಗಳು ಇದ್ದರು. ಯುವಕ ಶ್ರೀಧರ್ ಅವರಿಗೆ ಅಪರಿಚಿತ ವಾಹನ ಡಿಕ್ಕಿಯ ಕುರಿತು ದೂರು ನೀಡಿಲ್ಲ ಎಂಬುದು ತಿಳಿದಿದೆ.