ಸಾರಾಂಶ
ಜಿಲ್ಲಾಧಿಕಾರಿ ಅಧಿಕಾರಿಗಳಿಗೆ ನಿರ್ದೇಶನ । ಪಲ್ಸ್ ಪೋಲಿಯೋ ಕಾರ್ಯಕ್ರಮದ ಚಾಲನಾ ಸಮಿತಿಯ ಪೂರ್ವಭಾವಿ ಸಭೆಕನ್ನಡಪ್ರಭ ವಾರ್ತೆ ಹಾಸನ
ಪೋಲಿಯೋ ಲಸಿಕೆಯಿಂದ ಯಾವುದೇ ಅರ್ಹ ಮಕ್ಕಳು ವಂಚಿತರಾಗಬಾರದು, ಲಸಿಕಾ ಕಾರ್ಯಕ್ರಮದಲ್ಲಿ ಯಾವುದೇ ಲೋಪದೋಷವಾಗದಂತೆ ಯಶಸ್ವಿಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಸಿ.ಸತ್ಯಭಾಮ ಸೂಚಿಸಿದರು.ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಬಿ.ಸಿ ರಾಯ್ ಸಭಾಂಗಣದಲ್ಲಿ ಬುಧವಾರ ಜಿಲ್ಲಾದ್ಯಂತ ನಡೆಯುವ ಪಲ್ಸ್ ಪೋಲಿಯೋ ಕಾರ್ಯಕ್ರಮದ ಚಾಲನಾ ಸಮಿತಿಯ ಪೂರ್ವಭಾವಿ ಸಭೆ ನಡೆಸಿ ಮಾತನಾಡಿ, ಮಾ.೩ ರಿಂದ ನಡೆಯುವ ಲಸಿಕಾ ಕಾರ್ಯಕ್ರಮಕ್ಕೆ ಕೊರತೆಯಾಗದಂತೆ ಎಚ್ಚರಿಕೆ ವಹಿಸಿ ಸಿದ್ಧತೆ ಮಾಡಿಕೊಳ್ಳಲು ಅಧಿಕಾರಿಗಳಿಗೆ ತಿಳಿಸಿದರು.
ಪಲ್ಸ್ ಪೋಲಿಯೋ ಹಮ್ಮಿಕೊಂಡಿರುವ ದಿನಾಂಕದ ಬಗ್ಗೆ ಅಂಗನವಾಡಿ ಕಾರ್ಯಕರ್ತೆಯರು ಕಡ್ಡಾಯವಾಗಿ ಪೋಷಕರಿಗೆ ಮಾಹಿತಿಯನ್ನು ಮೊದಲೇ ನೀಡಿರುವಂತೆ ನೋಡಿಕೊಳ್ಳಬೇಕು. ಲಸಿಕಾ ಕಾರ್ಯಕ್ರಮ ನಡೆಯುವ ದಿನದ ಬಗ್ಗೆ ಸ್ಥಳೀಯ ಪತ್ರಿಕೆಗಳಿಗೆ ಹೆಚ್ಚಿನ ಪ್ರಚಾರ ನೀಡಬೇಕು. ಸ್ಥಳೀಯ ಕೇಬಲ್ ನೆಟ್‌ವರ್ಕ್‌ನಲ್ಲಿ ಪ್ರಚಾರ ಮಾಡಬೇಕು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಭಿತ್ತಿಪತ್ರಗಳು, ಕರಪತ್ರಗಳು ಮತ್ತು ಬ್ಯಾನರ್‌ಗಳ ಮೂಲಕ ಹೆಚ್ಚಿನ ಪ್ರಚಾರವನ್ನು ನೀಡಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.ಪಲ್ಸ್ ಪೋಲಿಯೋ ಬೂತ್‌ಗಳಲ್ಲಿ ಕಾರ್ಯಕ್ರಮದ ಉದ್ಘಾಟನೆಯ ವೇಳೆಯಲ್ಲಿ ಬೂತ್‌ಗಳನ್ನು ಹೂವು, ಹಸಿರು ತೋರಣ, ಬಾಳೆ ಕಂಬಗಳಿಂದ ಅಲಂಕರಿಸಿ ಬೂತ್‌ಗಳಲ್ಲಿ ಹಬ್ಬದ ವಾತಾವರಣ ಸೃಷ್ಟಿ ಮಾಡಬೇಕು. ಪಲ್ಸ್ ಪೋಲಿಯೋ ಲಸಿಕೆ ಕಾರ್ಯಕ್ರಮಕ್ಕೆ ಸರ್ಕಾರಿ ಇಲಾಖೆಗಳ ವಾಹನಗಳನ್ನು ಬಳಸಿಕೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ತಿಳಿಸಿದರು.
ಅವಶ್ಯಕತೆ ಇರುವ ಶುಶ್ರೂಷಕ ವಿದ್ಯಾರ್ಥಿಗಳನ್ನು ಪಲ್ಸ್ ಪೋಲಿಯೋ ಕಾರ್ಯಕ್ರಮಕ್ಕೆ ನಿಯೋಜಿಸಲಾಗುವುದು. ಕಮ್ಯೂನಿಟಿ ಮೆಡಿಸನ್ ವಿಭಾಗದ ಒಬ್ಬರು ತಜ್ಞರನ್ನು ನಾಲ್ಕು ದಿನಗಳ ಮೇಲ್ವಿಚಾರಣೆಗೆ ನೀಡಬೇಕು ಎಂದು ವೈದ್ಯಕೀಯ ಮಹಾವಿದ್ಯಾಲಯದ ಮುಖ್ಯಸ್ಥರಿಗೆ ತಿಳಿಸಿದರು.ರೈಲ್ವೆ ನಿಲ್ದಾಣ ಹಾಗೂ ಕೆಎಸ್‌ಆರ್‌ಟಿಸಿ ನಿಲ್ದಾಣಗಳಲ್ಲಿ ದಿನದ ೨೪ ಗಂಟೆಯೂ ಲಸಿಕಾ ಕೇಂದ್ರಗಳನ್ನು ತೆರೆಯುವಂತೆ ವ್ಯವಸ್ಥೆ ಮಾಡುವುದು. ಎಲ್ಲಾ ರೈಲ್ವೆ ನಿಲ್ದಾಣ ಹಾಗೂ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ನಿರಂತರವಾಗಿ ಲಸಿಕಾ ಕಾರ್ಯಕ್ರಮದ ಬಗ್ಗೆ ಪ್ರಚಾರ ಮಾಡುವಂತೆ ತಿಳಿಸಿದರು.
ನಗರ ವ್ಯಾಪ್ತಿಯಲ್ಲಿ ಕೊಳಚೆ ಪ್ರದೇಶಗಳಲ್ಲಿ ಹೆಚ್ಚಿನ ಪ್ರಾಮುಖ್ಯತೆ ಕೊಟ್ಟು ಯಾವುದೇ ಅರ್ಹ ಮಗು ಲಸಿಕೆಯಿಂದ ವಂಚಿತರಾಗದ ಪ್ರೀತಿಯಲ್ಲಿ ನೋಡಿಕೊಳ್ಳಬೇಕು. ಸ್ಥಳೀಯ ವೈದ್ಯಾಧಿಕಾರಿಗಳಿಗೆ ಮೇಲುಸ್ತುವಾರಿ ವಹಿಸಲು ಹೇಳಿದರು.ರೋಟರಿ ಹಾಗೂ ಸ್ವಯಂ ಸೇವಾ ಸಂಸ್ಥೆಗಳ ಲಸಿಕ ತಂಡದವರು ಭೇಟಿ ನೀಡಿದ ಸಂದರ್ಭದಲ್ಲಿ ತಂದೆ ತಾಯಂದಿರು ಬೂತ್‌ಗಳಿಗೆ ಹೋಗುವಂತೆ ಪ್ರೇರೇಪಿಸಲು ಸ್ವಯಂ ಸೇವಕರನ್ನು ಒದಗಿಸಿ ಕೊಡುವಂತೆ ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣಾಧಿಕಾರಿ ಡಾ.ಅನಿಲ್ ಕುಮಾರ್, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಲೋಕೇಶ್, ಜಿಲ್ಲಾ ಆರ್ ಸಿ.ಎಚ್ ಅಧಿಕಾರಿ ಚೇತನ್ ಹಾಗೂ ಮತ್ತಿತ್ತರ ಅಧಿಕಾರಿಗಳು ಹಾಜರಿದ್ದರು. ಹಾಸನದಲ್ಲಿ ನಡೆಯುವ ಪಲ್ಸ್ ಪೋಲಿಯೋ ಕಾರ್ಯಕ್ರಮದ ಚಾಲನಾ ಸಮಿತಿಯ ಪೂರ್ವಭಾವಿ ಸಭೆ ನಡೆಸಿ ಜಿಲ್ಲಾಧಿಕಾರಿ ಸಿ.ಸತ್ಯಭಾಮ ತಿಳಿಸಿದರು.