ಸುಮಾರು ೬೦ ವರ್ಷಗಳಿಂದ ಈ ಬೊರ್‌ವೆಲ್ ಲಾರಿ ಇಟ್ಟುಕೊಂಡಿದ್ದು ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಸುಮಾರು ನೂರಕ್ಕೂ ಹೆಚ್ಚು ಲಾರಿಗಳಿದ್ದು, ಸಾವಿರಕ್ಕೂ ಹೆಚ್ಚು ಜನ ಕೆಲಸ ಮಾಡುತ್ತಿದ್ಧಾರೆ.
ಕನ್ನಡಪ್ರಭ ವಾರ್ತೆ ಹೊಸಕೋಟೆ
ಮಧ್ಯಪ್ರಾಚ್ಯ ಯುದ್ಧದಿಂದಾಗಿ ಬೋರ್‌ವೆಲ್ ಕೊರೆಸಲು ಅಗತ್ಯ ವಸ್ತುಗಳ ಬೆಲೆ ಏರಿಕೆ ಆಗಿದ್ದರಿಂದ ಬೋರ್‌ವೆಲ್ ಲಾರಿ ಮಾಲೀಕರು ಹಾಗೂ ಏಜೆಂಟರ ನಡುವೆ ದರ ಏರಿಕೆಗಾಗಿ ತೀವ್ರ ಜಟಾಪಟಿ ಏರ್ಪಟ್ಟು ಪ್ರತಿಭಟನೆ, ಮಾತುಕತೆ ನಡೆಸಿ ಬೋರ್‌ವೆಲ್ ಕೊರೆಸಲು 0 ದಿಂದ 1 ಸಾವಿರ ಅಡಿಗೆ ₹1.80 ಲಕ್ಷ ದರ ನಿಗದಿ ಮಾಡಲಾಗಿದೆ ಎಂದು ಬೋರ್‌ವೆಲ್ ಮಾಲೀಕರ ಸಂಘದ ಅಧ್ಯಕ್ಷ ಚನ್ನಕೇಶವ ತಿಳಿಸಿದರು.ತಾಲೂಕಿನ ಆಲಪ್ಪನಹಳ್ಳಿ ಬಳಿ ಪೂರ್ವ ಕರ್ನಾಟಕ ಬೋರ್‌ವೆಲ್ ರಿಗ್ ಮಾಲೀಕರು ಹಾಗೂ ಏಜೆಂಟರ ಸಂಘದ ಸಂಧಾನ ಸಭೆ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಇದಕ್ಕೂ ಮೊದಲು 0 ದಿಂದ 1 ಸಾವಿರ ಅಡಿಗೆ ₹1.60ಲಕ್ಷ ದರ ನಿಗದಿ ಮಾಡಿದ್ದೆವು. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಕಾರ್ಬನ್ ಬಿಟ್, ಆಯಿಲ್, ಹ್ಯಾಮರ್ ಸೇರಿದಂತೆ ಎಲ್ಲಾ ವಸ್ತುಗಳು ಸಮರೋಪಾದಿಯಲ್ಲಿ ಏರಿಕೆ ಕಂಡಿದ್ದರಿಂದ ಮಾಲೀಕರಿಗೆ ಹಳೆಯ ದರದಲ್ಲಿ ಬೋರ್‌ವೆಲ್ ಕೊರೆಯುವುದು ಅಸಾಧ್ಯದ ಮಾತಾಗಿತ್ತು. ಹಳೆಯ ದರದಲ್ಲಿ ಚಾಲಕರಿಗೆ ವೇತನ, ಊಟ, ಲಾರಿಗೆ ಇಂಧನ ಸೇರಿದಂತೆ ಬೋರ್‌ವೆಲ್ ಸಾಮಗ್ರಿಗಳ ಖರೀದಿ ಮಾಡಿ ಲಾರಿಗಳ ಲೋನ್ ಕಟ್ಟುವುದೇ ಕಷ್ಟವಾಗಿತ್ತು. ಈಗ ಅಂತಿಮವಾಗಿ ಸಭೆ ನಡೆಸಿ ಏಜೆಂಟರು ₹1.80ಲಕ್ಷ ಹೊಸ ದರ ನಿಗದಿ ಮಾಡಿದ್ದು ರೈತರು ಕೂಡ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.ಬೋರ್‌ವೆಲ್ ರಿಗ್ ಮಾಲೀಕ ಪ್ರಕಾಶ್ ಮಾತನಾಡಿ, ಬೋರ್‌ವೆಲ್‌ನ ಒಂದು ಬಿಟ್‌ಅನ್ನು 1800 ಅಡಿವರೆಗೆ ಬಳಕೆ ಮಾಡಬಹುದಾಗಿದೆ. ಆದರೆ ಒಮ್ಮೆ ಬಳಕೆ ಮಾಡಿದ್ದು ಮತ್ತೊಮ್ಮೆ ಬಳಕೆಗೆ ಬರೋಲ್ಲ. ಹಳೆಯ ದರದಿಂದ ಮಾಲೀಕರು ಸಾಕಷ್ಟು ನಷ್ಟ ಅನುಭವಿಸುತ್ತಿದ್ದ ಹಿನ್ನೆಲೆ ವಾಹನಗಳನ್ನು ನಿಲ್ಲಿಸಲಾಗಿತ್ತು. ಈಗ ಅಂತಿಮವಾಗಿ ಸಭೆ ನಡೆಸಿ ದರ ಹೆಚ್ಚಳ ಮಾಡುವ ನಿರ್ಧಾರ ಮಾಡಲಾಯಿತು ಎಂದರು.
ಬೋರ್‌ವೆಲ್ ಮಾಲೀಕ ಜಗದೀಶ್ ಮಾತನಾಡಿ, ಸುಮಾರು ೬೦ ವರ್ಷಗಳಿಂದ ಈ ಬೊರ್‌ವೆಲ್ ಲಾರಿ ಇಟ್ಟುಕೊಂಡಿದ್ದು ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಸುಮಾರು ನೂರಕ್ಕೂ ಹೆಚ್ಚು ಲಾರಿಗಳಿದ್ದು, ಸಾವಿರಕ್ಕೂ ಹೆಚ್ಚು ಜನ ಕೆಲಸ ಮಾಡುತ್ತಿದ್ಧಾರೆ. ರಿಗ್ ಬೆಲೆಯನ್ನು ಕಂಪನಿಯವರು ಷೇರು ಮಾರುಕಟ್ಟೆಯಂತೆ ಏರಿಕೆ ಮಾಡುತ್ತಿದ್ದಾರೆ. ಇದಕ್ಕೆ ಕಾರಣ ಗೊತ್ತಿಲ್ಲ. ಆದ್ದರಿಂದ ಈ ವಿಚಾರವಾಗಿ ಸರ್ಕಾರಕ್ಕೆ ಮನವಿ ಸಲ್ಲಿಸಲಿದ್ದು ಸರ್ಕಾರ ರಿಗ್ ಕಂಪನಿಯ ಬೆಲೆ ಏರಿಕೆಗೆ ಕಾರಣ ಹುಡುಕಿ ರೈತರ, ಲಾರಿ ಮಾಲೀಕರು, ಏಜೆಂಟರಿಗೆ ಅನುಕೂಲ ಕಲ್ಪಿಸಿಕೊಡಬೇಕಾಗಿದೆ ಎಂದರು.ಏಜೆಂಟರಾದ ಜಗದೀಶ್ ಸ್ವಾಮಿ, ರಿಗ್ ಮಾಲೀಕರಾದ ಚನ್ನಕೇಶವ, ಚರ್ಲಥನ್, ಸುಬ್ರಮಣಿ, ರಾಮಕೃಷ್ಣಶಂಕರ್, ಕುಮಾರನ್ ಪ್ರಕಾಶ್, ಪ್ರೀಮಿಯರ್ ಆನಂದ್, ಷಣ್ಮುಗ, ಎಸ್‌ಆರ್‌ಎಲ್ ರಾಜ, ಎಸ್‌ಎಸ್‌ವಿ ಪೆರಿಸ್ವಾಮಿ, ಅಂಬಾಲ್ ಶೇಖರ್, ರಾಜಕೃಷ್ಣ ರಾಜವೆಲ್, ವೇಲವನ್, ಜಯಕೃಷ್ಣ, ಮೋಹನ್ ದೊಡ್ಡಬಳ್ಳಾಪುರ, ಧರಣಿಸ್ವಾಮಿ ಕೋಲಾರ, ಸಂಜು ಪರಮಶಿವ ಚಿಕ್ಕಬಳ್ಳಾಪುರ, ದಾಸರಹಳ್ಳಿ ಮಂಜು, ತೆನೆಯೂರು ನಾಗೇಶ್ ಹಾಜರಿದ್ದರು.