ಸಾರಾಂಶ
ಕನ್ನಡಪ್ರಭ ವಾರ್ತೆ ಭಾರತೀನಗರ
ರೈತರ ಬೇಡಿಕೆ ಈಡೇರಿಕೆಗಾಗಿ ಬೆಳಗಾವಿ ಅಧಿವೇಶನದಲ್ಲಿ 1 ಲಕ್ಷ ರೈತರು ಭಾಗವಹಿಸುವ ನಿರೀಕ್ಷೆ ಇದೆ ಎಂದು ಏಕೀಕೃತ ಕರ್ನಾಟಕ ರಾಜ್ಯ ರೈತಸಂಘದ ಸಂಸ್ಥಾಪಕ ಅಧ್ಯಕ್ಷ ಪಚ್ಚೆ ನಂಜುಡಸ್ವಾಮಿ ತಿಳಿಸಿದರು.ಸಮುದಾಯ ಆರೋಗ್ಯ ಕೇಂದ್ರದ ಆವರಣದಲ್ಲಿ ನಡೆಸಲಾದ ರೈತ ಸಂಘದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ಬೆಳಗಾವಿ ಅಧಿವೇಶನದ ವೇಳೆ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಮಂಡ್ಯ ಜಿಲ್ಲೆಯಿಂದ ಕನಿಷ್ಠ 10 ಸಾವಿರ ರೈತರು ಭಾಗವಹಿಸಿ ತಮ್ಮ ಬೇಡಿಕೆಗಳ ಈಡೇರಿಕೆಗೆ ಮುಂದಾಗಬೇಕೆಂದು ತಿಳಿಸಿದರು.
ರಾಜ್ಯ ರೈತ ಸಂಘ ಇತ್ತೀಚಿನ ವರ್ಷಗಳಲ್ಲಿ ತಾತ್ವಿಕ ಭಿನ್ನಾಪ್ರಾಯದಿಂದ ಬಣಗಳಾಗಿ ರೂಪುಗೊಂಡು ಸಂಘಟನೆ ಬಲ ಕುಸಿದಿದೆ. ಈಗ ರೈತ ಸಂಘದ ಏಕೀಕರಣ ಮೂಲಕ ಎಲ್ಲಾ ಬಣಗಳನ್ನು ಒಂದೇ ವೇದಿಕೆಯಲ್ಲಿ ಕರೆತಂದು ಒಗ್ಗೂಡಿಸಿ ಸಂಘಟಿಸಲಾಗುವುದು ಎಂದರು.ರೈತರಿಗಾಗಿ ಹೋರಾಟ ನಡೆಸಿ ತಮ್ಮ ಜೀವವನ್ನು ತೆತ್ತಿದ ಪ್ರೊ.ಎಂ.ಡಿ.ನಂಜುಂಡಸ್ವಾಮಿ, ಕೆ.ಎಸ್,ಪುಟ್ಟಣ್ಣಯ್ಯ ಅವರನ್ನು ನಾವು ಎಂದಿಗೂ ಮರೆಯುವಂತಿಲ್ಲ. ಅವರ ಸಂಘಟನೆ ಹಾದಿಯಲ್ಲೇ ಏಕೀಕೃತ ಕರ್ನಾಟಕ ರಾಜ್ಯ ರೈತಸಂಘದ ಹೆಸರಿನಲ್ಲಿ ರೈತರನ್ನು ಒಗ್ಗೂಡಿಸಿ ಸಂಘಟನೆಯ ಮೂಲಕ ರೈತರಿಗೆ ನ್ಯಾಯದೊರಕಿಸಿಕೊಡಲು ಶ್ರಮಿಸಲಾಗುವುದು ಎಂದರು.
ನಮ್ಮ ಏಕೀಕೃತ ಕರ್ನಾಟಕ ರಾಜ್ಯ ರೈತಸಂಘ ಸಂಘಟನೆಯೊಂದಿಗೆ ರಾಜಕೀಯ ಪಕ್ಷವಾಗಿ ಹೊರಹೊಮ್ಮಬೇಕು. ಮೇಲುಕೋಟೆ ಶಾಸಕ ದರ್ಶನ್‌ಪುಟ್ಟಣ್ಣಯ್ಯ ಅವರು ಸಹ ಏಕೀಕೃತ ಕರ್ನಾಟಕ ರಾಜ್ಯ ರೈತಸಂಘಕ್ಕೆ ಬೆಂಬಲವಾಗಿ ನಿಂತು ಎಲ್ಲಾ ಬಣಗಳನ್ನು ಒಗ್ಗೂಡಿಸಲು ಡಿ.23 ರಂದು ಕೆ.ಎಸ್.ಪುಟ್ಟಣ್ಣಯ್ಯ ಅವರ ಜನ್ಮದಿನ ಹಾಗೂ ರೈತ ದಿನಾಚರಣೆಯಂದು ಎಲ್ಲಾ ಬಣಗಳನ್ನು ಒಂದೇ ವೇದಿಕೆಯಲ್ಲಿ ಕರೆತಂದು ಬೃಹತ್ ಸಮಾವೇಶ ಏರ್ಪಡಿಸಲ್ಲಿದ್ದಾರೆ ಎಂದರು.ಭಾರತೀನಗರ ರೈತ ಸಂಘದ ಪದಾಧಿಕಾರಿಗಳು ಏಕೀಕೃತ ಕರ್ನಾಟಕ ರಾಜ್ಯ ರೈತಸಂಘಕೆ ಬೆಂಬಲಿಸುವುದಾಗಿ ತಿಳಿಸಿದರು.
ಇದೇ ವೇಳೆ ಏಕೀಕೃತ ಕರ್ನಾಟಕ ರಾಜ್ಯ ರೈತಸಂಘಕ್ಕೆ ಮದ್ದೂರು ತಾಲೂಕು ಘಟಕದಿಂದ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.ಈ ಸಂದರ್ಭದಲ್ಲಿ ರೈತ ಸಂಘದ ಮೈಸೂರು ಜಿಲ್ಲಾಘಟಕದ ಅಧ್ಯಕ್ಷ ವಿದ್ಯಾಪ್ರಸಾದ್, ಹಿರಿಯ ಮುಖಂಡರಾದ ರಾಮಕೃಷ್ಣಯ್ಯ, ಸೀತಾರಾಮು, ಸೋಶಿ ಪ್ರಕಾಶ್, ಪ್ರಭು, ಪಣ್ಣೇದೊಡ್ಡಿ ವೆಂಕಟೇಶ್, ಕೊತ್ತನಹಳ್ಳಿ ಉಮೇಶ್, ಅಣ್ಣೂರು ಮಹೇಂದ್ರ, ಕುರಿಕೆಂಪನದೊಡ್ಡಿ ರಾಮಲಿಂಗಯ, ನ.ಲಿ.ಕೃಷ್ಣ, ಕೆ.ಪಿ.ದೊಡ್ಡಿ ಪುಟ್ಟಸ್ವಾಮಿ, ಮಂಡ್ಯ ತಾಲೂಕು ಘಟಕದ ಅಧ್ಯಕ್ಷ ಮರಿಚನ್ನಯ್ಯ, ಕ್ಯಾತಘಟ್ಟ ಬಿಳಿಯಪ್ಪ ಸೇರಿದಂತೆ ಹಲವರಿದ್ದರು.