ಸಾರಾಂಶ
ಕಾರವಾರ: ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಪ್ರಯುಕ್ತ ಭಾನುವಾರ ಜಿಲ್ಲೆಯಲ್ಲಿ ಹಳಿಯಾಳ ತಾಲೂಕಿನ ಮಾವಿನಕೊಪ್ಪದಿಂದ ಭಟ್ಕಳ ತಾಲೂಕಿನ ಗೊರಟೆವರೆಗೆ ಒಟ್ಟು 253 ಕಿಮೀ ಉದ್ದದ ಮಾನವ ಸರಪಳಿ ರಚಿಸಿದ್ದು, 1 ಲಕ್ಷಕ್ಕೂ ಅಧಿಕ ಜನರು ಉತ್ಸಹದಿಂದ ಪಾಲ್ಗೊಂಡಿದ್ದರು.
ಭಾನುವಾರ ಹೊನ್ನಾವರದ ಮೂಡಗಣಪತಿ ಸಭಾಭವನದಲ್ಲಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ಎಸ್. ವೈದ್ಯ ಅವರು, ಪ್ರಜಾಪ್ರಭುತ್ವದ ಆಶಯಗಳಿಗೆ ಪ್ರಜಾಪ್ರಭುತ್ವ ವಿರೋಧಿಗಳಿಂದ ಯಾವುದೇ ಧಕ್ಕೆಯಾಗದಂತೆ ಪ್ರತಿಯೊಬ್ಬ ಸಾರ್ವಜನಿಕರು ಒಗ್ಗಟ್ಟಾಗಿ ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವ ತತ್ವಗಳನ್ನು ಎತ್ತಿ ಹಿಡಿಯುವುದರ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಬೇಕು ಎಂದರು.ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಕುರಿತಂತೆ ಮುಂದಿನ ಜನಾಂಗಕ್ಕೆ ಅರಿವು ಮೂಡಿಸುವುದು ಅತ್ಯಗತ್ಯವಾಗಿದ್ದು, ಶಾಲಾ- ಕಾಲೇಜುಗಳಲ್ಲಿ ಪ್ರತಿದಿನ ಇವುಗಳ ಬಗ್ಗೆ ತಿಳಿಸುವ ಮೂಲಕ ಸುಭದ್ರ ದೇಶ ನಿರ್ಮಾಣ ಮಾಡಬೇಕು ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ, ಜಿಲ್ಲೆಯಲ್ಲಿ ಹಳಿಯಾಳ ತಾಲೂಕಿನ ಮಾವಿನಕೊಪ್ಪದಿಂದ ಭಟ್ಕಳ ತಾಲೂಕಿನ ಗೊರಟೆವರೆಗೆ ಒಟ್ಟು 253 ಕಿಮೀ ಉದ್ದದ ಮಾನವ ಸರಪಳಿ ರಚಿಸಿದ್ದು, ಅರಣ್ಯ ಪ್ರದೇಶದಲ್ಲಿ ಮತ್ತು ಅಪಾಯಕಾರಿ ಗುಡ್ಡಕುಸಿತ ಪ್ರದೇಶದಲ್ಲಿ ವಾಹನಗಳಲ್ಲಿ ಧ್ವಜ ರ್ಯಾಲಿಯ ಮೂಲಕ ಸರಪಳಿಯನ್ನು ಜೋಡಿಸಲಾಗಿದ್ದು, ಜಿಲ್ಲೆಯ 1 ಲಕ್ಷಕ್ಕೂ ಅಧಿಕ ಸಾರ್ವಜನಿಕರು ಈ ಕಾರ್ಯಾಕ್ರಮದಲ್ಲಿ ಭಾಗವಹಿಸಿದ್ದಾರೆ ಎಂದರು.ಮಾನವ ಸರಪಳಿಯಲ್ಲಿ ಪಾಲ್ಗೊಂಡ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ. ದೇಶಪಾಂಡೆ, ಭಾರತವು ತನ್ನ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜಗತ್ತಿಗೆ ಮಾದರಿಯಾಗಿದೆ. ಪ್ರಜಾಪ್ರಭುತ್ವದ ಪ್ರತಿಯೊಂದು ಸೂತ್ರವು ರಾಷ್ಟ್ರದ ಪ್ರಗತಿ ಮತ್ತು ಸೌಹಾರ್ದತೆಯ ಆಧಾರವಾಗಿದೆ ಎಂದರು.
ಅಂಕೋಲಾದ ಗೋಖಲೆ ಸೆಂಟನರಿ ಕಾಲೇಜಿನ ಪ್ರಾಂಶುಪಾಲ ಡಾ. ಸಿದ್ದಲಿಂಗಸ್ವಾಮಿ ವಸ್ತ್ರದ, ಪ್ರಜಾಪ್ರಭುತ್ವದ ಕುರಿತು ವಿಶೇಷ ಉಪನ್ಯಾಸ ನೀಡಿದರು. ಸಂವಿಧಾನದ ಪ್ರಸ್ತಾವನೆಯ ಪ್ರತಿಜ್ಞಾವಿಧಿಯನ್ನು ಸ್ವೀಕರಿಸಲಾಯಿತು ಹಾಗೂ ಸಸಿ ನೆಡುವ ಕಾರ್ಯಕ್ರಮಕ್ಕೆ ಸಚಿವರು ಚಾಲನೆ ನೀಡಿದರು.ಹೊನ್ನಾವರದ ಗೇರುಸೊಪ್ಪ ಸರ್ಕಲ್ ಬಳಿ ನಡೆದ ಮಾನವ ಸರಪಳಿ ಕಾರ್ಯಕ್ರಮದಲ್ಲಿ, ಡಾ. ಬಿ.ಆರ್. ಅಂಬೇಡ್ಕರ್, ಒನಕೆ ಓಬವ್ವ, ಸುಭಾಷ್ ಚಂದ್ರ ಬೋಸ್, ಕಿತ್ತೂರು ರಾಣಿ ಚೆನ್ನಮ್ಮ, ಭಾರತ ಮಾತೆಯ ವೇಷ ಧರಿಸಿದ್ದ ಪುಟಾಣಿಗಳು, ಹಾಲಕ್ಕಿ ವೇಷಧಾರಿಗಳು ಸಾರ್ವಜನಿಕರ ಗಮನ ಸೆಳೆದರು. ವಿವಿಧ ಶಾಲಾ- ಕಾಲೇಜು ವಿದ್ಯಾರ್ಥಿಗಳು, ಚುನಾಯಿತ ಜನಪ್ರತಿನಿಧಿಗಳು, ವಿವಿಧ ಸಂಘ- ಸಂಸ್ಥೆಗಳು, ಸ್ವಯಂ ಸೇವಾ ಸಂಸ್ಥೆಗಳು, ಎಲ್ಲ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಮಾನವ ಸರಪಳಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಹೊನ್ನಾವರ ಪಟ್ಟಣ ಪಂಚಾಯಿತಿ ಅಧ್ಯಕ್ಷ ನಾಗರಾಜ ಭಟ್, ಉಪಾಧ್ಯಕ್ಷ ಸುರೇಶ ಹೊನ್ನಾವರ, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಈಶ್ವರ ಕುಮಾರ್ ಕಾಂದೂ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಜಯಕುಮಾರ್, ಉಪ ವಿಭಾಗಾಧಿಕಾರಿಗಳಾದ ಕನಿಷ್ಕ, ಡಾ. ನಯನಾ, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಉಮೇಶ್, ಮತ್ತಿತರರು ಇದ್ದರು.ಅಪರ ಜಿಲ್ಲಾಧಿಕಾರಿ ಪ್ರಕಾಶ ರಜಪೂತ ಸ್ವಾಗತಿಸಿದರು, ಶಿಕ್ಷಕರಾದ ಸುದೇಶ ನಾಯ್ಕ ಮತ್ತು ವಸಂತಲಕ್ಷ್ಮೀ ಹೆಗಡೆ ನಿರೂಪಿಸಿದರು. ನಳಿನಿ ಪಟಗಾರ ವಂದಿಸಿದರು. ಜಿಲ್ಲಾಡಳಿತ, ಜಿಪಂ, ಸಮಾಜ ಕಲ್ಯಾಣ ಇಲಾಖೆ, ನಗರಾಭಿವೃದ್ಧಿ ಇಲಾಖೆ, ಅರಣ್ಯ ಜೀವ ಪರಿಸರ ಮತ್ತು ಪರಿಸರ ಇಲಾಖೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ವಿವಿಧ ಸಂಘಟನೆ ಸಹಭಾಗಿತ್ವದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.