ಸಾರಾಂಶ
ಕೇಂದ್ರದಲ್ಲಿ ‘ಇಂಡಿಯಾ’ ಒಕ್ಕೂಟ ಅಧಿಕಾರಕ್ಕೆ ಬಂದರೆ ಪ್ರತಿ ಕುಟುಂಬಕ್ಕೆ ಮಾಸಿಕ 8,500 ರು. ಜಮೆ ಮಾಡಲಿದ್ದು ಅಂಚೆ ಕಚೇರಿಯಲ್ಲಿ (ಜಿಪಿಒ) ಕೇವಲ 10 ದಿನಗಳಲ್ಲಿ ಬರೋಬ್ಬರಿ 12 ಸಾವಿರ ಹೊಸ ಐಪಿಪಿಬಿ ಖಾತೆಗಳನ್ನು ತೆರೆಯುವ ಮೂಲಕ ದಾಖಲೆ ನಿರ್ಮಿಸಿದೆ.
ಬೆಂಗಳೂರು : ಕೇಂದ್ರದಲ್ಲಿ ‘ಇಂಡಿಯಾ’ ಒಕ್ಕೂಟ ಅಧಿಕಾರಕ್ಕೆ ಬಂದರೆ ಪ್ರತಿ ಕುಟುಂಬಕ್ಕೆ ಮಾಸಿಕ 8,500 ರು. ಜಮೆ ಮಾಡಲಿದ್ದು ಖಾತೆ ತೆರೆಯಲು ಮೇ 27ರಂದೇ ಕೊನೆ ದಿನ ಎಂಬ ವದಂತಿ ಹಬ್ಬಿಸಿದ ಪರಿಣಾಮ ನಗರದ ಪ್ರಧಾನ ಅಂಚೆ ಕಚೇರಿಯಲ್ಲಿ (ಜಿಪಿಒ) ಕೇವಲ 10 ದಿನಗಳಲ್ಲಿ ಬರೋಬ್ಬರಿ 12 ಸಾವಿರ ಹೊಸ ಐಪಿಪಿಬಿ ಖಾತೆಗಳನ್ನು ತೆರೆಯುವ ಮೂಲಕ ದಾಖಲೆ ನಿರ್ಮಿಸಿದೆ.
ಪ್ರತಿ ಖಾತೆಗೆ ತಲಾ 200 ರು. ಠೇವಣಿ ಪಡೆದಿರುವುದರಿಂದ ಅಂಚೆ ಇಲಾಖೆ ಖಜಾನೆಗೆ 24 ಲಕ್ಷ ರು. ಹರಿದು ಬಂದಿದೆ. ಈಗಲೂ ಖಾತೆ ತೆರೆಯುವವರ ಸಂಖ್ಯೆ ಕಡಿಮೆಯಾಗಿಲ್ಲ.
ಕಳೆದ 10 ದಿನಗಳಿಂದ ದಿನಕ್ಕೆ ಸರಾಸರಿ 1 ಸಾವಿರದಿಂದ 1,200 ಖಾತೆಗಳನ್ನು ತೆರೆಯಲಾಗಿದೆ. ಬೆಂಗಳೂರಿನಲ್ಲಿರುವ ತಮ್ಮ ಸಂಬಂಧಿಕರ ಮಾತುಗಳನ್ನು ಕೇಳಿ ಅಕ್ಕಪಕ್ಕದ ಜಿಲ್ಲೆಗಳ ಮಹಿಳೆಯರು ಕೂಡ ಖಾತೆ ತೆರೆಯಲು ಜಿಪಿಒಗೆ ಆಗಮಿಸುತ್ತಿದ್ದಾರೆ. ಶುಕ್ರವಾರ ಒಂದೇ ದಿನ 1,638 ಹೊಸ ಖಾತೆಗಳನ್ನು ತೆರೆಯಲಾಗಿದ್ದು, ಅತಿ ಹೆಚ್ಚು ಖಾತೆ ತೆರೆದ ದಿನವಾಗಿದೆ ಎಂದು ಅಂಚೆ ಇಲಾಖೆಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ಅಂಚೆ ಕಚೇರಿ ಸಮೀಪ ಸರತಿ ಸಾಲಿನಲ್ಲಿ ನಿಲ್ಲುವ ಮಹಿಳೆಯರ ಸಂಖ್ಯೆಯು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಕಳೆದ 10 ದಿನಗಳಲ್ಲಿ ( ಮೇ 23 ರಿಂದ ಜೂ.1ರವರೆಗೆ) ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಯೋಜನೆಯಡಿ ಸುಮಾರು 12 ಸಾವಿರ ಖಾತೆಗಳನ್ನು ತೆರೆಯಲಾಗಿದೆ ಎಂದು ಮುಖ್ಯ ಪೋಸ್ಟ್ ಮಾಸ್ಟರ್ ಮಂಜೇಶ್ ತಿಳಿಸಿದರು.