ಸಾರಾಂಶ
ಬೆಂಗಳೂರು : ವಿಶ್ವ ತಂಬಾಕು ರಹಿತ ದಿನ ಮೇ 31ರಂದು ಸುಮಾರು ಒಂದು ಲಕ್ಷ ವಿದ್ಯಾರ್ಥಿಗಳಿಗೆ ತಂಬಾಕಿನ ದುಷ್ಪರಿಣಾಮದ ಬಗ್ಗೆ ಜಾಗೃತಿ ಮೂಡಿಸಲು ತಂಬಾಕು ಮುಕ್ತ ಕರ್ನಾಟಕ ಒಕ್ಕೂಟವು ವೆಬಿನಾರ್ ಹಮ್ಮಿಕೊಂಡಿದೆ.
ಶನಿವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಸಂಚಾಲಕ ಎಸ್.ಜೆ. ಚಂದರ್, ದೇಶದ ವಿವಿಧೆಡೆ 15ಕ್ಕೂ ಹೆಚ್ಚಿನ ವಿಶ್ವವಿದ್ಯಾಲಯಗಳು ವೆಬಿನಾರ್‌ನಲ್ಲಿ ಪಾಲ್ಗೊಳ್ಳುತ್ತಿವೆ. ಈ ವೇಳೆ ಚರ್ಚಾಕೂಟ, ತಜ್ಞರ ಅಭಿಪ್ರಾಯ ಮಂಡನೆ ಹಾಗೂ ಸಮಾಲೋಚನೆ ನಡೆಯಲಿದೆ ಎಂದು ತಿಳಿಸಿದರು.
ತಂಬಾಕು ಕಂಪನಿಗಳು ಮಕ್ಕಳನ್ನೇ ಗುರಿಯಾಗಿಸಿಕೊಂಡಿವೆ. ತಂಬಾಕು ಉತ್ಪನ್ನಗಳ ಸೇವನೆಗೆ ಕಡಿವಾಣ ಹಾಕಲು ಕಾನೂನು ಬಲಗೊಳಿಸುವ ಜತೆಗೆ ತಂಬಾಕು ಉತ್ಪನ್ನಗಳ ಮೇಲಿನ ತೆರಿಗೆ ಹೆಚ್ಚಳದಂತಹ ಕ್ರಮಕೈಗೊಳ್ಳಬೇಕು. ತಂಬಾಕು ಕಂಪನಿಗಳು ಆಕರ್ಷಕ ಜಾಹೀರಾತಿನ ಮೂಲಕ ಜನರನ್ನು ಸೆಳೆಯುತ್ತಿವೆ. ತಂಬಾಕು ಉತ್ಪನ್ನಗಳನ್ನು ಬಳಸುವಂತೆ ಯುವಜನರು ಮತ್ತು ಮಕ್ಕಳಿಗೆ ಆಮಿಷ ಒಡ್ಡಲಾಗುತ್ತಿದೆ. ತಂಬಾಕು ಉತ್ಪನ್ನಗಳ ಮೇಲಿನ ತೆರಿಗೆ ಹೆಚ್ಚಿಸುವ ಮೂಲಕ ಮಕ್ಕಳು ಹಾಗೂ ಯುವಜನರು ಧೂಮಪಾನದಂತಹ ವ್ಯಸನಗಳಿಗೆ ಒಳಪಡುವುದನ್ನು ತಡೆಯಬೇಕು ಎಂದು ಒತ್ತಾಯಿಸಿದರು.