ಕನ್ನಡಪ್ರಭ ವಾರ್ತೆ ಬೆಂಗಳೂರು

ಮುಖ್ಯಮಂತ್ರಿಯಾಗಿ ಒಂದು ತಿಂಗಳು ಪೂರೈಸಿದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಶುಕ್ರವಾರ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದರು.

ಶುಕ್ರವಾರ ಬೆಳಗ್ಗೆ ಸಿದ್ದರಾಮಯ್ಯ ಅವರ ಸರ್ಕಾರಿ ನಿವಾಸ ಕಾವೇರಿಯಲ್ಲಿ ಡಿ.ಕೆ. ಶಿವಕುಮಾರ್‌ ಅವರು ತಮ್ಮ ಪತ್ನಿ ಉಷಾ ಮತ್ತು ಸಹೋದರ ಡಿ.ಕೆ.ಸುರೇಶ್‌ ಅವರೊಂದಿಗೆ ಸಿದ್ದರಾಮಯ್ಯ ಅವರನ್ನು ಭೇಟಿಯಾದರು. ಈ ವೇಳೆ ಇಬ್ಬರೂ ನಾಯಕರು ಒಟ್ಟಿಗೆ ಉಪಹಾರ ಸೇವಿಸಿದರು. ನಂತರ ಸಚಿವ ಸಂಪುಟ ವಿಸ್ತರಣೆ ಸೇರಿದಂತೆ ಪ್ರಸ್ತುತ ರಾಜಕೀಯ ಬೆಳವಣಿಗೆಗಳ ಕುರಿತಂತೆ ನಾಯಕರು ಚರ್ಚಿಸಿದರು. ಈ ವೇಳೆ ದೆಹಲಿ ಪ್ರವಾಸದ ಬಗ್ಗೆ ಚರ್ಚಿಸಿದ್ದು, ಹೈಕಮಾಂಡ್‌ ನಾಯಕರಿಂದ ಕರೆ ಬಂದ ನಂತರ ದೆಹಲಿಗೆ ತೆರಳುವ ಕುರಿತು ನಿರ್ಧರಿಸಿದರು.

ಸಂಜೆ ಸದಾಶಿವನಗರದಲ್ಲಿನ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸಕ್ಕೆ ಭೇಟಿ ನೀಡಿದ ಡಿ.ಕೆ.ಶಿವಕುಮಾರ್‌ ಕೆಲಕಾಲ ಚರ್ಚಿಸಿದರು. ಒಂದು ತಿಂಗಳ ಕಾಲ ತಮ್ಮ ಸರ್ಕಾರ ಕೈಗೊಂಡ ನಿರ್ಧಾರಗಳು ಸೇರಿದಂತೆ ಇನ್ನಿತರ ವಿಚಾರಗಳ ಕುರಿತಂತೆ ಡಿ.ಕೆ.ಶಿವಕುಮಾರ್‌ ಮಾಹಿತಿ ನೀಡಿದರು.ಧರ್ಮದಿಂದ ಆಳಬೇಕು, ಬಾಳಬೇಕು ಎಂದು ಕೆಲಸ ಮಾಡಿದ್ದೇನೆ:

ಧರ್ಮದಿಂದ ಏಳಬೇಕು, ಬಾಳಬೇಕು, ಆಳಬೇಕು, ತಾಳ್ಮೆಯಿಂದರಬೇಕು ಎಂದು ಕೆಲಸ ಮಾಡಿಕೊಂಡು ಬಂದಿದ್ದೇನೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಹೇಳಿದರು. ಕನಕಪುರದ ದೇಗುಲ ಮಠದ ಆವರಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಲಿಂಗೈಕ್ಯ ಮುಮ್ಮಡಿ ನಿರ್ವಾಣ ಶ್ರೀಗಳ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಡಾ.ಮುಮ್ಮಡಿ ನಿರ್ವಾಣ ಸ್ವಾಮೀಜಿ ಬೆಂಗಳೂರು ದಕ್ಷಿಣ ಜಿಲ್ಲೆ ಹಾಗೂ ಸುತ್ತಲಿನ ಪ್ರದೇಶಕ್ಕೆ ದೊಡ್ಡ ದೀಪವಾಗಿದ್ದರು ಎಂದು ಸ್ಮರಿಸಿದರು. ಶ್ರೀಗಳ ಚಿಂತನೆಯಂತೆ ಸೇತುವೆ ಉದ್ಘಾಟಿಸಿರುವುದು ನನ್ನ ಭಾಗ್ಯ. ಈ ಸೇತುವೆಗೆ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿಯ ಹೆಸರನ್ನೇ ನಾಮಕರಣ ಮಾಡಲಾಗಿದೆ. ವೀರಗಂಗಾಧರ ಅಜ್ಜಯ್ಯನವರು ಮಾನವ ಧರ್ಮಕ್ಕೆ ಜಯವಾಗಲಿ, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ. ನಾಡು ಧರ್ಮ ಸಾಮ್ರಾಜ್ಯವಾಗಲಿ. ಭಕ್ತಿಯ ನೆಲೆ ಬೀಡಾಗಲಿ ಎಂದು ಮಾರ್ಗದರ್ಶನ ನೀಡಿದ್ದಾರೆ ಎಂದರು. ನಾನು ಅಜ್ಜಯ್ಯನವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದಾಗ ಸಾಕಷ್ಟು ಚರ್ಚೆಯಾಯಿತು. ಅನೇಕರು ನನ್ನನ್ನು ವಿವಿಧ ರೀತಿಯಲ್ಲಿ ಕೇಳಿದರು. ನಾನು ಅವರಿಗೆ ಇದು ನನ್ನ ನಂಬಿಕೆ ಎಂದು ಹೇಳಿದೆ. ನಮ್ಮ ಆರಾಧ್ಯ ದೈವ, ನಂಬಿಕೆ, ಮಾರ್ಗದರ್ಶನ ಕೊಟ್ಟವರನ್ನು, ಕಷ್ಟಕಾಲದಲ್ಲಿ ಜೊತೆಗೆ ನಿಂತವರನ್ನು ನಾವು ಸ್ಮರಿಸಬೇಕು. ಈ ವಿಚಾರ ನನಗೆ, ಯಡಿಯೂರಪ್ಪನವರಿಗೆ, ಸೋಮಣ್ಣ ಅವರಿಗೆ ಗೊತ್ತು, ಬೇರೆಯವರಿಗೆ ಇದು ಗೊತ್ತಿಲ್ಲ ಎಂದು ತಿಳಿಸಿದರು.