ಬತ್ತಿ ಬರಿದಾದ ಭೀಮೆಯ ಒಡಲು ತುಂಬಲು ಧಾವಿಸುತ್ತಿದ್ದಾಳೆ ಕೃಷ್ಣೆ

| Published : Apr 01 2024, 12:46 AM IST

ಸಾರಾಂಶ

ಯಾದಗಿರಿ ಜಿಲ್ಲೆಯ ನಾರಾಯಣಪುರದಲ್ಲಿರುವ ಬಸವಸಾಗರದಿಂದ ಕೃಷ್ಣಾ ನದಿಗೆ ಹರಿ ಬಿಟ್ಟಿರುವ 1 ಟಿಎಂಸಿ ನೀರು ಇಂದು ಅಥವಾ ನಾಳೆ ಅಫಜಲ್ಪುರದಲ್ಲಿರುವ ಭೀಮಾ ಒಡಲನ್ನು ಸೇರಲಿದೆ.

ಕನ್ನಡಪ್ರಭ ವಾರ್ತೆ ಕಲಬುರಗಿ

ಬತ್ತಿ ಹೋಗಿರುವ ಭೀಮಾ ನದಿಗೆ ಯಾದಗಿರಿ ಜಿಲ್ಲೆಯಲ್ಲಿರುವ ನಾರಾಯಣಪುರ ಜಲಾಶಯದಿಂದ ಕಳೆದ 4 ದಿನದಿಂದ ಹರಿಬಿಡಲಾಗಿರುವ 1 ಟಿಎಂಸಿ ನೀರು ಇದೀಗ ಇಂಡಿ ತಾಲೂಕಿನ ಅರ್ಜಣಗಿ ದಾಟಿದ್ದು, ಭಾನುವರ ರಾತ್ರಿ ಅಫಜಲ್ಪುರ ತಾಲೂಕಿನ ಉಡಚಣ ಹತ್ತಿರದ ಮಿರಗಿ ಗ್ರಾಮ ತಲುಪಿ ಬೆಳಗಿನ ಜಾವ ಭೀಮಾ ಪಾತ್ರದಲ್ಲಿ ಪ್ರವಹಿಸುವ ಸಾಧ್ಯತೆಗಳಿವೆ.

ಭೀಮಾ ನದಿಗೆ ನೀರು ಹರಿಸುವಂತೆ ಆಗ್ರಹಿಸಿ ಅಫಜಲ್ಪೂರದಲ್ಲಿ ನಡೆದ 14 ದಿನಗಳ ನಿರಶನದ ಫಳವಾಗಿ ಈ ನೀರು ಭೀಮೆಯತ್ತ ಹರಿದು ಬರುತ್ತಿದೆ.

ಭೀಮಾ ನದಿಗೆ ಉಜನಿಯಿಂದ ನಮ್ಮ ಹಕ್ಕಿನ 5 ಟಿಎಂಸಿ ನೀರು ಹರಿಸಿ ಎಂದು ಆಗ್ರಹಿಸಿ ಸರಕಾರದ ಮೇಲೆ ಒತ್ತಡ ತರಲು ಹೋರಾಟಗಾರ ಶಿವಕುಮಾರ್‌ ನಾಟೀಕಾರ್‌ ನೇತೃತ್ವದಲ್ಲಿ 14 ದಿನ ಹೋರಾಟ ನಡೆದಾಗ ಜಿಲ್ಲಾಡಳಿತದ ಹಂತದಲ್ಲಿ ಹಾಗೂ ರಾಜಕೀಯವಾಗಿಯೂ ಸಂಚಲನ ಮೂಡಿತ್ತು.

ಹೋರಾಟಗಾರರ ಬೇಡಿಕೆಯಂತೆ ತಕ್ಷಣವೇ ಮಹಾರಾಷ್ಟ್ರದ ಉಜನಿಯಿಂದ ನೀರು ಹರಿದು ಬಾರದೆ ಹೋದರೂ ಪಕ್ಕದ ನಾರಾಯಣಪುರದಿಂದಲಾದರೂ 1 ಟಿಎಂಸಿ ಮೀರು ಅಫಜಲ್ಪುರದಲ್ಲಿ ಪ್ರವಹಿಸುವ ಭೀಮೆಗೆ ಹರಿಸೋಣವೆಂದು ಕಲಬುರಗಿ ಪ್ರಾ. ಆಯುಕ್ತ ಕೃಷ್ಣ ಬಾಜಪೇಯಿ ಮಾ.27ರಂದೇ ಆದೇಶ ಹೊರಡಿಸಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.

ನಾರಾಣಪುರ ಜಲಾಶದಿಂದ 1 ಟಿಎಂಸಿ ನೀರನ್ನು ಕೆಬಿಜೆಎನ್‌ಎಲ್ ಕಾಲುವೆ ನಂಬರ್‌ 84 ಬಳಗಾನೂರ, ನಂ-11 ಕುಳಕಮಡಿ, ಎಸ್ಕೇಪ್‌ ಗೇಟ್‌ 50 ಅಥವಾ ಇಂಡಿ ಶಾಖಾ ಕಾಲುವೆಯಿಂದ 13, 14ನೇ ವಿತರಣೆ ಕಾಲುವೆಯಿಂದಲಾದರೂ ಸದರಿ ನೀರನ್ನು ಭೀಮಾ ನದಿಗೆ ಹರಿಸುವಂತೆ ಆದೇಶದಲ್ಲಿ ಹೇಳಲಾಗಿತ್ತು.

ಸದರಿ ಆದೇಶದಂತೆಯೇ ಕೃಷ್ಣೆಯ ನೀರು ಇದೀಗ ಭೀಮಾ ನದಿಯತ್ತ ಪ್ರವಹಿಸುತ್ತಿದೆ. ಇಂದು ರಾತ್ರಿ ಅಥವಾ ನಾಳೆ ಬೆಳಗಿನ ಜಾವದೊಳಗಾಗಿ ಭೀಮೆಯ ಒಡಲು ಸೇರಿ ಮಿರಗಿಯಿಂದ ಅಫಜಲ್ಪುರ, ಸೊನ್ನ, ಗಾಣಗಾಪುರ, ಸೇರಿದಂತೆ ಕಲಬುರಗಿಯತ್ತ ಪ್ರವಹಿಸಲಿದೆ.

ಹೀಗೆ ಹರಿದು ಬರುತ್ತಿರುವ ಈ ನೀರನ್ನು ಕೃಷಿ ಉದ್ದೇಶಕ್ಕೆ ಬಳಸಲು ನಿಷೇಧಿಸಲಾಗಿದೆ. ಜನ ಜಾನುವಾರುಗಳ ಕುಡಿಯುವ ನೀರಿಗಾಗಿ ಮಾತ್ರ ಇದು ಬಳಕೆಯಾಗಬೇಕು, ಪಂಪ್‌ಸೆಟ್‌ ಬಳಸಿ ನೀರನ್ನು ಕೃಷಿಗೆ ಬಳಕೆ ಮಾಡೋದು ಕಂಡು ಬಂದಲ್ಲಿ ತಕ್ಷಣ ಕಾನೂನು ಕ್ರಮ ಕೈಗೊಳ್ಳುವ ಬಗ್ಗೆಯೂ ಆರ್‌ಸಿ ಕೃಷ್ಣ ವಾಜಪೇಯಿ ತಮ್ಮ ಆದೇಶದಲ್ಲಿ ಖಡಕ್‌ ಸಂದೇಶ ಕೂಡಾ ನೀಡಿದ್ದಾರೆ.ಭೀಮಾ ತೀರದ ಸುತ್ತಮುತ್ತ ನಿಷೇಧಾಜ್ಞೆ ಜಾರಿ

ಕಲಬುರಗಿ ಜಿಲ್ಲೆಯಲ್ಲಿ ಜನ-ಜಾನುವಾರುಗಳಿಗೆ ಕುಡಿಯುವ ನೀರು ಪೂರೈಕೆಗೆ ನಾರಾಯಣಪುರ ಜಲಾಶಯದಿಂದ ಕೆಂಭಾವಿ-ಇಂಡಿ ಕಾಲುವೆ ಮೂಲಕ ಭೀಮಾ ನದಿಗೆ ನೀರು ಹರಿಸಲಾಗುತ್ತಿರೋದರಿಂದ ಸದರಿ ನೀರು ಇನ್ನೇನು ಭೀಮೆಯನ್ನು ತಲುಲಿರೋದರಿಂದ, ಅನಗತ್ಯ ನೀರು ಪೋಲು ತಡೆಯಲು ಮತ್ತು ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಕಳೆದೆರಡು ದಿನದಿಂದಲೇ ಜಿಲ್ಲಾಡಳಿತ ಭೀಮಾ ತೀರದ ಸುತ್ತ ನಿಷೇಧಾಜ್ಞೆ ಹೇರಿದೆ.

ಏ.8ರ ವರೆಗೆ ಯಡ್ರಾಮಿ ಮತ್ತು ಅಫಜಲಪೂರ ತಾಲೂಕಿನ ಭೀಮಾ ನದಿ ದಂಡೆ ಹಾಗೂ ಹಾಯ್ದು ಹೋಗುವ ಕಾಲುವೆ ಸುತ್ತಮುತ್ತ ವಿವಿಧ ಷರತ್ತುಗೊಳಪಟ್ಟು ದಂಡ ಪ್ರಕ್ರಿಯೆ ಸಂಹಿತೆ-1973 (ಪರಿಷ್ಕೃತ 1974) ಸಿ.ಆರ್.ಪಿ.ಸಿ. ಕಲಂ 144ರಂತೆ 100 ಅಡಿ ನಿಷೇಧಿತ ಪ್ರದೇಶವೆಂದು ಯಡ್ರಾಮಿ ಮತ್ತು ಅಫಜಲ್ಪುರ ತಹಸೀಲ್ದಾರ್‌ ಆದೇಶ ಹೊರಡಿಸಿದ್ದು ಇದು ಏ.8ರ ವರೆಗೆ ಅನ್ವಯ ಇರಲಿದೆ.

ಯಡ್ರಾಮಿ ತಾಲೂಕಿನ ವ್ಯಾಪ್ತಿಯಲ್ಲಿ ಇಂಡಿ ಶಾಖಾ ಕಾಲುವೆಯ 10.00 ಕೀ.ಮಿ ರಿಂದ 20.00 ಕೀ.ಮಿ ನಲ್ಲಿ ಬರುವಂತಹ ದುಮ್ಮದ್ರಿ, ನಾಗರಹಳ್ಳಿ, ಕಾಚಾಪುರ, ಅಖಂಡಹಳ್ಳಿ, ಕುರಳಗೇರಾ, ಯಡ್ರಾಮಿ ಗ್ರಾಮಗಳು ಯಡ್ರಾಮಿಯ ವಿತರಣಾ ಕಾಲುವೆ ಸಂಖ್ಯೆ (21, 3, 4) ಮೂರು ಗೇಟುಗಳ ಮೂಲಕ ಹಾಯ್ದ ಹೋಗುವ ಕಾಲುವೆ ಮತ್ತು ನದಿಯ ದಡದ ಸುತ್ತ ಮುತ್ತಲಿನ 100 ಅಡಿ ವಿಸ್ತಾರದ ಭೂ ಪ್ರದೇಶವನ್ನು ನಿಷೇಧಿತ ಪ್ರದೇಶವೆಂದು ತಹಶೀಲ್ದಾರ ಶಶಿಕಲಾ ಜಿ. ಪಾದಗಟ್ಟಿ ಆದೇಶಿಸಿದ್ದಾರೆ.

ಅದೇ ರೀತಿ ಅಫಜಲಪೂರ ತಾಲೂಕಿನ ವ್ಯಾಪ್ತಿಯಲ್ಲಿ ಭೀಮಾ ನದಿಯ ದಡದಲ್ಲಿರುವ ಹಿರಿಯಾಳ, ಭೋಸಗಾ, ದುದ್ದಣಗಿ, ಮಂಗಳೂರು, ಬಳುಂಡಗಿ, ಅಳ್ಳಗಿ (ಬಿ), ಅಳ್ಳಗಿ (ಕೆ), ಉಡಚಾಣ, ಬಂಕಲಗಾ, ಶಿರವಾಳ, ಡಿಗ್ಗಿ ಹಾಗೂ ಸೊನ್ನ ಗ್ರಾಮಗಳಲ್ಲಿ ಹಾಯ್ದ ಹೋಗುವ ಕಾಲುವೆ ಮತ್ತು ನದಿಯ ದಡದ ಸುತ್ತ ಮುತ್ತಲಿನ 100 ಅಡಿ ವಿಸ್ತಾರದ ಭೂ ಪ್ರದೇಶವನ್ನು ತಹಶೀಲ್ದಾರ ಸಂಜೀವಕುಮಾರ ದಾಸರ್ ಅವರು ನಿಷೇಧಿತ ಪ್ರದೇಶವೆಂದು ಘೋಷಿಸಿದ್ದಾರೆ.