ಭದ್ರಾ ಡ್ಯಾಂನಿಂದ ಮೇಲ್ದಂಡೆ ಯೋಜನೆಯಡಿ ಚಿತ್ರದುರ್ಗ ಶಾಖಾ ಕಾಲುವೆಗೆ ಹೆಚ್ಚುವರಿಯಾಗಿ 1 ಟಿಎಂಸಿ ನೀರು ಹರಿಸುವ ಆದೇಶವನ್ನು ವಿರೋಧಿಸಿ ಸೋಮವಾರ ರೈತ ಮುಖಂಡ ತೇಜಸ್ವಿ ವಿ. ಪಟೇಲ್ ನೇತೃತ್ವದಲ್ಲಿ ರೈತರು ನಗರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ನಿವಾಸಕ್ಕೆ ಮುತ್ತಿಗೆ ಹಾಕಲು ಪ್ರಯತ್ನಿಸಿದ್ದಾರೆ.
- ಸಚಿವ ಮಲ್ಲಿಕಾರ್ಜುನ್ ನಿವಾಸ ಮುತ್ತಿಗೆಗೆ ಹರಿಹರ, ಕಾರಿಗನೂರು, ಮಲೇಬೆನ್ನೂರು ರೈತರ ಯತ್ನ - ರೈತರ ಮನವೊಲಿಸಿ ಸಿಎಂ ಜತೆ ಚರ್ಚಿಸಿದ ಎಸ್ಎಸ್ಎಂ: ತೊಂದರೆ ಆಗದಂತೆ ಕ್ರಮದ ಭರವಸೆ
- - -ಕನ್ನಡಪ್ರಭ ವಾರ್ತೆ ದಾವಣಗೆರೆ
ಭದ್ರಾ ಡ್ಯಾಂನಿಂದ ಮೇಲ್ದಂಡೆ ಯೋಜನೆಯಡಿ ಚಿತ್ರದುರ್ಗ ಶಾಖಾ ಕಾಲುವೆಗೆ ಹೆಚ್ಚುವರಿಯಾಗಿ 1 ಟಿಎಂಸಿ ನೀರು ಹರಿಸುವ ಆದೇಶವನ್ನು ವಿರೋಧಿಸಿ ಸೋಮವಾರ ರೈತ ಮುಖಂಡ ತೇಜಸ್ವಿ ವಿ. ಪಟೇಲ್ ನೇತೃತ್ವದಲ್ಲಿ ರೈತರು ನಗರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ನಿವಾಸಕ್ಕೆ ಮುತ್ತಿಗೆ ಹಾಕಲು ಪ್ರಯತ್ನಿಸಿದರು.ನಗರದ ಶಾಬನೂರು ಗ್ರಾಮದ ಬಳಿ ಬೈಪಾಸ್ ಬ್ರಿಡ್ಜ್ ಬಳಿ ಬೈಕ್ಗಳಲ್ಲಿ ಆಗಮಿಸಿದ ಕಾರಿಗನೂರು, ಹರಿಹರ, ಮಲೇಬೆನ್ನೂರು ಭದ್ರಾ ಅಚ್ಚುಕಟ್ಟು ರೈತರು ಧಾವಿಸಿ, ಅಲ್ಲಿಂದ ತೇಜಸ್ವಿ ವಿ. ಪಟೇಲ್ ನೇತೃತ್ವದಲ್ಲಿ ಪ್ರತಿಭಟನಾ ಮೆರವಣಿಗೆ ಹೊರಟು, ಸಚಿವರ ನಿವಾಸ ಮಾರ್ಗದುದ್ದಕ್ಕೂ ಭದ್ರಾ ಮೇಲ್ದಂಡೆಗೆ ಹೆಚ್ಚುವರಿ 1 ಟಿಎಂಸಿ ನೀರು ಹರಿಸುವ ಆದೇಶ ಹಿಂಪಡೆಯುವಂತೆ ಘೋಷಣೆ ಕೂಗಿದರು.
ಸಚಿವರ ಮನೆ ಬಳಿ ಪೊಲೀಸ್ ಬಿಗಿ ಭದ್ರತೆ ಕಲ್ಪಿಸಲಾಗಿತ್ತು. ಸಚಿವರ ಮನೆ ತಲುಪ ಮಾರ್ಗದಲ್ಲೇ ಪ್ರತಿಭಟನಾಕಾರರನ್ನು ಪೊಲೀಸರು ತಡೆದರು. ಆಗ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ರೈತರ ಮನವೊಲಿಸುವ ಕೆಲಸ ಮಾಡಿದರು. ಮುಖ್ಯಮಂತ್ರಿ, ಜಲ ಸಂಪನ್ಮೂಲ ಸಚಿವರ ಜೊತೆಗೂ ಈ ವಿಚಾರದ ಬಗ್ಗೆ ಮಾತನಾಡುತ್ತೇನೆ. ಸದ್ಯಕ್ಕೆ ನೀರು ಬಿಡುಗಡೆ ಮಾಡದಂತೆ ಮನವಿ ಮಾಡುತ್ತೇನೆ ಎಂದು ರೈತರಿಗೆ ಭರವಸೆ ನೀಡಿದರು.ರೈತ ಮುಖಂಡ ತೇಜಸ್ವಿ ವಿ. ಪಟೇಲ್ ಮಾತನಾಡಿ, ಭದ್ರಾ ಡ್ಯಾಂನಿಂದ ಈಗ ಮತ್ತೆ ಭದ್ರಾ ಮೇಲ್ದಂಡೆ ಹೆಚ್ಚುವರಿಯಾಗಿ 1 ಟಿಎಂಸಿ ನೀರು ಬಿಡುವ ಆದೇಶವನ್ನು ಸರ್ಕಾರ ಹೊರಡಿಸಿದ್ದು ಸರಿಯಲ್ಲ. ಈಗಾಗಲೇ ಭದ್ರಾ ಮೇಲ್ದಂಡೆಗೆ ಭದ್ರಾ ಡ್ಯಾಂನಿಂದ 3 ಟಿಎಂಸಿ ನೀರು ಹರಿಸಲಾಗಿದೆ. ಈಗ ಮತ್ತೆ 1 ಟಿಎಂಸಿ ನೀರು ಹರಿಸುವ ಆದೇಶ ಸರಿಯಲ್ಲ. ಯಾವುದೇ ಕಾರಣಕ್ಕೂ ಭದ್ರಾ ಡ್ಯಾಂನಿಂದ ಚಿತ್ರದುರ್ಗ ಶಾಖಾ ಕಾಲುವೆಗೆ ನೀರು ಹರಿಸಬಾರದು ಎಂದು ಹೇಳಿದರು.
ಪ್ರತಿಭಟನಾನಿರತರ ಮನವಿಯಂತೆ ತಕ್ಷಣವೇ ಸ್ಥಳದಿಂದಲೇ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ಗೆ ಮೊಬೈಲ್ ಮೂಲಕ ಕರೆ ಮಾಡಿದ ಸಚಿವ ಎಸ್.ಎಸ್.ಮಲ್ಲಿಕಾರ್ಜುನ, ಭದ್ರಾ ಮೇಲ್ದಂಡೆ ಯೋಜನೆಯಡಿ ಚಿತ್ರದುರ್ಗ ಶಾಖಾ ಕಾಲುವೆಗೆ ಹೆಚ್ಚುವರಿ 1 ಟಿಎಂಸಿ ನೀರು ಬಿಡುವ ಆದೇಶ ವಿರೋಧಿಸಿ ರೈತರು ಹೋರಾಟ ನಡೆಸುತ್ತಿರುವ ವಿಚಾರವನ್ನು ಗಮನಕ್ಕೆ ತಂದರು. ನಂತರ ರೈತ ಮುಖಂಡರಾದ ತೇಜಸ್ವಿ ಪಟೇಲ್, ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಚಂದ್ರಶೇಖರ ಪೂಜಾರ್ ಜೊತೆಗೂ ಮಾತನಾಡಿಸಿದರು.ನೀರು ಹರಿಸದಂತೆ ಸಿಎಂ ಭರವಸೆ:
ಇದೇ ವೇಳೆ ರೈತ ಮುಖಂಡರ ಜೊತೆಗೆ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಎಸ್ಸೆಸ್ ಮಲ್ಲಿಕಾರ್ಜುನ, ಸದ್ಯಕ್ಕೆ ಚಿತ್ರದುರ್ಗ ಶಾಖಾ ಕಾಲುವೆಗೆ 1 ಟಿಎಂಸಿ ನೀರು ಹರಿಸದಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಮುಖ್ಯಮಂತ್ರಿ ಸೂಚನೆ ನೀಡಿದ್ದಾರೆ. ಈ ಬಗ್ಗೆ ನಾಳೆ ಹಿರಿಯೂರಿನಲ್ಲಿ ರೈತರ ಜೊತೆಗೆ ಮುಖ್ಯಮಂತ್ರಿ ಸಭೆ ನಡೆಸುತ್ತಾರೆ. ದೂರವಾಣಿ ಮೂಲಕ ರೈತರಿಗೂ ಮುಖ್ಯಮಂತ್ರಿ ಅವರು ಭರವಸೆ ನೀಡಿದ್ದಾರೆ. ಯಾವುದೇ ಕಾರಣಕ್ಕೂ ದಾವಣಗೆರೆ ಜಿಲ್ಲೆಯ ಅಚ್ಚುಕಟ್ಟು ರೈತರಿಗೆ ತೊಂದರೆ ಆಗದಂತೆ ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದರು.ಮುಖ್ಯಮಂತ್ರಿಗಳ ಜೊತೆಗೆ ಸ್ವತಃ ಅಚ್ಚುಕಟ್ಟು ರೈತರ ಪರವಾಗಿ ಮಾತನಾಡಿದ್ದಲ್ಲದೇ, ರೈತ ಮುಖಂಡರಿಗೂ ಮುಖ್ಯಮಂತ್ರಿ ಜೊತೆಗೆ ಮೊಬೈಲ್ನಲ್ಲಿ ಮಾತನಾಡಿಸಿದ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಭರವಸೆ ಮೇರೆಗೆ ಸಚಿವರ ಮನೆಗೆ ಮುತ್ತಿಗೆ ಹೋರಾಟಕ್ಕೆ ಮುಂದಾಗಿದ್ದ ರೈತರು ತಾತ್ಕಾಲಿಕವಾಗಿ ಹೋರಾಟ ಹಿಂಪಡೆದರು. ಸಿಎಂ ಜೊತೆಗೆ ಬುಧವಾರ ಸಭೆ ನಡೆಸಿ ನ್ಯಾಯ ಒದಗಿಸುವುದಾಗಿ ಸಚಿವರು ಭರವಸೆ ನೀಡಿದ್ದರಿಂದ ರೈತರು ತಮ್ಮ ಊರುಗಳಿಗೆ ಮರಳಿದರು.
- - --(ಫೋಟೋ ಬರಲಿವೆ).
