ಜಿಟಿಡಿ ಕಾಂಗ್ರೆಸ್ ಗೆ ಹೋಗಿದ್ದರೆ ಇವತ್ತು ಸಚಿವರಾಗಿರುತ್ತಿದ್ದರು : ಸಿ.ಎಂ.ಇಬ್ರಾಹಿಂ

| Published : Nov 26 2024, 12:49 AM IST / Updated: Nov 26 2024, 12:39 PM IST

CM Ibrahim
ಜಿಟಿಡಿ ಕಾಂಗ್ರೆಸ್ ಗೆ ಹೋಗಿದ್ದರೆ ಇವತ್ತು ಸಚಿವರಾಗಿರುತ್ತಿದ್ದರು : ಸಿ.ಎಂ.ಇಬ್ರಾಹಿಂ
Share this Article
  • FB
  • TW
  • Linkdin
  • Email

ಸಾರಾಂಶ

ಎಲ್ಲಾ ವಿಚಾರಗಳ ಬಗ್ಗೆ ನಾನು ಜಿ.ಟಿ.ದೇವೇಗೌಡರ ಜೊತೆ ಚರ್ಚೆ ಮಾಡಿದ್ದೇನೆ. ಇನ್ನೂ ಎರಡು ದಿನ ಬಿಟ್ಟು ನಾನು ರಾಜ್ಯ ಪ್ರವಾಸ ಹೋಗುತ್ತಿದ್ದೇನೆ.

  ಮೈಸೂರು : ಕಳೆದ ಚುನಾವಣೆ ವೇಳೆಯೇ ಜಿ.ಟಿ. ದೇವೇಗೌಡರು ಕಾಂಗ್ರೆಸ್ ಗೆ ಹೋಗಿದ್ದರೆ ಇವತ್ತು ಸಚಿವರಾಗಿ ಇರುತ್ತಿದ್ದರು. ನಾವೇ ಜೆಡಿಎಸ್ ಪಕ್ಷ ಬಲ ಪಡಿಸಲು ಜೆಡಿಎಸ್ ನಲ್ಲಿ ಉಳಿಸಿಕೊಂಡಿದೆ. ಈಗ ಅವರ ಕತ್ತು ಕುಯ್ಯುವ ಕೆಲಸ ಮಾಡಲಾಗುತ್ತಿದೆ ಎಂದು ಕೇಂದ್ರದ ಮಾಜಿ ಸಚಿವ ಸಿ.ಎಂ. ಇಬ್ರಾಹಿಂ ಆರೋಪಿಸಿದರು.

ಸೋಮವಾರ ಶಾಸಕ ಜಿ.ಟಿ. ದೇವೇಗೌಡರನ್ನು ಭೇಟಿಯಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲಾ ವಿಚಾರಗಳ ಬಗ್ಗೆ ನಾನು ಜಿ.ಟಿ.ದೇವೇಗೌಡರ ಜೊತೆ ಚರ್ಚೆ ಮಾಡಿದ್ದೇನೆ. ಇನ್ನೂ ಎರಡು ದಿನ ಬಿಟ್ಟು ನಾನು ರಾಜ್ಯ ಪ್ರವಾಸ ಹೋಗುತ್ತಿದ್ದೇನೆ. ಆಗ ಕೆಲವು ನಾಯಕರನ್ನು ಭೇಟಿ ಮಾಡುತ್ತೇನೆ. ಆ ನಂತರ ಮತ್ತೆ ನಾನು ಜಿ.ಟಿ ದೇವೇಗೌಡರನ್ನು ಭೇಟಿ ಮಾಡುತ್ತೇನೆ ಎಂದು ಹೇಳಿದರು.

ಮೂಲ ಜೆಡಿಎಸ್ ನಮ್ಮದೆ. ಅದರ ಖಾತೆ, ಪಾಣಿ ಎಲ್ಲಾ ನಮ್ಮ ಹೆಸರಿನಲ್ಲಿದೆ. ಈಗಲೂ ಎಚ್.ಡಿ.ದೇವೇಗೌಡರು ಬಿಜೆಪಿ ಸಹವಾಸ ಬಿಟ್ಟು ಬರಲಿ. ಜೆಡಿಎಸ್ ನ್ನು ಕಟ್ಟುತ್ತೇವೆ. ಹೊಸ ಪಕ್ಷವೊ ತೃತೀಯ ರಂಗವೊ ಅಥವಾ ಜೆಡಿಎಸ್ ಬಲವರ್ಧನೆಯೋ ಎಲ್ಲವೂ ಮುಂದಿನ ದಿನಗಳಲ್ಲಿ ತೀರ್ಮಾನ ಆಗಲಿದೆ ಎಂದರು.

ಜೆಡಿಎಸ್ 12- 13 ಶಾಸಕರು ಬೇಸರಗೊಂಡಿದ್ದಾರೆ:

ಜೆಡಿಎಸ್ 12 ರಿಂದ 13 ಶಾಸಕರು ಪಕ್ಷದ ವಿಚಾರದಲ್ಲಿ ಬೇಸರಗೊಂಡಿದ್ದಾರೆ. ಜಿ.ಟಿ.ದೇವೇಗೌಡರಂತೆ ಹಲವು ಜೆಡಿಎಸ್ ಶಾಸಕರು ನೋವು ನುಂಗಿದ್ದಾರೆ. ಈಗ ಅವರೆನ್ನಲ್ಲಾ ಒಗ್ಗೂಡಿಸುವ ಕೆಲಸವನ್ನ ನಾನು ಶುರು ಮಾಡಿದ್ದೇನೆ. ಮುಂದೆ ಏನೇನ್ ಆಗುತ್ತೆ ನೋಡೋಣ. ಈಗಲೂ ನಾನೇ ಜೆಡಿಎಸ್ ರಾಜ್ಯಾಧ್ಯಕ್ಷ. ನಮ್ಮ ಶಾಸಕರ ನೋವು ನಿವಾರಿಸುವ ಜವಾಬ್ದಾರಿ ನನ್ನದು. ಜೆಡಿಎಸ್ ಹೆಸರಿನಲ್ಲೇ ನಾವು ಇರಬೇಕಾ? ತೃತೀಯ ರಂಗಕ್ಕೆ ಬೇರೆ ಹೆಸರು ಕೊಡಬೇಕಾ. ಮುಂದೆ ಎಲ್ಲವನ್ನೂ ಚರ್ಚೆ ಮಾಡುತ್ತೇನೆ. ಈಗ ಇರುವ ಜೆಡಿಎಸ್ ಮನೆಗೆ ಬೆಂಕಿ ಬಿದ್ದಾಗಿದೆ ಎಂದರು.

ಎಲ್ಲಾ ಜೆಡಿಸ್ ಶಾಸಕರು ಅವರವರ ಕ್ಷೇತ್ರ ಕಾಪಾಡಿಕೊಳ್ಳಬೇಕಿದೆ. ಹೀಗಾಗಿ, ಒಬ್ಬೊಬ್ಬರೇ ಮಾತು ಶುರು ಮಾಡಿದ್ದಾರೆ. ಕುಮಾರಸ್ವಾಮಿ ಈಗಲಾದರೂ ಬುದ್ಧಿ ಕಲಿಯಬೇಕು. ಜೆಡಿಎಸ್ ಅನ್ನು ಫ್ಯಾಮಿಲಿ ಕಂಪನಿ ಮಾಡುವುದನ್ನು ಬಿಡಬೇಕು. ಆಗ ಮಾತ್ರ ಜೆಡಿಎಸ್ ಮೂಲ ಅಸ್ತಿತ್ವ ಸಾಧ್ಯ ಎಂದರು.

ಜೆಡಿಎಸ್ ಪರಿಸ್ಥಿತಿ ಬಸ್ ಸ್ಟ್ಯಾಂಡ್ ನಲ್ಲಿ ನಿಂತ ಬಸವಿ ತರ ಆಗಿದೆ. ಬಿಜೆಪಿಯನ್ನ ಲವ್ ಮಾಡಿದ್ದು ಆಯಿತು. ಈಗ ಅವರನ್ನ ಅಲ್ಲೇ ಬಿಟ್ಟು ಬಿಡಬೇಕು. ನಾನು ಕುಮಾರಸ್ವಾಮಿ ಜೊತೆಯಲ್ಲಿದ್ದಾಗ ಚನ್ನಪಟ್ಟಣದಲ್ಲಿ ನಾಲ್ಕು ಕೋಟಿ ಖರ್ಚು ಮಾಡಿ ಗೆದ್ದರು. ಈಗ ನಾನು ಅವರ ಜೊತೆಯಲ್ಲಿಲ್ಲ, 150 ಕೋಟಿ ಖರ್ಚು ಮಾಡಿ 25 ಸಾವಿರದಿಂದ ಸೋತಿದ್ದಾರೆ. ಅಲ್ಲಿಗೆ ಮುಸ್ಲೀಂರು ಇರದಿದ್ದರೇ ಜೆಡಿಎಸ್ ಗೆ ಒಂದು ಸ್ಥಾನವೂ ಬರುವುದಿಲ್ಲ. ಅವತ್ತು 19 ಜನ ಗೆದಿದ್ದು ಮುಸ್ಲೀಂರಿಂದ ಎಂಬುದು ಈಗ ಸಾಬೀತಾಗಿದೆ. ಈಗ ನಾವೇನು ಕಾಂಗ್ರೆಸ್ ಜೊತೆ ಹೋಗಲು ನಿರ್ಧಾರ ಮಾಡಿಲ್ಲ. ತೃತೀಯ ರಂಗ ಸ್ಥಾಪನೆಯ ಬಗ್ಗೆ ಮನಸ್ಸು ಮಾಡುತ್ತಿದ್ದೇವೆ ಅಷ್ಟೇ ಎಂದರು.