ಸಾರಾಂಶ
ಕನ್ನಡಪ್ರಭ ವಾರ್ತೆ ಸೋಮವಾರಪೇಟೆ
ವಿರಾಜಪೇಟೆ-ಬೈಂದೂರು ರಾಜ್ಯ ಹೆದ್ದಾರಿ 27ರ ಐಗೂರು ಜಂಕ್ಷನ್‌ನಲ್ಲಿ ಚೋರನ ಹೊಳೆಗೆ ನೂತನ ಸೇತುವೆ ನಿರ್ಮಾಣಕ್ಕಾಗಿ ರಾಜ್ಯ ಸರ್ಕಾರ ರು.೧೦ಕೋಟಿ ಅನುದಾನವನ್ನು ಬಿಡುಗಡೆಗೊಳಿಸಿ ಅದೇಶ ಹೊರಡಿಸಿದೆ.ಶಾಸಕ ಡಾ.ಮಂತರ್‌ಗೌಡ ಬೆಳಗಾವಿ ಅಧಿವೇಶನದಲ್ಲಿ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರನ್ನು ಭೇಟಿ ಮಾಡಿ, ಕುಸಿಯುವ ಹಂತದಲ್ಲಿರುವ ಬ್ರಿಟಿಷರ ಕಾಲದ ಕಬ್ಬಿಣ ಸೇತುವೆಯ ದುಃಸ್ಥಿತಿಯ ಬಗ್ಗೆ ಮನವರಿಕೆ ಮಾಡಿಕೊಟ್ಟ ಹಿನ್ನೆಲೆಯಲ್ಲಿ ಅನುದಾನ ಬಿಡುಗಡೆಗೊಳಿಸಿದ್ದಾರೆ.
ಕಳೆದ ಒಂದು ತಿಂಗಳ ಈಚೆಗೆ ಎರಡು ಬಾರಿ ಸೇತುವೆ ಮೇಲಿನ ರಸ್ತೆ ಬಿರುಕು ಬಿಟ್ಟು, ಹೊಂಡ ನಿರ್ಮಾಣವಾಗಿತ್ತು. ಈ ಘಟನೆಯಿಂದ ಸ್ಥಳೀಯರು, ಸಾರ್ವಜನಿಕರು ಆತಂಕಗೊಂಡಿದ್ದರು. ಸ್ಥಳಕ್ಕೆ ಶಾಸಕರು ತೆರಳಿ ಅನುದಾನ ತರುವ ಭರವಸೆ ನೀಡಿದ್ದರು.ಡಿ.೨೯ರಿಂದ ಈ ಸೇತುವೆಯಲ್ಲಿ ದೊಡ್ಡ ಸರಕು ವಾಹನಗಳ ಸಂಚಾರ ನಿಷೇಧಿಸಲಾಗಿತ್ತು. ಲೋಕೋಪಯೋಗಿ ಇಲಾಖೆಯ ತಂತ್ರಜ್ಞರು ಭೇಟಿ ನೀಡಿ ಸೇತುವೆಯ ಕಬ್ಬಿಣದ ಸಲಾಕೆಗಳನ್ನು ವೆಲ್ಡಿಂಡ್ ಮಾಡಿ ಸರಿಪಡಿಸುವ ಪ್ರಯತ್ನ ಮಾಡಿದ್ದರು. ಅನುದಾನ ಬಿಡುಗಡೆಯಾಗಿರುವುದರಿಂದ ಮುಂದಿನ ಒಂದು ತಿಂಗಳಲ್ಲಿ ಸೇತುವೆ ಕಾಮಗಾರಿ ಪ್ರಾರಂಭವಾಗುವ ಸೂಚನೆ ಕಂಡುಬಂದಿದೆ.
-------------------ಲೋಕೋಪಯೋಗಿ ಇಲಾಖೆಯಿಂದ ಸೇತುವೆಗೆ ಬೇಕಾದ ಜಾಗಕ್ಕೆ ಸರ್ವೆ ಕಾರ್ಯ ನಡೆಯುತ್ತಿದೆ. ಭೂಸ್ವಾದೀನದ ಬಗ್ಗೆಯೂ ಮಾತುಕತೆ ನಡೆಯುತ್ತಿದೆ. ವ್ಯವಸ್ಥಿತ ಸೇತುವೆ ನಿರ್ಮಾಣದ ಬಗ್ಗೆ ತಂತ್ರಜ್ಞರೊಂದಿಗೆ ಚರ್ಚೆ ನಡೆಸಿ, ಕ್ರಮಕೈಗೊಳ್ಳುತ್ತೇವೆ. 15 ದಿನಗಳ ಒಳಗೆ ಕ್ರಿಯಾಯೋಜನೆ ಪೂರ್ಣಗೊಂಡು ಟೆಂಡರ್ ಪ್ರಕ್ರಿಯೆ ಮುಗಿಸಿ, ಮುಂದಿನ ಒಂದು ತಿಂಗಳಲ್ಲಿ ಕಾಮಗಾರಿ ಪ್ರಾರಂಭಿಸಲಾಗುವುದು.
-ಎಂ.ಎಚ್.ವಿಜಯ್ ಕುಮಾರ್, ಸೇತುವೆ ಉಸ್ತುವಾರಿ ಎಂಜಿನಿಯರ್, ಲೋಕೋಪಯೋಗಿ ಇಲಾಖೆ.