ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಪ್ರಸಕ್ತ ಸಾಲಿನಲ್ಲಿ ಮೈಷುಗರ್ ಕಾರ್ಖಾನೆಯಲ್ಲಿ ಕಬ್ಬು ನುರಿಸುವುದಕ್ಕೆ ದುಡಿಯುವ ಬಂಡವಾಳವಾಗಿ ರಾಜ್ಯ ಸರ್ಕಾರ ೧೦ ಕೋಟಿ ರು. ಹಣವನ್ನು ಸಾಲ ರೂಪದಲ್ಲಿ ಬಿಡುಗಡೆಗೊಳಿಸಿದೆ. ೨೦೨೫ರ ಅಂತ್ಯದೊಳಗೆ ಈ ಹಣವನ್ನು ಸರ್ಕಾರಕ್ಕೆ ಹಿಂತಿರುಗಿಸಬೇಕೆಂಬ ಷರತ್ತನ್ನು ವಿಧಿಸಿದೆ.ಕಂಪನಿಯು ಆರ್ಥಿಕ ಸಂಕಷ್ಟದಲ್ಲಿರುವುದರಿಂದ ಕಾರ್ಖಾನೆ ವ್ಯಾಪ್ತಿಯ ಕಬ್ಬು ಬೆಳೆಗಾರರ ಹಿತದೃಷ್ಟಿಯಿಂದ ಈ ಹಂಗಾಮಿಗೆ ಕಬ್ಬು ಕಟಾವು ಮಾಡುವ ಆಳುಗಳಿಗೆ ಮತ್ತು ಸಾರಿಗೆ ವೆಚ್ಚಕ್ಕೆ ೧೫ ಕೋಟಿ ರು. ಹಾಗೂ ೨೫ ಕೋಟಿ ರು. ದುಡಿಯುವ ಬಂಡವಾಳ ಅವಶ್ಯಕತೆ ಇರುವುದರಿಂದ ಒಟ್ಟು ೪೦ ಕೋಟಿ ರು. ಹಣ ಬಿಡುಗಡೆ ಮಾಡುವಂತೆ ಕಂಪನಿಯ ವ್ಯವಸ್ಥಾಪಕ ನಿರ್ದೇಶಕರು ಸರ್ಕಾರವನ್ನು ಕೋರಿದ್ದರು.
ಆದರೆ, ರಾಜ್ಯ ಸರ್ಕಾರ ಪ್ರಸಕ್ತ ಸಾಲಿನ ಹಂಗಾಮಿಗೆ ಕಬ್ಬು ಅರೆಯಲು ಅಗತ್ಯವಿರುವ ದುಡಿಯುವ ಬಂಡವಾಳದ ಸಲುವಾಗಿ ೧೦ ಕೋಟಿ ರು.ಗಳನ್ನು ಮಾತ್ರ ನೀಡಿ ಕೈ ತೊಳೆದುಕೊಂಡಿರುವುದಲ್ಲದೆ, ಷರತ್ತುಗಳನ್ನು ವಿಧಿಸಿದೆ.ಈ ಆದೇಶದಲ್ಲಿ ಬಿಡುಗಡೆಗೊಳಿಸಿದ ೧೦ ಕೋಟಿ ರು. ಮೊತ್ತವನ್ನು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರು ಖಜಾನೆಯಿಂದ ಸೆಳೆಯುವ ಅಧಿಕಾರವನ್ನು ಹೊಂದಿದ್ದಾರೆ. ಈ ಹಣ ಸೆಳೆಯುವ ಬಿಲ್‌ನ್ನು ಕಬ್ಬು ಅಭಿವೃದ್ಧಿ ಹಾಗೂ ಸಕ್ಕರೆ ನಿರ್ದೇಶಕರ ಮೇಲುಸಹಿಯೊಂದಿಗೆ ಖಜಾನೆಗೆ ಸಲ್ಲಿಸುವಂತೆ ಸೂಚಿಸಿದೆ.
೧೦ ಕೋಟಿ ರು. ಹಣವನ್ನು ಯಾವ ಉದ್ದೇಶಕ್ಕೆ ಬಿಡುಗಡೆಗೊಳಿಸಿದೆಯೋ ಅದೇ ಉದ್ದೇಶಕ್ಕೆ ಬಳಸತಕ್ಕದ್ದು. ನಿಗದಿತ ನಮೂನೆಯಲ್ಲಿ ಬಳಕೆ ಪ್ರಮಾಣಪತ್ರವನ್ನು ಸಲ್ಲಿಸುವುದು. ಹಾಲಿ ಬಿಡುಗಡೆಗೊಳಿಸಿರುವ ೧೦ ಕೋಟಿ ರು. ಹಣವನ್ನುಉ ೨೦೨೫ರ ಅಂತ್ಯದೊಳಗೆ ಸರ್ಕಾರಕ್ಕೆ ಮರುಪಾವತಿ ಮಾಡತಕ್ಕದ್ದು. ಸಾಲದ ಷರತ್ತು ಮತ್ತು ನಿಬಂಧನೆಗಳನ್ನು ಪ್ರತ್ಯೇಕವಾಗಿ ಹೊರಡಿಸುವುದಾಗಿ ತಿಳಿಸಲಾಗಿದೆ.೨೦೨೬-೨೭ನೇ ಸಾಲಿನ ಕಬ್ಬು ಅರೆಯುವ ಹಂಗಾಮಿನಿಂದ ಮೈಷುಗರ್ ಕಂಪನಿ ಕಾರ್ಯಾಚರಣೆಯನ್ನು ಎಲ್‌ಆರ್‌ಒಟಿ (ಗುತ್ತಿಗೆ, ನವೀಕರಣ, ಕಾರ್ಯಾಚರಣೆ, ವರ್ಗಾವಣೆ) ಆಧಾರದ ಮೇಲೆ ಖಾಸಗಿಯವರಿಗೆ ಗುತ್ತಿಗೆ ನೀಡುವ ಸಂಬಂಧ ನಿಯಮಾನುಸಾರ ಸೂಕ್ತ ಪ್ರಸ್ತಾವನೆ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸುವಂತೆ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ (ಸಕ್ಕರೆ) ಸರ್ಕಾರದ ಅಧೀನ ಕಾರ್ಯದರ್ಶಿ ಶಾಂತಾರಾಮ ತಿಳಿಸಿದ್ದಾರೆ.ಕಬ್ಬು ಅರೆಯುವಿಕೆಗೆ ಸಜ್ಜುಗೊಳ್ಳದ ಮೈಷುಗರ್
ಮಂಡ್ಯ ಜಿಲ್ಲೆಯಲ್ಲಿರುವ ಖಾಸಗಿ ಸಕ್ಕರೆ ಕಾರ್ಖಾನೆಗಳು ದಿನವೊಂದಕ್ಕೆ ೩೫೦೦ ಟನ್‌ನಿಂದ ೫೫೦೦ ಟನ್‌ವರೆಗೆ ಕಬ್ಬನ್ನು ಅರೆಯುತ್ತಿವೆ. ಶೇ.೭.೫೫ ನಿಂದ ೮.೬೨ವರೆಗೆ ಇಳುವರಿಯನ್ನು ತೆಗೆಯುತ್ತಿವೆ. ಆದರೆ, ಮೈಷುಗರ್ ಕಾರ್ಖಾನೆಯಲ್ಲಿ ಇದುವರೆಗೆ ೧೫೦೦ ಟನ್ ಕಬ್ಬು ಅರೆಯಲಾಗದಿರುವುದು ದೊಡ್ಡ ದುರಂತ.ಕಾರ್ಖಾನೆಯೊಳಗೆ ಇನ್ನೂ ಯಂತ್ರೋಪಕರಣಗಳ ದುರಸ್ತಿ ಕಾರ್ಯ ನಡೆಯುತ್ತಿದ್ದು ಕಬ್ಬು ಅರೆಯುವಿಕೆಗೆ ಸಂಪೂರ್ಣ ಸಜ್ಜುಗೊಂಡಿಲ್ಲ. ೪.೫೦ ಲಕ್ಷ ಟನ್ ಒಪ್ಪಿಗೆ ಕಬ್ಬಿನಲ್ಲಿ ಸಾವಿರಾರು ಟನ್ ಕಬ್ಬು ಈಗಾಗಲೇ ಖಾಸಗಿ ಕಾರ್ಖಾನೆಯತ್ತ ಸಾಗಣೆಯಾಗುತ್ತಿದೆ. ಮೈಷುಗರ್ ಕಬ್ಬು ಕಟಾವಿಗೆ ಬಂದ ಕೂಲಿ ಕಾರ್ಮಿಕರು ಖಾಸಗಿ ಕಾರ್ಖಾನೆಗಳ ಪಾಲಾಗಿದ್ದಾರೆ. ಸರ್ಕಾರ ಜುಲೈ ತಿಂಗಳಲ್ಲಿ ದುಡಿಮೆ ಬಂಡವಾಳವಾಗಿ ೧೦ ಕೋಟಿ ರು. ಹಣವನ್ನು ಸಾಲದ ರೂಪದಲ್ಲಿ ನೀಡಿದೆ. ಹಲವು ಷರತ್ತುಗಳನ್ನೂ ವಿಧಿಸಿ ಮುಂದಿನ ಸಾಲಿನಿಂದ ಖಾಸಗಿಯವರಿಗೆ ವಹಿಸುವ ಮುನ್ಸೂಚನೆಯನ್ನೂ ನೀಡಿದೆ.