- ತಿಪ್ಪಗೊಂಡನಹಳ್ಳಿ ಅನುಷಾ ಸಾವು । ವೈದ್ಯ-ಸಿಬ್ಬಂದಿ ಎಡವಟ್ಟು: ಆರೋಪ
- - -ಕನ್ನಡಪ್ರಭ ವಾರ್ತೆ ಚನ್ನಗಿರಿ
ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ಬಂದಿದ್ದ ಮಹಿಳೆಗೆ ವೈದ್ಯರು ಸರಿಯಾಗಿ ಚಿಕಿತ್ಸೆ ನೀಡದೇ ನಿರ್ಲಕ್ಷಿಸಿದ್ದರಿಂದಲೇ ಆಕೆ ಸಾವನ್ನಪ್ಪಿದ್ದಾಳೆ ಎಂದು ಆರೋಪಿಸಿ ಆಸ್ಪತ್ರೆ ಮುಂಭಾಗದಲ್ಲಿ ಶವ ಇಟ್ಟು ಪ್ರತಿಭಟಿಸಿದ ಘಟನೆ ಭಾನುವಾರ ನಡೆಯಿತು.ಈ ವೇಳೆ ಸಂಬಂಧಿ ಉಷಾ ಮಾತನಾಡಿ, ತಾಲೂಕಿನ ತಿಪ್ಪಗೊಂಡನಹಳ್ಳಿಯ ಅನುಷಾ (34) ಅನಾರೋಗ್ಯದಿಂದಾಗಿ ಭಾನುವಾರ ಬೆಳಗ್ಗೆ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ಬಂದಿದ್ದರು. ಈ ವೇಳೆ ಆಕೆಗೆ ಏನಾಗಿದೆ ಎಂಬುದನ್ನೂ ವಿಚಾರಿಸದ ವೈದ್ಯರು ಆಸ್ಪತ್ರೆಯಲ್ಲಿದ್ದ ಸಿಬ್ಬಂದಿಗೆ ತಪಾಸಣೆ ಮಾಡುವಂತೆ ತಿಳಿಸಿ ಕಳಿಸಿದ್ದಾರೆ. ಕರ್ತವ್ಯದಲ್ಲಿದ್ದ ಸಿಬ್ಬಂದಿ ಪರೀಕ್ಷೆ ಮಾಡಿ, ಇನ್ಸುಲಿನ್ ಇಂಜಕ್ಷನ್ ನೀಡಿದ 5 ನಿಮಿಷಗಳಲ್ಲೇ ಅನುಷಾ ನೆಲಕ್ಕೆ ಬಿದ್ದು ಮೃತಪಟ್ಟಿದ್ದಾಳೆ ಎಂದು ದೂರಿದರು.
ಮೃತಳ ತಂದೆ ಬಸವರಾಜಪ್ಪ ಮಾತನಾಡಿ, ಮಗಳು ಮನೆಯಿಂದ ಬರುವಾಗ ಆರೋಗ್ಯದಿಂದಲೇ ಇದ್ದಳು. ಮೈ ಬಿಸಿಯಾಗಿದೆ, ಒಂದು ಇಂಜೆಕ್ಷನ್ ತೆಗೆದುಕೊಂಡು ವಾಪಸ್ ಬರುವುದಾಗಿ ಹೇಳಿ ನನ್ನ ಮಗನೊಂದಿಗೆ ಆಸ್ಪತ್ರೆಗೆ ಬಂದಿದ್ದಳು. ರೋಗಿಗಳಿಗೆ ವೈದ್ಯರೇ ಚಿಕಿತ್ಸೆ ನೀಡಬೇಕು. ಆದರೆ ಸಿಬ್ಬಂದಿಯೇ ರೋಗಿಯ ಆರೋಗ್ಯ ನೋಡಿ ಕಾಯಿಲೆಯ ಕುರಿತು ಸರಿಯಾದ ಮಾಹಿತಿ ಇಲ್ಲದೇ ಚಿಕಿತ್ಸೆ ನೀಡುತ್ತಾರೆ. ಇದರಿಂದಾಗಿಯೇ ನನ್ನ ಮಗಳ ಪ್ರಾಣ ತೆಗೆದಿದ್ದಾರೆ ಎಂದು ಆಕ್ರೋಶವನ್ನು ವ್ಯಕ್ತಪಡಿಸಿದರು.
ಈ ಬಗ್ಗೆ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ಚಂದ್ರಪ್ಪ ಅವರನ್ನು ವಿಚಾರಿಸಿದಾಗ ಮೃತಳ ಶವವನ್ನು ಮರಣೋತ್ತರ ಪರೀಕ್ಷೆಗೆಂದು ಶಿವಮೊಗ್ಗದ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಮರಣೋತ್ತರ ಪರೀಕ್ಷೆ ವರದಿ ಬಂದ ನಂತರ ಯಾರ ತಪ್ಪಿನಿಂದ ಮಹಿಳೆ ಸಾವಾಗಿದೆ ಎಂಬುದು ತಿಳಿಯಲಿದೆ ಎಂದಿದ್ದಾರೆ.
ಪ್ರತಿಭಟನಾ ಸ್ಥಳಕ್ಕೆ ಬಿಜೆಪಿ ರಾಜ್ಯ ಪರಿಷತ್ ಸದಸ್ಯ ಮಾಡಾಳು ಮಲ್ಲಿಕಾರ್ಜುನ್ ಭೇಟಿ ನೀಡಿ ಮೃತಳ ಸಂಬಂಧಿಕರಿಗೆ ಸಾಂತ್ವನ ಹೇಳಿದರು. ಈ ಪ್ರಕರಣದ ಸತ್ಯಾಸತ್ಯತೆ ತಿಳಿಯಲು ಪಾರದರ್ಶಕ ತನಿಖೆಗೆ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗೆ ದೂರವಾಣಿ ಮೂಲಕ ಮನವಿ ಮಾಡಿದರು.ಪ್ರತಿಭಟನೆಯಲ್ಲಿ ಮೃತ ಮಹಿಳೆ ಸಂಬಂಧಿಕರಾದ ದೊಡ್ಡಮ್ಮ, ಚೇತನ್, ಶಿಲಾ, ಮಹಾದೇವಯ್ಯ, ಸುಮ, ರತ್ನಮ್ಮ, ಸೌಭಾಗ್ಯ, ಚಂದ್ರಕಲಾ, ಶೀಲಾ, ದಿಗ್ಗೇನಹಳ್ಳಿ ನಾಗರಾಜ್, ಪಟ್ಲಿ ನಾಗರಾಜ್ ಹಾಗೂ ಗ್ರಾಮಸ್ಥರು ಹಾಜರಿದ್ದರು.
- - --22ಕೆಸಿಎನ್ಜಿ3:
ಚನ್ನಗಿರಿ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಮಹಿಳೆ ಸಾವಿಗೆ ವೈದ್ಯರ ನಿರ್ಲಕ್ಷ್ಯ ಕಾರಣ ಎಂದು ಆರೋಪಿಸಿ ಸಂಬಂಧಿಕರು ಪ್ರತಿಭಟಿಸಿದರು.