ಕನ್ನಡಪ್ರಭವಾರ್ತೆ ಹುಳಿಯಾರು

ತಾಲೂಕಿನ ಗಡಿಭಾಗವಾದ ದಸೂಡಿ ಪಂಚಾಯಿತಿಯ ಸಮಗ್ರ ಅಭಿವೃದ್ದಿಗೆ ಅಗತ್ಯವಾದ ಮೂಲಭೂತ ಸೌಲಭ್ಯಗಳನ್ನು ನೀಡುವುದು ನನ್ನ ಜವಾಬ್ದಾರಿಯಾಗಿದ್ದು ಈಗಾಗಲೇ ಈ ಭಾಗಕ್ಕೆ ೧೦ಕೋಟಿ ವೆಚ್ಚದಲ್ಲಿ ರಸ್ತೆ ಹಾಗೂ ಒಂದುವರೆ ಕೋಟಿ ರು.ವೆಚ್ಚದಲ್ಲಿ ಈ ಭಾಗದ ಲಂಬಾಣಿ ತಾಂಡ್ಯಗಳು ಹಾಗೂ ಗೊಲ್ಲರಹಟ್ಟಿಗಳ ಅಭಿವೃದ್ದಿಗೆ ಮುಂದಾಗಿರುವುದಾಗಿ ಶಾಸಕ ಸಿ.ಬಿ.ಸುರೇಶ್‌ಬಾಬು ತಿಳಿಸಿದರು.

ಹುಳಿಯಾರು ಹೋಬಳಿಯ ದಸೂಡಿ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಶುಕ್ರವಾರ ಏರ್ಪಡಿಸಲಾಗಿದ್ದ ೨೬ನೇವಾರದ ಮನೆಬಾಗಿಲಿಗೆ ಮನೆ ಮಗ ಶಿರ್ಷಿಕೆಯಡಿಯಲ್ಲಿ ನಡೆದ ಜನಸ್ಪಂದನಾ ಕಾರ್ಯಕ್ರಮವದ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಗಡಿಭಾಗವಾದ ಈ ಪಂಚಾಯಿತಿಗೆ ಈಗಾಗಲೇ ಸುವರ್ಣಗ್ರಾಮವನ್ನು ನೀಡಲಾಗಿದೆ, ಹೊಯ್ಸಳಕಟ್ಟೆಯಿಂದ ದಸೂಡಿಗೆ ೧೦ಕೋಟಿ ವೆಚ್ಚದ ರಸ್ತೆಯನ್ನು ನಿರ್ಮಿಸಲು ಕ್ರಮಕೈಗೊಳ್ಳಲಾಗಿದ್ದು ಇಂದು ಒಂದುವರೆಗೆ ಕೋಟಿಯ ವೆಚ್ಚದ ವಿವಿಧ ಅಭಿವೃದ್ದಿ ಕೆಲಸಗಳಿಗೆ ಚಾಲನೆ ನೀಡಲಾಗುವುದು ಇದರೊಂದಿಗೆ ಈ ಭಾಗದ ರೈತರಿಗಾಗಿ ಜಾನುವಾರಗಳ ಆರೋಗ್ಯಕ್ಕಾಗಿ ಒಂದು ಪಶು ಆಸ್ಪತ್ರೆಯನ್ನು ಮಂಜೂರು ಮಾಡಿಸಿದ್ದು ಮುಂದಿನ ದಿನಗಳಲ್ಲಿ ಕಟ್ಟಡವನ್ನು ನಿರ್ಮಿಸಲಾಗುವುದು. ಶಾಲೆಗೆ ಅಗತ್ಯವಿರುವಂತಹ ಶುದ್ದನೀರಿನ ಘಟಕವನ್ನು ನೀಡಲಾಗುವುದು ಇದರೊಂದಿಗೆ ತಾಲೂಕಿನಲ್ಲಿ ಇನ್ನು ೨೨ಸಾವಿರ ಬಗರ್‌ಹುಕುಂ ಸಾಗುವಳಿ ಅರ್ಜಿಗಳಿದ್ದು ಅವುಗಳನ್ನು ಹಂತಹಂತವಾಗಿ ಪರಿಹರಿಸಲಾಗುವುದು ಎಂದರು. ಪಿಎಲ್‌ಡಿ ಬ್ಯಾಂಕ್‌ನ ಉಪಾಧ್ಯಕ್ಷ ದಬ್ಬಗುಂಟೆ ರವಿಕುಮಾರ್ ಮಾತನಾಡಿ, ಇಂತಹ ಕಾರ್ಯಕ್ರಮಗಳಿಂದ ಗ್ರಾಮೀಣಭಾಗದ ರೈತರಿಗೆ ಅನುಕೂಲವಾಗಿದ್ದು ಜನಪ್ರತಿನಿಧಿಗಳು ಅಧಿಕಾರಿಗಳೊಂದಿಗೆ ಭೇಟಿ ನೀಡಿದಾಗ ತಮ್ಮ ಸಮಸ್ಯೆಗಳನ್ನು ನೇರವಾಗಿ ಹೇಳಿಕೊಳ್ಳಬಹುದಾಗಿದ್ದು ಈ ಮನೆಬಾಗಿಲಿಗೆ ಮನೆಮಗ ಕಾರ್ಯಕ್ರಮ ಅತ್ಯಂತ ಉಪಯುಕ್ತವಾದ ಕಾರ್ಯಕ್ರಮವಾಗಿದೆ ಎಂದರು. ಕಾರ್ಯಕ್ರಮದಲ್ಲಿ ಮಾಜಿ ಗ್ರಾ.ಪಂ.ಅಧ್ಯಕ್ಷ ಮರಿಯಪ್ಪ ಮಾತನಾಡಿ, ಈ ಕಾರ್ಯಕ್ರಮದಿಂದಾಗಿ ಪ್ರತಿಪಂಚಾಯಿತಿಗಳ ಪ್ರತಿಗ್ರಾಮಗಳಿಗೂ ಅಧಿಕಾರಿಗಳು ಭೇಟಿ ನೀಡುವಂತಾಗುತ್ತದೆ ಇದರಿಂದ ಜನರ ಸಮಸ್ಯೆಗಳ ಅರಿವು ನೇರವಾಗಿ ತಲುಪುತ್ತದೆ. ಅಧಿಕಾರಿಗಳನ್ನು ಹುಡುಕಿಕೊಂಡು ಅಲೆದಾಡುವುದು ತಪ್ಪುತ್ತದೆ ಎಂದರು. ಈ ಸಂದರ್ಭದಲ್ಲಿ ದಸೂಡಿ ಗ್ರಾಮಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಾದ ದಸೂಡಿ, ಬಲ್ಲಪ್ಪನಹಟ್ಟಿ, ಮರೇನಡು, ಮರೆನಡು ಪಾಳ್ಯ, ದಬ್ಬಗುಂಟೆ ಗ್ರಾಮಗಳಲ್ಲಿ ಸಭೆಗಳನ್ನು ನಡೆಸುವ ಮೂಲಕ ಜನರಿಂದ ಅಹವಾಲುಗಳನ್ನು ಸ್ವೀಕರಿಸಲಾಯಿತು. ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಮಮತಾ, ನೊಡೆಲ್ ಅಧಿಕಾರಿ ಮೂರ್ತಿ, ಎಇಇ ತಿಮ್ಮಪ್ಪ, ಶಿವರಾಜ್‌ಕುಮಾರ್, ರಾಜಪ್ಪ, ಮುಖಂಡರುಗಳಾದ ಪ್ರಸನ್ನಕುಮಾರ್ ,ಪಿಡಿಒ ಮುದ್ದಲಿಂಗಯ್ಯ ಇತರರಿದ್ದರು.