ವಶಕ್ಕೆ ಪಡೆದ 10 ರೈತರ ಬಿಡುಗಡೆ

| Published : Nov 17 2025, 02:00 AM IST

ಸಾರಾಂಶ

ಮುಧೋಳ : ಸಮೀರವಾಡಿ ಗೋಧಾವರಿ ಸಕ್ಕರೆ ಕಾರ್ಖಾನೆಯಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ 10 ರೈತರನ್ನು ವಶಕ್ಕೆ ಪಡೆದ ಪೊಲೀಸರ ಕ್ರಮಕ್ಕೆ ರೈತರಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆ ಸಂಜೆ ಬಿಡುಗಡೆಗೊಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಮುಧೋಳ

ಸಮೀರವಾಡಿ ಗೋಧಾವರಿ ಸಕ್ಕರೆ ಕಾರ್ಖಾನೆಯಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ 10 ರೈತರನ್ನು ವಶಕ್ಕೆ ಪಡೆದ ಪೊಲೀಸರ ಕ್ರಮಕ್ಕೆ ರೈತರಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆ ಸಂಜೆ ಬಿಡುಗಡೆಗೊಳಿಸಿದ್ದಾರೆ. ಸಕ್ಕರೆ ಕಾರ್ಖಾನೆಯ ಆವರಣದಲ್ಲಿ ಕೆಲ ಕಿಡಗೇಡಿಗಳು ಕಬ್ಬಿನ ಟ್ರ್ಯಾಕ್ಟರ್ ಗಳಿಗೆ ಬೆಂಕಿ ಹಚ್ಚಿದ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಶನಿವಾರ ರಾತ್ರಿ 10 ಜನ ಹೋರಾಟಗಾರರನ್ನು ವಶಕ್ಕೆ ಪಡೆದುಕೊಂಡಿದ್ದರು. ಇದನ್ನು ವಿರೋಧಿಸಿ ಭಾನುವಾರ ಮುಧೋಳ ಜಿ.ಎಲ್.ಬಿ.ಸಿ ಪ್ರವಾಸಿ ಮಂದಿರದಲ್ಲಿ ರೈತಸಂಘ, ಹಸಿರು ಸೇನೆ ಹಾಗೂ ಕಬ್ಬು ಬೆಳೆಗಾರರ ಸಂಘದ ನೆತೃತ್ವದಲ್ಲಿ ನೂರಾರು ರೈತರು ಸಭೆ ಸೇರಿ ಚರ್ಚಿಸಿ ಜೈಲ್‌ ಭರೋ ಚಳವಳಿ ನಡೆಸುವ ಎಚ್ಚರಿಕೆ ನೀಡಿದ ಬಳಿಕ ಪೊಲೀಸರು ವಶಕ್ಕೆ ಪಡೆದ ರೈತರನ್ನು ಬಿಡುಗಡೆಗೊಳಿಸಿದ್ದಾರೆ.

ರೈತ ಮುಖಂಡರಾದ ಸುಭಾಷ ಶಿರಬೂರ ಮತ್ತು ಈರಪ್ಪ ಹಂಚಿನಾಳ ಮಾತನಾಡಿ, ಅಮಾಯಕ ರೈತರನ್ನು ವಿನಾಕಾರಣ, ಯಾವುದೇ ನೋಟಿಸ್ ನೀಡದೆ, ಶನಿವಾರ ರಾತ್ರಿ ಮನೆಗೆ ನುಗ್ಗಿ ಪೊಲೀಸರು ರೈತರನ್ನು ವಶಕ್ಕೆ ತೆಗೆದುಕೊಂಡಿರುವುದು ಖಂಡನೀಯ. ನಾವು ಬೆಳೆದ ಬೆಳೆಗೆ ದರ ನಿಗದಿ ಮಾಡುವಂತೆ ಸಕ್ಕರೆ ಕಾರ್ಖಾನೆ ಮಾಲೀಕರು ಮತ್ತು ಸರ್ಕಾರಕ್ಕೆ ಕಾನೂನು ಪ್ರಕಾರ ಮನವಿ ಮಾಡಿ ಹೋರಾಟ ಮಾಡುತ್ತಿದ್ದೇವೆ. ಆದರೆ ಗಲಾಟೆ ನಡೆಸಿದ ದುಷ್ಕರ್ಮಿಗಳನ್ನು ಪತ್ತೆಹಚ್ಚಿ ಬಂಧಿಸುವುದನ್ನು ಬಿಟ್ಟು, ಅಮಾಯಕ ರೈತರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ, ರೈತರ ಮೇಲೆ ವಿನಾಕಾರಣ ಆರೋಪ ಹೊರಿಸಿ, ಹೋರಾಟ ಹತ್ತಿಕ್ಕಲು ಪ್ರಯತ್ನಿಸಬಾರದು. ಅನ್ನದಾತನ ಮೇಲೆ ಸುಳ್ಳು ಪ್ರಕರಣ ದಾಖಲಿಸುವ ಸರ್ಕಾರ ಬಹಳ ದಿನ ಉಳಿಯುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.