ಸಾರಾಂಶ
ಮಾಜಿ ಸಚಿವ ಕೆ.ಎನ್.ರಾಜಣ್ಣ ಅವರನ್ನು ಸಚಿವ ಸಂಪುಟದಿಂದ ಏಕಾಏಕಿ ವಜಾಗೊಳಿಸಿರುವುದನ್ನು ಖಂಡಿಸಿ ತಾಲೂಕಿನ ಮಿಡಿಗೇಶಿ ಗ್ರಾಪಂ ಅಧ್ಯಕ್ಷೆ ಸೇರಿ ಎಲ್ಲ ಹತ್ತು ಮಂದಿ ಸದಸ್ಯರು ತಮ್ಮ ಸ್ಥಾನಕ್ಕೆ ಸಾಮೂಹಿಕವಾಗಿ ರಾಜೀನಾಮೆ ನೀಡಿದ್ದಾರೆ.
ಕನ್ನಡಪ್ರಭ ವಾರ್ತೆ ಮಧುಗಿರಿ
ಮಾಜಿ ಸಚಿವ ಕೆ.ಎನ್.ರಾಜಣ್ಣ ಅವರನ್ನು ಸಚಿವ ಸಂಪುಟದಿಂದ ಏಕಾಏಕಿ ವಜಾಗೊಳಿಸಿರುವುದನ್ನು ಖಂಡಿಸಿ ತಾಲೂಕಿನ ಮಿಡಿಗೇಶಿ ಗ್ರಾಪಂ ಅಧ್ಯಕ್ಷೆ ಸೇರಿ ಎಲ್ಲ ಹತ್ತು ಮಂದಿ ಸದಸ್ಯರು ತಮ್ಮ ಸ್ಥಾನಕ್ಕೆ ಸಾಮೂಹಿಕವಾಗಿ ರಾಜೀನಾಮೆ ನೀಡಿದ್ದಾರೆ. ಈ ಸಂಬಂಧ ಉಪವಿಭಾಗಾಧಿಕಾರಿ ಗೋಟೂರು ಶಿವಪ್ಪರವರಿಗೆ ಸಲ್ಲಿಸಿರುವ ರಾಜೀನಾಮೆಯಲ್ಲಿ ಗ್ರಾಪಂ ಅಧ್ಯಕ್ಷೆ ಲಕ್ಷೀದೇವಮ್ಮ, ಸದಸ್ಯ ವಿಜಯಕುಮಾರ್, ಸುರೇಶ್, ವಿ.ಆರ್.ರಾಜ್‌ಗೋಪಾಲ್, ರಾಧಾ, ಭಾಗ್ಯಮ್ಮ, ಮಂಜಮ್ಮ, ಸುಕನ್ಯಾರೆಡ್ಡಿ, ವೇಣುಗೋಪಾಲ ರೆಡ್ಡಿ, ಬಿ.ಟಿ.ರಾಜ್‌ಗೋಪಾಲ್ ಸಹಿ ಮಾಡಿದ್ದು ಸಾಮೂಹಿಕವಾಗಿ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದಾರೆ.ಗ್ರಾಪಂ ಮಾಜಿ ಅಧ್ಯಕ್ಷ ಎಸ್.ಎನ್.ರಾಜು ಮಾತನಾಡಿ, ಕಾಂಗ್ರೆಸ್ ಪಕ್ಷದ ವರಿಷ್ಠರು ಕೆ.ಎನ್.ರಾಜಣ್ಣ ಅವರ ವಿಚಾರದಲ್ಲಿ ಎಡವಿದ್ದಾರೆ. ಈ ವಿಚಾರದಲ್ಲಿ ವರಿಷ್ಠರು ಪುನರ್ ಪರಿಶೀಲಿಸಿ ಮತ್ತೆ ಅವರನ್ನು ಸಂಪುಟಕ್ಕೆ ತೆಗೆದುಕೊಳ್ಳಬೇಕು. ನಮ್ಮವರೆ ಬೇಕು ಅಂತ ಹೈಕಮಾಂಡ್‌ಗೆ ತಪ್ಪು ಮಾಹಿತಿ ನೀಡಿದ್ದಾರೆ. ಅದನ್ನೇ ನೆಪ ಮಾಡಿ ಹೈಕಮಾಂಡ್ ಸಂಪುಟದಿಂದ ವಜಾ ಮಾಡಿರುವುದು ಸರಿಯಲ್ಲ. ಜಿಲ್ಲೆಯಲ್ಲಿ ರಾಜಣ್ಣ ಹಿಂದುಳಿದ ವರ್ಗಗಳ ನಾಯಕ ಎಲ್ಲರನ್ನೂ ಒಟ್ಟಿಗೆ ಕೊಂಡೊಯ್ಯುವ ಮತ್ತು ಕಾಂಗ್ರೆಸ್ ಪಕ್ಷವನ್ನು ಕಟ್ಟಿ ಬೆಳಸಿದವರು. ಇವರನ್ನು ಸಚಿವ ಸಂಪುಟದಿಂದ ಕೈ ಬಿಟ್ಟಿರುವುದು ಪಕ್ಷಕ್ಕೆ ದೊಡ್ಡ ಪೆಟ್ಟು ಬೀಳುತ್ತದೆ. ಈ ಕೂಡಲೇ ಆದೇಶವನ್ನು ಹಿಂಪಡೆದು ಅವರನ್ನು ಮತ್ತೆ ಸಂಪುಟಕ್ಕೆ ತೆಗೆದುಕೊಳ್ಳಬೇಕು ಎಂದರು.