ಮೃತ ಸಚಿನ್‌ ಪಾಂಚಾಳ ಕುಟುಂಬಕ್ಕೆ ₹10 ಲಕ್ಷ ಪರಿಹಾರ : ನಿವಾಸಕ್ಕೆ ಭೇಟಿ ನೀಡಿದ ಸಚಿವ ಈಶ್ವರ್‌ ಖಂಡ್ರೆ,

| Published : Dec 30 2024, 01:01 AM IST / Updated: Dec 30 2024, 01:03 PM IST

ಮೃತ ಸಚಿನ್‌ ಪಾಂಚಾಳ ಕುಟುಂಬಕ್ಕೆ ₹10 ಲಕ್ಷ ಪರಿಹಾರ : ನಿವಾಸಕ್ಕೆ ಭೇಟಿ ನೀಡಿದ ಸಚಿವ ಈಶ್ವರ್‌ ಖಂಡ್ರೆ,
Share this Article
  • FB
  • TW
  • Linkdin
  • Email

ಸಾರಾಂಶ

ಭಾಲ್ಕಿ ತಾಲೂಕು ಕಟ್ಟಿತೂಗಾಂವದಲ್ಲಿರುವ ಸಚಿನ್‌ ಪಾಂಚಾಳ ನಿವಾಸಕ್ಕೆ ಭೇಟಿ ನೀಡಿದ ಸಚಿವ ಈಶ್ವರ್‌ ಖಂಡ್ರೆ, ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದ ನಂತರ ಭೇಟಿಯಾದ ಸುದ್ದಿಗಾರರಿಗೆ ಮಾತನಾಡಿ, ಸರ್ಕಾರ ಹಾಗೂ ಖಾಸಗಿ ನೆರವಿನಿಂದ ಒಟ್ಟು 10 ಲಕ್ಷ ಪರಿಹಾರ ಕೊಡಿಸುವ ಘೋಷಣೆ ಮಾಡಿದರು.

  ಬೀದರ್‌ : ಯುವ ಗುತ್ತಿಗೆದಾರ ಸಚಿನ ಪಂಚಾಳ ಆತ್ಮಹತ್ಯೆ ಪ್ರಕರಣವನ್ನು ಸ್ವತಂತ್ರ ತನಿಖಾ ಸಂಸ್ಥೆಯಿಂದ ಅದರಲ್ಲೂ ಸಿಐಡಿ ತನಿಖೆಗಾಗಿ ಮುಖ್ಯಮಂತ್ರಿಗಳಿಗೆ ಮನವಿ ಮಾಡುವುದಾಗಿ ಹಾಗೂ ಕುಟುಂಬದ ಸದಸ್ಯರಿಗೆ ಸರ್ಕಾರ ಹಾಗೂ ವಯಕ್ತಿಕವಾಗಿ ಒಟ್ಟು 10 ಲಕ್ಷ ರು. ಪರಿಹಾರ ಕೊಡಿಸುವುದಾಗಿ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ. ಖಂಡ್ರೆ ತಿಳಿಸಿದರು.

ಅವರು ಭಾಲ್ಕಿ ತಾಲೂಕು ಕಟ್ಟಿತೂಗಾಂವದಲ್ಲಿರುವ ಸಚಿನ ಪಾಂಚಾಳ ನಿವಾಸಕ್ಕೆ ಭೇಟಿ ನೀಡಿ, ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದ ನಂತರ ಭೇಟಿಯಾದ ಸುದ್ದಿಗಾರರಿಗೆ ಮಾತನಾಡಿ, ಸರ್ಕಾರ ಹಾಗೂ ಖಾಸಗಿ ನೆರವಿನಿಂದ ಒಟ್ಟು 10 ಲಕ್ಷ ಪರಿಹಾರ ಕೊಡಿಸುವ ಘೋಷಣೆ ಮಾಡಿದರು. ಈ ನೋವಿನ ಸಂದರ್ಭದಲ್ಲಿ ತಾವೂ ಹಾಗೂ ಸರ್ಕಾರ, ಸಚಿನ್‌ ಕುಟುಂಬದ ಜೊತೆ ನಿಲ್ಲುವುದಾಗಿ ತಿಳಿಸಿದರು.ಪ್ರತಿಯೊಂದು ಜೀವವೂ ಅಮೂಲ್ಯ, ಸಚಿನ್‌ ಪಾಂಚಾಳ ಸಾವು ತೀವ್ರ ನೋವು ತಂದಿದೆ. 

ಈ ಪ್ರಕರಣದ ನಿಷ್ಪಕ್ಷಪಾತ ತನಿಖೆ ನಡೆಸಲಾಗುವುದು. ಬಿಜೆಪಿ ಸಾವಿನಲ್ಲೂ ರಾಜಕೀಯ ಮಾಡುತ್ತಿರುವುದು ಅತ್ಯಂತ ದುರದೃಷ್ಟಕರ. ನಿರ್ಲಕ್ಷ್ಯ ವಹಿಸಿದ ಇಬ್ಬರು ಪೊಲೀಸ್ ಸಿಬ್ಬಂದಿಯ ಅಮಾನತು ಮಾಡಲಾಗಿದೆ. ಹಿರಿಯ ಅಧಿಕಾರಿಗಳ ವಿರುದ್ಧ ವಿಚಾರಣೆ ನಡೆಯುತ್ತಿದ್ದು, ಕರ್ತವ್ಯಲೋಪ ಕಂಡು ಬಂದರೆ ಕ್ರಮ ಜರುಗಿಸಲಾಗುವುದು ಎಂದು ಸಚಿವ ಖಂಡ್ರೆ ಸ್ಪಷ್ಟಪಡಿಸಿದ್ದಾರೆ.ಬಿಜೆಪಿಗೆ ಸುಳ್ಳೇ ಮನೆ ದೇವರು. ನಮ್ಮ ಸರ್ಕಾರ ಈ ಮಣ್ಣಿನ ಕಾನೂನಿಗೆ ಗೌರವ ಕೊಡುತ್ತದೆ. ಯಾರೇ ತಪ್ಪಿತಸ್ಥರಾಗಿದ್ದರೂ ಅಂಥವರ ವಿರುದ್ಧ ಕ್ರಮ ಆಗಲಿದೆ ಇಂತಹ ಪ್ರಕರಣಗಳು ಮರುಕಳುಹಿಸಬಾರದು. ಈ ಪ್ರಕರಣ ಪಕ್ಷಾತೀತವಾಗಿ ತನಿಖೆಯಾಗಲಿ. ತಪ್ಪಿತಸ್ಥರ ವಿರುದ್ಧ ಕ್ರಮ ಆಗಬೇಕೆಂದು ಪ್ರಿಯಾಂಕ ಖರ್ಗೆ ಹೇಳಿದ್ದಾರೆ ಎಂದರು.

ಸಚಿನ್‌ ಕುಟುಂಬಕ್ಕೆ ಆತ್ಮಸ್ಥೈರ್ಯ ತುಂಬಲಿ:

ಡೆತ್ ನೋಟ್‌ನಲ್ಲಿ ಏನೇನಿದೆ ಎಲ್ಲದರ ಬಗ್ಗೆ ತನಿಖೆಯಾಗುತ್ತದೆ. ಸಚಿನ ಏನೇನು ಬರೆದಿದ್ದಾನೆ, ಎಫ್‌ಎಸ್‌ಎಲ್‌ ವರದಿ ಬಂದ ಮೇಲೆ ತನಿಖೆಯಾಗುತ್ತದೆ. ಬಿಜೆಪಿ ಜೆಡಿಸ್ ಎಲ್ಲರೂ ಸೇರಿ ಕುಟುಂಬದವರಿಗೆ ಆತ್ಮಸ್ಥೈರ್ಯ ತುಂಬುವಂತೆ ಕೆಲಸ ಮಾಡಬೇಕು. ಆಡಳಿತದಲ್ಲಿ ಇರುವ ಲೋಪದೋಷಗಳು ಸರಿಪಡಿಸಲು ಪ್ರಯತ್ನ ಮಾಡಬೇಕು ಎಂದು ಸಲಹೆ ನೀಡಿದರು.

ಸಿಬಿಐಗೆ ತನಿಖೆ ಒಪ್ಪಿಸಬೇಕೆಂಬ ಬಿಜೆಪಿ ಆಗ್ರಹ ವಿಚಾರವಾಗಿನ ಪ್ರಶ್ನೆಯೊಂದಕ್ಕೆ ಉತ್ತರಿಸಿ ಬಿಜೆಪಿ ಯವರು ಒಂದಾದರೂ ಪ್ರಕರಣ ಸಿಬಿಐಗೆ ಕೊಟ್ಟಿದ್ದಾರಾ? ಈಗ ಸುಮ್ಮನೇ ಮಾತನಾಡ್ತಾರೆ. ತಂತ್ರಜ್ಞಾನ ಮುಂದುವರೆದಿದೆ. ಸತ್ಯ ಮುಚ್ಚಿಡಲು ಆಗಲ್ಲ. ನಿಷ್ಪಕ್ಷಪಾತ, ಪಾರದರ್ಶಕವಾದ ತನಿಖೆ ಆಗಲಿದೆ. ಪ್ರಕರಣದ ತನಿಖೆ ಸಿಐಡಿ ನಡೆಸಬೇಕೆಂದು ಒತ್ತಾಯಿಸುತ್ತೇನೆ ಎಂದು ಈಶ್ವರ ಖಂಡ್ರೆ ತಿಳಿಸಿದರು.

ಸಾವನ್ನೇ ಉಡಾಫೆ ಮಾಡಿದ ಪೊಲೀಸರೆಷ್ಟು ಕ್ರೂರಿ!

- ಬಿಜೆಪಿ ನಿಯೋಗದ ಮುಂದೆ ಕಣ್ಣೀರಿಡುತ್ತಾ ಅಳಲು ತೋಡಿಕೊಂಡ ಗುತ್ತಿಗೆದಾರ ಸಚಿನ ಪಂಚಾಳನ ಕುಟುಂಬಸ್ಥರುಬೀದರ್‌: ದೂರು ನೀಡಿದ್ರೂ ಪೊಲೀಸರು ತೆಗೆದುಕೊಳ್ಳಲಿಲ್ಲ. ಅವನ ಪೋನ್‌ ಸ್ವಿಚ್‌ ಆಫ್‌ ಆಗಿದೆ ನಾನು ಏನು ಮಾಡಲಿ. ಸತ್ತರೆ ಹೇಗೆ ಡೆತ್‌ನೋಟ್‌ ಜಾಲತಾಣದಲ್ಲಿ ಅಪ್ಲೋಡ್‌ ಮಾಡ್ತಾನೆ. ಪೊಲೀಸ್ ಠಾಣೆಗೆ ನೀವು ಯಾಕೆ ಬಂದಿದ್ದೀರಿ ಎಂದು ಪೊಲೀಸರೇ ಕೇಳಿದ್ರು. ನಮಗೆ ಠಾಣೆಯಿಂದ ಠಾಣೆಗೆ ಹಿಂದಿನ ದಿನ ಮಧ್ಯಾಹ್ನ 2ರಿಂದ ರಾತ್ರಿ 9ರ ವರೆಗೆ ಅಲೆದಾಡಿಸಿದ್ರು. ಪೊಲೀಸರ ಸಹಕಾರ ಸಿಗದಿದ್ದರಿಂದ ಪ್ರತಿಯೊಂದು ಲಾಡ್ಜ್‌ ಹುಡುಕಿದ್ದೇವೆ, ಕಾರಂಜಾ ಜಲಾಶಯ ಮತ್ತಿತರ ಕಡೆ ರಾತ್ರಿಯೆಲ್ಲ ತಿರುಗಾಡಿದ್ದೇವೆ. ಪೊಲೀಸರು ಎಷ್ಟು ಕ್ರೂರಿ ಇದ್ದಾರೆ ಎಂಬುವದಕ್ಕೆ ನಮ್ಮ ಅಣ್ಣನ ಪ್ರಕರಣವೇ ಸಾಕ್ಷಿ ಸಾರ್‌...

ಹೀಗೆಯೇ ಹೇಳಿದ್ದು ಯುವ ಗುತ್ತಿಗೆದಾರ ಸಚಿನ ಪಂಚಾಳ ಸಾವಿಗೂ ಮುನ್ನ ಪೊಲೀಸರು ಕುಟುಂಬಸ್ಥರೊಂದಿಗೆ ನಡೆದುಕೊಂಡ ವರ್ತನೆ ವಿರುದ್ಧ ಅವರ ಸಹೋದರಿಯರು ಕಟ್ಟಿತೂಗಾಂವ ಗ್ರಾಮದ ಮನೆಗೆ ಭೇಟಿ ನೀಡಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರ ನೇತೃತ್ವದ ನಿಯೋಗದ ಮುಂದೆ ಕಣ್ಣೀರಿಡುತ್ತಾ ಗೋಳು ತೋಡಿಕೊಂಡರು.

ಪೊಲೀಸರು ಸ್ವಲ್ಪ ಸಹಾಯ ಮಾಡಿದ್ರೂ ನಮ್ಮ ಅಣ್ಣನ ಜೀವ ಉಳಿಯುತ್ತಿತ್ತು. ನಮ್ಮ ಕಣ್ಣೀರಿಗೂ ಬೆಲೆ ನೀಡದ ಪೊಲೀಸರು ಅಬ್ಬಬ್ಬಾ ಅಂದ್ರೆ ಸಸ್ಪೆಂಡ್‌ ಮಾಡತ್ತಾರಲ್ಲ ಎಂದು ಉಡಾಫೆಯಾಗಿ ಪೊಲೀಸ್‌ ಅಧಿಕಾರಿಗಳು ನಡೆದುಕೊಂಡರು. ಅವನ ದೇಹದ ಮೇಲೆ ಎರಡು ಮೂರು ರೈಲುಗಳು ಓಡಾಡಿವೆ ಸರ್ ನಮ್ಮ ಜೀವ ಚುರ್‌.. ಅಂತಿದೆ ಎಂದರು.

ಈ ಸಂದರ್ಭದಲ್ಲಿ ಸಾಂತ್ವನ ಹೇಳಿ ಮಾತನಾಡಿದ ಬಿ.ವೈ ವಿಜಯೇಂದ್ರ ಅವರು, ನಂತರ ಸುದ್ದಿಗಾರರ ಜೊತೆ ಮಾತನಾಡಿ, ಸಚಿನ ಅವರ ಪ್ರಾಣ ಉಳಿಸುವಂಥ ಕೆಲಸವನ್ನು ಪೊಲೀಸರು ಮಾಡಬೇಕಿತ್ತು. ಪೊಲೀಸರ ವರ್ತನೆಯಿಂದ ಒಂದು ಮುಗ್ಧ ಜೀವ ಹೊರಟ್ಹೋಗಿದೆ. ಬಡ ಕುಟುಂಬದ ಆಧಾರ ಸ್ತಂಭ ಮುರಿದು ಬಿದ್ದಿದೆ. ಹೆಣ್ಣು ಮಕ್ಕಳು ಠಾಣೆಗೆ ಹೋಗಿ ತಮ್ಮ ಸಹೋದರನ ಪ್ರಾಣ ಉಳಿಸುವಂತೆ ಗೋಗರೆದರೂ ಪೋಲಿಸ್‌ ಏನು ಮಾಡಿಲ್ಲ.ಸಚಿನ್ ಡೆತ್ ನೋಟ್ ನಲ್ಲಿ ಏನು ಬರೆದಿದ್ದಾನೆ, ಪೊಲೀಸರ ದುರ್ವರ್ತನೆ ಮನುಷ್ಯತ್ವ ಇದ್ದವರು ಹೀಗೆ ಯಾರ ಬಳಿಯೂ ಹೀಗೆ ನಡೆದುಕೊಳ್ಳಲ್ಲ. ಸಚಿನ ಆತ್ಮಹತ್ಯೆ ಪ್ರಕರಣ ಇಡೀ ದೇಶ್ಯಾದ್ಯಂತ ಸುದ್ದಿಯಾಗಿದೆ. ಈ ಬಗ್ಗೆ ನಿರ್ಲಕ್ಷ್ಯ ತೋರಿದ ಪೊಲೀಸ್‌ ಅಧಿಕಾರಿ ಗಳಿಗೆ ಶಿಕ್ಷೆಯಾಗಬೇಕು ಎಂದು ನಾವು ಆಗ್ರಹಿಸುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ತಿಳಿಸಿದರು.

ಇನ್ನು ಇದಕ್ಕೂ ಮುನ್ನ ಸಚಿನ ಅವರ ಮನೆಗೆ ಭೇಟಿ ನೀಡಿದ್ದ ಸಚಿವ ಈಶ್ವರ ಖಂಡ್ರೆ ಸಮ್ಮುಖದಲ್ಲಿಯೇ ಎಸ್‌ಪಿ ಪ್ರದೀಪ ಗುಂಟಿ ಸೇರಿದಂತೆ ಇತರ ಪೊಲೀಸರನ್ನು ಮನೆಯಿಂದ ಆಚೆ ಕಳುಹಿಸಿದ ಕುಟುಂಬಸ್ಥರ ಆಕ್ರೋಶ ಪೊಲೀಸರ ವಿರುದ್ಧ ಸ್ಪಷ್ಟವಾಗಿ ಗೋಚರವಾಗುತ್ತಿತ್ತು.

ಸಚಿನ್‌ ಆತ್ಮಹತ್ಯೆ ತನಿಖೆಯಾಗಿ, ಪರಿವಾರಕ್ಕೆ ನ್ಯಾಯ ಸಿಗಲಿ : ವಿಶ್ವಕರ್ಮ ಮಹಾಸಭಾ

ಬೀದರ್: ಗುತ್ತಿಗೆದಾರ ಸಚಿನ ಪಂಚಾಳ ಆತ್ಮಹತ್ಯೆಯ ತನಿಖೆ ಮತ್ತು ಅವರ ಪರಿವಾರಕ್ಕೆ ನ್ಯಾಯ ಒದಗಿಸುವಂತೆ ರೈಲ್ವೆ ಇಲಾಖೆಯ ಪೋಲಿಸ್ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ಜಿಲ್ಲಾ ಘಟಕದಿಂದ ರೈಲ್ವೆ ಇಲಾಖೆ ಪೋಲೀಸ್ ವರಿಷ್ಠಾಧಿಕಾರಿ ಸೌಮ್ಯಲತಾ ಎಸ್.ಕೆ ಅವರಿಗೆ ಮನವಿ ಸಲ್ಲಿಸಿ ಸಚಿನ ಪಾಂಚಾಳ ಇವರ ಆತ್ಮಹತ್ಯೆಯು ನಿಗೂಢ ಸಾವಿನ ಬಗ್ಗೆ ವಿಷಯ ತಿಳಿದು ಬಂದಿದ್ದು, ವಿಷಾದದ ಸಂಗತಿಯಾಗಿದೆ. ಬಡ ಸಮಾಜದಲ್ಲಿ ಹುಟ್ಟಿ, ಯುವಕ ತನ್ನ ಉಪಜೀವನಕ್ಕಾಗಿ ಮಾಡುವ ಕೆಲಸದ ವ್ಯವಹಾರದಲ್ಲಿ ಏನೋ ಏರುಪೇರಾಗಿದೆಯೋ ಇದು ನಿಗೂಢ ಸಾವಿನಲ್ಲಿ ಅಂತ್ಯವಾಗಿದೆ.ಸಚಿನ್‌ ಇವರ ಮೇಲೆ ಅವಲಂಬಿತ ಪರಿವಾರದ ಸದಸ್ಯರು ಅನಾಥರಾಗಿ ಬೀದಿ ಪಾಲಾಗುವ ಸನ್ನಿವೇಶನ ಪರಿಸ್ಥಿತಿ ಬಂದೊದಗಿದೆ. ಈ ಘಟನೆಯ ಬಗ್ಗೆ ಕುಲಂಕುಶವಾಗಿ ತನಿಖೆ ನಡೆಸಿ, ಸಂತ್ರಸ್ತ ಕುಟುಂಬಕ್ಕೆ ನ್ಯಾಯ ಒದಗಿಸಿಕೊಡಬೇಕು. ಆತ್ಮಹತ್ಯೆ ನಿಗೂಢ ಸಾವಿನ ತನಿಖೆ ಮಾಡಿ ಸಂತ್ರಸ್ತ ಕುಟುಂಬಕ್ಕೆ ನ್ಯಾಯ ಕೋಡಿಸಬೇಕೆಂದು ಮನವಿ ಮಾಡಲಾಯಿತು.ಈ ಸಂಧರ್ಭದಲ್ಲಿ ಜಿಲ್ಲಾಧ್ಯಕ್ಷರಾದ ದತ್ತಾತ್ರಿ ವಿಶ್ವಕರ್ಮ, ಯುವ ಘಟಕದ ಜಿಲ್ಲಾಧ್ಯಕ್ಷ ಪ್ರಶಾಂತ ವಿಶ್ವಕರ್ಮ, ಉಪಾಧ್ಯಕ್ಷ ಸೋಮನಾಥ ಪಾಂಚಾಲ್, ಪಾಂಡುನಾಗ್ ಪಾಂಚಾಳ, ಮಹಾದೇವ್ ಪಾಂಚಾಳ, ಸಂಜುಕುಮಾರ್ ಪಾಂಚಾಳ, ಮಂಜುನಾಥ್ ಪಂಚಾಳ, ಗಣಪತ್ ರಾವ್ ಪಾಂಚಾಳ ಉಪಸ್ಥಿತರಿದ್ದರು.

ಸಚಿನ್‌ ಮನೆಗೆ ಸುಲೇಪೇಟ್ ಶ್ರೀಗಳ ಭೇಟಿ: ಪ್ರಕರಣದ ನಿಷ್ಪಕ್ಷಪಾತ ತನಿಖೆಗೆ ಆಗ್ರಹ

ಭಾಲ್ಕಿ: ಆತ್ಮಹತ್ಯೆ ಮಾಡಿಕೊಂಡಿರುವ ಗುತ್ತಿಗೆದಾರ ಸಚಿನ ಪಂಚಾಳ ಸಾವಿನ ಪ್ರಕರಣದಲ್ಲಿ ನಿಷ್ಪಕ್ಷಪಾತ ತನಿಖೆ ನಡೆಯಬೇಕೆಂದು ಸುಲೇಪೇಟ್ ಏಕದಂಡಗಿ ಮಠದ ದೊಡ್ಡೇಂದ್ರ ಸ್ವಾಮೀಜಿ ಹೇಳಿದ್ದಾರೆ.

ತಾಲೂಕಿನ ಕಟ್ಟಿ ತೂಗಾಂವ ಗ್ರಾಮದ ಸಚಿನ ಪಂಚಾಳ ನಿವಾಸಕ್ಕೆ ಶನಿವಾರ ಸಂಜೆ ಭೇಟಿ ನೀಡಿದ ಅವರು ಸಚಿನ ಸಾವು ನೋವು ತರಿಸಿದೆ. ಕುಟುಂಬದ ಸದಸ್ಯರು ಧೈರ್ಯದಿಂದ ಇರಬೇಕು. ಇಡಿ ಸಮಾಜ ನಿಮ್ಮೊಂದಿಗಿದೆ ಎಂದು ತಿಳಿಸಿದರು.ವಿಶ್ವಕರ್ಮ ಮಹಾಸಭಾದ ಅಧ್ಯಕ್ಷ ದತ್ತಾತ್ರಿ ವಿಶ್ವಕರ್ಮ ಮಾತನಾಡಿ, ಸಚಿನ ಪ್ರಕರಣದಲ್ಲಿ ಕುಟುಂಬಸ್ಥರಿಗೆ ನ್ಯಾಯ ಸಿಗಬೇಕು ಇಲ್ಲದಿದ್ದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ತಿಳಿಸಿದರು. ಮಹಾಸಭಾದ ಯುವ ಘಟಕದ ಆಧ್ಯಕ್ಷ ಪ್ರಶಾಂತ ವಿಶ್ವಕರ್ಮ ಮಾತಾನಾಡಿ, ಸಚಿನ ಸಾವಿನಿಂದ ಕುಟುಂಬದ ಆಧಾರ ಸ್ತಂಭ ಕಳಚಿದಂತಾಗಿದೆ. ಕೂಡಲೇ ಸರಕಾರ ಕುಟುಂಬಕ್ಕೆ ಸೂಕ್ತ ಪರಿಹಾರ ಕೊಡಬೇಕು. ಜತೆಗೆ ಸಚಿನ ಸಾವಿಗೆ ಕಾರಣರಾದವರನ್ನು ಬಂಧಿಸಿ ಕಠಿಣ ಶಿಕ್ಷೆ ಒದಗಿಸಬೇಕು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಪ್ರಶಾಂತ ವಿಶ್ವಕರ್ಮ, ಅಶೋಕ ಪೊದ್ದಾರ, ಸೋಮನಾಥ ಪಾಂಚಾಳ, ಪಾಂಡುರಂಗಪಾಂಚಾಳ, ಮಹಾದೇವ ಮೌನೇಶ, ಮಂಜುನಾಥ ಇದ್ದರು.